ಉರುಳಿದ ಗಾಲಿಗಳೂ... ದೇವರ ಮರಗಳೂ...

7

ಉರುಳಿದ ಗಾಲಿಗಳೂ... ದೇವರ ಮರಗಳೂ...

Published:
Updated:
ಉರುಳಿದ ಗಾಲಿಗಳೂ... ದೇವರ ಮರಗಳೂ...

ಶಾಲೆಯಿಂದ ಮನೆಗೆ ಬರುವಾಗ, ಒಂದೊಂದೇ ಮರದ ಹೆಸರು ಹಿಡಿದು ಅವುಗಳನ್ನು ಮುಟ್ಟಲು ಮುಂದಕ್ಕೋಡುತ್ತಿದ್ದ ಮಕ್ಕಳು; ಅದೇ ಮಕ್ಕಳು ರಜೆಯಲ್ಲಿ ಬಸ್ಸು ಹತ್ತಿ ಕುಳಿತು ಊರಿಗೆ ಹೋಗುವಾಗ ಹಿಂದಕ್ಕೋಡುತ್ತಿದ್ದ ಮರಗಳು! ಎರಡೂ ಅದ್ಭುತ ಕ್ಷಣಗಳು! ಈ ಮಕ್ಕಳೆಲ್ಲ ಬಸ್ಸು, ಬೈಕು, ಸ್ಕೂಟರ್‌, ಕಾರು ಎಂದು ಚಕ್ರಗಳ ಮೇಲೆ ಭರ‍್ರನೇ ಸಾಗುತ್ತ ಹೋದರೆ, ಅದೇ ವೇಗದಲ್ಲಿ ಮರಗಳು ಹಿಂದೆ ಹಿಂದೆ ಸರಿದವು. ಸರಿಯುತ್ತಲೇ ಬಂದವು. ಗಾಲಿಗಳ ಓಟಕ್ಕಾಗಿ ನಡೆಯುವ ದಾರಿ ಕಿರಿದಾಯಿತು.

ಮೈಮುರಿದು ಹಬ್ಬಿದ್ದ ಬೇರು– ಬಿಳಲುಗಳು ಕಾಂಕ್ರೀಟ್‌ ಸಂಕೋಲೆಯಲ್ಲಿ ಕಟರು ಬಿದ್ದವು. ಬಿಸಿಲುಂಡು ನೆರಳು ನೀಡಿದ ಮರಗಳು, ಮನೆಯಿಂದ ಹೊರಹಾಕಲಾದ ಯಜಮಾನನ ಸ್ಥಿತಿ ಅನುಭವಿಸಿ ಯಾತನೆ ಪಟ್ಟವು. ಯಾರಿಗೆ ಏನೆಂದಾವು ಮರಗಳು? ಇದ್ದಷ್ಟು ದಿನ ನೆರಳಾಗಿ, ಇಲ್ಲದ ಕಾಲಕ್ಕೆ ನೆನಪಾಗಿ, ನಮಗಾರಿಗೂ ಗೊತ್ತಿಲ್ಲದ ದಾರಿ ಹಿಡಿದು ಹೊರಟೇ ಬಿಟ್ಟರೇ ಈ ಹಸಿರೆಂಬ ಹಿರಿಯರು?

ರಣಗುಡುವ ಬಿಸಿಲಿನಲ್ಲಿ ಕರಿಹೆಬ್ಬಾವಿನಂತೆ ಬಿದ್ದು ಉಗಿಯನ್ನು ಉಗುಳುತ್ತಿದ್ದ ರಸ್ತೆಗಳ ಮೇಲೆ ಹೊರಟಾಗ ನಮಗೆ ಮರ ನೆನಪಾಗುತ್ತದೆ, ಮರುಕ್ಷಣವೇ ಮರವನ್ನೂ ಮರೆಸುವಂಥ ಕಾಂಕ್ರೀಟ್‌ ಮರ ತಲೆಮೇಲೆ ಬಂದು ನೆರಳಿನ ಭರವಸೆ ನೀಡುತ್ತದೆ. ಉಗ್ಗುವ ಉಗಿಯನ್ನು ತಣಿಸುವ ಪರಿ ಅದಕ್ಕೆ ತಿಳಿದಿಲ್ಲವಾದ್ದರಿಂದ ಅದು ಭರವಸೆಯನ್ನಷ್ಟೇ ನೀಡಬಲ್ಲದು; ನೆರಳಾಗಿ ನಿಲ್ಲದು. ಹಾಗಿದ್ದರೆ ಉಸಿರು ಕೊಟ್ಟು, ಗಾಳಿ ಬೀಸಿ, ಹಕ್ಕಿಗಳುಲಿಯಿಂದ ಲಾಲಿ ಹಾಡಿಸಿ ಹಿಂದಕ್ಕೋಡಿದ ಹಸಿರು ಮರಗಳನ್ನು ಎಲ್ಲಿ ಎಂದು ಹುಡುಕುವುದು?

ಶಾಲೆ ಶುರುವಾಗುತ್ತಲೇ ಬೇಕಾಗುತ್ತದೆ ಎಂದು ಬೇವಿನಮರದ ಅಂಟನ್ನು ಸಂಗ್ರಹಿಸುತ್ತಿದ್ದ, ಮರದ ಪೊಟರೆಗಳಲ್ಲಿ ಅಡಗಿದ್ದ ಗಿಳಿಗಳನ್ನು ಹುಡುಕಿ ತೆಗೆದು ತಂದು ಸಾಕುತ್ತಿದ್ದ, ಜಾಲಿಗಿಡದ ಕೆಳಗಿನ ಪೊದೆಯಲ್ಲಿ ಹಸಿರು ಜೀರಂಗಿಗಳನ್ನು ಹುಡುಕುತ್ತಿದ್ದ ಹುಡುಗರಿಗೆ ಊರಿನ ಯಾವ ಮೂಲೆಯಲ್ಲಿ ಯಾವ ಮರವಿದೆ? ಯಾವ ಮರದಲ್ಲಿ ಯಾವ ದೇವರು? ಯಾವ ಮರದಲ್ಲಿ ಯಾವ ದೆವ್ವ, ಬ್ರಹ್ಮರಾಕ್ಷಸ ಠಿಕಾಣಿ ಹೂಡಿದೆ ಎಂಬುದೆಲ್ಲ ಗೊತ್ತಿತ್ತು!

ಮಕ್ಕಳು ಮರಗಳೊಂದಿಗೆ ಮಾತಾಡುತ್ತಿದ್ದರು. ಇದು ನನ್ನ ಮರ; ಇದು ನಿನ್ನದು ಎಂದು ಹಂಚಿಕೊಂಡು ಮರಕೋತಿಯಾಡುತ್ತಿದ್ದರು. ಹುಣಸಿ ಮೆಳಿಗೆ ಹೋಗಿ ಹುಣಸಿ ಹೂವಿನ ಚಿಗುರಿನ ರುಚಿ ನೋಡುತ್ತಿದ್ದರು. ಮಕ್ಕಳೇ ಮರವನ್ನು ಬಯಸುತ್ತಿದ್ದರೋ ಮರಗಳೇ ಅವರನ್ನು ಸೆಳೆಯುತ್ತಿದ್ದವೋ ಗೊತ್ತಿಲ್ಲ. ಆದರೆ ‘ಆ ಗಿಡದ ಕೆಳಗೆ ಕುಂದರ್‌ಬ್ಯಾಡ್ರಿ, ಅದರ ಸನೇ ಹೋಗಬ್ಯಾಡ್ರಿ’ ಎಂದು ಹೇಳುವುದನ್ನು ಮಾತ್ರ ದೊಡ್ಡವರು ಮರೆಯುತ್ತಿರಲಿಲ್ಲ. ಅದು ಬೃಹತ್ತಾದ ಮರಗಳನ್ನು ಉಳಿಸುವ ಕಾಳಜಿಯೇ ಆಗಿತ್ತು ಎನಿಸುತ್ತದೆ! ದೇವರ ಮರವೇ ಆಗಲೀ, ದೆವ್ವದ ಮರವೇ ಇರಲಿ ನೆರಳಿಗೆ ಬಡತನವಿರಲಿಲ್ಲ.

ರಸ್ತೆಯ ಇಕ್ಕೆಲದ ಮರಗಳು ದಾರಿಹೋಕರಿಗೆ ಬಂದ ದಾರಿಯ ಗುರುತಾಗಿ, ಸೇರಬೇಕಾದ ಗುರಿಗೆ ಬಲವಾಗಿ ನಿಂತಿದ್ದವು. ನಮಗೀಗ ಬಂದ ದಾರಿಯ ಗುರುತಿಲ್ಲ. ಹೋಗಿ ಸೇರಬೇಕಾದುದು ಎಲ್ಲಿ ಎಂಬುದೂ ಗೊತ್ತಿಲ್ಲ. ಅಭಿವೃದ್ಧಿ ಎಂಬ ಪದವಷ್ಟೇ ಗೊತ್ತು; ಅರ್ಥ ಸ್ಪಷ್ಟತೆ ಇಲ್ಲ.

ಕಳೆದುಕೊಂಡ ಹಸಿರು, ಮಣ್ಣು ಹಾಗೂ ಹಕ್ಕಿಗಳ ಉಲಿಯನ್ನು ನೆನೆಯುತ್ತ ರೈತರು, ಕುರಿಗಾಹಿಗಳು, ರಸ್ತೆ ಬದಿಯ ವ್ಯಾಪಾರಿಗಳು, ಚಮ್ಮಾರರು, ಸೈಕಲ್‌ ಪಂಕ್ಚರ್‌ ಹಾಕುವವರು, ಮನೆ ಒಳಗೂ ಇರಲಾಗದೇ ಹೊರಗೆ ಹೆಜ್ಜೆ ಇಡಲೂ ಧೈರ್ಯ ಸಾಲದ ವಯೋವೃದ್ಧರು ಉಸಿರುಗಳೆಯುತ್ತಿದ್ದಾರೆ. ಹೆಚ್ಚಿದ ತಾಪಮಾನದ ಜೊತೆಗೆ ಅವರ ಬಿಸಿಯುಸಿರೂ ಸೇರಿ ಭೂಮಿ ಇನ್ನಷ್ಟು ಬಿಸಿಯಾಗುತ್ತಿದೆ; ತಂಪಾಗುವ ಬಗೆ ಕಾಣದೇ!

**

ಬಂಧುಗಳೇ, ಕ್ಷಮಿಸಿಬಿಡಿ...

ಮಣ್ಣನ್ನು ಮಣ್ಣು ಮಾಡಿ ಕಾಂಕ್ರೀಟು ಹಾಕಿದವರು ನಾವು; ಬೇರನ್ನು ನೆಲಕ್ಕಿಳಿಸಲೂ ಆಗದೇ ಚಾಚಲೂ ಆಗದೇ ಚಡಪಡಿಸಿದವರು ನೀವು. ದೂರ ದೂರಕ್ಕೆ ನಿಂತು ಮುಗಿಲೆತ್ತರ ಮುಖಮಾಡಿದ್ದರೂ ಬೇರಿನ ನಂಟಿನೊಂದಿಗೆ ನೀವು ಭೂಮಿತಾಯಿಯ ಒಡಲಲ್ಲೇ ಒಬ್ಬರಿಗೊಬ್ಬರು ಕಷ್ಟಸುಖ ಹೇಳಿಕೊಳ್ಳುತ್ತಿದ್ದಿರಿ. ಆದರೆ, ಈಗ? ನೀವೆಲ್ಲ ಮಾತು ನಿಲ್ಲಿಸಿ ಎಷ್ಟು ದಿನವಾಯಿತೋ ಏನೋ? ನಿಮ್ಮ ಬೇರಿನ ಕರುಳು ಬಳ್ಳಿಯನ್ನು ಕತ್ತರಿಸಿ, ಕೇಬಲ್‌ಗಳ ಉಂಡೆ ಸುತ್ತಿದೆವು. ಅಷ್ಟಕ್ಕೂ ಸಾಲದೆಂಬಂತೆ ನಿಮ್ಮ ಮೈಮೇಲೆಲ್ಲ ಅವುಗಳ ಹಾರವನ್ನೇ ಹೊಸೆದು ಹಾಕಿದೆವು.

ಹೂವು–ಹಣ್ಣುಗಳ ಬಳ್ಳಿಯನ್ನು ಸುತ್ತಿಕೊಂಡು ತಂಪಿನಿಂದ ಸಂಭ್ರಮಿಸಬೇಕಿದ್ದ ನೀವು ಬೆಂಕಿಯುಗುಳುವ ಸರಗಳನ್ನು ಹೊದ್ದಿರಿ. ಹೆದರಿದ ಹಕ್ಕಿಗಳು ದಿಕ್ಕಾಪಾಲಾದವು. ನೀವುಣಬಡಿಸಿದ ಫಲಗಳನ್ನು ಸವಿದು, ಹರಸಿ ನಿಮ್ಮ ಬೀಜಗಳನ್ನು ಹರಡಬೇಕಿದ್ದ ಅವುಗಳು ಗೂಡಿಗೆ ಜಾಗವಿಲ್ಲದೇ ಕಕ್ಕಾಬಿಕ್ಕಿಯಾದವು. ಒಂದು ಸಣ್ಣಮಳೆ ಬಿದ್ದರೂ ಮಿಸುಕಾಡಿ ನೀವು ಅಂಗಾತ ಮಲಗುವ ಹೊತ್ತು ಬಂದಾಗ ನಿಮ್ಮನ್ನು ಶಪಿಸಿದೆವು.

ಮಳೆಗೂ ಹಿಡಿಶಾಪ ಹಾಕಿದೆವು. ನೀವು ಎಂದಿನಂತೆ ಸುಮ್ಮನೇ ಇದ್ದಿರಿ; ಇದ್ದೀರಿ. ಕೊಡಲಿ ಹಿಡಿದಾಗಲೂ ಅದೇ ಮೌನ.ಕೊಳ್ಳಿ ಇಟ್ಟಾಗಲೂ ಅದೇ ಸಹನೆ. ನಿಮ್ಮ ಈ ಮೌನ ಬೆಂಕಿಯಾಗಿ ನಮ್ಮನ್ನು ಆಪೋಶನ ತೆಗೆದುಕೊಳ್ಳುವ ಮುನ್ನ, ನಿಮ್ಮಲ್ಲಿ ಬೇಡಿಕೊಳ್ಳುವುದಿಷ್ಟೆ. ಸಾಧ್ಯವಾದರೆ ನಮ್ಮನ್ನು ಕ್ಷಮಿಸಿಬಿಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry