ಸಾಕೆನ್ನುವುದು ಬೇಕಾಗಿದೆ ಈಗ

7

ಸಾಕೆನ್ನುವುದು ಬೇಕಾಗಿದೆ ಈಗ

Published:
Updated:
ಸಾಕೆನ್ನುವುದು ಬೇಕಾಗಿದೆ ಈಗ

ಬೆಳೆಯಲಿ ಪರಿಸರ ಪ್ರೀತಿ...

ತಿಳಿಗಾಳಿ, ಎಳೆಬಿಸಿಲು, ಹಸಿರ ಹೊದಿಕೆ.. ಬೆಂಗಳೂರಿನ ಹವಾಗುಣವೇ ಚೆಂದ ಇತ್ತು ಎಂದು ಮಾತನಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇಂತಹದೊಂದು ಕಾಲಘಟ್ಟದಲ್ಲಿ ನಾವಿದ್ದೇವೆ. ಕೇವಲ ನಾಲ್ಕು ದಶಕಗಳ ಅವಧಿಯಲ್ಲಿ ಬೆಂಗಳೂರಿನ ಹಸಿರಿನ ಚಹರೆಯನ್ನೇ ಬದಲಿಸಿದವರು ನಾವು. ನಮ್ಮ ಸ್ವಾರ್ಥಕ್ಕೆ ಇಲ್ಲಿನ ಮರ, ನೀರು, ಗಾಳಿಯನ್ನು ಬಲಿ ಕೊಟ್ಟಿದ್ದೇವೆ.

ಮರಗಳು ಮನುಷ್ಯನ ಉಸಿರಾಟದ ಮೂಲಗಳು. ಉದ್ಯಾನ ನಗರಿಯಲ್ಲಿ ಮರಗಳಿಗೇನು ಕೊರತೆ ಎನ್ನುವವರಿದ್ದಾರೆ. ಆದರೆ ಮನುಷ್ಯರ ಸಂಖ್ಯೆ ಜೊತೆ ಹೋಲಿಸಿದರೆ ಏನೇನೂ ಸಾಲದು. ಹೌದು, ಮನುಷ್ಯನೊಬ್ಬ ಆರೋಗ್ಯವಂತ ಜೀವನ ನಡೆಸಲು ಎರಡು ಮರಗಳು ಬೇಕು ಎನ್ನುತ್ತಾರೆ ವಿಜ್ಞಾನಿಗಳು. ಅದರೆ ಬೆಂಗಳೂರಿನಲ್ಲಿ ಎಷ್ಟಿವೆ ಗೊತ್ತಾ? ಏಳು ಜನರಿಗೆ ಒಂದು ಮರ ಇದೆ. ಅಂದರೆ ನಾವು ತೆಗೆದುಕೊಳ್ಳುತ್ತಿರುವ ಆಮ್ಲಜನಕದ ಪ್ರಮಾಣ ಎಷ್ಟಿದೆ ಎಂದು ನೀವೇ ಊಹಿಸಿ. 7:1ರಷ್ಟು ಇರುವ ಅನುಪಾತವನ್ನು 1:15ಕ್ಕೆ ತಂದರೂ ಸಾಕು, ನಾವು ಸ್ವಚ್ಛಂದ ಬದುಕು ನಡೆಸಬಲ್ಲೆವು.

ಆರೋಗ್ಯಕರ ಜೀವನ ನಡೆಸಲು ಪ್ರತಿ ವ್ಯಕ್ತಿಗೆ 9.5 ಚ.ಮೀ. ಹಸಿರು ವಲಯ ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ಆದರೆ ನಗರದಲ್ಲಿರುವ ಮರಗಳ ಸಂಖ್ಯೆ ಸುಮಾರು 15 ಲಕ್ಷ. ಸಾಂದ್ರತೆ ಪ್ರಮಾಣ 0.14 ಮಾತ್ರ. ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2014ರಲ್ಲಿ ಜಂಟಿಯಾಗಿ ನಡೆಸಿದ್ದ ಸಮೀಕ್ಷೆಯು ಈ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದೆ.

ಒಂದು ಹೆಕ್ಟೇರ್‍ನಷ್ಟು ಅರಣ್ಯ ಪ್ರದೇಶವು ವರ್ಷಕ್ಕೆ ಸುಮಾರು 6 ಟನ್ ಇಂಧನವನ್ನು ಕರಗಿಸುತ್ತದೆ. ಅಂದರೆ ಒಂದು ದೊಡ್ಡ ಮರ ವರ್ಷಕ್ಕೆ ಆರು ಕೆ.ಜಿ ಇಂಗಾಲವನ್ನು ಬಳಸಿಕೊಳ್ಳಬಲ್ಲದು. ಜನಸಂಖ್ಯೆ ಬೆಳೆದಂತೆಲ್ಲಾ ಇಂಗಾಲ ಹೆಚ್ಚುತ್ತದೆ. ಇದಕ್ಕೆ ತಡೆ ಹಾಕಬೇಕಾದರೆ ಹಸಿರು ಹೆಚ್ಚಿಸಿಕೊಳ್ಳುವುದಷ್ಟೇ ಪರಿಹಾರ. ಪ್ರತಿ ಪ್ರದೇಶಕ್ಕೆ ಶೇ 33ರಷ್ಟು ಹಸಿರು ವಲಯ ಇದ್ದರೆ ಅದು ಸಮತೋಲಿತ ಪರಿಸರ ಎನಿಸಿಕೊಳ್ಳುತ್ತದೆ.

ನಗರದಲ್ಲಿ ಭಿನ್ನ ಪರಿಸರವಿದೆ. ಶಿವಾಜಿ ನಗರ, ಕೆಂಪಾಪುರ ಅಗ್ರಹಾರ, ಚಿಕ್ಕಪೇಟೆಯಂತಹ ಪ್ರದೇಶಗಳಲ್ಲಿ ಒಂದು ಮರದ ಮೇಲೆ ಸುಮಾರು 500 ಮಂದಿ ಅವಲಂಬಿತರಾಗಿದ್ದಾರೆ. ಅಂದರೆ ಇಲ್ಲೆಲ್ಲಾ ಹೆಕ್ಟೇರ್‍ಗಿಂತ ಕಡಿಮೆ ಹಸಿರು ಪ್ರದೇಶವಿದೆ. ಆದರೆ ವರ್ತೂರು, ಬೆಳ್ಳಂದೂರು, ಜಕ್ಕೂರು, ಅಗರ, ಅರಮನೆ ಪ್ರದೇಶದಲ್ಲಿ ಜನಸಂಖ್ಯೆಗಿಂತ ಮರಗಳೇ ಹೆಚ್ಚಿವೆ. ಇಲ್ಲಿ 300 ಹೆಕ್ಟೇರ್‍ಗಿಂತ ಹೆಚ್ಚು ಹಸಿರಿದೆ.

ವರ್ಷಕ್ಕೆ ಸಾವಿರ ಮಿ.ಮೀ. ಮಳೆ ಬಿದ್ದರೂ, ಅದನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ ಇಲ್ಲದ ಕಾರಣ, ಕಾವೇರಿಗಾಗಿ ಜಗಳ ಮಾಡಬೇಕಾದ ಸ್ಥಿತಿಯನ್ನು ನಾವೇ ತಂದುಕೊಂಡಿದ್ದೇವೆ. ಮಳೆ ಸಮೃದ್ಧಿಯ ಸಂಕೇತ. ಆದರೆ ಮಳೆ ಯಾಕಾದರೂ ಬರುತ್ತದೆಯೋ ಎಂದು ಹಲುಬುವ ಸ್ಥಿತಿಗೆ ಬಂದಿದ್ದೇವೆ.

ಒಳ್ಳೆಯ ಗಾಳಿ, ಮಣ್ಣು, ನೀರನ್ನು ಕೇವಲ 30 ವರ್ಷಗಳಲ್ಲಿ ಖಾಲಿ ಮಾಡಿದ್ದೇವೆ. ನಮ್ಮ ಮಕ್ಕಳಿಗೆ ಕೆಟ್ಟ ಪರಿಸರ, ಕಲುಷಿತ ನೀರು, ಗಾಳಿಯನ್ನು ಬಿಟ್ಟು ಹೋಗುತ್ತಿದ್ದೇವೆ. ಇಷ್ಟೆಲ್ಲಾ ಅನಾಹುತವನ್ನು ನಾವು ಒಂದೇ ತಲೆಮಾರಿನಲ್ಲಿ ಮಾಡಿದ್ದೇವೆ.

ಮಾಲಿನ್ಯದಿಂದ ಕೂಡಿದ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 5ನೇ ಸ್ಥಾನವಿದೆ. ಮೊದಲ ಸ್ಥಾನದಲ್ಲಿರುವ ದೆಹಲಿಯಲ್ಲಿ ಮಾಲಿನ್ಯ ಮಿತಿಮೀರಿದೆ. ವಾಹನಗಳ ಬಳಕೆಗೆ ಸಮ-ಬೆಸ ವ್ಯವಸ್ಥೆ ಜಾರಿ ಮಾಡಬೇಕಾಯಿತು. ಡೀಸೆಲ್ ವಾಹನಗಳನ್ನು ನಿಷೇಧಿಸಲಾಯಿತು. ಇಂತಹ ಸ್ಥಿತಿ ತಂತ್ರಜ್ಞಾನ ನಗರಿ ಬೆಂಗಳೂರಿಗೆ ಬರುವ ದಿನಗಳು ದೂರವಿಲ್ಲ. ಉದ್ಯಾನ ನಗರಿಯಾಗಿ ಉಳಿಯಬೇಕಾದರೆ ಸರ್ಕಾರಗಳ ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ ಜನರ ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕಿದೆ. ವನಸಂಪತ್ತಿನ ಉಳಿವು ಹಾಗೂ ಅರಣ್ಯೀಕರಣ-ಈ ಎರಡೇ ನಮ್ಮ ಮುಂದಿರುವ ಆಯ್ಕೆಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry