ಅನಾಥ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

7

ಅನಾಥ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

Published:
Updated:

ಬೆಂಗಳೂರು: ಮೇ 31ರಂದು ಅಮೃತಹಳ್ಳಿ ಪೊಲೀಸರಿಗೆ ಸಿಕ್ಕಿದ್ದ ಮೂರು ವರ್ಷದ ಅನಾಥ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಂಗತಿ ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಿದೆ.

ಅಮೃತಹಳ್ಳಿ ಸಮೀಪದ ಚಿರಂಜೀವಿ ಬಡಾವಣೆಯಲ್ಲಿ ಬಾಲಕಿ ಅಳುತ್ತ ನಿಂತಿದ್ದಳು. ಅದನ್ನು ಗಮನಿಸಿದ್ದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ಠಾಣೆಗೆ ಕರೆದೊಯ್ದು ವಿಚಾರಿಸಿದ್ದರು. ಆದರೆ, ಆಕೆ ಪೋಷಕರ ಬಗ್ಗೆ ಏನನ್ನೂ ಹೇಳಿರಲಿಲ್ಲ. ಹೀಗಾಗಿ, ಹೊಸೂರು ರಸ್ತೆಯಲ್ಲಿರುವ ಶಿಶುಮಂದಿರಕ್ಕೆ ಸೇರಿಸಿದ್ದರು. ಜೂನ್ 2ರಂದು ಬಾಲಕಿಯ ಆರೋಗ್ಯ ತಪಾಸಣೆ ನಡೆಸಿದ್ದ ಅಲ್ಲಿಯ ವೈದ್ಯರು, ‘ಗುಪ್ತಾಂಗದ ಬಳಿ ಗಾಯದ ಗುರುತುಗಳಿವೆ ಯಾರೋ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಪೊಲೀಸರಿಗೆ ತಿಳಿಸಿದ್ದರು.

ನಂತರ, ಸಂತ್ರಸ್ತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಸ್ವಯಂ

ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಬಾಲಕಿ ನಮಗೆ ಸಿಗುವುದಕ್ಕೂ ಮುಂಚೆಯೇ ದೌರ್ಜನ್ಯ ನಡೆದಿತೇ ಅಥವಾ ಶಿಶುಮಂದಿರಕ್ಕೆ ಸೇರಿಸಿದ ನಂತರ ಆ ರೀತಿ ಆಯಿತೇ ಎಂಬುದು ಗೊತ್ತಾಗಬೇಕಿದೆ’ ಎಂದು ಪೊಲೀಸರು ತಿಳಿಸಿದರು.

‘ಶಿಶುಮಂದಿರದ ಬಾಗಿಲು ಬಳಿ ಬಾಲಕಿ ಕುಳಿತುಕೊಂಡಿದ್ದಳು. ಕೆಲ ನಿಮಿಷಗಳ ಬಳಿಕ ಗಾಬರಿಯಿಂದ ಓಡಿಬಂದಳು. ಏನಾಯಿತು ಎಂದು ಕೇಳಿದ್ದಕ್ಕೆ ಉತ್ತರಿಸಿರಲಿಲ್ಲ. ಬಳಿಕವೇ ವೈದ್ಯರ ಬಳಿ ಕರೆದೊಯ್ದಿದ್ದೆವು’ ಎಂದು ಸಿಬ್ಬಂದಿ ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry