ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡ ದೂರ ಮಾಡುವ ಸಸಿಗಳು

Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಒತ್ತಡ ನಿವಾರಣೆಗೆ ಹಸಿರಿನ ಒಡನಾಟ ಅತ್ಯಗತ್ಯ. ಆದರೆ ನಾಲ್ಕುಗೋಡೆಗಳ ನಡುವೆ ಹೊರತು ಪಡಿಸಿದರೆ ರಸ್ತೆಗಳ ಮೇಲೆಯೇ ಬದುಕು ಕಳೆದುಹೋಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಇದ್ದಲ್ಲಿಯೇ ಹಸಿರುಣಿಸುವ ಕೆಲಸಕ್ಕೆ ಸಿಂಪ್ಲಿ ಫಾರ್ಮ್‌ ಎಂಬ ಕಂಪನಿ ಕಾರ್ಯಾಚರಣೆ ಆರಂಭಿಸಿದೆ.

ಇಲ್ಲಿ ಲಭ್ಯವಿರುವ ಸಸಿಗಳು  ಹಾಗೂ ಗಿಡಗಳು ಮನುಷ್ಯನ ಒತ್ತಡ ಹಾಗೂ ಮನೆಯೊಳಗಿನ ಮಾಲಿನ್ಯವನ್ನು ದೂರ ಮಾಡುತ್ತವೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಈ ಸಂಸ್ಥೆಯನ್ನು ಹುಟ್ಟು ಹಾಕಿರುವುದು ನಿತೀನ್ ಹಾಗೂ ಸುನೀಲ್. ಮನಸ್ಸಿಗೆ ಮುದ ನೀಡುವ ಸಸಿಗಳನ್ನು ಮನೆಯೊಳಗೆ ಇಟ್ಟು ಅವುಗಳನ್ನು ಸುಲಭವಾಗಿ ನಿರ್ವಹಣೆ ಮಾಡುವ ‘ಸೆಲ್ಫ್ ವಾಟರಿಂಗ್’ ತಂತ್ರಜ್ಞಾನವನ್ನೂ ನಗರ ನಿವಾಸಿಗಳಿಗೆ ಪರಿಚಯಿಸಿದ್ದಾರೆ.

ಮನೆಯ ಹೊರಗೆ ಅಥವಾ ಒಳಗೆ ಚಿಕ್ಕ ಉದ್ಯಾನಗಳ ನಿರ್ವಹಣೆ ಮಾಡುವ ಹಾಗೂ ಮನೆಗಳಲ್ಲಿ ಸಸಿಗಳನ್ನು ಬೆಳೆಸುವುದು ಕಷ್ಟ ಎಂಬ ಕಾರಣಕ್ಕೆ ಹಲವರು ಪರಿಸರಕ್ಕೆ ಹೆಚ್ಚು ಆದ್ಯತೆ ನೀಡುತ್ತಿಲ್ಲ. ಅಂತವರ ಈ ಸಮಸ್ಯೆಯನ್ನು ಗುರುತಿಸಿದ ‘ಸಿಂಪ್ಲಿ ಫಾರ್ಮ್‌’ ಸಂಸ್ಥೆಯೂ ಚಿಕ್ಕ ಉದ್ಯಾನಗಳ ನಿರ್ವಹಣೆ ಹಾಗೂ ಮನೆಗಳಲ್ಲಿ ಸಸಿಗಳನ್ನು ಬೆಳೆಸುವುದು ಅತ್ಯಂತ ಸುಲಭ ಪ್ರಾಯೋಗಿಕವಾಗಿ ಎಂಬುದನ್ನು ಸಾಬೀತು ಮಾಡಿದೆ. ಅಲ್ಲದೆ ಅವುಗಳಿಂದಾಗುವ ಲಾಭವನ್ನು ತಿಳಿಸಿಕೊಡುತ್ತಿದ್ದಾರೆ.

ಪ್ಲಾಸ್ಟಿಕ್‌ನಿಂದ ತಯಾರಿಸಿದ ಪುಟ್ಟ ಪಾಟ್‌ಗಳನ್ನು ನಿರ್ಮಿಸಿ, ಅದರೊಳಗೆ ಮತ್ತೊಂದು ಪಾಟ್ ಇಡಲಾಗಿದೆ. ಕೆಳಗಿನ ಪಾಟ್‌ನಲ್ಲಿ ಸಸಿಗೆ ಅಗತ್ಯವಿದ್ದಷ್ಟು ನೀರು ಸಂಗ್ರಹಿಸಿಡಲು ಜಾಗ ಮೀಸಲಿಡಲಾಗಿದೆ. ತೆಂಗಿನ ನಾರನ್ನು ಸಣ್ಣ ಸಣ್ಣದಾಗಿ ತುಂಡರಿಸಿ, ಅದನ್ನು ಎರೆಹುಳು ಗೊಬ್ಬರ ಹಾಗೂ ಹೈಡ್ರೊಟೊನ್‌ನೊಂದಿಗೆ (ಜೇಡಿ ಮಣ್ಣಿನಿಂದ ತಯಾರಿಸಿ ಸಣ್ಣ ಸಣ್ಣ ಉಂಟೆಗಳು–ಅವುಗಳನ್ನು ಬೆಂಕಿಯಿಂದ ಸುಡಲಾಗಿದೆ) ಮಿಶ್ರಣ ಮಾಡಿದ ಮಣ್ಣು ರಹಿತ ಕಪ್ಪು ಬಣ್ಣದ ಗೊಬ್ಬರವನ್ನು ಮೇಲೆಗಡೆಯ ಪಾಟ್‌ನಲ್ಲಿ ಹಾಕಿ ಸಸಿಗಳನ್ನು ಅದರೊಳಗೆ ಬೆಳೆಸಲಾಗಿದೆ. ಅವು ಸಮೃದ್ಧಿಯಾಗಿ ಬೆಳೆದಿದ್ದು, ನೋಡಲು ಆಕರ್ಷಕವಾಗಿವೆ.

ಈ ಮಾದರಿಯಲ್ಲಿ ಸಸಿಗಳನ್ನು ಬೆಳೆಸುವುದು ಅತ್ಯಂತ ಸುಲಭವಾಗಿದ್ದು, ಸಾಕಷ್ಟು ನೀರು ಉಳಿತಾಯ ಮಾಡಬಹುದು. ಅಲ್ಲದೇ ಇವುಗಳನ್ನು ಮನೆಯೊಳಗೆ ಇಟ್ಟು, ಕಡಿಮೆ ಬೆಳಕಿನಲ್ಲೂ ಬೆಳೆಯಬಹುದಾಗಿದೆ. ಸೆಲ್ಫ್ ವಾಟರಿಂಗ್ ತಂತ್ರಜ್ಞಾನದಿಂದ ಸಸಿಗಳನ್ನು ಬೆಳೆಯುವುದರಿಂದ ನಿತ್ಯವು ಅವುಗಳಿಗೆ ನೀರುಣಿಸುವ ಅಗತ್ಯವಿಲ್ಲ. ಮಣ್ಣು ರಹಿತವಾಗಿ ಇವುಗಳನ್ನು ಪೋಷಣೆ ಮಾಡುವುದರಿಂದಾಗಿ ಹತ್ತು ದಿನಕ್ಕೊಮ್ಮೆ ನೀರು ಹಾಕಿದರೆ ಸಾಕಾಗುತ್ತದೆ. ಜೊತೆಗೆ ಅವುಗಳ ಫೋಷಣೆಗೆ ಬೇಕಾಗುವ ನೀರಿನಲ್ಲಿ ಶೇ 60 ರಷ್ಟನ್ನು ಉಳಿತಾಯ ಮಾಡಬಹುದು ಎನ್ನುತ್ತಾರೆ ಸಂಸ್ಥೆಯ ಸಹ ಸಂಸ್ಥಾಪಕ ಸುನೀಲ್.

‘ನಗರದಲ್ಲಿ ದಿನೇ ದಿನೇ ಅಪಾರ್ಟ್‌ಮೆಂಟ್ ಸಂಸ್ಕೃತಿ ಹೆಚ್ಚಾಗುತ್ತಿದೆ. ಜೊತೆಗೆ ಒತ್ತಡದ ಬದುಕು ನಗರ ನಿವಾಸಿಗಳನ್ನು ಇನ್ನಿಲ್ಲದಂತೆ ಬಾದಿಸುತ್ತಿದೆ. ಇದರ ನಡುವೆ ಮನೆಯಂಗಳದಲ್ಲಿ ಉದ್ಯಾನ ನಿರ್ವಹಣೆಯ ಉಸಾಬರಿ ಯಾಕೆ ಬೇಕು ಎಂಬ ಕಾರಣಕ್ಕೆ ಜನರು ಪರಿಸರದಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ, ಸಿಂಪ್ಲಿ ಫಾರ್ಮ್‌ ಮೂಲಕ ಸೆಲ್ಫ ವಾಟರಿಂಗ್‌ಗೆ ಆದ್ಯತೆ ನೀಡಿದೆವು’ ಎಂದರು ಸಂಸ್ಥೆಯ ಸಂಸ್ಥಾಪಕ ನಿತಿನ್.

ಸಿಂಪ್ಲಿ ಫಾರ್ಮ್‌ ಸೂಚಿಸುವ ವಿವಿಧ ಪ್ರಭೇದಗಳ ಸಸಿಗಳನ್ನು ಮನೆ, ಕಚೇರಿ, ಅಡುಗೆ ಮನೆ, ಸ್ನಾನದ ಕೊಠಡಿ, ಬೆಡ್‌ರೂಮ್‌ಗಳಲ್ಲಿ ಇಡಬಹುದು. ಇದರಿಂದ ಕಟ್ಟಡ ಒಳಗೆ ತುಂಬಿರುವ ಮಾಲಿನ್ಯವನ್ನು ಈ ಸಸಿಗಳು ಹೀರಿಕೊಂಡು ವಾತಾವರಣವನ್ನು ಮಾಲಿನ್ಯ ಮುಕ್ತಗೊಳಿಸುತ್ತವೆ. ಬಹುತೇಕ ಮಣ್ಣು ರಹಿತವಾಗಿ ಈ ಸಸಿಗಳನ್ನು ಬೆಳೆಯಲು ಸಾಧ್ಯವಿರುವುದರಿಂದ, ಕ್ರಿಮಿ ಕೀಟಗಳು ಹರಡುವುದಿಲ್ಲ. ಮನೆ ಹಾಗೂ ಕಚೇರಿಗಳಲ್ಲಿ ಸಿಂಪ್ಲಿ ಫಾರ್ಮ್‌ ತಯಾರಿಸಿರುವ ಪ್ಲಾಸ್ಟಿಕ್‌ ಪಾಟ್‌ಗಳ ಬಳಕೆಯಿಂದ ನೀರಿನ ಸೋರಿಕೆಯನ್ನು ತಡೆಯಬಹುದಾಗಿದೆ.

ನಾನಾ ಬಗೆಯ ಸಸಿಗಳು ಹಾಗೂ ಗಿಡಗಳು ಸಿಂಪ್ಲಿ ಫಾರ್ಮ್‌ನಲ್ಲಿ ಲಭ್ಯವಿದ್ದು, ಅವುಗಳ ಬೆಲೆ ₹300ರಿಂದ ₹30,000 ಇದೆ. ಇಲ್ಲಿ ಲಭ್ಯವಿರುವ ವಿವಿಧ ಪ್ರಭೇದದ ಸಸಿಗಳನ್ನು ಯಾವ ರೀತಿ ಪೋಷಣೆ ಮಾಡಬೇಕು ಎಂಬುದನ್ನು ತಿಳಿಸಿಕೊಡಲಾಗುತ್ತದೆ.

‘ಜಲ ಕೃಷಿ’ಯೇ ವಿಶೇಷ

‘ಜಲ ಕೃಷಿ’ ಪದ್ಧತಿಯನ್ನು ಸಂಶೋಧನೆ ಮಾಡಿರುವ ನಿತಿನ್ ಹಾಗೂ ಸುನೀಲ್, ನ್ಯೂಟ್ರಿಷಿಯನ್‌ ಮಿಶ್ರಣಗೊಂಡ ಬರೀ ನೀರಿನಿಂದ ಸೊಪ್ಪು ಹಾಗೂ ಹೂ ಗಿಡಗಳನ್ನು ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಜಲ ಕೃಷಿ ಪದ್ಧತಿಯಲ್ಲಿ ಸಸಿ ನಿಲ್ಲಲು, ನೆರವಾಗಲು ಹೈಡ್ರೋಟೊನ್‌ಗಳನ್ನು ಮಾತ್ರ ಹಾಕಲಾಗುತ್ತದೆ. ಈ ಪದ್ಧತಿಯಿಂದ ಶೇ 90 ರಷ್ಟು ನೀರನ್ನು ಉಳಿತಾಯ ಮಾಡಬಹುದಾಗಿದೆ. ಅಲ್ಲದೇ, ಮೂರು ಪಟ್ಟು ತ್ವರಿತವಾಗಿ ಸಸಿಗಳು ಬೆಳೆಯುತ್ತವೆ. ಸೊಪ್ಪು, ತರಕಾರಿ (ಭೂಮಿಯೊಳಗೆ ಬೆಳೆಯುವ ತರಕಾರಿಗಳ ಹೊರತಾಗಿ), ಅಲಂಕಾರಿಕ ಗಿಡಗಳು ಹಾಗೂ ಹೂವಿನ ಗಿಡಗಳನ್ನು ಮನೆಗಳಲ್ಲಿ ಸುಲಭವಾಗಿ ಕಡಿಮೆ ಖರ್ಚು ಹಾಗೂ ನೀರಿನಿಂದ ಬೆಳೆಯಬಹುದಾಗಿದೆ. ಇವುಗಳಿಗೆ ಯಾವುದೇ ರೀತಿಯ ರಾಸಾಯನಿಕ ಬಳಸುವ ಅಗತ್ಯವಿಲ್ಲ ಎನ್ನುತ್ತಾರೆ ನಿತೀನ್‌.

‘ಡು ಇಟ್ ಯುವರ್‌ಸೆಲ್ಫ್‌’ ಕಿಟ್ ಪರಿಚಯ

ಕಂಪ್ಯೂಟರ್‌ ಯುಗದಲ್ಲಿ ಮಕ್ಕಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೇ ಹೆಚ್ಚು ಮಗ್ನರಾಗುತ್ತಾರೆ. ಸೊಪ್ಪು, ತರಕಾರಿ ಹಾಗೂ ಹೂವುಗಳನ್ನು ಹೇಗೆ ಬೆಳೆಯುತ್ತಾರೆ ಎಂಬುದು ಅವರಿಗೆ ಗೊತ್ತಿಲ್ಲ. ಹೀಗಾಗಿ, ಅವುಗಳನ್ನು ಹೇಗೆ ಬೆಳೆಯುತ್ತಾರೆ ಎಂಬುದನ್ನು ಸುಲಭವಾಗಿ ಅರ್ಥವಾಗುವಂತೆ ತಿಳಿಸಿಕೊಡುವ ಸಲುವಾಗಿ ಡು ಇಟ್‌ ಯುವರ್‌ಸೆಲ್ಫ್‌ ಕಿಟ್‌ ಅನ್ನು ಸಂಸ್ಥೆಯು ಪರಿಚಯಿಸಿದೆ.

ಸಂಪರ್ಕ: 9008358660

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT