ಅರಣ್ಯ ಸಂರಕ್ಷಣೆ; ಬಿದಿರಿಗೆ ಮೊರೆ

7
ಸಸ್ಯಾಹಾರಿ ಪ್ರಾಣಿಗಳಿಗೆ, ಅಂತರ್ಜಲವೃದ್ಧಿಗೂ ಸಹಕಾರಿ

ಅರಣ್ಯ ಸಂರಕ್ಷಣೆ; ಬಿದಿರಿಗೆ ಮೊರೆ

Published:
Updated:

ಹುಣಸೂರು: ಬೆಳಗಾದರೆ ಎಲ್ಲೆಡೆ ವಿಶ್ವ ಪರಿಸರ ದಿನ (ಜೂನ್ 5) ಆಚರಿಸುತ್ತಾರೆ. ಪರಿಸರವನ್ನು ನಾವು ಎಷ್ಟು ನಿಗಾವಹಿಸಿ ಸಂರಕ್ಷಿಸುತ್ತಿದ್ದೇವೆ ಎಂಬ ಮೂಲ ಪ್ರಶ್ನೆ ನಮ್ಮ ಮುಂದಿದೆ.

ಪರಿಸರ ಎಂದ ಕೂಡಲೇ ಕೇವಲ ಅರಣ್ಯ, ವನ್ಯಜೀವಿ ರಕ್ಷಣೆಗೆ ಸೀಮಿತ ಎಂದು ಭಾವಿಸುವವರ ಸಂಖ್ಯೆ ಹೆಚ್ಚಿದ್ದು, ಅರಣ್ಯದಲ್ಲಿ ಹುಲ್ಲಿನ ಪ್ರಭೇದಕ್ಕೆ ಸೇರಿದ ‘ಬಿದಿರು’ ಸಂರಕ್ಷಣೆಯೂ ಅತ್ಯಂತ ಗಂಭೀರವಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನ ಹಾಗೂ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಬಿದಿರು ಬೆಳೆಸುವ ಕೆಲಸ ತ್ವರಿತವಾಗಬೇಕಿದೆ.

ಬಿದಿರು ಕೇವಲ ಆನೆ ಆಹಾರಕ್ಕೆ ಸೀಮಿತಗೊಂಡಿದೆ ಎಂಬ ತಪ್ಪು ಕಲ್ಪನೆ ಇದೆ. ಬಿದಿರು ಮಳೆ ಮೋಡ ಹಿಡಿದಿಡುವಲ್ಲಿಯೂ ವಿಶೇಷ ಪಾತ್ರ ಬೀರುತ್ತಿದೆ. ಇಷ್ಟಲ್ಲದೆ ಬಿದಿರು ಮೆಳೆಯಿಂದ ವಾರ್ಷಿಕ 10 ರಿಂದ 20 ಲಕ್ಷ ಎಲೆಗಳು ನೆಲಕ್ಕೆ ಉದುರುವುದರಿಂದ ಮಳೆಗಾಲದಲ್ಲಿ ನಿಧಾನವಾಗಿ ಭೂಮಿಗೆ ನೀರು ಹರಿಬಿಡುವ ಮೂಲಕ ಭೂಮಿಯಲ್ಲಿ ಅಂತರ್ಜಲ ವೃದ್ಧಿಸಲು (ಬ್ಲಾಟಿಂಗ್ ಪೇಪರ್‌) ಮಾದರಿ ಸಹಕಾರಿ ಆಗಲಿದೆ.

ದಕ್ಷಿಣ ಭಾರತದಲ್ಲಿ 23 ವಿವಿಧ ತಳಿ ಬಿದಿರಿದ್ದು, ಪಶ್ಚಿಮ ಘಟ್ಟ ಪರ್ವತ ಶ್ರೇಣಿ ಸೇರಿದಂತೆ ನಾಗರಹೊಳೆ, ಬಿ.ಆರ್‌.ಹಿಲ್ಸ್‌, ಬಂಡಿಪುರ ಭಾಗದ ಅರಣ್ಯದಲ್ಲಿ ಹೆಚ್ಚಾಗಿ ಕಿರು ಬಿದಿರು ಮತ್ತು ಕರಾವಳಿ ಭಾಗದಲ್ಲಿ ಕೊಂಡೆ ಬಿದಿರು ಅಥವಾ ಮಶ್ ಬಿದಿರು ಕಾಣಬಹುದಾಗಿದೆ. ಭಾರತದಲ್ಲಿ 10 ಮಿಲಿಯನ್ ಹೆಕ್ಟೇರ್‌ ಪ್ರದೇಶದಲ್ಲಿ ಬಿದಿರು ಸ್ವಾಭಾವಿಕವಾಗಿ ಬೆಳೆದಿದೆ ಎನ್ನುತ್ತಾರೆ ದೇವರಾಜ ಅರಸು ಬಿದಿರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಅರಣ್ಯ ಸಚಿವಾಲಯ ನಿವೃತ್ತ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ್‌.

ನಾಗರಹೊಳೆ ಮತ್ತು ಬಂಡಿಪುರ ಅರಣ್ಯ ಪ್ರದೇಶದಲ್ಲಿ ಕಳೆದ ದಶಕದಲ್ಲಿ ಬಿದಿರು ಬೆಳೆ ಸಂಪೂರ್ಣ ನಶಿಸಿ ಹೋಗಿದ್ದು, ಈ ಬೆಳೆಗೆ ಅರಣ್ಯ ಇಲಾಖೆ ಒತ್ತು ನೀಡಬೇಕಾಗಿದೆ. ಅರಣ್ಯದಲ್ಲಿ ಲಂಟಾನ ಕಳೆ ಗಿಡ ಬೆಳೆಯಲಾಗಿ ಬಿದಿರು ಬೆಳೆಸುವುದು ಇಲಾಖೆಗೆ ಕಷ್ಟಸಾಧ್ಯ. ಲಂಟಾನ ಕಳೆ ಗಿಡ ಬೆಳೆಯುವುದನ್ನು ವೈಜ್ಞಾನಿಕವಾಗಿ ನಿರ್ಮೂಲನೆ ಮಾಡುವ ಮೂಲಕ ಬಿದಿರು ಬೆಳೆಸಲು ಇಲಾಖೆ ಕ್ರಮವಹಿಸಬೇಕಾಗಿದೆ ಎನ್ನುವರು.

ಬಿದಿರು ಬೀಜ: 35 ರಿಂದ 40 ವರ್ಷಕ್ಕೆ ಒಂದು ಬಾರಿ ಬಿದಿರು ಹೂಬಿಟ್ಟು ಬೀಜ ಆಗುತ್ತದೆ. ಈ ಬೀಜ ಸಂಗ್ರಹಣೆ ಸುಲಭವಲ್ಲ. ಹೀಗಾಗಿ ಬಿದಿರು ಮೆಳೆ ಎಲ್ಲಿ ಇರುವುದೋ ಅದೇ ಸ್ಥಳದಲ್ಲಿ ಬಿದಿರು ಬೀಜ ಮೊಳಕೆ ಒಡೆಸಿ ಬೆಳೆಸುವ ಕೆಲಸಕ್ಕೆ ಇಲಾಖೆ ಕೈ ಹಾಕಬೇಕಾಗಿದೆ ಎಂದು ಲಕ್ಷ್ಮಣ್ ಅಭಿಪ್ರಾಯ.

ಬಿದಿರು ಕನಿಷ್ಠ 100 ರಿಂದ 150 ಬೀಜ ಮೊಳಕೆ ಒಡೆಯಲಿದ್ದು, ಈ ಸಸಿಗಳ ರಕ್ಷಣೆ ಮಾಡಬೇಕಾಗಿದೆ. ಅರಣ್ಯದಲ್ಲಿ ಜಿಂಕೆ ಅಥವಾ ಸಸ್ಯಾಹಾರಿ ಪ್ರಾಣಿಗಳು ಚಿಗುರಿದ ಬಿದಿರು ಬಹಳ ಸಿಹಿ ಇರುವುದರಿಂದ ಬೆಳೆಯಲು ಬಿಡದೆ ತಿಂದು ಹಾಕುವುದೇ ಹೆಚ್ಚು.

ನಾಗರಹೊಳೆ ಅರಣ್ಯದಲ್ಲಿ ಬಿದಿರು 12 ವರ್ಷದ ಹಿಂದೆ ನಾಶಗೊಂಡಿದ್ದು, ಇದರಿಂದ ಆನೆ ಸೇರಿದಂತೆ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರದ ಕೊರತೆ ಎದುರಾಗಿದೆ ಎನ್ನುತ್ತಾರೆ ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ರವಿಶಂಕರ್‌.

ಬಿದಿರು ಬೆಳೆಯಲು ಬಿತ್ತನೆ ಆರಂಭ

ಪ್ರಸಕ್ತ ಸಾಲಿನ ಮುಂಗಾರು ಆರಂಭದಲ್ಲೇ ಉತ್ತಮ ಮಳೆ ಆಗಿರುವುದರಿಂದ ಅರಣ್ಯದಲ್ಲಿ ಬಿದಿರು ಬೆಳೆಸಲು ಈಗಾಗಲೇ ಎಲ್ಲ ಕ್ರಮ ತೆಗೆದುಕೊಳ್ಳಲಾಗಿದೆ. ದಾಂಡೇಲಿ ಅರಣ್ಯ ಸಂಶೋಧನಾ ಕೇಂದ್ರದಿಂದ 3 ಟನ್‌ ಬಿದಿರು ಬಿತ್ತನೆ ಬೀಜ ಪಡೆದು ನಾಗರಹೊಳೆ 654 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಅಲ್ಲಲ್ಲಿ ಬಿದಿರು ಬಿತ್ತನೆ ಮಾಡುವ ಕಾರ್ಯ ಭರದಿಂದ ಸಾಗಿದೆ.

ನಾಗರಹೊಳೆ, ಕಬಿನಿ ಅರಣ್ಯ ಭಾಗದಲ್ಲಿ 2012ರಲ್ಲಿ ಬಿದಿರು ನಶಿಸಿ ಹೋಗಿದ್ದು, ಮರು ಹುಟ್ಟು ನೀಡುವ ಪ್ರಯತ್ನ ಇಲಾಖೆ ಕೈಗೊಂಡಿದೆ. ಅರಣ್ಯದ ಕೆರೆ ಅಂಚಿನಲ್ಲಿ ಮತ್ತು ಅಡ್ಲು ದಡದಲ್ಲಿ ಹೆಚ್ಚಾಗಿ ಬಿದಿರು ಬೆಳೆಸುವ ಕಾರ್ಯಪ್ರಗತಿಯಲ್ಲಿದೆ. ಬಿದಿರು ಬಿತ್ತನೆ ಬೀಜ ಹಾಕಿ ಬೆಳೆಸುವ ಕೆಲಸ ಯಶಸ್ವಿಯಾದಲ್ಲಿ ಮತ್ತಷ್ಟು ಪ್ರದೇಶಕ್ಕೆ ವಿಸ್ತರಿಸುವ ಆಲೋಚನೆ ಇಲಾಖೆಗೆ ಇದೆ ಎನ್ನುತ್ತಾರೆ ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ರವಿಶಂಕರ್‌.

**

ವಿಶ್ವದಲ್ಲಿ ಅತಿ ಹೆಚ್ಚು ಬಿದಿರು ಬೆಳೆಯುವ ದೇಶ ಭಾರತ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜಪಾನ್‌ ಮತ್ತು ಚೀನಾ ಹಿಡಿತ ಸಾಧಿಸಿದ್ದು, ಸ್ಥಳೀಯವಾಗಿ ಬಿದಿರು ಬೆಳೆಗೆ ಮೌಲವರ್ಧನೆ ಸಿಗಬೇಕು

ಎ.ಸಿ.ಲಕ್ಷ್ಮಣ್‌, ಅಧ್ಯಕ್ಷ, ದೇವರಾಜ ಅರಸು ಬಿದಿರು ಅಭಿವೃದ್ಧಿ ಮಂಡಳಿ 

ಎಚ್‌.ಎಸ್‌.ಸಚ್ಚಿತ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry