ಮಳೆಗೆ ಉರುಳಿದ ಮರ; ನುಗ್ಗಿದ ನೀರು

7

ಮಳೆಗೆ ಉರುಳಿದ ಮರ; ನುಗ್ಗಿದ ನೀರು

Published:
Updated:
ಮಳೆಗೆ ಉರುಳಿದ ಮರ; ನುಗ್ಗಿದ ನೀರು

ಮೈಸೂರು: ನಗರದಲ್ಲಿ ಶನಿವಾರ ಬಿರುಸಾದ ಮಳೆ ಸುರಿಯಿತು. ಸಂಜೆ ಹೊತ್ತಿಗೆ ಗುಡುಗು ಸಹಿತ ಶುರುವಾದ ಮಳೆಯಿಂದ ರಸ್ತೆಗಳೆಲ್ಲ ನೀರಿನಿಂದ ಆವೃತವಾದವು. ವಾಹನ ಸವಾರರು ಮಳೆಯಲ್ಲೇ ಸಾಗಿದರು. ಸರಿಯಾಗಿ ರಸ್ತೆ ಕಾಣದೆ ವಾಹನ ಸವಾರರು ದೀಪದ ಬೆಳಕಿನಲ್ಲಿ ಸಾಗಿದರು. ಅರ್ಧ ಗಂಟೆಗೂ ಮಿಕ್ಕಿ ನಿರಂತರವಾಗಿ ಮಳೆ ಸುರಿಯಿತು. ಆಮೇಲೂ ಸಣ್ಣದಾಗಿ ರಾತ್ರಿಯವರೆಗೆ ಸುರಿಯಿತು.

ಹೆಬ್ಬಾಳ ಸಂಕ್ರಾಂತಿ ವೃತ್ತದ ಬಳಿ ಕಾರ್‌ ಮೇಲೆ ಬಿದ್ದ ಮರವನ್ನು ಮಹಾನಗರ ಪಾಲಿಕೆಯ ಅಭಯ ತಂಡ ತೆರವುಗೊಳಿಸಿತು. ಸಿದ್ಧಾರ್ಥ ಬಡಾವಣೆಯ ಜ್ಞಾನಮಾರ್ಗದಲ್ಲಿ ತೆಂಗಿನಮರ, ರಾಮಕೃಷ್ಣನಗರ ಚರ್ಚ್ ರಸ್ತೆಯ ಬಳಿ ಹಾಗೂ ಜೆಪಿ.ನಗರದ ಕಂದಾಯ ಕಾಲೊನಿಯಲ್ಲಿ ಬಿದ್ದ ಮರಗಳನ್ನು ಅಭಯ ತಂಡ ತೆಗೆದು ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿತು.

ಸರಸ್ವತಿಪುರಂ ಮುರುಗನ್ ಮೆಡಿಕಲ್ ಸ್ಟೋರ್‌ ಬಳಿ, ಸರಸ್ವತಿಪುಂ ಪೊಲೀಸ್‌ ಠಾಣೆ ಎದುರು ಹಾಗೂ ಕಾಮಾಕ್ಷಿ ಆಸ್ಪತ್ರೆ ಬಳಿ ಮರಗಳು ಬಿದ್ದವು.

ಜ್ಯೋತಿನಗರದ ಪೊಲೀಸ್‌ ಕ್ವಾರ್ಟರ್ಸ್, ಬನ್ನಿಮಂಟಪದ ಸೋಮೇಶ್ವರ ದೇವಸ್ಥಾನದ ಹಿಂಭಾಗ ಹಾಗೂ ರಾಮಾನುಜ ರಸ್ತೆಯ ಉದ್ಯಾನ ಬಳಿಯ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಪರದಾಡಿದರು. ಜತೆಗೆ, ಶ್ರೀರಾಮಪುರದ ಅಶ್ವಿನಿ ಕಲ್ಯಾಣಮಂಟಪದ ಬಳಿ ಮನೆಯೊಂದಕ್ಕೆ ನೀರು ನುಗ್ಗಿರುವುದನ್ನು ಅಭಯ ತಂಡ ತೆರಳಿ ತೆರವುಗೊಳಿಸಿತು.

ದೇವರಾಜ ಮಾರುಕಟ್ಟೆಯಲ್ಲಿ ನೀರು ತುಂಬಿಕೊಂಡರೆ, ದೊಡ್ಡ ಗಡಿಯಾರ, ಚಿಕ್ಕ ಗಡಿಯಾರ, ಗಾಯತ್ರಿ ಟಾಕೀಸ್‌ ಬಳಿ, ನೂರಡಿ ರಸ್ತೆಯ ಬದಿ ನಿಲ್ಲಿಸಿದ್ದ ವಾಹನಗಳು ಅರ್ಧ ಮುಳುಗಿದ್ದವು. ಹಾರ್ಡಿಂಜ್ ವೃತ್ತ, ಎಂ.ಜಿ.ರಸ್ತೆಯ ಮೋರಿಗಳು ತುಂಬಿ ರಸ್ತೆ ಮೇಲೆ ನೀರು ಹರಿದ ಪರಿಣಾಮ ವಾಹನ ಸವಾರರು ಸಾಗಲು ಪರದಾಡಿದರು.

ಗುಡುಗು ಸಹಿತ ಮಳೆ

ನಂಜನಗೂಡು: ನಗರದಲ್ಲಿ ಶನಿವಾರ ಸಂಜೆ 5 ಗಂಟೆಗೆ ಆರಂಭವಾದ ಗುಡುಗು ಸಹಿತ ಮಳೆ ಒಂದು ಗಂಟೆಗೂ ಹೆಚ್ಚು ಸಮಯ ಸುರಿಯಿತು. ಮಳೆಯಿಂದ ನಗರದ ರಥ ಬೀದಿಯಲ್ಲಿ ನಡೆಸಲಾಗುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ತೊಂದರೆಯಾಯಿತು. ಹೊಸ ರಸ್ತೆ ನಿರ್ಮಾಣಕ್ಕಾಗಿ ರಸ್ತೆಯನ್ನು ಅಗೆದಿರುವುದರಿಂದ ರಾಕ್ಷಸ ಮಂಟಪ ವೃತ್ತ, ಪಾಠಶಾಲಾ ಬೀದಿಗಳಲ್ಲಿ ಮಳೆಯ ನೀರು ತುಂಬಿ, ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡಿದರು. ಎಚ್‌.ಡಿ.ಕೋಟೆ ಹಾಗೂ ಹುಣಸೂರು ತಾಲ್ಲೂಕಿನ ಹಲವೆಡೆ ಶನಿವಾರ ಸಂಜೆ ಸಾಧಾರಣ ಮಳೆಯಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry