ನದಿ ಸ್ವಚ್ಛಗೊಳಿಸಿದ ಕಾವೇರಿ ಪಡೆ

7
ನೂರಾರು ಜನರಿಂದ ನಿರಂತರ ಶ್ರಮದಾನ

ನದಿ ಸ್ವಚ್ಛಗೊಳಿಸಿದ ಕಾವೇರಿ ಪಡೆ

Published:
Updated:
ನದಿ ಸ್ವಚ್ಛಗೊಳಿಸಿದ ಕಾವೇರಿ ಪಡೆ

ಶ್ರೀರಂಗಪಟ್ಟಣ: ಈ ದ್ವೀಪ ಪಟ್ಟಣದ ಪೂರ್ವ ಕಾವೇರಿ ಸೇತುವೆ ಬಳಿ ಭಾನುವಾರ ಸುರ್ಯೋದಯದ ಹೊತ್ತಿಗೆ 300ಕ್ಕೂ ಹೆಚ್ಚು ಜನರ ತಂಡ ಕಾವೇರಿ ನದಿಯ ಸ್ವಚ್ಛತೆಗೆ ಇಳಿದಿತ್ತು.

ಅಂಬೇಡ್ಕರ್‌ ಭವನದ ಎದುರು, ವೆಲ್ಲೆಸ್ಲಿ ಸೇತುವೆ ಮತ್ತು ಹೊಸ ಸೇತುವೆ ನಡುವೆ ನದಿಯಲ್ಲಿ ಅಗಾಧವಾಗಿ ಬೆಳೆದಿದ್ದ ಕಳೆ ಗಿಡಗಳನ್ನು ಈ ತಂಡ ಕಿತ್ತು ಹಸನು ಮಾಡಿತು. ಸತತವಾಗಿ 4 ತಾಸು ನದಿಯಲ್ಲಿ ನಿಂತು ಕೆಲಸ ಮಾಡಿದ ‘ಕಾವೇರಿ ಪಡೆ’ ಜೊಂಡು, ಕತ್ತೆಕಿವಿ ಎಲೆ ಜತೆಗೆ ವಿವಿಧ ಬಗೆಯ ಬಳ್ಳಿಗಳನ್ನು ಬೇರು ಸಹಿತ ಕಿತ್ತು ದಡಕ್ಕೆ ಸಾಗಿಸಿತು.

ಶ್ರಮದಾನಿಗಳು ನದಿಯ ಮಧ್ಯದಿಂದ ದಡದ ವರೆಗೆ ಸುಮಾರು 100 ಅಡಿ ಉದ್ದದ ಸಾಲು ಕಟ್ಟಿ ಸರಪಳಿ ಮಾದರಿ ನಿರ್ಮಿಸಿಕೊಂಡಿದ್ದರು. ಇಂತಹ ಎರಡು ತಂಡಗಳು ದಣಿವರಿಯದೆ ಕೆಲಸ ಮಾಡಿದವು. ಕೈಯಿಂದ ಕೈಗೆ ಕಳೆ ಗಿಡಗಳನ್ನು ದಾಟಿಸುತ್ತಾ ದಡಕ್ಕೆ ತಂದು ರಾಶಿ ಹಾಕಿದರು. ಅಗತ್ಯ ಇರುವ ಕಡೆ ಜೆಸಿಬಿ ಯಂತ್ರಗಳನ್ನು ಬಳಸಿ ಕಳೆ ಗಿಡಗಳನ್ನು ತೆಗೆಯಲಾಯಿತು. ಹೀಗೆ ತೆಗೆದ ಕಳೆ ಗಿಡಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ತುಂಬಿ ನದಿಯಿಂದ ದೂರಕ್ಕೆ ಸಾಗಿಸಿದರು.

ಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ, ಅಭಿನವ ಭಾರತ್‌ ತಂಡ, ಕಾವೇರಿ ಆರತಿ ಆಚರಣಾ ಸಮಿತಿ ಇತರ ಸಂಘ ಸಂಸ್ಥೆಗ ಸದಸ್ಯರನ್ನು ಒಳಗೊಂಡ ಕಾವೇರಿ ಪಡೆ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿತು.

ಕೈಗವಸು ಧರಿಸಿ ಕುಡುಗೋಲು, ಮಚ್ಚುಗಳನ್ನು ಹಿಡಿದು ಹಬ್ಬಿ ನಿಂತಿದ್ದ ಗಿಡ, ಬಳ್ಳಿಗಳನ್ನು ಕತ್ತರಿಸಿ ದಡಕ್ಕೆ ಸಾಗಿಸಲಾಯಿತು. ಸ್ಥಳೀಯ ಪುರಸಭೆ ಕೂಡ ಈ ಕಾರ್ಯಕ್ಕೆ ಸಹಕಾರ ನೀಡಿದ್ದರಿಂದ ಹತ್ತಾರು ಟನ್‌ ತ್ಯಾಜ್ಯವನ್ನು ನದಿಯಿಂದ ಹೊರ ತೆಗೆಯಲು ಸಾಧ್ಯವಾಯಿತು.

ರೈತ ಮುಖಂಡ ಕೆ.ಎಸ್‌. ನಂಜುಂಡೇಗೌಡ, ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್‌ ಶರ್ಮಾ, ಅಭನವ ಭಾರತ್‌ ತಂಡದ ಮುಖ್ಯಸ್ಥ ಕೆ.ಎಸ್‌. ಲಕ್ಷ್ಮೀಶ್‌, ಸಾಹಿತಿ ಸುಧಾಕರ್ ಹೊಸಳ್ಳಿ, ವಿದ್ಯಾ ಭಾರತಿ ಶಾಲೆಯ ಮುಖ್ಯಸ್ಥ ರಂಗನಾಥ್‌, ಪುರಸಭೆ ಸದಸ್ಯರಾದ ಎಸ್‌. ಪ್ರಕಾಶ್‌, ಎಸ್‌. ನಂದೀಶ್‌, ಚಂದನ್‌ ಇತರ ಪ್ರಮುಖರು ಮೈ ಕೆರೆತವನ್ನೂ ಲೆಕ್ಕಿಸದೆ ನದಿಗೆ ಇಳಿದು ಕಳೆ ಗಿಡಗಳನ್ನು ಸ್ವಚ್ಛಗೊಳಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ 10 ತೆಪ್ಪ (ಹರಿಗೋಲು)ಗಳು, 20 ಮಂದಿ ನುರಿತ ಈಜುಗಾರರನ್ನು ನಿಯೋಜಿಸಲಾಗಿತ್ತು. ಬೆಂಗಳೂರಿನಿಂದ 100 ಜೀವರಕ್ಷಕ ಕವಚಗಳನ್ನು ತರಿಸಲಾಗಿತ್ತು.

‘ಕಾವೇರಿ ನದಿಯಲ್ಲಿ ಸ್ನಾನ ಮಾಡಲಾಗದಂತಹ ಸ್ಥಿತಿ ಬಂದಿದೆ. ಕಲುಷಿತ ನೀರು ನದಿಗೆ ಸೇರುತ್ತಿರುವುದರಿಂದ ಕಳೆ ಗಿಡಗಳು ವಿಪರೀತ ಬೆಳೆಯುತ್ತಿವೆ. ಕಾವೇರಿ ಪಡೆ ಪ್ರತಿ ಭಾನುವಾರ ನದಿಯನ್ನು ಸ್ವಚ್ಛಗೊಳಿಸಲು ಉದ್ದೇಶಿಸಿದೆ. ನದಿಗೆ ತ್ಯಾಜ್ಯ ಸೇರುವುದನ್ನು ತಡೆಯುವ ಸಂಬಂಧ ನದಿ ದಡದ ಊರುಗಳಲ್ಲಿ ಜನಜಾಗೃತಿ ಮೂಡಿಸಲಿದ್ದೇವೆ’ ಎಂದು ಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್‌ ಶರ್ಮಾ ಹೇಳಿದರು.

ರೈತ ಮುಖಂಡ ಕೆ.ಎಸ್‌. ನಂಜುಂಡೇಗೌಡ ಮಾತನಾಡಿ, ‘ಕಾವೇರಿ ನದಿಯ ನೀರು ದಶಕದ ಈಚೆಗೆ ಹೆಚ್ಚು ಮಲಿನವಾಗುತ್ತಿದೆ. ಸ್ನಾನ ಮಾಡಲೂ ಇದು ಯೋಗ್ಯವಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ. ಹಾಗಾಗಿ ಸರ್ಕಾರ ನದಿಯ ಶುದ್ಧತೆ ಕಾಪಾಡಲು ಶೀಘ್ರ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

‘ಗಂಗಾ ನದಿ ಸ್ವಚ್ಛತೆಗೆ ರಚಿಸಿರುವ ಪ್ರಾಧಿಕಾರದ ಮಾದರಿಯಲ್ಲಿ ಕಾವೇರಿ ನದಿ ಸಂರಕ್ಷಣೆಗೂ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು. ಬಲವಾದ ಕಾನೂನು ಜಾರಿಗೆ ತಂದು ನದಿಯನ್ನು ಉಳಿಸಬೇಕು’ ಎಂದು ಅಭಿನವ ಭಾರತ್‌ ತಂಡದ ಮುಖ್ಯಸ್ಥ ಕೆ.ಎಸ್‌. ಲಕ್ಷ್ಮಿಶ್‌ ಹೇಳಿದರು. ‘ಕಾವೇರಿ ನದಿಯ ಪಾವಿತ್ರ್ಯತೆ ಉಳಿಯಬೇಕಾದರೆ ಸರ್ಕಾರ ಪ್ರತ್ಯೇಕ ಇಲಾಖೆಯನ್ನೇ ಸ್ಥಾಪಿಸಬೇಕು’ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸಂಚಾಲಕ ಕೊಡಗಿನ ಚಂದ್ರಮೋಹನ್‌ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry