‘ಕೈ’ ಪಾಳಯದ ಕಚ್ಚಾಟ ಬಯಲು

7
ಪರಮೇಶ್ವರ ಧೋರಣೆಗೆ ಹಿರಿಯರ ಮುನಿಸು

‘ಕೈ’ ಪಾಳಯದ ಕಚ್ಚಾಟ ಬಯಲು

Published:
Updated:
‘ಕೈ’ ಪಾಳಯದ ಕಚ್ಚಾಟ ಬಯಲು

ಬೆಂಗಳೂರು: ಕಾಂಗ್ರೆಸ್ ಆಂತರ್ಯದಲ್ಲಿ ಹುದುಗಿರುವ ಅಸಮಾಧಾನ, ರಾಜ್ಯ ನಾಯಕರ ಬಗೆಗಿನ ಅಸಹನೆ, ಅಧಿಕಾರಕ್ಕಾಗಿ ನಡೆಯುತ್ತಿರುವ ಕಚ್ಚಾಟ ಬಯಲಾಗಿದೆ.

ಮುಂಬೈ ಕರ್ನಾಟಕ ಭಾಗದಲ್ಲಿ ಪಕ್ಷದ ಸೋಲಿನ ಹೊಣೆ ಹೊತ್ತು ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹಿರೀಕರಾದ ಎಸ್.ಆರ್. ಪಾಟೀಲ ಭಾನುವಾರ ಹೇಳಿದ್ದಾರೆ. ಆದರೆ, ಮೇ 25ರಂದೇ ಅವರು ರಾಜೀನಾಮೆ ಕೊಟ್ಟಿದ್ದರು. ‘ಹಿಂದೆ ಸಚಿವ ಸ್ಥಾನ ಅನುಭವಿಸಿದ ಹಿರಿಯರಿಗೆ ಈ ಬಾರಿ ಸಚಿವ ಸ್ಥಾನ ನೀಡಬಾರದು ಎಂಬ ಅಭಿಪ್ರಾಯ ಇದೆ. ಇದನ್ನು ಹೈಕಮಾಂಡ್ ಗಮನಕ್ಕೂ ತರಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಬಹಿರಂಗವಾಗಿ ಹೇಳಿಕೆ ನೀಡಿದ ಬಳಿಕವಷ್ಟೇ, ಪಾಟೀಲರ ರಾಜೀನಾಮೆ ಬಹಿರಂಗವಾಗಿದೆ. ಇದರ ಹಿಂದೆ, ಅಸಮಾಧಾನದ ಹೊಗೆ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಇಂಧನ ಖಾತೆ ಜತೆಗೆ ಉಪ ಮುಖ್ಯಮಂತ್ರಿ ಹುದ್ದೆ ಬಯಸಿದ್ದ ಡಿ.ಕೆ. ಶಿವಕುಮಾರ್‌ ಅವರಿಗೆ ಎರಡೂ ಸ್ಥಾನಗಳು ಕೈತಪ್ಪಿವೆ. ಸಿಟ್ಟಿನಿಂದ ಕುದಿಯುತ್ತಿರುವ ಅವರು ಪರೋಕ್ಷವಾಗಿ ತಮ್ಮ ಕುದಿಕೋಪ ಹೊರಹಾಕಿದ್ದಾರೆ. ಮೈತ್ರಿ ಪಕ್ಷಗಳ ಖಾತೆ ಹಂಚಿಕೆ (ಇಂಧನ ಖಾತೆಯನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟ ನಂತರ) ಹಾಗೂ ಐದು ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಎಂದು ಪಕ್ಷದ ವರಿಷ್ಠರು ಘೋಷಿಸಿದ ಬಳಿಕ ಅವರು ಹೊರಗೆ ಕಾಣಿಸಿಕೊಂಡಿಲ್ಲ. ಕರೆಯನ್ನೂ ಸ್ವೀಕರಿಸುತ್ತಿಲ್ಲ.

ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ವೇಳೆ ಅಲ್ಲಿನ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಿದ್ದರೂ ಹಾಗೂ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗುವವರೆಗೂ ಶಾಸಕರನ್ನು ಹಿಡಿದಿಟ್ಟುಕೊಂಡರೂ ತಮಗೆ ಸಚಿವ ಸ್ಥಾನ ತಪ್ಪಿಸಲು ಸ್ವಪಕ್ಷೀಯರೇ ಹುನ್ನಾರ ನಡೆಸುತ್ತಿರುವುದು ಶಿವಕುಮಾರ್ ವ್ಯಗ್ರರಾಗಲು ಕಾರಣ ಎನ್ನಲಾಗಿದೆ.

ಚುನಾವಣೆ ಫಲಿತಾಂಶ ಹೊರಬಿದ್ದ ಕೂಡಲೇ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹಾಗೂ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ , ಪಕ್ಷದ ನಾಯಕರೇ ತಮ್ಮ ಸೋಲಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ, ತಕ್ಷಣವೇ ಮೈತ್ರಿ ಸರ್ಕಾರ ರಚನೆಯ ಕಸರತ್ತು ಆರಂಭವಾಗಿದ್ದರಿಂದಾಗಿ ಹಿರಿಯರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ತೋಡಿಕೊಳ್ಳಲಿಲ್ಲ. ಸಚಿವ ಸ್ಥಾನದ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಎಲ್ಲರೂ ಸುಮ್ಮನಿದ್ದರು. ಹಿರಿಯರಿಗೆ ಸಚಿವ ಸ್ಥಾನ ಸಿಗುವುದಿಲ್ಲ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಒಬ್ಬೊಬ್ಬರೇ ಸಿಟ್ಟನ್ನು ಹೊರಹಾಕಲು ಮುಂದಾಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಖರವಾಗಲಿದೆ ಎಂದು ಹಿರಿಯ ನಾಯಕರೊಬ್ಬರು ಹೇಳಿದರು.

ಪರಮೇಶ್ವರ ಧೋರಣೆಗೆ ಆಕ್ಷೇಪ: ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ತರುವ ಹೊತ್ತಿನಲ್ಲಿ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಪಕ್ಷದ ರಾಜ್ಯ ನಾಯಕರು ಪರಮೇಶ್ವರ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಮೈತ್ರಿ ಸರ್ಕಾರ ರಚನೆಗೆ ಹೈಕಮಾಂಡ್ ಸೂಚನೆ ನೀಡಿದ ಕೂಡಲೇ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಮನೆಗೆ ಪರಮೇಶ್ವರ ಭೇಟಿ ನೀಡಿದ್ದರು. ಹೀಗೆ ತೆರಳುವ ಮೊದಲು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷರಾಗಿದ್ದ ಎಸ್.ಆರ್. ಪಾಟೀಲ, ಇಂದಿಗೂ ಕಾರ್ಯಾಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್‌ ಅವರಿಗೆ ಸುಳಿವನ್ನೂ ನೀಡಿರಲಿಲ್ಲ. ಪಕ್ಷದಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳ ಬಗ್ಗೆ ಹಿರಿಯರಿಗೆ ತಿಳಿಸಲೂ ಇಲ್ಲ. ಇದು ಪಕ್ಷದಲ್ಲಿ ತೀವ್ರ ಅಸಹನೆ ಹುಟ್ಟು ಹಾಕಿದೆ.

ಕುಮಾರಗೆ ಪೂರ್ಣಾಧಿಕಾರಕ್ಕೆ ತಕರಾರು

ಐದು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಹೈಕಮಾಂಡ್ ಘೋಷಣೆ ಕೂಡ ನಾಯಕರ ಸಿಟ್ಟಿಗೆ ಕಾರಣವಾಗಿದೆ.

37 ಸ್ಥಾನ ಗೆದ್ದ ಪಕ್ಷವೊಂದರ ಬಾಲ ಹಿಡಿದುಕೊಳ್ಳುವ ದೈನೇಸಿ ಸ್ಥಿತಿ ಬೇಕಿರಲಿಲ್ಲ. ಹೈಕಮಾಂಡ್ ಹೇಳಿದ ಕಾರಣಕ್ಕೆ ಒಪ್ಪುವುದು ಅನಿವಾರ್ಯ. ಆದರೆ, ಪ್ರತಿಯೊಂದಕ್ಕೂ ಮಿತ್ರ ಪಕ್ಷದ ನಾಯಕರ ಮುಂದೆ ಅಂಗಲಾಚುವ ಪರಿಸ್ಥಿತಿ ಬರಬಾರದಿತ್ತು. ಈ ತೀರ್ಮಾನ ತೆಗೆದುಕೊಳ್ಳುವ ಮುನ್ನ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ನಾಯಕರ ಜತೆ ಸೌಜನ್ಯಕ್ಕಾದರೂ ಹೈಕಮಾಂಡ್‌ ಚರ್ಚಿಸಬೇಕಾಗಿತ್ತು ಎಂದು ಅನೇಕರು ಅಭಿಪ‍್ರಾಯ ಹೊಂದಿದ್ದಾರೆ.

ಮೈತ್ರಿಯ ಬಗ್ಗೆ ತಕರಾರಲಿಲ್ಲ. ಆದರೆ ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್‌ಗೆ ಬೇಕೆಂದು ಪಟ್ಟು ಹಿಡಿಯಲು ಅವಕಾಶವಿತ್ತು. ಅದನ್ನೂ ಮಾಡದೇ ಇರುವುದು ಸರಿಯಲ್ಲ ಎಂಬುದು ಹಿರಿಯರ ಕೋಪಕ್ಕೆ ಕಾರಣ.

ಅತೃಪ್ತಿ ಸ್ಫೋಟದ ಬಳಿಕವೇ ಬಿಜೆಪಿ ಆಟ

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್ ಕೂಡಿಕೆ ಸರ್ಕಾರದಲ್ಲಿ ಅತೃಪ್ತಿ ಸ್ಫೋಟಿಸಬಹುದು, ಮತ್ತೆ ಸರ್ಕಾರ ರಚನೆಗೆ ಅವಕಾಶ ಹುಡುಕಿಕೊಂಡು ಬರಬಹುದು ಎಂಬ ನಿರೀಕ್ಷೆ ಬಿಜೆಪಿ ನಾಯಕರಲ್ಲಿ ಇನ್ನೂ ಜೀವಂತವಾಗಿದೆ.

ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಹತ್ತು ದಿನಗಳು ಕಳೆಯುತ್ತಾ ಬಂದಿದ್ದು, ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಆದರೆ, ಸಂಪುಟದಲ್ಲಿ ಯಾರು ಇರಬೇಕು ಎಂಬ ವಿಷಯದಲ್ಲಿ ‘ದೋಸ್ತಿ’ ಪಕ್ಷಗಳ ನಾಯಕರು ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಐದಾರು ಬಾರಿ ಶಾಸಕರಾಗಿ ಆಯ್ಕೆಯಾಗಿ ‘ಸಾಮರ್ಥ್ಯ’ ಪ್ರದರ್ಶಿಸಿರುವ ಕಾಂಗ್ರೆಸ್‌ನ ಅನೇಕ ಹಿರೀಕರಿಗೆ ಇನ್ನೂ ಸಚಿವರಾಗುವ ‘ಭಾಗ್ಯ’ ಸಿಕ್ಕಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ಗೆ 22 ಸಚಿವ ಸ್ಥಾನ ದೊರಕಿದೆ. ಇರುವ 78 ಶಾಸಕರಲ್ಲಿ ಇಷ್ಟು ಸ್ಥಾನಗಳನ್ನು ಯಾರಿಗೆ ಹಂಚುವುದು ಎಂಬ ಇಕ್ಕಟ್ಟಿನಲ್ಲಿ ಪಕ್ಷ ಸಿಲುಕಿದೆ.

ಸಿದ್ದರಾಮಯ್ಯಗೆ ಸಮನ್ವಯ ಸಮಿತಿ: 

ಐದು ವರ್ಷ ಮುಖ್ಯಮಂತ್ರಿಯಾಗಿದ್ದಾಗ ಪಕ್ಷದ ಬೆಳವಣಿಗೆಗೆ ಯಾವುದೇ ಕೊಡುಗೆ ನೀಡಲಿಲ್ಲ. ಜನತಾಪರಿವಾರದಿಂದ ಜತೆಗಿದ್ದವರ ಹಿತ ಕಾಪಾಡಿಕೊಳ್ಳಲು, ಅವರಿಗೆ ಆದ್ಯ ಸ್ಥಾನ ಕೊಡಿಸಲು ಯತ್ನಿಸಿದ ಸಿದ್ದರಾಮಯ್ಯ ಅವರನ್ನು ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಅನೇಕರಲ್ಲಿ ಸಿಟ್ಟು ತರಿಸಿದೆ ಎಂದು ನಾಯಕರೊಬ್ಬರು ಹೇಳಿದರು.

ಹೈಕಮಾಂಡ್ ಕಟ್ಟಪ್ಪಣೆಯ ಮೇರೆಗೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸರ್ಕಾರ ಸುಗಮವಾಗಿ ಆಡಳಿತ ನಡೆಸಬೇಕಾದರೆ ಎಲ್ಲರನ್ನೂ ಸಮದೂಗಿಸಿಕೊಂಡು ಹೋಗುವ ವ್ಯಕ್ತಿತ್ವದವರಿಗೆ ಈ ಹುದ್ದೆ ನೀಡಬೇಕಾಗಿತ್ತು. ಆದರೆ, ದೇವೇಗೌಡರ ಜತೆಗೆ ಉತ್ತಮ ಬಾಂಧವ್ಯ ಹೊಂದಿಲ್ಲದೇ ಇರುವವರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದರಿಂದಾಗಿ ಸರ್ಕಾರ ನಡೆಸುವುದು ಕಷ್ಟವಾಗಬಹುದು. ಹೀಗೆ ನೇಮಿಸುವಾಗಲೂ ಯಾವುದೇ ಹಿರಿಯರನ್ನು ಸಂಪರ್ಕಿಸಿಲ್ಲ ಎಂಬ ಬಗ್ಗೆ ಹೈಕಮಾಂಡ್‌ ಕುರಿತು ನಾಯಕರು ಅಸಮಾಧಾನ ಹೊಂದಿದ್ದಾರೆ.

ಮುಖ್ಯಮಂತ್ರಿಯಾಗಿದ್ದವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಲ್ಲದೇ, ತಮ್ಮ ಸ್ವಕ್ಷೇತ್ರದಲ್ಲೇ ಸೋಲು ಕಂಡರು. ಅಂತಹ ನಾಯಕರಿಗೆ ಅಗ್ರಪಟ್ಟ ನೀಡುವುದು ಎಷ್ಟು ಸರಿ ಎಂಬುದು ಅನೇಕರ ತಕರಾರು ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry