ಮಳೆ ಬಂದರೆ ಹಾವೇರಿ ನಗರವೆಲ್ಲ ಕೊಳೆ

3
ತ್ಯಾಜ್ಯ, ಪ್ಲಾಸ್ಟಿಕ್‌ನಿಂದ ಕಟ್ಟಿನಿಂತ ಚರಂಡಿ, ಕೊಳಚೆ ನೀರಿನಿಂದ ರಾಡಿಯಾದ ನಗರ

ಮಳೆ ಬಂದರೆ ಹಾವೇರಿ ನಗರವೆಲ್ಲ ಕೊಳೆ

Published:
Updated:
ಮಳೆ ಬಂದರೆ ಹಾವೇರಿ ನಗರವೆಲ್ಲ ಕೊಳೆ

ಹಾವೇರಿ: ಮುಂಗಾರು ಪೂರ್ವ ಮಳೆಯು ಗ್ರಾಮೀಣ ಭಾಗದ ರೈತಾಪಿ ವರ್ಗದಲ್ಲಿ ಸಂತಸ ಮೂಡಿಸಿದರೆ, ನಗರದಲ್ಲಿ ಮುಂಗಾರಿಗೂ ಮೊದಲೇ ಚರಂಡಿ, ರಾಜಕಾಲುವೆ ಕಟ್ಟಿಕೊಂಡು ಅಲ್ಲಲ್ಲಿ ರಾಡಿಯಾಗುವ ಭೀತಿ ಹೆಚ್ಚಿದೆ.

ನಗರದ ಚರಂಡಿಗಳೇ ವೈಜ್ಞಾನಿಕವಾಗಿಲ್ಲ. ಹಲವೆಡೆ ಅವುಗಳಿಗೆ ಸಂಪರ್ಕ ಕಳೆದುಕೊಂಡಿದ್ದರೆ, ಇನ್ನೂ ಕೆಲವೆಡೆ ರಾಜಕಾಲುವೆಗಳೇ ಮಾಯವಾಗಿದ್ದು, ಒತ್ತುವರಿಯಾಗಿವೆ.

ಆದರೆ, ಈ ನಡುವೆಯೂ ಇದ್ದ ಚರಂಡಿ–ಕಾಲುವೆಗಳಲ್ಲಿ ತ್ಯಾಜ್ಯ ತುಂಬಿದ್ದು, ಕೊಳಚೆ ನೀರು ಹರಿಯದಾಗಿದೆ. ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಗೂಗಿಕಟ್ಟೆ, ಪಿ.ಬಿ. ರಸ್ತೆ, ಬಸ್ ನಿಲ್ದಾಣದ ಮುಂಭಾಗದ ಸೇರಿದಂತೆ ಹಲವೆಡೆ ನೀರು ತುಂಬಿ ರಾಡಿಯಾಗಿತ್ತು. ಅವೈಜ್ಞಾನಿಕ ಚರಂಡಿ–ಕಾಲುವೆ ವ್ಯವಸ್ಥೆ ಹಾಗೂ ನಿರ್ವಹಣೆಯಲ್ಲಿ ನಗರಸಭೆಯ ವೈಫಲ್ಯವು

ಜನತೆ ಮಳೆಯಿಂದ ಕಂಗೆಡುವಂತೆ ಮಾಡಿದೆ.

ನಗರದ ಲಾಲ್‌ ಬಹುದ್ದೂರ್ ಶಾಸ್ತ್ರಿ ತರಕಾರಿ ಮಾರುಕಟ್ಟೆಯ 300 ರಿಂದ 400 ಮೀಟರ್‌ ಉದ್ದದ ಚರಂಡಿಯಲ್ಲಿ ಕಳೆದ ವರ್ಷ 38 ಟನ್‌ ತ್ಯಾಜ್ಯ ದೊರೆತಿತ್ತು. ಹೀಗೆ ಹಾನಗಲ್ ರಸ್ತೆ, ಗೂಗಿಕಟ್ಟಿ, ಎಂ.ಜಿ ರಸ್ತೆ, ರಾಣೆಬೆನ್ನೂರು ರಸ್ತೆ ಸೇರಿದಂತೆ ಹಲವೆಡೆ ಚರಂಡಿ ಪ್ರಮುಖ ಚರಂಡಿಗಳು ಸ್ವಚ್ಛಗೊಳ್ಳಬೇಕಾಗಿದೆ.

ನಗರ ಸಂಚಾರ: ‘ನಗರ ಸ್ವಚ್ಛತೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೆಜ್ಜೆ ಇಟ್ಟಿರುವ ಶಾಸಕ ನೆಹರು ಓಲೇಕಾರ, ಪ್ರತಿನಿತ್ಯ ಬೆಳಿಗ್ಗೆ 6ರಿಂದ ‘ನಗರ ಸಂಚಾರ’ ಮಾಡುತ್ತಿದ್ದಾರೆ. ಪ್ರತಿ ವಾರ್ಡ್‌ಗಳ ಸ್ಥಳೀಯರಲ್ಲೇ ಮಾಹಿತಿ ಪಡೆಯುವ ಮೂಲಕ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.

‘ಹಲವೆಡೆ ಸುಮಾರು ಐದು ವರ್ಷಗಳಿಂದ ಚರಂಡಿಯನ್ನೇ ಸ್ವಚ್ಛಗೊಳಿಸದ ನಿದರ್ಶನಗಳಿವೆ. ಜೆಸಿಬಿಗೂ ತ್ಯಾಜ್ಯ ಹೊರತೆಗೆಯಲು ಕಷ್ಟವಾಗಿದೆ. ಅದಕ್ಕಾಗಿ ಖುದ್ದು ಭೇಟಿ ನೀಡಿ ಸರಿಪಡಿಸುತ್ತೇನೆ. ಸಮಸ್ಯೆ ಬಗೆಹರಿಸುವ ತನಕ ವಿರಮಿಸುವುದಿಲ್ಲ’ ಎಂದು ಶಾಸಕ ನೆಹರು ಓಲೇಕಾರ ತಿಳಿಸಿದರು.

‘ಹಲವರು ಸಿಬ್ಬಂದಿ ಒಳ್ಳೆಯವರಿದ್ದಾರೆ. ಆದರೆ, ಕೆಲವರ ಬೇಜವಾಬ್ದಾರಿ– ಅವ್ಯವಹಾರದಿಂದ ಒಟ್ಟು ವ್ಯವಸ್ಥೆ ಹದಗೆಟ್ಟಿರಬಹುದು. ಮೂಲದಲ್ಲೇ ಸ್ವಚ್ಛತೆ ಮಾಡಿದರೆ, ನಗರ ಪೂರ್ತಿ ಸ್ವಚ್ಛಗೊಳ್ಳುತ್ತದೆ’ ಎಂದು ಶಾಸಕರು ಹೇಳಿದರು.

‘ಚರಂಡಿ ಮತ್ತು ರಾಜಕಾಲುವೆ ಸಂಪರ್ಕಗಳನ್ನು ಪರಿಶೀಲಿಸಲಾಗುತ್ತಿದೆ. ಒತ್ತುವರಿಯನ್ನು ತೆರವುಗೊಳಿಸುವಂತೆ ಜನತೆಗೆ ಮನವಿ ಮಾಡುತ್ತೇನೆ. ಅನಿವಾರ್ಯವಾದರೆ, ನಗರಸಭೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಜನರ ಸಹಕಾರ ಅತಿ ಮುಖ್ಯ’ ಎಂದರು.

‘ಆದರೆ, ತ್ಯಾಜ್ಯದ ಜೊತೆ ಜಡ್ಡುಗಟ್ಟಿದ ನಗರಸಭೆಯ ವ್ಯವಸ್ಥೆಯನ ಸ್ವಚ್ಛಗೊಳಿಸಿದರೆ, ಮಾತ್ರ ನಗರ ಅಭಿವೃದ್ಧಿ ಸಾಧ್ಯ’ ಎಂದು ನಗರದ ಶಿವಯೋಗಿ ಮತ್ತಿತರರು ಹೇಳುತ್ತಾರೆ.

ನಗರದಲ್ಲಿ ಸುಮಾರು 360 ಕಿ.ಮೀ. ಉದ್ದ ಚರಂಡಿಯಿದ್ದು, ಕೇವಲ 165 ಕಿ.ಮೀ. ಮಾತ್ರ ಸಿ.ಡಿ. ಇದೆ. ಹಲವೆಡೆ ಒತ್ತುವರಿಯಾಗಿವೆ. ಚರಂಡಿ ಹಾಗೂ ರಾಜಕಾಲುವೆಗಳ ಆಳ–ಅಗಲ ತಕ್ಕಂತೆ ಇಲ್ಲ. ಇವುಗಳನ್ನು ಸರಿಪಡಿಸಬೇಕಾಗಿದೆ.

ವಿವಿಧೆಡೆ ರಸ್ತೆ ಬದಿ ಚರಂಡಿಗಳೇ ಇಲ್ಲ. ರಸ್ತೆ ಬದಿಗೇ ಫೇವರ್ಸ್ ಹಾಕಲಾಗಿದ್ದರೂ, ನಡುವೆ ನೀರು ಹರಿಯಲು ಅನುವು ಮಾಡಿಲ್ಲ. ಹೀಗೆ ಹಲವೆಡೆ ಅವೈಜ್ಞಾನಿಕ ವ್ಯವಸ್ಥೆಯಿದ್ದು, ನಗರಸಭೆ ಮತ್ತು ಶಾಸಕರ ಮುಂದೆ ಸವಾಲಿದೆ.

ಮಾದರಿ ಯೋಜನೆ ಇಲ್ಲ!

ನಗರದ ಭೌಗೊಳಿಕ ಲಕ್ಷಣ, ಬೆಳವಣಿಗೆ ಮತ್ತಿತರ ಉದ್ದೇಶಗಳನ್ನು ಇಟ್ಟುಕೊಂಡು ಸಮಗ್ರ ಯೋಜನೆಯನ್ನು ರೂಪಿಸಿರುತ್ತಾರೆ. ಅದೇ ಮಾದರಿಯಲ್ಲಿ ರಸ್ತೆ, ಚರಂಡಿ, ಕೆರೆಗಳ ಸಂರಕ್ಷಣೆ, ಉದ್ಯಾನ ಮತ್ತಿತರ ಮೂಲಸೌಕರ್ಯ

ಗಳನ್ನು ಯೋಜಿಸುತ್ತಾರೆ. ಹಾವೇರಿ ನಗರಕ್ಕೆ ಇಂತಹ ಸಮಗ್ರ ಮಾಸ್ಟರ್ ಪ್ಲಾನ್ ಬೇಕಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ.

**

ನಗರದ ಚರಂಡಿ, ಕಾಲುವೆ, ರಾಜಕಾಲುವೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಸರಿಪಡಿಸಲಾಗುವುದು. ಆದರೆ, ಇದಕ್ಕೆ ಜನರ ಸಹಕಾರ ಅಗತ್ಯ

ನೆಹರು ಓಲೇಕಾರ, ಶಾಸಕ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry