ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ವೃದ್ಧಿದರ ಚೇತರಿಕೆ ಹೊಸ ಸವಾಲುಗಳಿಗೂ ಸ್ಪಂದಿಸಿ

Last Updated 5 ಜೂನ್ 2018, 19:30 IST
ಅಕ್ಷರ ಗಾತ್ರ

ದೇಶಿ ಆರ್ಥಿಕತೆಯು 21 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ಮಟ್ಟದ (ಶೇ 7.7ರಷ್ಟು) ಪ್ರಗತಿ ದಾಖಲಿಸಿರುವುದು ಆಶಾದಾಯಕವಾಗಿದೆ. 2017–18ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿನ ಆರ್ಥಿಕ ವೃದ್ಧಿ ದರದ (ಜಿಡಿಪಿ) ಬೆಳವಣಿಗೆಯು ಅನೇಕ ಕಾರಣಗಳಿಗೆ ಚೇತೋಹಾರಿಯಾದ ವಿದ್ಯಮಾನವಾಗಿದೆ. ಈ ವೃದ್ಧಿದರ ಸ್ಥಿರಗೊಂಡರೆ ಮತ್ತು ಮುಂಗಾರು ಮಳೆಯು ನಿರೀಕ್ಷೆಯಂತೆ ಸುರಿದರೆ ಆರ್ಥಿಕತೆಗೆ ಖಂಡಿತವಾಗಿಯೂ ಉತ್ತೇಜನ ದೊರೆಯಲಿದೆ. ಆರ್ಥಿಕತೆಯ ವಿವಿಧ ಚಟುವಟಿಕೆಗಳು ಕ್ರಮೇಣ ವೇಗ ಪಡೆಯುತ್ತಿರುವುದು ಇದರಿಂದ ದೃಢಪಡುತ್ತದೆ. ರಸ್ತೆ ಮತ್ತು ಗೃಹ ನಿರ್ಮಾಣ ವಲಯಗಳಲ್ಲಿನ ಹೂಡಿಕೆ ಹೆಚ್ಚಳವು ಬೆಳವಣಿಗೆಯ ಮುಖ್ಯ ಚಾಲಕಶಕ್ತಿಗಳಾಗಿವೆ. ತಯಾರಿಕೆ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದರಿಂದಲೂ ಸಂತಸಪಡಲು ಕಾರಣ ಇದೆ. ಕೃಷಿ, ತಯಾರಿಕೆ ಮತ್ತು ಕಟ್ಟಡ ನಿರ್ಮಾಣ ವಲಯಗಳಲ್ಲಿನ ಬೆಳವಣಿಗೆಯು ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳ ಆಗುತ್ತಿರುವುದನ್ನೂ ಸೂಚಿಸುತ್ತದೆ. ಭಾರಿ ಯಂತ್ರೋಪಕರಣಗಳ ವಲಯದಲ್ಲಿನ ಶೇ 9ರಷ್ಟು ಪ್ರಗತಿಯು ಈ ವರ್ಷವೂ ವೃದ್ಧಿದರ ವೇಗ ಪಡೆದುಕೊಳ್ಳಲಿರುವುದನ್ನು ಖಚಿತಪಡಿಸುತ್ತದೆ. ವ್ಯಾಪಾರ, ಹೋಟೆಲ್‌, ಸಾರಿಗೆ, ಸಂವಹನ, ಹಣಕಾಸು ಮತ್ತು ವೃತ್ತಿಪರ ಸೇವೆಗಳು ವರ್ಷದಿಂದ ವರ್ಷಕ್ಕೆ ವೇಗ ಪಡೆಯುತ್ತಿದ್ದು ಆರ್ಥಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡುತ್ತಿವೆ. ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿನ ಶೇ 4.5ರಷ್ಟು ಬೆಳವಣಿಗೆಯು ಕೂಡ ಜಿಡಿಪಿ ಹೆಚ್ಚಳಕ್ಕೆ ಗಮನಾರ್ಹ ಕೊಡುಗೆ ನೀಡಿದೆ. ತಯಾರಿಕೆ, ರಿಯಲ್‌ ಎಸ್ಟೇಟ್‌, ವ್ಯಾಪಾರ, ಸಾರಿಗೆ ಮತ್ತು ದೂರಸಂಪರ್ಕ ವಲಯಗಳಲ್ಲಿನ ಉತ್ಸಾಹವು ಆರ್ಥಿಕತೆಯಲ್ಲಿ ಹೆಚ್ಚಿನ ಹೊಂದಾಣಿಕೆಗೆ ಕಾರಣವಾಗುತ್ತಿದೆ.

ನೋಟು ರದ್ದತಿಯ ಆಘಾತ ಮತ್ತು ಜಿಎಸ್‌ಟಿ ಜಾರಿ ಸಂದರ್ಭದಲ್ಲಿನ ಅಡಚಣೆಗಳನ್ನು ನಿವಾರಿಸಿಕೊಂಡು ತ್ವರಿತ ಬೆಳವಣಿಗೆಯ ಹಾದಿಗೆ ಮರಳಿರುವುದು ಅರ್ಥ ವ್ಯವಸ್ಥೆಯ ಪಾಲಿಗೆ ಗೆಲುವಿನ ಸಂಭ್ರಮವಾಗಿದೆ. ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿಬೆಳವಣಿಗೆ ದಾಖಲಿಸುತ್ತಿರುವ ಆರ್ಥಿಕತೆ ಎನ್ನುವ ಹೆಗ್ಗಳಿಕೆಗೆ ಮತ್ತೆ ಪಾತ್ರವಾಗುತ್ತಿದೆ. ಆದರೆ, 2017–18ನೇ ಸಾಲಿನಲ್ಲಿನ ವಾರ್ಷಿಕ ಸಾಧನೆಯು ಶೇ 6.7ರಷ್ಟು ಮಾತ್ರ ದಾಖಲಾಗಿದೆ. 2016–17ರ ಶೇ 7.1ಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿದ್ದು, ಅರ್ಥ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಧ್ವನಿಸುತ್ತದೆ. ಆರ್ಥಿಕ ಪ್ರಗತಿ ವೇಗ ಪಡೆಯುತ್ತಿದ್ದರೂ, ಇದಕ್ಕೆ ತಡೆಯೊಡ್ಡುವ ಹಲವಾರು ಅಡೆತಡೆಗಳು ಇರುವುದನ್ನು ನಿರ್ಲಕ್ಷಿಸುವಂತಿಲ್ಲ. ಕಚ್ಚಾ ತೈಲ ಬೆಲೆ ಏರಿಕೆ, ಹಣದುಬ್ಬರ ಮಟ್ಟ ಹೆಚ್ಚಳ, ಬಡ್ಡಿ ದರಗಳ ಏರಿಕೆ, ಲಾಭಕ್ಕೆ ಒತ್ತು ನೀಡುತ್ತಿರುವ ವಿದೇಶಿ ನಿಧಿಗಳ ಹೊರಹರಿವು, ಡಾಲರ್‌ ಎದುರು ರೂಪಾಯಿ ಮೌಲ್ಯ ದುರ್ಬಲಗೊಳ್ಳುತ್ತಿರುವ ಕಾರ್ಮೋಡಗಳು ಕಳವಳಕ್ಕೆ ಎಡೆಮಾಡಿಕೊಟ್ಟಿವೆ. ಇದರಿಂದ 2018–19ರಲ್ಲಿ ವೃದ್ಧಿ ದರವು ಶೇ 7.3ಕ್ಕೆ ಇಳಿಯುವ ಅಂದಾಜಿದೆ. ಸುಸ್ಥಿರ ಆಡಳಿತದಿಂದ ಇಂತಹ ಪ್ರತಿಕೂಲಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಬಹುದು. ಖಾಸಗಿ ವಲಯದ ಹೂಡಿಕೆ ಕ್ಷೀಣಿಸುತ್ತಿದ್ದು ಜಿಡಿಪಿಯಲ್ಲಿನ ಇದರ ಕೊಡುಗೆಯು ಶೇ 59 ರಿಂದ ಶೇ 54.6ಕ್ಕೆ ಕುಸಿಯುತ್ತಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಬಡ್ಡಿ ದರ ಏರಿಸುವುದು ಅನಿವಾರ್ಯವಾಗಲಿದೆ. ಈ ಎಲ್ಲ ಅಡೆತಡೆಗಳನ್ನು ಸಮರ್ಪಕವಾಗಿ ನಿವಾರಿಸಿಕೊಳ್ಳುವುದು ಸದ್ಯದ ಅಗತ್ಯ. ಇದಕ್ಕಾಗಿ ಕೇಂದ್ರ ಸರ್ಕಾರ ಜನಪ್ರಿಯ ಕಾರ್ಯಕ್ರಮಗಳಿಗೆ ಜೋತು ಬೀಳುವುದನ್ನು ತ್ಯಜಿಸಬೇಕಾಗಿದೆ. ಆರ್ಥಿಕತೆ ಮೇಲಿನ ಬೆಲೆ ಏರಿಕೆ ಒತ್ತಡ ನಿರ್ವಹಿಸಲು ಸಂಯಮ ತೋರಬೇಕಾಗಿದೆ. ಬಡ್ಡಿ ದರಗಳ ಹೆಚ್ಚಳವು ಈ ಉತ್ಸಾಹಕ್ಕೆ ತಣ್ಣೀರೆರಚದಂತೆ ಕಾಳಜಿ ವಹಿಸಬೇಕಾಗಿದೆ. ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ ಹೆಚ್ಚು ವಿವೇಕದಿಂದ ವರ್ತಿಸುವುದು ಸದ್ಯದ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT