ಗಡ್ಡದ ಕೋಣ ಓಟದಲ್ಲಿ ಜಾಣ

7

ಗಡ್ಡದ ಕೋಣ ಓಟದಲ್ಲಿ ಜಾಣ

Published:
Updated:
ಗಡ್ಡದ ಕೋಣ ಓಟದಲ್ಲಿ ಜಾಣ

ಮೇಲ್ನೋಟಕ್ಕೆ ಕಾಡುಕೋಣದ ಮರಿಯಂತೆಯೂ, ಎರಡೇ ಕೊಂಬುಗಳಿರುವ ಜಿಂಕೆಯಂತೆಯೂ, ಕಾಡು ಕತ್ತೆಯಂತೆಯೂ ಕಾಣುವ ಈ ಪ್ರಾಣಿ ಜಿಂಕೆ ಜಾತಿಯ ಕೋಣ. ‘ವೈಲ್ಡ್‌ ಬೀಸ್ಟ್‌’ ಎಂಬ ಈ ಕೋಣಗಳ ತುಂಬು ಗಡ್ಡ ಇವುಗಳ ‘ಸಿಗ್ನೇಚರ್‌ ಸ್ಟೈಲ್‌’.

ಜೀವಸಂಕುಲದ ನೆಲೆಬೀಡು ಆಗಿರುವ ಆಫ್ರಿಕಾದ ಕಾಡುಗಳಲ್ಲಿ ಇವುಗಳನ್ನು ಕಾಣಬಹುದು.  ಇತರೆ ಖಂಡ ಅಥವಾ ಭೂಪ್ರದೇಶಗಳಲ್ಲಿ ಕಾಣಸಿಗದ ಮತ್ತು ವಿಶೇಷ ಎನಿಸುವ ಪ್ರಾಣಿ, ಪಕ್ಷಿಗಳನ್ನು ಇಲ್ಲಿ ನೋಡಬಹುದು. ಅಂತಹ ಜೀವಿಗಳಲ್ಲಿ ‘ವೈಲ್ಡ್‌ಬೀಸ್ಟ್’ ಕೂಡ ಒಂದು. ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿದುಕೊಳ್ಳೋಣ.

ಇದರ ವೈಜ್ಞಾನಿಕ ಹೆಸರು ‘ಕೊನ್ನೊಶಿಯೆಟ್ಸ್’ (Connochaetes). ಇದು ಆ್ಯಂಟೆಲೋಪ್‌ (ಜಿಂಕೆ, ಹುಲ್ಲೆ, ಚಿಗರೆ) ಮತ್ತು ಬೊವಿಡೆ (Bovidae– ಹಸು, ಮೇಕೆ, ಕುರಿ) ಪ್ರಭೇದಕ್ಕೆ ಸೇರಿದ ಪ್ರಾಣಿ. ಆದರೆ ನೋಡುವುದಕ್ಕೆ ಕೋಣ, ಎತ್ತಿನಂತೆ ಕಾಣುತ್ತದೆ.  ಬ್ಲ್ಯಾಕ್‌ ವೈಲ್ಡ್‌ಬೀಸ್ಟ್‌ ಮತ್ತು ಬ್ಲೂ ವೈಲ್ಡ್‌ಬೀಸ್ಟ್ ಎಂಬ ಎರಡು ತಳಿಗಳಿವೆ. ಎರಡೂ ತಳಿಗಳು  ಆಫ್ರಿಕಾ ಖಂಡದ ದಕ್ಷಿಣ ಭಾಗಗಳಲ್ಲಿ ಮಾತ್ರ ಇವೆ.

ಬದಲಾದ ಹವಾಮಾನ ಮತ್ತು ಋತುಮಾನಗಳಿಗೆ ತಕ್ಕಂತೆ, ಉತ್ತರ ಆಫ್ರಿಕಾದಿಂದ ದಕ್ಷಿಣ ಆಫ್ರಿಕಾಗೆ ವೈಲ್ಡ್‌ಬೀಸ್ಟ್‌ಗಳು ಸಾವಿರಾರು ವರ್ಷಗಳ ಹಿಂದೆ ವಲಸೆ ಬಂದಿವೆ. ಇಲ್ಲಿ ಹುಲ್ಲುಗಾವಲು ಪ್ರದೇಶ ಹೆಚ್ಚಾಗಿ ಇದ್ದುದರಿಂದ ಇಲ್ಲೇ ಬೀಡುಬಟ್ಟಿವೆ.

ಲಕ್ಷಣ: ಇದು ಜಿಂಕೆ ಪ್ರಭೇದಕ್ಕೆ ಸೇರಿದ ಪ್ರಾಣಿಯಾದರೂ ಕೋಣದಂತೆ ಕಾಣುತ್ತದೆ. ಕಂದು ಅಥವಾ ಗಾಢ ಕಂದು ಬಣ್ಣದ ತುಪ್ಪಳದಿಂದ ದೇಹ ಆವರಿಸಿರುತ್ತದೆ. ಮುಖ ಹಂದಿಯ ಮುಖದಂತೆ ನೀಳವಾಗಿರುತ್ತದೆ. ಕೋಡುಗಳು ಆಕರ್ಷಕವಾಗಿ ಬೆಳೆದಿರುತ್ತವೆ. ಕತ್ತಿನಿಂದ ಹೊಟ್ಟೆಯ ಭಾಗದವರೆಗೆ ಕಪ್ಪುಬಟ್ಟಿಗಳು ಬೆಳೆದಿರುತ್ತವೆ.

ಇನ್ನೊಂದು ತಳಿಗೆ ಬೆನ್ನಿನ ಮೇಲೆ ಕುದುರೆಗೆ ಬೆಳೆದಿರುವಂತೆ ಕೂದಲು ಬೆಳೆದಿರುತ್ತವೆ. ನೀಳವಾದ ಬಾಲದ ಮಧ್ಯಭಾಗದಿಂದ ಕೊನೆಯ ಭಾಗದವರೆಗೆ ಕೂದಲು ಬೆಳೆದಿರುತ್ತದೆ. ಮುಂಗಾಲು ಮತ್ತು ಹಿಂಗಾಲುಗಳು ಜಿಂಕೆಯಂತೆ ಸಣ್ಣದಾಗಿರುತ್ತವೆ. ದೇಹ ದೊಡ್ಡದಾಗಿರುತ್ತದೆ. ಕಣ್ಣುಗಳು ಚಿಕ್ಕದಾಗಿರುತ್ತವೆ. ಎಲೆಯ ಆಕಾರದಲ್ಲಿನ ಕಿವಿಗಳು ಸದಾ ಸೆಟೆದು ನಿಂತಿರುತ್ತವೆ.

ಎಲ್ಲೆಲ್ಲಿವೆ?: ದಕ್ಷಿಣ ಆಫ್ರಿಕಾ, ದಕ್ಷಿಣ ಕೆನ್ಯಾ, ದಕ್ಷಿಣ ಅಂಗೋಲಾ ದೇಶಗಳ ಅರಣ್ಯ ಪ್ರದೇಶಗಳು ಹುಲ್ಲುಗಾವಲು ಪ್ರದೇಶಗಳು ಸವನ್ನಾದಲ್ಲಿ ಇದರ ಸಂತತಿ ವಿಸ್ತರಿಸಿದೆ.

ವರ್ತನೆ: ಸದಾ ಸಂಚಾರ ಮಾಡುವುದಕ್ಕೆ ಇಷ್ಟಪಡುತ್ತವೆ. ಗುಂಪಿನಲ್ಲಿ ವಾಸಿಸುತ್ತದೆ. ಬೆಳಗ್ಗೆ ಮತ್ತು ಸಂಜೆ ಹೊತ್ತಲ್ಲಿ ಹೆಚ್ಚು ಚುರುಕಾಗಿರುತ್ತವೆ. ಆಹಾರ ಅರಸಿ ಒಂದು ಪ್ರದೇಶದಿಮದ ಮತ್ತೊಂದು ಪ್ರದೇಶಕ್ಕೆ ಸಂಚರಿಸುತ್ತಲೇ ಇರುತ್ತವೆ. ಕರ್ಕಶ ಶಬ್ದಗಳನ್ನು ಮಾಡುತ್ತಾ ಸಂವಹನ ನಡೆಸುತ್ತವೆ. ಸದಾ ಶಬ್ದ ಮಾಡುತ್ತಲೇ ಇರುತ್ತವೆ. ಇತರೆ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಸದಾ ಗುಂಪಿನಲ್ಲಿ ಸಾಗುತ್ತಿರುತ್ತವೆ.

ಇವುಗಳ ವಲಸೆಯನ್ನು ‘ಮಹಾವಲಸೆ’ ಎನ್ನುತ್ತಾರೆ. ಅಪಾಯಕಾರಿಯಾದ ನದಿ, ಅರಣ್ಯಗಳನ್ನು ದಾಟಿ ನೂರಾರು ಕಿ.ಮೀವರೆಗೆ ವಲಸೆ ಹೋಗುತ್ತವೆ.

ಆಹಾರ: ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ಹುಲ್ಲು, ಎಲೆಗಳು, ಗಿಡಗಳು ಇದರ ಪ್ರಮುಖ ಆಹಾರ. ಸಾಮಾನ್ಯವಾಗಿ ಮುಂಗಾರು ಆರಂಭವಾದ ನಂತರ ವಲಸೆ ಹೋಗುತ್ತವೆ.

ಸಂತಾನೋತ್ಪತ್ತಿ: ಇದು 3ರಿಂದ 4 ವರ್ಷದ ನಂತರ ವಯಸ್ಕ ಹಂತ ತಲುಪುತ್ತದೆ. ಹೆಣ್ಣು 2ರಿಂದ 3 ವರ್ಷಗಳ ನಂತರ ವಯಸ್ಕ ಹಂತಕ್ಕೆ ಬರುತ್ತದೆ. ವಯಸ್ಕ ಹಂತ ತಲುಪಿದ ನಂತರ ಗಡಿ ಗುರುತಿಸಿಕೊಂಡು ಸ್ವತಂತ್ರ್ಯವಾಗಿ ಜೀವನ ಮಾಡುತ್ತವೆ.  ಪೂರ್ವ ಮುಂಗಾರು ಅಥವಾ ಹೊಸ ಚಿಗುರು ಮೊಳಕೆಯೊಡೆಯುವುದಕ್ಕಿಂತ ಮುಂಚಿನ ಕಾಲ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. 8ರಿಂದ 9 ತಿಂಗಳು ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಇದರ ಮರಿಯನ್ನು ‘ಕಾಫ್‌’ ಎನ್ನುತ್ತಾರೆ.

ಮರಿಗಳು ಹುಟ್ಟಿದ ಒಂದೇ ನಿಮಿಷದಲ್ಲಿ ಎದ್ದು ನಿಂತು ನಡೆಯಲು ಆರಂಭಿಸುತ್ತವೆ. ಹತ್ತು ದಿನಗಳ ನಂತರ ಹುಲ್ಲು ತಿನ್ನಲು ಆರಂಭಿಸುತ್ತವೆ. ಆರು ತಿಂಗಳವರೆಗೆ ತಾಯಿ ಆರೈಕೆಯಲ್ಲೇ ಬೆಳೆಯುತ್ತವೆ. ಒಂದು ವರ್ಷದ ನಂತರ ಗುಂಪುಬಿಟ್ಟು ವಯಸ್ಕ ಪ್ರಾಣಿಗಳ ಗುಂಪಿಗೆ ಸೇರುತ್ತದೆ.

ಸಿಂಹ, ಚಿರತೆ, ಕಾಡು ನಾಯಿ, ಹೈನಾ ಮತ್ತು ಮೊಸಳೆಗಳು ಇವನ್ನು ಬೇಟೆಯಾಡುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry