4
ಮಾಲಿನ್ಯದ್ದೇ ಸದ್ದು, ಮರೆಯಾಗುತ್ತಿರುವ ಕೆರೆಗಳು

ವಾಯುಮಾಲಿನ್ಯಕ್ಕಿಂತ ಜಲಮಾಲಿನ್ಯವೇ ಅಧಿಕ

Published:
Updated:
ವಾಯುಮಾಲಿನ್ಯಕ್ಕಿಂತ ಜಲಮಾಲಿನ್ಯವೇ ಅಧಿಕ

ಮೈಸೂರು: ಜಿಲ್ಲೆಯಲ್ಲಿ ವಾಯು ಮಾಲಿನ್ಯಕ್ಕಿಂತ ಜಲಮಾಲಿನ್ಯವೇ ಹೆಚ್ಚಾಗಿದ್ದು, ಆತಂಕ ಹುಟ್ಟಿಸಿದೆ. ಉಳಿದ ತಾಲ್ಲೂಕುಗಳಿಗೆ ಹೋಲಿಸಿದರೆ ಮೈಸೂರು ನಗರದಲ್ಲೇ ಅತ್ಯಂತ ಹೆಚ್ಚು ವಾಯುಮಾಲಿನ್ಯ ಇದೆ. ಆದರೆ, ಮಾಲಿನ್ಯವು ರಾಷ್ಟ್ರೀಯ ಪರಿವೇಷಕ ಗಾಳಿಯ ಗುಣಮಟ್ಟದ ಮಿತಿಯೊಳಗೆ ಇದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿ ಅಂಶಗಳು ಹೇಳುತ್ತವೆ.

10 ಮೈಕ್ರಾನ್‌ಗಿಂತ ಕಡಿಮೆ ಇರುವ, ತೇಲಾಡುವ ದೂಳಿನ ಕಣಗಳು ಗುಣಮಟ್ಟದ ಮಿತಿಯ ಪ್ರಕಾರ 100ಕ್ಕಿಂತ ಕಡಿಮೆ ಇರಬೇಕು. ಈಗ ಇದು ಕೆ.ಆರ್.ವೃತ್ತದಲ್ಲಿ 55–60ರಷ್ಟು ಇದ್ದರೆ, ಕೈಗಾರಿಕಾ ಪ್ರದೇಶ ಹೆಬ್ಬಾಳಿನಲ್ಲಿ 50–53ರಷ್ಟಿದೆ. ಸಾರಜನಕದ ಡೈ ಆಕ್ಸೈಡ್ ಮಿತಿಯ ಪ್ರಕಾರ 40ರಷ್ಟಿರಬೇಕು. ಅದು 18–22ರಷ್ಟು ಕೆ.ಆರ್.ವೃತ್ತದಲ್ಲಿದ್ದರೆ 18–20ರಷ್ಟು ಹೆಬ್ಬಾಳದಲ್ಲಿ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಪ್ರಕಾಶ್ ತಿಳಿಸಿದರು.

ಆದರೆ, ಜಲಮಾಲಿನ್ಯ ಮಿತಿ ಮೀರಿದೆ. ನಗರದ ಹೃದಯ ಭಾಗದ ದೊಡ್ಡಕರೆ, ಜೀವರಾಯನಕಟ್ಟೆ, ಸುಬ್ಬರಾಯನಕೆರೆಗಳು ಈಗಾಗಲೇ ಮೈದಾನವಾಗಿವೆ. ಕುಕ್ಕರಹಳ್ಳಿ ಕೆರೆ, ಲಿಂಗಾಬುಧಿ ಕೆರೆ, ಕಾರಂಜಿ ಕೆರೆ, ದೇವನೂರು ಕೆರೆಗಳು ಮಾಲಿನ್ಯಕ್ಕೆ ಒಳಗಾಗಿ ನಶಿಸುವ ಹಂತ

ದಲ್ಲಿವೆ.

ನಗರದ ಹೊರವಲಯದಲ್ಲಿರುವ ದಳವಾಯಿ ಕೆರೆ ಮೈಸೂರು ಸಂಸ್ಥಾನದ ಮಹಾರಾಜರು ಕಟ್ಟಿಸಿದ 1,400 ಕೆರೆಕಟ್ಟೆಗಳ ಪೈಕಿ ಪ್ರಮುಖವಾದುದು. 16.50 ಚದರ ಕಿ.ಮೀನಷ್ಟು ಜಲಾನಯನ ಪ್ರದೇಶವನ್ನು ಇದು ಹೊಂದಿದೆ. ಕೇರಳ, ತಮಿಳುನಾಡಿನಿಂದ ಬರುವವರು ಮೈಸೂರು ನಗರ ಪ್ರವೇಶಿಸುವುದಕ್ಕೂ ಮುನ್ನ ಇದರ ಏರಿ ಮೇಲೆಯೇ ಬರಬೇಕು. ಇಷ್ಟೊಂದು ವಿಸ್ತಾರವಿರುವ ದಳವಾಯಿ ಕೆರೆ ಇದೀಗ ಕೊಳೆತು ನಾರುತ್ತಿದೆ.

ಏಕೆ ಹೀಗೆ?: ದಳವಾಯಿ ಕೆರೆಗೆ ನಗರದಿಂದಲೇ ಸಣ್ಣತೊರೆಯಂತೆ ಕೊಳಚೆ ನೀರು ಹರಿದು ಬರುತ್ತಿದೆ. ನಿತ್ಯವೂ ಸೇರುವ ಈ ಕೊಳಚೆ ನೀರು ಕೆರೆಯ ಕುತ್ತಿಗೆಯನ್ನೇ ಹಿಸುಕಿ ಹಾಕಿದೆ. ಜಲಚರಗಳು ಉಸಿರುಗಟ್ಟಿ ಸಾಯುತ್ತಿವೆ. ಹಕ್ಕಿ ಪಕ್ಷಿಗಳ ಜೀವಕ್ಕೆ ಇಲ್ಲಿನ ನೀರು ಸಂಚಕಾರ ತಂದಿದೆ. ನಗರದ ಮಗ್ಗುಲಲ್ಲೇ ವಿಸ್ತಾರವಾದ ಕೆರೆಯೊಂದು ಜೀವ ಕಳೆದುಕೊಳ್ಳುತ್ತಿದ್ದರೆ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.

ಕೊಪ್ಪಲೂರು ಕಡೆಯಿಂದ ನಗರದ ಕೊಳಚೆ ನೀರು ಕೆರೆ ಸೇರುತ್ತಿದೆ. ಇದನ್ನು ತಡೆಯಲು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕೊಳಚೆ ನೀರಿನಿಂದ ಕೆರೆಯಲ್ಲಿ ಆಲ್ಗೆ, ಪಾಚಿಗಳಷ್ಟೇ ಅಲ್ಲದೆ ಇತರ ಕಳೆಸಸಿಗಳೂ ಬೆಳೆಯುವಂತಾಗಿದೆ. ಇದೀಗ ಇಡೀ ಕೆರೆ ಇಂತಹ ಕಳೆ ಗಿಡಗಳಿಂದಲೇ ಆವೃತವಾಗಿದೆ.

ಪರಿಹಾರ?: ಸದ್ಯ ನಗರದಲ್ಲಿ ವಿದ್ಯಾರಣ್ಯಪುರಂ, ಕೆಸರೆ ಹಾಗೂ ಎಚ್.ಡಿ.ಕೋಟೆ ರಸ್ತೆಯಲ್ಲಿ ಕೊಳಚೆ ನೀರು ಶುದ್ದೀಕರಣ ಘಟಕಗಳು ಇವೆ. ಇಲ್ಲೆಲ್ಲ ಪರಿಣಾಮಕಾರಿಯಾಗಿ ನೀರನ್ನು ಶುದ್ದೀಕರಿಸಿದರೆ ಮಾತ್ರ ಕೆರೆಗಳ ಮಾಲಿನ್ಯ ತಪ್ಪುತ್ತದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ (ನಗರ) ಪ್ರಕಾಶ್ ಅಭಿಪ್ರಾಯಪಡುತ್ತಾರೆ.

ಕಪಿಲಾ ನದಿಗೂ ಕುತ್ತು!

ನಂಜನಗೂಡಿನಲ್ಲಿ ಹರಿಯುವ ಕಪಿಲಾ ನದಿಗೆ ಪಟ್ಟಣದ ಕೊಳಚೆ ನೀರು ಕುತ್ತಾಗಿ ಪರಿಣಮಿಸಿದೆ. ಹೆಜ್ಜಿಗೆ, ಹಿಮ್ಮಾವು ಬಳಿ ಎಣ್ಣೆಹೊಳೆಗೆ ಕೊಳಚೆ ನೀರು ಸೇರುತ್ತಿದೆ. ನಂತರ, ಎಣ್ಣೆಹೊಳೆಯು ನದಿ ಸೇರುತ್ತದೆ. ಅಲ್ಲದೇ, ನಂಜನಗೂಡು ಸೇತುವೆಯ ಕೆಳಭಾಗದಲ್ಲಿ ಸುಮಾರು 500 ಮೀಟರ್ ಅಂತರದಲ್ಲಿ ಕೊಳಚೆ ನೀರು ನದಿಗೆ ಸೇರುತ್ತಿದೆ. ಕಪಿಲಾ ನದಿ ಸೇರುವ ಗುಂಡ್ಲುಹೊಳೆಗೂ ಕೊಳಚೆ ನೀರು ಸೇರುತ್ತಿದೆ. ಇವೆಲ್ಲವೂ ನದಿಯನ್ನು ಮಲೀನಗೊಳಿಸುತ್ತಿದೆ. ಪಟ್ಟಣದ ಕೊಳಚೆ ನೀರು ಶುದ್ದಿಕರಣಗೊಳ್ಳುವವರೆಗೂ ನದಿ ಮಾಲಿನ್ಯ ತಪ್ಪದು ಎನ್ನುವಂತಾಗಿದೆ.

ವರುಣಾ ಕೆರೆಗೂ ಆಪತ್ತು!

ಸದ್ಯ ವರುಣಾ ಕೆರೆ ನೋಡಲು ಸುಂದರವಾಗಿದ್ದು, ಹಾನಿಕಾರಕ ಮಾಲಿನ್ಯದಿಂದ ಮುಕ್ತವಾಗಿದೆ. ಆದರೆ, ನಗರೀಕರಣದ ಕಬಂಧಬಾಹುಗಳು ಕೆರೆಯ ಆಸುಪಾಸಿನವರೆಗೂ ಚಾಚಿದೆ. ಸುತ್ತಮುತ್ತ ಹಲವು ಬಡಾವಣೆಗಳು ನಿರ್ಮಾಣವಾಗುತ್ತಿವೆ. ಇಲ್ಲೆಲ್ಲ ಜನವಸತಿ ಹೆಚ್ಚಾದಂತೆಲ್ಲ ಕೊಳಚೆ ನೀರು ಕ್ರಮೇಣ ವರುಣಾ ಕೆರೆಗೆ ಸೇರಿ ಕೆರೆ ಮಲೀನಗೊಳ್ಳುವ ದಿನಗಳು ದೂರವಿಲ್ಲ ಎಂದು ಪ್ರವಾಸಿಗ ಚನ್ನಕೃಷ್ಣ ಆತಂಕ ವ್ಯಕ್ತಪಡಿಸಿದರು.

**

ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣದಲ್ಲಿದೆ. ಗಂಭೀರ ಸಮಸ್ಯೆ ಸೃಷ್ಟಿಯಾಗಿಲ್ಲ. ದಳವಾಯಿ ಕೆರೆ ಅಪಾಯದಲ್ಲಿದ್ದು, ರಕ್ಷಣೆ ಅಗತ್ಯ 

ಪ್ರಕಾಶ್, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ (ನಗರ)

**

ನಂಜನಗೂಡಿನ ಕಪಿಲಾ ನದಿಗೆ ಕೊಳಚೆ ಸೇರುತ್ತಿದೆ. ಕೈಗಾರಿಕಾ ತ್ಯಾಜ್ಯ ಸೇರುತ್ತಿಲ್ಲ. ಬಹುತೇಕ ಕೈಗಾರಿಕೆ ಗಳು ಕೊಳಚೆ ನೀರನ್ನು ಮರುಬಳಕೆ ಮಾಡಿಕೊಳ್ಳುತ್ತಿವೆ

ಯತೀಶ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ (ಗ್ರಾಮೀಣ) 

**


ದಳವಾಯಿ ಕೆರೆಗೆ ಕೊಳಚೆ ನೀರು ಕಾಲುವೆಯಂತೆ ಸೇರುತ್ತಿದೆ. ಇದರಿಂದ ಕೊಪ್ಪಲೂರಿನಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಗ್ರಾಮದಲ್ಲಿ ಬದುಕುವುದಕ್ಕೆ ಉತ್ತಮ ವಾತಾವರಣ ಇಲ್ಲ

ಮಹೇಶ್,‌ ಕೊಪ್ಪಲೂರಿನ ಗ್ರಾ.ಪಂ. ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry