ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಹೊಟ್ಟೆ ಪೋಷಕ ಮಕ್ಕರಿ

ಬೇಲಿಯಲ್ಲಿರುವ ಲಂಟಾನ, ಪೂಳಿ ಗಿಡಗಳೇ ಗ್ರಾಮೀಣ ಜನರ ಬದುಕಿನ ಆಸರೆೆ
Last Updated 3 ಜೂನ್ 2018, 13:10 IST
ಅಕ್ಷರ ಗಾತ್ರ

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಸ್ಥಳೀಯವಾಗಿ ದೊರೆಯುವ ಪೂಳಿ (ಮಕ್ಕರಿಗೆ ಹೆಣಿಯುವುದಕ್ಕೆ ಬಳಸುವ ಒಂದು ಜಾತಿಯ ಗಿಡ) ಹಾಗೂ ಲಂಟಾನ ಬರೆ (ಉದ್ದವಾದ ದಂಟು) ಬಳಸಿ ಮಕ್ಕರಿ ಹೆಣೆದು ಹೊಟ್ಟೆ ಹೊರೆಯುವ ಜನರಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಇವರು, ಬಿಡುವಿನ ವೇಳೆಯಲ್ಲಿ ಈ ಕಾಯಕ ಕೈಗೊಂಡು ಕೃಷಿಗೆ ನೆರವಾಗುತ್ತಿದ್ದಾರೆ.

ಇಲ್ಲಿ ಮಕ್ಕರಿ ಹೆಣಿಗೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಕೃಷಿಕ ಸಮುದಾಯದೊಂದಿಗೆ ಸಂಬಂಧ ಇರುವ ಎಲ್ಲ ಸಮುದಾಯದ ಜನರೂ ಈ ವೃತ್ತಿಯನ್ನು ಕೈಗೊಂಡಿ ದ್ದಾರೆ. ಇದೊಂದು ವೃತ್ತಿಯೂ ಹೌದು, ಕಲೆಯೂ ಹೌದು. ಆದರೆ ಈ ಕೆಲಸಕ್ಕೆ ಕೈ ಹಾಕಿರುವವರು ಮಾತ್ರ ಬಡವರು ಎಂಬುದರಲ್ಲಿ ಎರಡು ಮಾತಿಲ್ಲ.

ತಾಲ್ಲೂಕಿನಲ್ಲಿ ವಿಶಾಲವಾದ ಮಾವಿನ ತೋಟಗಳಿವೆ. ಈ ತೋಟಗಳ ಸುತ್ತ ಹಸಿರು ಬೇಲಿ ಬೆಳೆಸಲಾಗಿದೆ. ಈ ಬೇಲಿಗಳಲ್ಲಿ ಮಕ್ಕರಿ ಹೆಣಿಗೆಗೆ ಬೇಕಾದ ಲಂಟಾನ ಹಾಗೂ ಪೂಳಿ ಗಿಡಗಳು ಬೆಳೆದಿವೆ. ಹೆಣಿಗೆ ಗೊತ್ತಿರುವವರು ದೋಟಿಯೊಂದಿಗೆ ಹೋಗಿ ಉತ್ತಮ ಗುಣಮಟ್ಟದ ಬರೆಗಳನ್ನು ಕೊಯ್ದು ತರುತ್ತಾರೆ. ಅವುಗಳನ್ನು ನೀಟಾಗಿ ಜವರಿ ಮಧ್ಯಕ್ಕೆ ಸೀಳುತ್ತಾರೆ. ಸೀಳದೆಯೇ ಬಳಸುವುದೂ ಉಂಟು.

ಕೆಲವರಿಗೆ ಮಕ್ಕರಿ ಹೆಣಿಗೆ ವೃತ್ತಿಯಾದರೆ, ಮತ್ತೆ ಕೆಲವರಿಗೆ ಬಿಡುವಿನ ವೇಳೆಯಲ್ಲಿ ಸಂಪಾದನೆ ದಾರಿ. ಈ ಮಕ್ಕರಿಗಳನ್ನು ಹುಣಸೆ ಕಾಯಿ, ಮಾವಿನ ಕಾಯಿ, ಗೊಬ್ಬರ ಎತ್ತಲು, ತರಕಾರಿ ತುಂಬಲು, ಕೃಷಿ ಕ್ಷೇತ್ರಕ್ಕೆ ಊಟ ಕೊಂಡೊಯ್ಯಲು ಬಳಸುತ್ತಾರೆ. ನಾಟಿ ಕೋಳಿ ಸಾಕುವ ರೈತರು ವಿಶೇಷವಾಗಿ ದೊಡ್ಡ ಗಾತ್ರದ ಮಕ್ಕರಿಗಳನ್ನು ಹೆಣಿಗೆ ಮಾಡಿಸಿ ಬಳಸುತ್ತಾರೆ. ತಾಲ್ಲೂಕಿನ ಕೃಷಿ ಕ್ಷೇತ್ರದಲ್ಲಿ ಮೊದಲಿನಿಂದಲೂ ಈ ನೈಸರ್ಗಿಕ ಗಿಡಗಳಿಂದ ತಯಾರಿಸಿದ ಮಕ್ಕರಿಗಳು ಬಳಕೆಯಲ್ಲಿವೆ. ಇವು ಹಗುರಾಗಿದ್ದು, ಅನುಕೂಲವೂ ಆಗಿವೆ.

ಹಿಂದೆ, ಹೆಣೆದ ಮಕ್ಕರಿಗಳನ್ನು ಹೊತ್ತು ಹಳ್ಳಿಗಳಿಗೆ ನಡೆದು, ದವಸ ಧಾನ್ಯ ಪಡೆದು ಮಕ್ಕರಿ ಕೊಡುತ್ತಿದ್ದರು. ಅದೊಂದು ರೀತಿಯಲ್ಲಿ ಸಾಟಿ ಪದ್ಧತಿ ಆಗಿತ್ತು. ಆದರೆ ಈಗ ಮಳೆ ಕೊರತೆಯಿಂದ ಬೆಳೆಯುವುದು ಕಡಿಮೆಯಾಗಿದೆ. ಆದ್ದರಿಂದ ಧಾನ್ಯದ ಜಾಗಕ್ಕೆ ಹಣ ಬಂದಿದೆ.

ಮಕ್ಕರಿ ಬೆಲೆಯೂ ಹೆಚ್ಚಿದೆ. ಮಕ್ಕರಿಯ ಗಾತ್ರಕ್ಕೆ ಅನುಗುಣವಾಗಿ ಬೆಲೆ ಇರುತ್ತದೆ. ಮಕ್ಕರಿಯೊಂದರ ಬೆಲೆ ಅದರ ಗಾತ್ರದ ಆಧಾರದ ಮೇಲೆ ₹ 60 ರಿಂದ 400ರವರೆಗೆ ಇರುತ್ತದೆ. ಬೆಲೆ ಬಗ್ಗೆ ಗೊಣಗಿದರೆ, ಪೇಟೆಯಲ್ಲಿ ಈಗ ಯಾವ ವಸ್ತು ಕಡಿಮೆ ಬೆಲೆಗೆ ಸಿಗುತ್ತದೆ ಹೇಳಿ, ಮಕ್ಕರಿ ಹೆಣೆಯಬೇಕಾದರೆ ಹೆಚ್ಚು ಕಾಲ ಹಿಡಿಯುತ್ತದೆ. ದಿನದ ಕೂಲಿಯಾದರೂ ಬೇಡವೇ ಎಂದು ಪ್ರಶ್ನಿಸುತ್ತಾರೆ.

ಅವರು ಹೇಳುವುದರಲ್ಲಿ ಉತ್ಪ್ರೇಕ್ಷೆ ಇಲ್ಲ. ಬದಲಾದ ಪರಿಸ್ಥಿತಿಯಲ್ಲಿ ಹೆಣಿಗೆಗೆ ಬೇಕಾಗುವ ಬರೆ ಸಿಗುವುದು ಕಷ್ಟವಾಗಿದೆ. ಸುತ್ತಾಡಿ ಸಂಗ್ರಹಿಸಿದ ಬರೆಗಳನ್ನು ಸಿದ್ಧಪಡಿಸಿ ಮಕ್ಕರಿ ಹೆಣೆಯಬೇಕು. ಅದಕ್ಕೆ ಸಾಕಷ್ಟು ಸಮಯವೂ ಬೇಕಾಗುತ್ತದೆ.

ಸಂಚಕಾರ ತಂದ ಪ್ಲಾಸ್ಟಿಕ್‌ ಬುಟ್ಟಿ

ವಯಸ್ಸಾದವರನ್ನು ಯಾರು ಕೆಲಸಕ್ಕೆ ಕರೆಯುತ್ತಾರೆ ಹೇಳಿ? ಕಲಿತಿರುವ ವೃತ್ತಿಯನ್ನು ಬಿಡದೆ ಮಕ್ಕರಿ ಹೆಣೆದು ಕೂಲಿ ಗಿಟ್ಟಿಸಿಕೊಳ್ಳುತ್ತಿದ್ದೇನೆ. ಆದರೆ ಪ್ಲಾಸ್ಟಿಕ್‌ ಬುಟ್ಟಿಯಿಂದಾಗಿ ಅದಕ್ಕೂ ಸಂಚಕಾರ ಬರುತ್ತಿದೆ ಎಂದು ಉನಿಕಿಲಿ ಗ್ರಾಮದ ಮಕ್ಕರಿ ಹೆಣೆಯುವ ವೆಂಕಟೇಶಪ್ಪ ಅಳಲು ತೋಡಿಕೊಂಡರು.

ಆರ್.ಚೌಡರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT