ಕೆಲಸ ಮಾಡಲು ಬಿಡುತ್ತಿಲ್ಲ: ಪ್ರತಿನಿಧಿಗಳ ಅಳಲು

7
ನಗರಸಭೆಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಸದಸ್ಯರು

ಕೆಲಸ ಮಾಡಲು ಬಿಡುತ್ತಿಲ್ಲ: ಪ್ರತಿನಿಧಿಗಳ ಅಳಲು

Published:
Updated:

ಚಾಮರಾಜನಗರ: ‘ನಗರಸಭೆಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನಮಗೆ ಕೆಲಸ ಮಾಡಲು ಬಿಡುತ್ತಿಲ್ಲ’ ಎಂದು ಚಾಮರಾಜನಗರ ನಗರಸಭೆಯ ಅಧ್ಯಕ್ಷೆ ಕೆ. ಶೋಭಾ ಮತ್ತು ಇತರ ಸದಸ್ಯರು ಶನಿವಾರ ಅಳಲು ತೋಡಿಕೊಂಡರು.

‘ಎರಡು ವರ್ಷಗಳಲ್ಲಿ ಸರ್ಕಾರದಿಂದ ವಿವಿಧ ಯೋಜನೆಯಡಿ ಕೋಟಿಗಟ್ಟಲೆ ಹಣ ಮಂಜೂರಾಗಿದ್ದು, ಅಷ್ಟೇ ಮೊತ್ತದ ಭ್ರಷ್ಟಾಚಾರ ನಡೆದಿದೆ. ಇದಕ್ಕೆ ಹಿಂದಿನ ಮತ್ತು ಹಾಲಿ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಕೈಜೋಡಿಸಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ನಗರಸಭೆಯ ಹಿರಿಯ ಸದಸ್ಯ ಎಸ್‌. ನಂಜುಂಡಸ್ವಾಮಿ ಮಾತನಾಡಿ, ‘ನಮ್ಮ ಆಡಳಿತಾವಧಿ ಇನ್ನೂ ನಾಲ್ಕೈದು ತಿಂಗಳು ಮಾತ್ರ ಇದೆ. ಸಾಕಷ್ಟು ಕೆಲಸ ಮಾಡಬೇಕು ಎಂಬುದು ನಮ್ಮ ಆಸೆ. ಆದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

‌‘1,200ಕ್ಕೂ ಹೆಚ್ಚು ಖಾತಾ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ. ಅಂಗಡಿಗಳ ಮರು ನವೀಕರಣಕ್ಕಾಗಿ ಸಲ್ಲಿಸಲಾಗಿರುವ 180 ಅರ್ಜಿಗಳು ಇನ್ನೂ ವಿಲೇವಾರಿಯಾಗಿಲ್ಲ. ಜನನ ಪ್ರಮಾಣಪತ್ರ, ಮರಣ ಪ್ರಮಾಣಪತ್ರ ಪಡೆಯುವುದಕ್ಕೂ ಅಲೆದಾಡಬೇಕಾದ ಸ್ಥಿತಿ ಇದೆ. ಅಧಿಕಾರಿಗಳ ಅವ್ಯವಹಾರದಿಂದಾಗಿ ಈ ರೀತಿ ಆಗುತ್ತಿದೆ’ ಎಂದು ಆರೋಪಿಸಿದರು.

‘ನಗರದ ಡೀವಿಯೇಷನ್‌ ರಸ್ತೆ ವಿಸ್ತರಣೆಗಾಗಿ ತೆರವುಗೊಳಿಸಲಾದ ಕಟ್ಟಡಗಳ ಮಾಲೀಕರಿಗೆ ಪರಿಹಾರ ನೀಡಲಾಗುವುದಿಲ್ಲ ಎಂದು ಮೊದಲೇ ಹೇಳಿತ್ತು. ಆದರೆ, ನ್ಯಾಯಾಂಗ ನಿಂದನೆಯಾಗುತ್ತದೆ ಎಂಬ ನೆಪವೊಡ್ಡಿ ಹೈಕೋರ್ಟ್‌ ಆದೇಶ ಬರುವುದಕ್ಕೂ ಮೊದಲೇ 32 ಜನರಿಗೆ ₹ 78 ಲಕ್ಷ ಪರಿಹಾರ ವಿತರಿಸಲಾಯಿತು. ಶ್ರೀಮಂತರಿಗಷ್ಟೇ ಪರಿಹಾರ ನೀಡಲಾಯಿತು. ಬಡವರು, ದಲಿತರು ಮತ್ತು ಹಿಂದುಳಿದವರಿಗೆ ಹಣ ಕೊಟ್ಟಿಲ್ಲ’ ಎಂದು ದೂರಿದರು.

ನಗರಸಭೆಯ ಪ್ರಭಾರ ಆಯುಕ್ತರಾದ ಬಿ. ಫೌಜಿಯಾ ತರನ್ನಮ್‌ ಅವರನ್ನು ಬದಲಾಯಿಸುವಂತೆ ಮಾಡಿರುವ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಭಾರ ಆಯುಕ್ತರಿಗೆ ಕೆಲಸದ ಒತ್ತಡದಿಂದ ಇಲ್ಲಿಗೆ ಹೆಚ್ಚು ಗಮನ ನೀಡಲು ಆಗುತ್ತಿಲ್ಲ. ತಿಂಗಳಿಗೆ ಒಂದು ಬಾರಿ ಒಂದು ಗಂಟೆ ಕುಳಿತು ಕೆಲಸ ಮಾಡುವುದೇ ಕಷ್ಟವಾಗಿದೆ. ತಮ್ಮನ್ನು ಈ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಸ್ವತಃ ಜಿಲ್ಲಾಧಿಕಾರಿಗೆ ಮನವಿ ಮಾಡಿರುವುದಾಗಿ ಅವರು ಹೇಳಿದ್ದಾರೆ. ನಾವು ಕೂಡ ಈ ಬಗ್ಗೆ ಮನವಿ ಮಾಡಿದ್ದರೂ ಜಿಲ್ಲಾಧಿಕಾರಿಯವರು ಕಿವಿಗೆ ಹಾಕಿಕೊಂಡಿಲ್ಲ’ ಎಂದು ನಗರಸಭೆಯ ಮತ್ತೊಬ್ಬ ಸದಸ್ಯ ಚಿನ್ನಸ್ವಾಮಿ ಹೇಳಿದರು.

‘ಮೇ 30ರಂದು 25 ಜನರು ಒಟ್ಟಾಗಿ ಮನವಿ ಮಾಡುವುದಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಎರಡು ಗಂಟೆ ಅಲ್ಲಿ ಕಾದು ಕುಳಿತರೂ ಭೇಟಿಗೆ ಅವಕಾಶ ಕೊಡಲಿಲ್ಲ. ನಾವು ನಮ್ಮ ಸ್ವಂತ ಕೆಲಸಕ್ಕಾಗಿ ಅವರ ಬಳಿ ಹೋಗಿರಲಿಲ್ಲ. ಜನರ ಕೆಲಸ ಸುಗಮವಾಗಿ ನಡೆಯಲು ಅಗತ್ಯ ಅಧಿಕಾರಿಗಳನ್ನು ನೇಮಿಸುವಂತೆ ಕೇಳಲು ಹೋಗಿದ್ದೆವು. ಅವರಿಗೆ ಜನಪ್ರತಿನಿಧಿಗಳೆಂದರೆ ತಾತ್ಸಾರ. ನಗರಸಭೆ ಕಚೇರಿ ಮುಂದೆ ಎರಡು ದಿನಗಳಿಂದ ಧರಣಿ ಕುಳಿತರೂ ಸ್ಪಂದಿಸಿಲ್ಲ. ಈ ನಿರ್ಲಕ್ಷ್ಯ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ, ಬಂದ್‌ಗೆ ಕರೆ ನೀಡುವುದು ಸೇರಿದಂತೆ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಅವಕಾಶ ನಿರಾಕರಣೆ: ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಅವರ ಪ್ರತಿಕೃತಿ ದಹಿಸಿ, ರಸ್ತೆ ತಡೆ ನಡೆಸಿ ಪ್ರತಿಭಟಿಸಲು ಯೋಚಿಸಿದ್ದರು. ಆದರೆ, ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.

ಸದಸ್ಯರು ಮಾಡಿದ ಆರೋಪಗಳೇನು?

ಪಟ್ಟಣದ ಕಸ ವಿಲೇವಾರಿ ಮಾಡುವ ಘಟಕಕ್ಕೆ ಸೋಮವಾರಪೇಟೆ ರಸ್ತೆ ಮತ್ತು ಗಾಳಿಪುರ ರಸ್ತೆಯಿಂದ ಹೋಗಲು ಡಾಂಬರು ರಸ್ತೆ ನಿರ್ಮಿಸಲು ₹48 ಲಕ್ಷಕ್ಕೆ ಟೆಂಡರ್‌ ಪಡೆದ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸದಿದ್ದರೂ ಅವರಿಗೆ ಬಿಲ್‌ ಪಾವತಿಸಲಾಗಿದೆ.

ನಗರಸಭೆಯ ಮಂಜೂರಾತಿ ಪಡೆಯದೇ, ಸೋಮವಾರಪೇಟೆಯಲ್ಲಿರುವ ಎಸ್‌ಡಬ್ಲ್ಯುಎಂ ಘಟಕದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ಬೈಪಾಸ್‌ ರಸ್ತೆ ಮಾಡುವ ಗುತ್ತಿಗೆದಾರನಿಗೆ ಒಂದು ಲೋಡ್‌ ಮಣ್ಣಿಗೆ ₹500ರಂತೆ ನಿಗದಿ ಮಾಡಿ ಅಕ್ರಮವಾಗಿ 2,000 ಲೋಡ್‌ ಮಣ್ಣು ಮಾರಾಟ ಮಾಡಲಾಗಿದೆ.

ಚಾಮರಾಜನಗರಕ್ಕೆ ತಿ.ನರಸೀಪುರದಿಂದ ಕುಡಿಯುವ ನೀರೆತ್ತುವ ಕಾರ್ಯಾಗಾರದ 750 ಎಚ್‌ಪಿ ಪಂಪ್ ಹಾಳಾಗಿದೆ ಎಂದು ಸುಳ್ಳು ಮಾಹಿತಿ ನೀಡಿ, ರಿಪೇರಿ ಮಾಡಲು ಟೆಂಡರ್‌/ಕೊಟೇಷನ್ ಕರೆಯದೇ ತಮಗೆ ಇಷ್ಟ ಬಂದ ಗುತ್ತಿಗೆದಾರನಿಂದ ರಿಪೇರಿ ಮಾಡಿಸಲು ತುಮಕೂರಿಗೆ ಕಳುಹಿಸಿದ್ದಾರೆ.

ನಗರಸಭಾ ವ್ಯಾಪ್ತಿಯಲ್ಲಿ ಬರುವ ಅಂಗಡಿ ಬೀದಿ ರಸ್ತೆ, ಚನ್ನೀಪುರದ ಮೋಳೆಗೆ ಹೋಗುವ ರಸ್ತೆ ಹಾಗೂ ನಗರದ ಡೀವಿಯೇಷನ್‌ ರಸ್ತೆ ವಿಸ್ತರಣೆ ವೇಳೆ ಹಾಲಿ ಇದ್ದ ಚರಂಡಿಯ ದಿಂಡು ಕಲ್ಲುಗಳು ಸುಮಾರು ₹50 ಲಕ್ಷ ಬೆಲೆ ಬಾಳುತ್ತಿತ್ತು. ಇವುಗಳನ್ನು ಅಧಿಕಾರಿಗಳು, ಗುತ್ತಿಗೆದಾರರ ಜೊತೆ ಶಾಮೀಲಾಗಿ ರಾತ್ರಿ ವೇಳೆ ಮೈಸೂರಿಗೆ ಸಾಗಿಸಿದ್ದಾರೆ.

ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ತೆರವುಗೊಳಿಸಲಾದ ಚರಂಡಿಯಲ್ಲಿದ್ದ ₹50 ಲಕ್ಷದಿಂದ ₹60 ಲಕ್ಷ ಬೆಲೆಬಾಳುವ ದಿಂಡು ಕಲ್ಲುಗಳನ್ನು ಗುತ್ತಿಗೆದಾರ ಮಂಡ್ಯಕ್ಕೆ ಸಾಗಿಸಿದ್ದಾರೆ.

ವಿವಿಧ ಯೋಜನೆಯಡಿ ನಗರಸಭಾ ವ್ಯಾಪ್ತಿಯಲ್ಲಿ ಕೋಟ್ಯಂತರ ಮೊತ್ತದ ಅಭಿವೃದ್ಧಿ ಕಾರ್ಯ ಕೈಗೊಳ್ಳುವಾಗ ಹಿಂದಿನ ಆಯುಕ್ತರು ಇ–ಪ್ರೊಕ್ಯೂರ್‌ಮೆಂಟ್‌ ಟೆಂಡರ್‌ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಚಾಮರಾಜೇಶ್ವರ ಪಾರ್ಕ್‌ನಲ್ಲಿ ಬಲಭಾಗದ ಪಾರ್ಕ್ ಅಭಿವೃದ್ಧಿಗೆ ಸುಮಾರು ₹13 ಲಕ್ಷ ಹಣ ಮಂಜೂರಾಗಿದೆ. ಆದರೆ ಕೇವಲ ₹ 3 ಲಕ್ಷದಲ್ಲಿ ನಡಿಗೆ ಪಥ ನಿರ್ಮಿಸಿ, ಉಳಿದ ಮೊತ್ತವನ್ನು ದುರ್ಬಳಕೆ ಮಾಡಲಾಗಿದೆ.‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry