ಶಿಕ್ಷಕರ ಸಮಸ್ಯೆಗೆ ಮುಖ್ಯಮಂತ್ರಿ ಸ್ಪಂದನೆ

7
ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ; ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಪರ ಪ್ರಚಾರ

ಶಿಕ್ಷಕರ ಸಮಸ್ಯೆಗೆ ಮುಖ್ಯಮಂತ್ರಿ ಸ್ಪಂದನೆ

Published:
Updated:

ತುಮಕೂರು: 'ಶಿಕ್ಷಕರ ಎಲ್ಲ ರೀತಿಯ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇದೆ. ಆಗ್ನೇಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಅವರನ್ನು ಆಯ್ಕೆ ಮಾಡಿ ಶಿಕ್ಷಕ ಸಮುದಾಯಕ್ಕೆ ಹೆಚ್ಚಿನ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು' ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮನವಿ ಮಾಡಿದರು.

ಅಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ ಪ್ರಯುಕ್ತ ಶನಿವಾರ ನಗರದ ಹನುಮಂತಪುರ ಬಡಾವಣೆಯ ಕೊಲ್ಲಾಪುರದಮ್ಮ ಸಮುದಾಯಭ

ವನದಲ್ಲಿ ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ಕುಮಾರಸ್ವಾಮಿ ಅವರು ಯಾವುದೇ ರೀತಿ ಹಿಂದೆ ಬೀಳುವುದಿಲ್ಲ ಎಂಬ ವಿಶ್ವಾಸವಿದೆ. ನಿಮ್ಮ ಏನೇ ಅಹವಾಲು, ಬೇಡಿಕೆಗಳಿದ್ದರೂ ರಮೇಶ್ ಬಾಬು, ಬಸವರಾಜ ಹೊರಟ್ಟಿ ಅವರಂತಹ ಮುಖಂಡರ ಮೂಲಕ ಮುಖ್ಯಮಂತ್ರಿ ಗಮನಕ್ಕೆ ತನ್ನಿ' ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ,‘ ಶಿಕ್ಷಕ ಸಮುದಾಯವನ್ನು ಆರ್ಥಿಕ ಸಮಸ್ಯೆಯಿಂದ ಮುಕ್ತಗೊಳಿಸಿ ಶಾಲಾ ಕೊಠಡಿಯಲ್ಲಿ ನೆಮ್ಮದಿಯಿಂದ ಪಾಠ ಮಾಡುವಂತಹ ವಾತಾವರಣ ಕಲ್ಪಿಸುವ ಉದ್ದೇಶವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹೊಂದಿದ್ದಾರೆ. ಹೀಗಾಗಿ, ರಮೇಶ್ ಬಾಬು ಅವರನ್ನು ಬೆಂಬಲಿಸಿದರೆ ಕುಮಾರಸ್ವಾಮಿ ಅವರಿಗೆ ಇನ್ನಷ್ಟು ಬಲ ನೀಡಿದಂತಾಗುತ್ತದೆ’ ಎಂದು ಮನವಿ ಮಾಡಿದರು.

‘ಕಾಲ್ಪನಿಕ ವೇತನ ನೀಡುವ ಕುರಿತಂತೆ ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿದ್ದು, ₹ 399 ಕೋಟಿ ಅಗತ್ಯವಿದೆ. ಹಣಕಾಸು ಇಲಾಖೆ ಮುಂದೆ ಈ ಪ್ರಸ್ತಾಪ ಇದೆ’ ಎಂದು ಹೇಳಿದರು.

‘ಫಲಿತಾಂಶ ಕಡಿಮೆ ಆದರೆ ವೇತನ ತಡೆ ಹಿಡಿಯುವುದು, ಪಿಂಚಣಿ ತಡೆ ಹಿಡಿಯುವ ಸಮಸ್ಯೆ ಹೋಗಲಾಡಿಸುವುದು, ಖಾಲಿ ಹುದ್ದೆ ಭರ್ತಿ ಮಾಡುವುದು, ಮುಂತಾದ ಸಮಸ್ಯೆಗಳನ್ನು ಪರಿಹರಿಸಲಾಗುವುದು’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ತೂಪಲ್ಲಿ ಮಾತನಾಡಿ, ‘ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಯಾವುದೇ ಕಾರಣಕ್ಕೂ ಬೇರೆ ಪಕ್ಷದ ಅಭ್ಯರ್ಥಿ ಬಿಟ್ಟುಕೊಳ್ಳುವುದಿಲ್ಲ. ರಮೇಶ್ ಬಾಬು ಅವರ ಗೆಲುವು ನಿಶ್ಚಿತ’ ಎಂದು ಹೇಳಿದರು.

ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ‘ದೇಶದ ಭವಿಷ್ಯ ರೂಪಿಸುವಂತಹ ಶಕ್ತಿ ಶಿಕ್ಷಕರಲ್ಲಿದೆ. ಈ ಚುನಾವಣೆಯಲ್ಲಿ ಎಚ್ಚರಿಕೆಯಿಂದ ಮತ ಚಲಾಯಿಸಬೇಕು. ಯಾವುದೇ ಕಾರಣಕ್ಕೂ ನಿಮ್ಮ ಲೆಕ್ಕಾಚಾರ ತಪ್ಪಬಾರದು’ ಎಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಬೆಮೆಲ್ ಕಾಂತರಾಜು, ಶರವಣ, ಶಾಸಕರಾದ ಬಿ.ಸತ್ಯನಾರಾಯಣ, ಎಸ್.ಆರ್.ಶ್ರೀನಿವಾಸ್, ವೆಂಕಟರಾವ್ ನಾಡಗೌಡ, ಎಂ.ವಿ.ವೀರಭದ್ರಯ್ಯ, ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಡಿ.ನಾಗರಾಜಯ್ಯ, ಕೆ.ತಿಮ್ಮರಾಯಪ್ಪ, ಎನ್‌.ಎಚ್‌.ಕೋನರಡ್ಡಿ, ಮುಖಂಡರಾದ ಲೋಕೇಶ್ವರ್, ಎನ್.ಗೋವಿಂದರಾಜು ಇದ್ದರು. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ನಿಂಗಪ್ಪ ಪ್ರಾಸ್ತಾವಿಕ ಮಾತನಾಡಿದರು.

ನಿರಾಶ್ರಿತರ ಆಶ್ರಯ ತಾಣವಲ್ಲ

‘ಸದನದ ಒಳಗೆ ಮತ್ತು ಹೊರಗಡೆ ರಮೇಶ್ ಬಾಬು ಅವರು ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ ಹೇಳಿದರು. ‘ಆಗ್ನೇಯ ಶಿಕ್ಷಕರ ಕ್ಷೇತ್ರ ನಿರಾಶ್ರಿತರ ಆಶ್ರಯ ತಾಣವಲ್ಲ. ಕ್ಷೇತ್ರ ಬಿಟ್ಟು ಹೋಗಿ ಮತ್ತೆ ಬಂದು ಕೆಲವರು ಸ್ಪರ್ಧಿಸಿದ್ದಾರೆ. ಹೀಗಾಗಿ, ಇಂತಹರ ಬಗ್ಗೆ ಎಚ್ಚರಿಕೆ ಇರಲಿ. ರಮೇಶ್ ಬಾಬು ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು’ ಎಂದು ಮನವಿ ಮಾಡಿದರು.

ಶಿಕ್ಷಣ ಖಾತೆ ಜೆಡಿಎಸ್ ಬಳಿ

‘ಉಪಚುನಾವಣೆಯಲ್ಲಿ ಆಯ್ಕೆಗೊಂಡ ಬಳಿಕ ಒಂದು ವರ್ಷ ಎರಡು ತಿಂಗಳ ಅವಧಿಯಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರ ಘನತೆಗೆ ಚ್ಯುತಿ ಬಾರದ ರೀತಿಯಲ್ಲಿ ನಡೆದುಕೊಂಡು ಬಂದಿದ್ದೇನೆ. ಶಿಕ್ಷಕರ ಸಮುದಾಯದ ಸಮಸ್ಯೆ ಪರಿಹಾರಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇನೆ’ ಅಭ್ಯರ್ಥಿ ರಮೇಶ್ ಬಾಬು ಹೇಳಿದರು.

‘ಮೈತ್ರಿ ಸರ್ಕಾರದಲ್ಲಿ ಶಿಕ್ಷಣ ಖಾತೆ ಜೆಡಿಎಸ್ ಪಕ್ಷಕ್ಕೆ ಲಭಿಸಿದ್ದು, ಹೀಗಾಗಿ, ನಮ್ಮ ಪಕ್ಷದ ಮುಖಂಡರೇ ಶಿಕ್ಷಣ ಖಾತೆ ಸಚಿವರಾಗಲಿದ್ದಾರೆ. ಹೀಗಾಗಿ, ಸಮಸ್ಯೆಗಳು ಶೀಘ್ರ ಪರಿಹಾರ ಆಗಲಿವೆ ಎಂಬ ವಿಶ್ವಾಸವಿದೆ’ ಎಂದರು.

‘ಕಳೆದ ಬಾರಿ ನಾಲ್ಕು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದು, ಈ ಬಾರಿಯೂ ಹೆಚ್ಚಿನ ಮತಗಳಿಂದ ಗೆಲ್ಲಿಸುವ ವಿಶ್ವಾಸವಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry