ಮಳೆ ನೀರು ಸಂಗ್ರಹ, ತಾರಸಿ ಕೈತೋಟಕ್ಕೆ ಸಾಲ

7
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕನಿಂದ ಸಾಲ ನೀಡುವ ಯೋಜನೆ ಜಾರಿ

ಮಳೆ ನೀರು ಸಂಗ್ರಹ, ತಾರಸಿ ಕೈತೋಟಕ್ಕೆ ಸಾಲ

Published:
Updated:

ಬೆಳಗಾವಿ: ಮನೆಗಳ ತಾರಸಿಗಳಲ್ಲಿ ಕೈತೋಟ ನಿರ್ಮಿಸಲು ಹಾಗೂ ಮಳೆ ನೀರು ಸಂಗ್ರಹಿಸುವ ಘಟಕ ಸ್ಥಾಪನೆಗೆ ಸಾಲ ನೀಡುವ ಯೋಜನೆಯನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಜಾರಿಗೊಳಿಸಿದೆ.

ಇಲ್ಲಿನ ಹನುಮಾನ್‌ ನಗರದ ಹರ್ಷದಾ ಎಚ್‌. ಪಾಟೀಲ ಅವರ ಮನೆಯ ತಾರಸಿಯಲ್ಲಿ ಕೈಗೊಂಡಿರುವ ಕೈತೋಟವನ್ನು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾಂಕೇತಿಕವಾಗಿ ಮಂಗಳವಾರ ಉದ್ಘಾಟಿಸಲಾಯಿತು.

‘ನೀರಿನ ಕೊರತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು, ಆತಂಕ ಸೃಷ್ಟಿಸಿದೆ. ಹಾಗೆಯೇ ಸಾವಯವ ತರಕಾರಿಯೂ ನಗರವಾಸಿಗಳಿಗೆ ದುರ್ಲಭವಾಗುತ್ತಿದೆ. ಹೀಗಾಗಿ, ಮಳೆ ನೀರು ಸಂಗ್ರಹ ಮತ್ತು ತಾರಸಿ ತೋಟದ ಸಂಸ್ಕೃತಿಯನ್ನು ನಗರವಾಸಿಗಳಲ್ಲಿ ಬೆಳೆಸಲು ಈ ಯೋಜನೆ ರೂಪಿಸಲಾಗಿದೆ. ತರಕಾರಿ ಉತ್ಪಾದನೆಯಲ್ಲಿ ಸ್ವಾವಲಂಬನೆಯೂ ಸಾಧ್ಯವಾಗಿಸುವುದು ನಮ್ಮ ಉದ್ದೇಶವಾಗಿದೆ. ಆರ್‌ಸಿಸಿ ಮನೆ ಹೊಂದಿರುವವರು ಕನಿಷ್ಠ ₹ 50ಸಾವಿರದಿಂದ ₹ 1 ಲಕ್ಷದವರೆಗೆ ಸಾಲ ಪಡೆಯಬಹುದು. ದೊಡ್ಡ ಪ್ರಮಾಣದಲ್ಲಿ ಮಾಡಿದರೆ ₹ 10 ಲಕ್ಷದವರೆಗೂ ಸಾಲ ನೀಡಲಾಗುವುದು’ ಎಂದು ಅಧ್ಯಕ್ಷ ಎಸ್‌. ರವೀಂದ್ರನ್‌ ಪತ್ರಕರ್ತರಿಗೆ ತಿಳಿಸಿದರು.

ನೀರು ಪೋಲು ತಡೆ: ‘ಪರಿಸರ ಸ್ನೇಹಿ ಕ್ರಮ ಇದಾಗಿದೆ. ಇದರಿಂದ, ಸಾವಯವ ತರಕಾರಿ ಲಭ್ಯವಾಗುವ ಜೊತೆಗೆ ಮಳೆ ನೀರು ವ್ಯರ್ಥವಾಗುವುದನ್ನೂ ತಡೆಯಬಹುದಾಗಿದೆ. ಅಂತರ್ಜಲ ಮರುಪೂರಣಕ್ಕೂ ಪೂರಕವಾಗಿದೆ. ಇದು, ಇಂದಿನ ತುರ್ತು ಅಗತ್ಯವೂ ಆಗಿದೆ. ಧಾರವಾಡದಲ್ಲಿರುವ ನಮ್ಮ ಮನೆಯಲ್ಲೂ ಕೈತೋಟ ಹಾಗೂ ಮಳೆ ನೀರು ಸಂಗ್ರಹ ಯಶಸ್ವಿಯಾಗಿದೆ. ಬ್ಯಾಂಕ್‌ 9 ಜಿಲ್ಲೆಗಳಲ್ಲಿ 10 ಪ್ರಾದೇಶಿಕ ಕಚೇರಿಗಳು ಹಾಗೂ 636 ಶಾಖೆಗಳನ್ನು ಒಳಗೊಂಡಿವೆ. ಈಗಾಗಲೇ 700 ಮಂದಿಗೆ ₹ 5 ಕೋಟಿಯಷ್ಟು ಸಾಲವನ್ನು ಈ ಯೋಜನೆಗಾಗಿ ನೀಡಿದ್ದೇವೆ. ಬೆಳಗಾವಿ ಜಿಲ್ಲೆಯಲ್ಲಿ 150 ಮಂದಿ ಸಾಲ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಕೈತೋಟದೊಂದಿಗೆ ಮಳೆ ನೀರು ಸಂಗ್ರಹ ಮಾಡಿದರಷ್ಟೇ ಸಾಲ ಸೌಲಭ್ಯ ದೊರೆಯುತ್ತದೆ. ಬದನೆ, ಟೊಮೆಟೊ, ಬೆಂಡೆ, ಮೆಣಸಿನಕಾಯಿ, ವಿವಿಧ ಸೊಪ್ಪುಗಳನ್ನು ಇಲ್ಲಿ ಬೆಳೆಯಬಹುದು. ಇದರಿಂದ, ಮಾರುಕಟ್ಟೆಯಲ್ಲಿನ ತರಕಾರಿ ಅವಲಂಬನೆ ಕಡಿಮೆಯಾಗುತ್ತದೆ. ಹಣ್ಣು ಹಾಗೂ ಔಷಧಿ ಗಿಡಗಳನ್ನೂ ಬೆಳೆಯುವುದಕ್ಕೆ ಅವಕಾಶವಿದೆ. ಮರುಪಾವತಿಗೆ ತ್ರೈಮಾಸಿಕ ಆವರ್ತನೆಯಲ್ಲಿ 5 ವರ್ಷಗಳ ಅವಧಿಗೆ ನೀಡಲಾಗುವುದು’ ಎಂದು ತಿಳಿಸಿದರು.

ಇದೇ ಮೊದಲು: ‘ಈ ವಿನೂತನ ಯೋಜನೆಗೆ ಬ್ಯಾಂಕೊಂದು ಸಾಲ ಕೊಡುತ್ತಿರುವುದು ಇದೇ ಮೊದಲು’ ಎಂದು ಹೇಳಿದರು.

‘ಕೃಷಿ ಹೊಂಡ ನಿರ್ಮಿಸಿಕೊಳ್ಳುವ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ವಿಕಾಸ ಕೃಷಿ ಸಮೃದ್ಧಿ ಸಾಲ ಯೋಜನೆ ಜಾರಿಗೊಳಿಸಲಾಗಿದೆ. ಗರಿಷ್ಠ ₹ 2 ಲಕ್ಷದವರೆಗೆ ನೀಡಲಾಗುವುದು. ಈವರೆಗೆ 500ಕ್ಕೂ ಹೆಚ್ಚು ಮಂದಿಗೆ ₹ 9 ಕೋಟಿ ಸಾಲ ಕೊಡಲಾಗಿದೆ. ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಪರಿಸರಕ್ಕೆ ಪೂರಕವಾದ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಹೋದ ಸಾಲಿನಲ್ಲಿ ಬ್ಯಾಂಕು ₹ 102 ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದು ವಿವರಿಸಿದರು.

‘ಮೊದಲು ಕೆಲವು ಹೂವಿನ ಸಸಿಗಳನ್ನು ಹಾಕುತ್ತಿದ್ದೆ. ತಾರಸಿಯಲ್ಲಿ ತೋಟದ ಬಗ್ಗೆ ಆಸಕ್ತಿ ಇತ್ತು. ಬ್ಯಾಂಕ್‌ನಿಂದ ಆರ್ಥಿಕ ನೆರವು ದೊರೆತಿರುವುದರಿಂದ ವ್ಯವಸ್ಥಿತವಾಗಿ ಕೈತೋಟ ಮಾಡಿದ್ದೇವೆ. ಸಾವಯವ ಪದ್ಧತಿಯಲ್ಲಿ ಸಸಿಗಳನ್ನು ಬೆಳೆಸಲಾಗುತ್ತಿದೆ. ವಿವಿಧ ಸೊಪ್ಪುಗಳನ್ನು ಹಾಕಿದ್ದೇವೆ’ ಎಂದು ಮನೆ ಮಾಲೀಕರಾದ ಹರ್ಷದಾ ಪ್ರತಿಕ್ರಿಯಿಸಿದರು.

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಬಿ. ನಾಗರಾಜ್‌, ಪ್ರಾದೇಶಿಕ ವ್ಯವಸ್ಥಾಪ‍ಕ ಬಿ. ಶೇಖರ್‌ ಶೆಟ್ಟಿ, ಹಿರಿಯ ಪ್ರಬಂಧಕ ಉಲ್ಲಾಸ್‌ ಗುನಗಾ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry