ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ

Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಒಂದೇ ಕುಟುಂಬದ ಏಳು ಜನರನ್ನು ಸಜೀವ ದಹನ ಮಾಡಿದ ಪ್ರಕರಣದಲ್ಲಿ ಮರಣ ದಂಡನೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ತಿರಸ್ಕರಿಸಿದ್ದಾರೆ.

ರಾಮನಾಥ ಕೋವಿಂದ್‌ ಅವರು ರಾಷ್ಟ್ರಪತಿ ಹುದ್ದೆಗೇರಿದ ನಂತರ ಕ್ಷಮಾದಾನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಮೊದಲ ಅರ್ಜಿ ಇದು.

ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರದಲ್ಲಿ ವಿಜೇಂದ್ರ ಮಹತೊ ಎಂಬ ವ್ಯಕ್ತಿಗೆ ಸೇರಿದ್ದ ಎಮ್ಮೆ ಕಳುವಾಗಿತ್ತು.  ಈ ಸಂಬಂಧ ಜಗತ್‌ ರಾಯ್‌, ವಜೀರ್‌ ರಾಯ್ ಹಾಗೂ ಅಜಯ್‌ ರಾಯ್‌ ಎಂಬುವವರ ವಿರುದ್ಧ ಎಮ್ಮೆ ಕಳವು ಮಾಡಿದ ಆರೋಪ ಮಾಡಿದ್ದ ಮಹತೊ, 2005ರ ಸೆಪ್ಟೆಂಬರ್‌ನಲ್ಲಿ ಈ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಈ ಮೂವರು ಮಹತೊ ಮೇಲೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಮಹತೊ ಒಪ್ಪದಿದ್ದಾಗ,  ಮಹತೊ ಮನೆಗೆ ಜಗತ್‌ ರಾಯ್‌ ಬೆಂಕಿ ಹಚ್ಚಿದ್ದ. ಇದರ ಪರಿಣಾಮ ಮಹತೊ ಪತ್ನಿ, ಐವರು ಮಕ್ಕಳು ಸಜೀವವಾಗಿ ದಹನವಾದರೆ, ಸುಟ್ಟ ಗಾಯಗಳಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಹತೊ ಕೆಲ ತಿಂಗಳ ನಂತರ ಸಾವನ್ನಪ್ಪಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನಂತರ ಜಗತ್‌ ರಾಯ್‌ಗೆ ಸ್ಥಳೀಯ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಸುಪ್ರೀಂಕೋರ್ಟ್‌ ಸಹ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು, ಜಗತ್‌ರಾಯ್‌ನನ್ನು ಗಲ್ಲಿಗೇರಿಸುವಂತೆ 2013ರಲ್ಲಿ ಸೂಚನೆ ನೀಡಿತ್ತು.

ಜಗತ್‌ರಾಯ್‌ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ಭವನವು ಗೃಹ ಸಚಿವಾಲಯಕ್ಕೆ ಕಳಿಸಿ, ಅಭಿಪ್ರಾಯ ಕೇಳಿತ್ತು.  ಗೃಹ ಸಚಿವಾಲಯದ ಶಿಫಾರಸಿನಂತೆ ಅರ್ಜಿ ತಿರಸ್ಕರಿಸಿದ್ದಾಗಿ ರಾಷ್ಟ್ರಪತಿ ಭವನ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT