ಜುಲೈನಿಂದ ಆಸ್ತಿ ಸಮೀಕ್ಷೆ

7

ಜುಲೈನಿಂದ ಆಸ್ತಿ ಸಮೀಕ್ಷೆ

Published:
Updated:
ಜುಲೈನಿಂದ ಆಸ್ತಿ ಸಮೀಕ್ಷೆ

ಬೆಂಗಳೂರು: ಆಸ್ತಿ ಸಮೀಕ್ಷೆಗಾಗಿ ಕಂದಾಯ ಇಲಾಖೆ ಅಧಿಕಾರಿಗಳು ಜುಲೈನಿಂದ ನಗರದಲ್ಲಿ ಮನೆ ಬಾಗಿಲಿಗೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ. ಈ ಸಮೀಕ್ಷೆಯ ಆಧಾರದಲ್ಲಿ ನಗರದ ಆಸ್ತಿ ಮಾಲೀಕತ್ವದ ದಾಖಲೆಗಳನ್ನು ನಾಗರಿಕರಿಗೆ ಇಲಾಖೆ ವಿತರಿಸಲಿದೆ.

ಮೈಸೂರಿನಲ್ಲಿ ಈಗಾಗಲೇ ಆಸ್ತಿ ದಾಖಲೆಗಳ ಭೌತಿಕ ಸಮೀಕ್ಷೆ ಪೂರ್ಣಗೊಂಡಿದೆ. ಅಲ್ಲಿ ದಾಖಲಾತಿಗಳನ್ನು ವಿತರಿಸಲಾಗುತ್ತಿದೆ. ಅದೇ ರೀತಿ ಇಲ್ಲಿಯೂ ಇಲಾಖೆ ಮೊದಲ ಬಾರಿಗೆ ಈ ಸಮೀಕ್ಷೆ ಕೈಗೊಂಡಿದೆ. ಪ್ರತಿ ಆಸ್ತಿ ವಿವರ ದಾಖಲಾತಿಗೆ ಸಂಬಂಧಿಸಿದಂತೆ ಏಕಪ್ರಕಾರದ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಲಾಗುವುದು ಎಂದು ಸಮೀಕ್ಷಾ ತಂಡದಲ್ಲಿದ್ದ ಅಧಿಕಾರಿಯೊಬ್ಬರು ತಿಳಿಸಿದರು.

ಭೂಮಾಪನಾ ಇಲಾಖೆ ಹಾಗೂ ಸರ್ವೆ ಇಲಾಖೆಯ ಆಯುಕ್ತ ಮುನಿಶ್‌ ಮೌದ್ಗಿಲ್‌ ಪ್ರತಿಕ್ರಿಯಿಸಿ, ‘ಪ್ರತಿ ಆಸ್ತಿಯ ಭೌತಿಕ ಮಾಪನವನ್ನು ಜುಲೈನಲ್ಲಿ ಆರಂಭಿಸಲಾಗುವುದು. ಜಯನಗರ 4ನೇ ಬ್ಲಾಕ್‌ನಿಂದ ಸಮೀಕ್ಷೆ ಆರಂಭವಾಗಲಿದೆ. ಸುಮಾರು 40 ಸಮೀಕ್ಷಕರು ಈ ಕಾರ್ಯ ನಡೆಸಲಿದ್ದಾರೆ’ ಎಂದರು.

ಇಲಾಖೆಯ ದಾಖಲೆಗಳ ಪ್ರಕಾರ ಜಯನಗರದ ಪ್ರತಿ ವಾರ್ಡ್‌ನಲ್ಲಿ ಸುಮಾರು 6 ಸಾವಿರ ಆಸ್ತಿಗಳಿವೆ. ಇಡೀ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 23 ಲಕ್ಷ ಆಸ್ತಿಗಳಿವೆ. ಆದರೆ, ಈ ಕಾರ್ಯ ಆರಂಭಿಸುತ್ತಿರುವಾಗಲೇ ನಾವು ಪಾಲಿಕೆ, ಕಾರ್ಪೊರೇಟರ್‌ಗಳು, ಶಾಸಕರಿಂದ ಪ್ರತಿರೋಧ ಎದುರಿಸಬೇಕಾಗಿದೆ. ಅವರು ಹೇಳುವ ಪ್ರಕಾರ ಇಂಥ ದಾಖಲೆಗಳನ್ನು ಪಾಲಿಕೆಯಲ್ಲಷ್ಟೇ ಇಟ್ಟುಕೊಳ್ಳಬೇಕು ಎನ್ನುತ್ತಾರೆ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

‘ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಪ್ರಕಾರ ಈ ಭೂ ದಾಖಲೆಗಳನ್ನು ಇಟ್ಟುಕೊಳ್ಳುವುದು, ಮಾಲೀಕತ್ವದ ದಾಖಲೆಗಳನ್ನು ಕೊಡುವುದು ಕಂದಾಯ ಇಲಾಖೆಯ ವ್ಯಾಪ್ತಿಗೇ ಬರುತ್ತದೆಯೇ ವಿನಃ ಪಾಲಿಕೆಗಳಿಗೆ ಅಲ್ಲ’ ಎಂದು ಮೌದ್ಗಿಲ್‌ ಹೇಳಿದರು.

ಭೌತಿಕ ಸಮೀಕ್ಷೆಯಲ್ಲಿ ಆಸ್ತಿಗಳ ಆಯಾಮಗಳ ಬಗ್ಗೆ ತಿಳಿದುಕೊಳ್ಳಲಾಗುತ್ತದೆ. ಕಟ್ಟಡದ ಕಾರ್ಪೆಟ್ ಏರಿಯಾ, ಫ್ಲೋರ್‌ ಏರಿಯಾ, ಮಹಡಿಗಳು ಮತ್ತಿತರ ವಿವರಗಳನ್ನು ನಮೂದಿಸಲಾಗುವುದು.

ಆಸ್ತಿ ವಿವರ ದಾಖಲೆಗಳನ್ನು ಒದಗಿಸಲು ಮಾಲೀಕರಿಗೆ ನಿರ್ದಿಷ್ಟ ಸಮಯ ನೀಡಲಾಗುವುದು. ಅದಕ್ಕೆ ತಪ್ಪಿದಲ್ಲಿ ಪಾಲಿಕೆಯಲ್ಲಿರುವ ದಾಖಲೆಗಳನ್ನು ಪಡೆದುಕೊಂಡು ಕಂದಾಯ ಇಲಾಖೆಯೇ ಎಲ್ಲ ವಿವರಗಳನ್ನು ಭರ್ತಿ ಮಾಡಿ ಆಸ್ತಿ ದಾಖಲೆಯನ್ನು ವಿತರಿಸಲಿದೆ ಎಂದು ಮೊದ್ಗಿಲ್‌ ಹೇಳಿದರು. 

ಇಲಾಖೆಯು ಈ ಬಗ್ಗೆ 6 ವರ್ಷಗಳ ಹಿಂದೆಯೇ ಯೋಜನೆ ರೂಪಿಸಿತ್ತು. ಆದರೆ, ರಾಜಕಾರಣಿಗಳು, ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಪ್ರತಿರೋಧದ ಹಿನ್ನೆಲೆಯಲ್ಲಿ ಈ ಕಾರ್ಯವನ್ನು ಅನುಷ್ಠಾನಗೊಳಿಸಲಾಗಲಿಲ್ಲ.

2016ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಯಿತು. ಈಗ ಅಲ್ಲಿ ಪಾಲಿಕೆ ದಾಖಲೆಗಳ ಬದಲಿಗೆ ನಗರ ಆಸ್ತಿ ಮಾಲೀಕತ್ವದ ದಾಖಲೆ (ಯುಪಿಒಆರ್‌) ಬಳಸಲಾಗುತ್ತದೆ. ಮುಂದೆ ಮೈಸೂರು ಜಿಲ್ಲೆಯಲ್ಲೂ ಕೂಡಾ ಇದೇ ರೀತಿ ದಾಖಲೆಗಳನ್ನು ವಿತರಿಸಲಾಗುತ್ತದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry