7
ಇಟಗಿ ಗ್ರಾಮದ ಪ್ರಗತಿಪರ ರೈತ ಮಹೇಶಪ್ಪ ಮುದ್ದಿ ಸಲಹೆ

ಸಾವಯವ ಕೃಷಿ ಪ್ರೀತಿಯ ಮಹೇಶಪ್ಪ...

Published:
Updated:
ಸಾವಯವ ಕೃಷಿ ಪ್ರೀತಿಯ ಮಹೇಶಪ್ಪ...

‘ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದೂ ಹುಸಿಯಾಗುವುದಿಲ್ಲ’ ಎಂಬುದಕ್ಕೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕುಮಾರಪಟ್ಟಣ ಸಮೀಪದ ಇಟಗಿ ಗ್ರಾಮದ ಪ್ರಗತಿ ಪರ ರೈತ ಮಹೇಶಪ್ಪ ಮುದ್ದಿ ತಮ್ಮ ಜಮೀನಿನಲ್ಲಿ ಕೈಗೊಂಡಿರುವ ಕೃಷಿ ಚಟುವಟಿಕೆಗಳೇ ಸಾಕ್ಷಿ.

ಒಂದೆಡೆ, ಪರಿಸರ ಪ್ರೀತಿ, ಮತ್ತೊಂದೆಡೆ ಸಾವಯವ, ಹನಿ ನೀರಾವರಿಯಂಥ ಕ್ರಮಗಳಿಂದ ಬರಡು ನೆಲದಲ್ಲಿ ಹಸಿರು ಉಕ್ಕಿಸಿದ್ದಾರೆ. 150ಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಬೆಳೆಸಿರುವುದು ಅವರ ಪರಿಸರ ಪ್ರೀತಿಗೆ ಕೈಗನ್ನಡಿ.

ಅಂದು ಅಣಕ: 1989ರಲ್ಲಿ ಆರು ಎಕರೆ ಪಾಳು ಜಮೀನು ಖರೀದಿಸಿ ಕೃಷಿ ಮಾಡಲು ಮುಂದಾದಾಗ ಎಲ್ಲರೂ ಅಣಕವಾಡಿದ್ದರು. ಆದರೆ, ಅದನ್ನೇ ಸವಾಲಾಗಿ ಸ್ವೀಕರಿಸಿದ ಮಹೇಶಪ್ಪ ಕುಟುಂಬ, 1991ರಲ್ಲಿ ಎಲೆಬಳ್ಳಿ ನಾಟಿ ಮಾಡಿ ಅದೃಷ್ಟ ಪರೀಕ್ಷೆ ನಡೆಸಿತು.

‘ಆಗ ತಿಪ್ಪೆಗೊಬ್ಬರ ಬಳಸಿದ ಫಲವಾಗಿ ಉತ್ತಮ ಫಲಿತಾಂಶ ಸಿಕ್ಕಿತು. ಇದು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಲು ಶಕ್ತಿ ನೀಡಿತು’ ಎಂದು ಅವರ ಸಹೋದರ ಪರಮೇಶಪ್ಪ ಮುದ್ದಿ ಹೇಳುತ್ತಾರೆ.

‘ಆರಂಭದಲ್ಲಿ ಕೃಷಿ ಭೂಮಿಗೆ ಸತ್ವ ಇರಲಿಲ್ಲ. ಎಲೆ ಬಳ್ಳಿ ನಾಟಿ ಮಾಡಿದಾಗ ತಿಪ್ಪೆಗೊಬ್ಬರ ಬಳಸಿದ ಫಲವಾಗಿ ಉತ್ತಮ ಫಲಿತಾಂಶ ಸಿಕ್ಕಿತು. ಇದು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಲು ಶಕ್ತಿ ನೀಡಿತು. ವರ್ಷದಿಂದ ವರ್ಷಕ್ಕೆ ಮಣ್ಣಿನ ಸತ್ವ ಹೆಚ್ಚಿಸಿದ್ದು ಹಾಗೂ ಕುಟುಂಬದ ಸದಸ್ಯರ ಶ್ರಮದಿಂದ ಇದೀಗ ಲಕ್ಷಾಂತರ ರೂಪಾಯಿ ಆದಾಯ ಸಿಗುತ್ತಿದೆ’ ಎನ್ನುತ್ತಾರೆ ಮಹೇಶಪ್ಪ.

ಸುಜಲ ಯೋಜನೆ: ‘ಜಮೀನಿನಲ್ಲಿ ನೀರಿಗಾಗಿ ಮೂರು ಕೊಳವೆ ಬಾವಿ ಕೊರೆಸಲಾಗಿತ್ತು. ಒಂದಷ್ಟು ದಿನ ನಡೆದು ಸಂಪೂರ್ಣವಾಗಿ ನಿಂತು ಹೋದವು. 1996ರಲ್ಲಿ ಸುಜಲ ಯೋಜನೆ ಸಹಕಾರ ಪಡೆದು ಕೃಷಿಹೊಂಡ, ಇಂಗುಗುಂಡಿ ನಿರ್ಮಿಸಿದ್ದರಿಂದ ನಿಂತು ಹೋಗಿದ್ದ ಕೊಳವೆಬಾವಿಗಳು ಪುನಃ ಪ್ರಾರಂಭವಾಗಿ ಇಂದಿಗೂ ಯಾವುದೇ ಅಡೆತಡೆಯಿಲ್ಲದೆ ನೀರೊದಗಿಸುತ್ತಿವೆ. ಇಸ್ರೊ ಸಂಸ್ಥೆ ಪ್ರತಿ ಕೊಳವೆ

ಬಾವಿಯನ್ನು ತಪಾಸಣೆಗೆ ಒಳಪಡಿಸಿದಾಗ ಮೊದಲು ಒಂದು ತಾಸಿಗೆ 1,000ದಿಂದ 1,200 ಲೀಟರ್ ಬರುತ್ತಿತ್ತು. ಆದರೆ, ಈಗ 7,000 ದಿಂದ 8,000 ಲೀಟರ್ ನೀರು ಬರುತ್ತಿದೆ’ ಎಂದು ಅವರ ಸಹೋದರ ಪರಮೇಶಪ್ಪ ವಿವರಿಸಿದರು.

ಮಿಶ್ರ ಬೆಳೆ: ಕಬ್ಬಿನ ಜೊತೆಗೆ ಅಡಿಕೆ, ಬಾಳೆ, ತೆಂಗಿನ ಮಧ್ಯೆ ಜೋಳ, ರಾಗಿ, ಈರುಳ್ಳಿ, ಬೆಳ್ಳುಳ್ಳಿ, ಶೇಂಗಾ, ಕುಂಬಳ, ಸೌತೆ ಇನ್ನಿತರೆ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಇದರಿಂದ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗಿದೆ ಎನ್ನುತ್ತಾರೆ ಮಹೇಶಪ್ಪ.

ರೋಗಬಾಧೆ: ಮುನ್ನೆಚ್ಚರಿಕೆ ಕ್ರಮವಾಗಿ ಪರಿಸರ ಸ್ನೇಹಿ ಗಿಡ-ಮರಗಳನ್ನು ಜಮೀನಿನ ಬದುಗಳಲ್ಲಿ ಬೆಳೆಸಬೇಕು. ಜೀವಾಮೃತ, ಘನ ಜೀವಾಮೃತ, ಜೈವಿಕ ಗೊಬ್ಬರ ಹಾಗೂ ಗೋವಿನ ಗಂಜಲ ಸಮಯಕ್ಕೆ ಸರಿಯಾಗಿ ನೀಡುವುದರಿಂದ ರೈತರು ತಮ್ಮ ಬೆಳೆಗಳಿಗೆ ಯಾವುದೇ ರೋಗ ಬರದಂತೆ ತಡೆಯಬಹುದು. ಇದನ್ನು ಎಲ್ಲಾ ಬೆಳೆಗೂ ನೀಡುವುದು ಇನ್ನೂ ಉತ್ತಮ’ ಎಂಬುದು ಇಬ್ಬರೂ ಸಹೋದರರ ಸಲಹೆ.

ಸಲಹೆ: ‘ರೈತರು ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ ಭೂಮಿ ಫಲವತ್ತತೆ ಹಾಳು ಮಾಡಬಾರದು. ಸಾವಯವ ಗೊಬ್ಬರ ಬಳಕೆಯಿಂದ ಫಲವತ್ತತೆ ವೃದ್ಧಿಸುತ್ತದೆ. ಸಣ್ಣ ಹಿಡುವಳಿದಾರರು ಕೂಡ ಹನಿ ನೀರಾವರಿ ಪದ್ಧತಿ ಮೂಲಕ ಪ್ರಗತಿ ಕಾಣಲು ಸಾಧ್ಯ’ ಎಂಬುದು ಮಹೇಶಪ್ಪ ಅವರ ಅನುಭವ.

ಸಂದ ಪ್ರಶಸ್ತಿ

2006ರಲ್ಲಿ ‘ಸುವರ್ಣ ಕರ್ನಾಟಕ ದಿಬ್ಬಣ’ ಪ್ರಶಸ್ತಿ, 2007ರಲ್ಲಿ ‘ಕೃಷಿ ಪಂಡಿತ’ ಪ್ರಶಸ್ತಿ, 2010ರಲ್ಲಿ ‘ಪ್ರಾಣಿಗಳನ್ನು ಬೆದರಿಸುವ ತೂಪಾನ್’ ಪ್ರಶಸ್ತಿ, 2012ರಲ್ಲಿ ಕೃಷಿ ಇಲಾಖೆಯಿಂದ ‘ಪ್ರಜಾರಾಜ್ಯೋತ್ಸವ’ ಪ್ರಶಸ್ತಿ, 2018ರಲ್ಲಿ ಕೃಷಿಕ ಸಮಾಜದಿಂದ ‘ಪ್ರಗತಿಪರ ಶ್ರೇಷ್ಠ ಕೃಷಿಕ’ ಪ್ರಶಸ್ತಿಗಳು ಮಹೇಶಪ್ಪ ಅವರಿಗೆ ಸಂದಿವೆ.

**

ಮಹೇಶಪ್ಪ ನವೀನ ಕೃಷಿ ಪದ್ಧತಿಯಲ್ಲಿ ನಿರೀಕ್ಷಿತ ಯಶಸ್ಸು ಕಂಡಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಪಡೆದು ರೈತ ಸಮೂಹಕ್ಕೆ ಮಾದರಿಯಾಗಿದ್ದಾರೆ

–  ಜಿ.ಎಂ. ಬತ್ತಿಕೊಪ್ಪ, ಸಹಾಯಕ ಕೃಷಿ ನಿರ್ದೇಶಕ, ರಾಣೆಬೆನ್ನೂರು 

– ಸೂರಲಿಂಗಯ್ಯ ಎನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry