ಎಪಿಎಂಸಿ ವಹಿವಾಟು: ವರದಿ ನೀಡಲು ಸೂಚನೆ

7
ಮಾವು ದರ ಕುಸಿತ; ರೈತರೊಂದಿಗೆ ಕೃಷಿ ಬೆಲೆ ಆಯೋಗದ ಅಧ್ಯಕ್ಷರ ಸಮಾಲೋಚನೆಟ

ಎಪಿಎಂಸಿ ವಹಿವಾಟು: ವರದಿ ನೀಡಲು ಸೂಚನೆ

Published:
Updated:

ರಾಮನಗರ: ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಮಾವು ಮಾರಾಟವೂ ಸೇರಿದಂತೆ ಸಂಪೂರ್ಣ ವ್ಯವಹಾರ, ಬಿಳಿಚೀಟಿ ದಂಧೆ ಕುರಿತು ತನಿಖೆ ನಡೆಸಿ ತಿಂಗಳ ಒಳಗೆ ವರದಿ ನೀಡುವಂತೆ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಅವರು ಜಿ.ಪಂ. ಸಿಇಒ ಅವರಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಮಾವು ಬೆಲೆ ದರ ಕುಸಿತ ಕುರಿತು ಅಧಿಕಾರಿಗಳು ಹಾಗೂ ರೈತ ಮುಖಂಡರೊಡನೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘ರೈತ ಬೆಳೆದ ಪ್ರತಿ ಉತ್ಪನ್ನವೂ ಎಪಿಎಂಸಿಗಳ ಮೂಲಕ ಮಾರುಕಟ್ಟೆಗೆ ಬರಬೇಕು. ಆದರೆ ರಾಜ್ಯದಲ್ಲಿ ವರ್ಷಕ್ಕೆ 18–20 ಲಕ್ಷ ಟನ್ ಮಾವು ಬೆಳೆಯತ್ತಿದ್ದರೂ ಎಪಿಎಂಸಿಗಳಿಗೆ ಮಾತ್ರ 80 ಸಾವಿರ ಟನ್‌ನಷ್ಟು ಉತ್ಪನ್ನ ಬರುತ್ತಿದೆ. ಉಳಿದೆಲ್ಲ ಹಣ್ಣು ಹೊರಗಡೆಯೇ ಮಾರಾಟ ಆಗುತ್ತಿರುವುದು ನಮ್ಮ ಮಾರಾಟ ವ್ಯವಸ್ಥೆಯನ್ನು ಅಣಕಿಸುವಂತೆ ಇದೆ. ರೈತರು ರಸ್ತೆಗೆ ಹಣ್ಣು ಸುರಿಯುವಂತಹ ಪರಿಸ್ಥಿತಿ ಎದುರಾಗಿರುವುದು ದುಃಖದ ಸಂಗತಿ. ದೀರ್ಘಕಾಲದಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯ ಇದೆ ಎಂದರು.

ಮಾವು ಸಂಸ್ಕರಣೆಯೂ ಸೇರಿದಂತೆ ಈ ಭಾಗದ ರೈತರಿಗೆ ಅನುಕೂಲವಾಗುವಂತೆ 100 ಎಕರೆ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಹಬ್ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು. ಹಾಪ್‌ಕಾಮ್ಸ್ ಹಾಗೂ ಎಪಿಎಂಸಿಗಳು ಜಂಟಿಯಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸುಧಾರಣೆಗೆ ಶ್ರಮಿಸುವಂತೆ ಕಿವಿಮಾತು ಹೇಳಿದರು.

ಎಪಿಎಂಸಿಯಲ್ಲಿ ನೀಡಲಾದ ಬಿಳಿಚೀಟಿಯನ್ನು ರೈತರೊಬ್ಬರು ಸಭೆಯಲ್ಲಿ ಜಿಲ್ಲಾಧಿಕಾರಿ ರಾಜೇಂದ್ರ ಅವರಿಗೆ ನೀಡಿದರು. ‘ಈ ರೀತಿಯ ಯಾವುದೇ ವ್ಯವಹಾರ ನಡೆಸುವಂತೆ ಇಲ್ಲ. ಲಿಖಿತ ದೂರು ನೀಡಿದರೆ ಅಂತಹವರ ಪರವಾನಗಿ ರದ್ದುಪಡಿಸುತ್ತೇನೆ. ಮುಂದೆ ಏನಾಗುತ್ತದೆಯೋ ನೋಡೋಣ’ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಪರಮಶಿವಮೂರ್ತಿ ಸಭೆಗೆ ಮಾಹಿತಿ ನೀಡಿ ‘ಈ ಬಾರಿ ರಾಮನಗರದಲ್ಲಿ ಮಾವು ಮಾರುಕಟ್ಟೆಗೆ ಬರುವುದು ತಡವಾಯಿತು. ನಿಫಾ ವೈರಸ್ ಭೀತಿಯಿಂದಾಗಿ ಹಾಗೂ ಮಳೆಯಿಂದಾಗಿ ಬೆಂಗಳೂರಿನಲ್ಲಿ ಮಾವು ಮಾರಾಟ ಕುಸಿಯಿತು. ನಿರೀಕ್ಷೆಗೂ ಮೀರಿದ ಉತ್ಪನ್ನ ಬಂದಿತು. ಹೀಗಾಗಿ ಮಾವಿನ ಬೆಲೆ ಕುಸಿದಿದೆ. ಕೋಲಾರದಲ್ಲಿ ಈಗಷ್ಟೇ ಮಾವು ಮಾರುಕಟ್ಟೆಗೆ ಬಂದಿದ್ದು, ಅಲ್ಲಿ ಬೆಲೆ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ’ ಎಂದರು.

ಹತ್ತು ಹಲವು ದೂರು: ಮಾವು ಬೆಳೆ ಕುಸಿತಕ್ಕೆ ಕಾರಣವಾದ ಅಂಶಗಳ ಕುರಿತು ರೈತ ಮುಖಂಡರು ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟರು.

‘ಶೇ 90ರಷ್ಟು ಉತ್ಪನ್ನವು ಎಪಿಎಂಸಿ ದಲ್ಲಾಳಿಗಳ ಮೂಲಕವೇ ಮಾರಾಟ ಆಗುತ್ತಿದೆ. ಆದರೆ ಅವರು ತೆರಿಗೆ ವಂಚಿಸಿ ಫ್ಯಾಕ್ಟರಿಗಳಿಗೆ ಹಣ್ಣು ಸರಬರಾಜು ಮಾಡುತ್ತಿದ್ದಾರೆ. ಕೃಷಿ ಮಾರುಕಟ್ಟೆಯಲ್ಲಿಯೇ ಈ ವ್ಯವಹಾರ ನಡೆದಿದ್ದರೂ ಅಧಿಕಾರಿಗಳು, ಆಡಳಿತ ವರ್ಗ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಳಿಚೀಟಿ ದಂಧೆ ವ್ಯಾಪಕವಾಗಿದೆ. ಪ್ರತಿ ಕ್ರೇಟ್‌ಗೆ 4 ಕೆ.ಜಿ. ಉತ್ಪನ್ನ ಕಳೆಯುವ ಜೊತೆಗೆ ಶೇ 10ರಷ್ಟು ಕಮಿಷನ್ ಪಡೆಯಲಾಗುತ್ತಿದೆ’ ಎಂದು ಬಹುತೇಕ ರೈತರು ಆರೋಪಿಸಿದರು.

‘2003ರ ನಂತರ ಕನಿಷ್ಠ ಬೆಲೆಗೆ ಕುಸಿದಿರುವುದು ಇದೇ ಮೊದಲು. ಎಪಿಎಂಸಿಯಲ್ಲಿನ ಅವ್ಯವಸ್ಥೆಯಿಂದಾಗಿ ಇಡೀ ಮಾರಾಟ ವ್ಯವಸ್ಥೆಯೇ ಕೆಲವರ ಹಿಡಿತಕ್ಕೆ ಸಿಕ್ಕಿದೆ. ಇದರಿಂದ ರೈತರು ಹೆಚ್ಚು ನಷ್ಟ ಅನುಭವಿಸುವಂತಾಗಿದೆ’ ಎಂದು ಪ್ರಗತಿಪರ ರೈತ ಪ್ರಾಣೇಶ್ ದೂರಿದರು.

‘ರೈತರನ್ನು ವ್ಯವಸ್ಥಿತವಾಗಿ ತುಳಿಯುವ ಹುನ್ನಾರದಿಂದ ಈ ಪರಿಸ್ಥಿತಿ ಉಂಟಾಗಿದೆ. ಎಪಿಎಂಸಿಗೆ ಬರುವ ರೈತರಿಗೆ ಪ್ರವೇಶ ದ್ವಾರದಲ್ಲಿಯೇ ಉತ್ಪನ್ನದ ತೂಕದ ಚೀಟಿ ನೀಡಬೇಕು. ಹೊರ ಹೋಗುವ ಉತ್ಪನ್ನದ ಲೆಕ್ಕ ಇಡಬೇಕು. ಮಾವು ಮೌಲ್ಯವರ್ಧನೆಗೆ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು. ಬಿಳಿಚೀಟಿ ದಂಧೆಯನ್ನು ಸಂಪೂರ್ಣ ನಿಲ್ಲಿಸಬೇಕು’ ಎಂದು ಸಿ. ಪುಟ್ಟಸ್ವಾಮಿ ಹೇಳಿದರು.

‘ಮಾರುಕಟ್ಟೆಯಲ್ಲಿ ಬಿಳಿಚೀಟಿ ವ್ಯವಹಾರ ನಡೆದ ಬಗ್ಗೆ ಯಾವುದೇ ದೂರು ಬಂದಿಲ್ಲ. ಬಂದರೆ ಕ್ರಮ ಕೈಗೊಳ್ಳುತ್ತೇವೆ’ ಎಂದು ರಾಮನಗರ ಎಪಿಎಂಸಿ ಅಧ್ಯಕ್ಷ ಪುಟ್ಟರಾಮಯ್ಯ ಅವರ ಹೇಳಿಕೆಗೆ ರೈತ ಸಂಘದ ಮುಖಂಡರಾದ ಲಕ್ಷ್ಮಣಸ್ವಾಮಿ, ಕೆ.ಮಲ್ಲಯ್ಯ, ಪ್ರಗತಿಪರ ರೈತ ಬಿಳಗುಂಬ ವಾಸು ಇತರರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳ ನಿರ್ಲಕ್ಷ್ಮದಿಂದಲೇ ಈ ಪರಿಸ್ಥಿತಿ ಬಂದೊದಗಿದೆ ಎಂದು ದೂರಿದರು.

ಸದ್ಯ ರಾಮನಗರದಲ್ಲಿ ಇನ್ನೂ ಶೇ 15–20ರಷ್ಟು ಮಾವು ತೋಟದಲ್ಲಿಯೇ ಉಳಿದಿದ್ದು, ಅದನ್ನು ಖರೀದಿಸಿ ಶಾಲೆಗಳಲ್ಲಿ ಹಾಲು ಮೊಟ್ಟೆಯ ಬದಲಿಗೆ ನೀಡಬೇಕು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಬೇಕು ಎಂದು ರೈತರು ಸಲಹೆ ನೀಡಿದರು. ರೇಷ್ಮೆ ಮಾರುಕಟ್ಟೆ ಮಾದರಿಯಲ್ಲಿಯೇ ಎಪಿಎಂಸಿಗಳಲ್ಲಿಯೂ ಸಂಪೂರ್ಣ ಆನ್‌ಲೈನ್ ಮಾರಾಟ ವ್ಯವಸ್ಥೆ ಜಾರಿಗೆ ತರುವಂತೆ ವಕೀಲರ ಸಂಘದ ಅಧ್ಯಕ್ಷ ಶಾಂತಪ್ಪ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಮುಲ್ಲೈ ಮುಹಿಲನ್, ಬೆಂಗಳೂರು ಕೃಷಿ ವಿ.ವಿ.ಯ ಮಾರುಕಟ್ಟೆ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಗ್ರೇಸಿ ಸಿಂಗ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಸ್.ಎಂ. ದೀಪಜಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಗುಣವಂತ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ದೇವರಾಜು, ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಸಿದ್ದರಾಜು, ಧರಣೇಶ್‌, ನಂಜಪ್ಪ, ಹಾಪ್‌ಕಾಮ್ಸ್ ಅಧಿಕಾರಿ ವಿಶ್ವನಾಥ್‌ ಇದ್ದರು.

ಎಪಿಎಂಸಿ ಅಧಿಕಾರಿಗಳ ವಿರುದ್ಧ ಅಸಮಾಧಾನ

ಸಭೆಗೆ ಸರಿಯಾಗಿ ಮಾಹಿತಿ ನೀಡಿದ ಎಪಿಎಂಸಿ ಕಾರ್ಯದರ್ಶಿಗಳ ವಿರುದ್ಧ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ‘ಈ ಋತುವಿನಲ್ಲಿ ರಾಮನಗರ ಮಾರುಕಟ್ಟೆಗೆ 64,127 ಕ್ವಿಂಟಲ್ ಹಾಗೂ ಚನ್ನಪಟ್ಟಣಕ್ಕೆ 1.85 ಲಕ್ಷ ಕ್ವಿಂಟಲ್ ಮಾವು ಆವಕವಾಗಿದೆ’ ಎಂದು ಕಾರ್ಯದರ್ಶಿಗಳು ಮಾಹಿತಿ ನೀಡಿದರು. ಆದರೆ ಬಿಳಿಚೀಟಿ ದಂಧೆ ಹಾಗೂ ಅದರಿಂದ ಎಪಿಎಂಸಿಗಳಿಗೆ ಆಗುತ್ತಿರುವ ಸೆಸ್‌ ನಷ್ಟದ ಕುರಿತು ಮಾಹಿತಿ ನೀಡಲಿಲ್ಲ. ಇದರಿಂದ ಕುಪಿತಗೊಂಡ ಜಿಲ್ಲಾಧಿಕಾರಿ, ಇಬ್ಬರೂ ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.ಎಪಿಎಂಸಿಗೆ ಭೇಟಿ: ರೈತರ ವಾಗ್ದಾದ

ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಮಂಗಳವಾರ ಸಂಜೆ ರಾಮನಗರದ ಎಪಿಎಂಸಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲಿಸಿದರು. ಬಿಳಿ ಚೀಟಿ ವಿತರಣೆಗೆ ಕುರಿತು ಮಾಹಿತಿ ಪಡೆದರು. ಈ ಸಂದರ್ಭ ಅಲ್ಲಿದ್ದ ಕೆಲವು ರೈತರು ಹಾಗೂ ದಲ್ಲಾಳಿಗಳು ಅಧ್ಯಕ್ಷರು ಹಾಗೂ ಅಧಿಕಾರಿಗಳ ಜೊತೆ ವಾಗ್ದಾದ ನಡೆಸಿದರು ಎನ್ನಲಾಗಿದೆ. ‘ಬೆಳಗ್ಗೆ ನಡೆದ ಸಭೆಗೆ ಕೆಲವರನ್ನಷ್ಟೇ ಆಹ್ವಾನಿಸಲಾಗಿತ್ತು. ಇಡೀ ಮಾರುಕಟ್ಟೆ ವ್ಯವಸ್ಥೆಗೆ ಕುರಿತು ಚರ್ಚೆ ನಡೆಸಿಲ್ಲ. ನಮ್ಮ ಅಭಿಪ್ರಾಯ ಕೇಳಿಲ್ಲ’ ಎಂದು ರೈತ ಮುಖಂಡ ಎಂ.ಡಿ. ಶಿವಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದರು.‘ಪ್ರಜಾವಾಣಿ’ ವರದಿ ಫಲಶ್ರುತಿ

ರಾಮನಗರದಲ್ಲಿ ಮಾವು ದರ ಕುಸಿತದಿಂದಾಗಿ ರೈತರು ಉತ್ಪನ್ನವನ್ನು ರಸ್ತೆಗೆ ಸುರಿಯುತ್ತಿರುವ ಕುರಿತು ‘ಪ್ರಜಾವಾಣಿ’ಯು ಜೂನ್ 2ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು. ‘ಮಾರುಕಟ್ಟೆಯಲ್ಲಿ ಇಷ್ಟೆಲ್ಲ ತಲ್ಲಣಗಳು ನಡೆದಿದ್ದರೂ ಅಧಿಕಾರಿಗಳು ನಮ್ಮ ಗಮನಕ್ಕೆ ತಂದಿರಲಿಲ್ಲ. ಪತ್ರಿಕೆ ವರದಿ ನೋಡಿ ಅರಿವಾಯಿತು. ಹೀಗಾಗಿ ತುರ್ತು ಸಭೆ ಆಯೋಜಿಸಿ ರೈತರ ಅಹವಾಲು ಕೇಳಲು ಬಂದಿದ್ದೇವೆ’ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಹೇಳಿದರು.

ಮಾವಿನ ದರ ಕುಸಿತದಿಂದ ರೈತರು ನಷ್ಟ ಅನುಭವಿಸಿದ್ದು, ಅದಕ್ಕೆ ಕೈಗೊಳ್ಳಬಹುದಾದ ತತ್ಕಾಲದ ಕ್ರಮಗಳು ಭವಿಷ್ಯದ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಶೀಘ್ರ ನಿರ್ಧಾರ ಪ್ರಕಟಿಸಲಾಗುವುದು

ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ, ಅಧ್ಯಕ್ಷ, ಕರ್ನಾಟಕ ಕೃಷಿ ಬೆಲೆ ಆಯೋಗ

ಇಡೀ ಮಾರುಕಟ್ಟೆ ವ್ಯವಸ್ಥೆ ಸುಧಾರಣೆ ಆಗದ ಹೊರತು ರೈತರ ಗೋಳು ತಪ್ಪದು. ಎಪಿಎಂಸಿಗಳಿಂದಲೇ ಮೊದಲು ಸುಧಾರಣೆ ಆರಂಭವಾಗಬೇಕಿದೆ

ಸಿ.ಪುಟ್ಟಸ್ವಾಮಿ, ರೈತ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry