ಎಲ್ಲರೂ ಕನಿಷ್ಠ ಒಂದು ಸಸಿ ನೆಡಿ: ಅನಿರುದ್ಧ

7
ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ, ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ

ಎಲ್ಲರೂ ಕನಿಷ್ಠ ಒಂದು ಸಸಿ ನೆಡಿ: ಅನಿರುದ್ಧ

Published:
Updated:

ಬೀದರ್‌: ‘ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರು ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಬೆಳೆಸಬೇಕು’ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಮನವಿ ಮಾಡಿದರು.

ಜಿಲ್ಲಾ ಆಡಳಿತದ ವತಿಯಿಂದ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶುದ್ಧ ಪರಿಸರಕ್ಕಾಗಿ ಪ್ರತಿಯೊಂದು ಮನೆಯ ಎದುರು ಒಂದು ಸಸಿ ನೆಡಬೇಕು. ಗಿಡ, ಮರಗಳನ್ನು ಕಡಿದು ಹಾಕಿರುವ ಕಾರಣ ಸಕಾಲದಲ್ಲಿ ಮಳೆಯಾಗುತ್ತಿಲ್ಲ. ಆಮ್ಲಜನಕದ ಕೊರತೆಯೂ ಎದುರಾಗುತ್ತಿದೆ’ ಎಂದು ಹೇಳಿದರು.

‘ಪಾಸ್ಟಿಕ್‌ ಪರಿಸರಕ್ಕೆ ಮಾರಕವಾಗಿದೆ. ಬೀದರ್‌ ಪ್ಲಾಸ್ಟಿಕ್‌ ಮುಕ್ತ ಜಿಲ್ಲೆಯಾಗಬೇಕು. ಪಾಸ್ಟಿಕ್‌ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ಎಂದರು.

‘ಬೀದರ್‌ ಸಂಪತ್ಭರಿತ ಜಿಲ್ಲೆಯಾಗಿದೆ. ಇಲ್ಲಿಯ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಜಿಲ್ಲಾ ಆಡಳಿತ ಬದ್ಧವಾಗಿದೆ’ ಎಂದು ತಿಳಿಸಿದರು.

ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ.ತೋಡುಕರ್ ಮಾತನಾಡಿ,‘ಜಿಲ್ಲೆಯಲ್ಲಿ ಈ ವರ್ಷ ಏಳು ಲಕ್ಷ ಸಸಿ ನೆಡುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ತಿಳಿಸಿದರು.

ಸಾವಯವ ಕೃಷಿಕ ವೀರಭೂಷಣ ನಂದಗಾವೆ ಪ್ರಮುಖ ಭಾಷಣ ಮಾಡಿದರು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿದ್ದರು. ಬೀದರ್‌ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ. ಗಾಮನಗಟ್ಟಿ ಇದ್ದರು. ಬಾಬು ಪ್ರಭಾಜಿ ನಿರೂಪಿಸಿದರು.

ಪರಿಸರ ಜಾಗೃತಿಗೆ ಮ್ಯಾರಥಾನ್‌: ಇಲ್ಲಿಯ ಕೋಟೆ ಆವರಣದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಮಿನಿ ಮ್ಯಾರಥಾನ್‌ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವೆಂಕಟರಾಜು ಸಿ.ಎನ್, ಆಯುಕ್ತ ಮನೋಹರ, ಅರಣ್ಯ ಇಲಾಖೆಯ ಅಧಿಕಾರಿ ಕೆ.ಎಂ. ಗಾಮನಗಟ್ಟಿ, ಎಂ.ಡಿ.ತೋಡುರಕರ್, ಪ್ರವಾಸೋದ್ಯಮ ಇಲಾಖೆಯ ಕಿಶೋರ ಜೋಶಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತಿಜ್ಞಾ ವಿಧಿ ಬೋಧನೆ: ನಾನು ಪ್ಲಾಸ್ಟಿಕ್‌ ಬಳಸುವುದಿಲ್ಲ. ಸ್ವಚ್ಛತೆಗೆ ಆದ್ಯತೆ ಕೊಡುತ್ತೇನೆ. ಸಸಿ ನೆಡುವ ಜೊತೆಗೆ ಅವುಗಳನ್ನು ಪೋಷಿಸುತ್ತೇನೆ. ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗೆ ಕೈಜೋಡಿಸುತ್ತೇನೆ. ನೀರನ್ನು ಮಿತವಾಗಿ ಬಳಸುತ್ತೇನೆ. ಪರಿಸರ ಸಂರಕ್ಷಣೆಗೆ ಪಣ ತೊಡುತ್ತೇನೆ ಎನ್ನುವ ಪ್ರತಿಜ್ಞಾವಿಧಿಯನ್ನು ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೆ ಬೋಧಿಸಲಾಯಿತು.

ಸ್ವಚ್ಛತಾ ಕಾರ್ಯ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಪಾಪನಾಶ ಕೆರೆ ಸ್ವಚ್ಛತಾ ಕಾರ್ಯ ನಡೆಯಿತು. ಯುವಾ ಸ್ವಯಂ ಸೇವಾ ಸಂಸ್ಥೆ, ಸ್ಕೌಟ್ ಮತ್ತು ಗೈಡ್ಸ್, ಎನ್‌ಸಿಸಿ, ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಪಾಪನಾಶ ಕೆರೆ, ಅಲಿಯಾಬಾದ್ ಸಿದ್ಧೇಶ್ವರ ದೇವಸ್ಥಾನ ಹಾಗೂ ಪ್ರವಾಸಿ ತಾಣಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

ಸಸ್ಯಾರೋಪಣ

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣ, ಶಹಾಪುರ ಗೇಟ್ ಹತ್ತಿರದ ಟ್ರೀ ಪಾರ್ಕ್‌, ಹೈದರಾಬಾದ್ ರಸ್ತೆ ಬದಿಯ ಪ್ರದೇಶದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.

‘ಹಸಿರೇ ಉಸಿರು’, ‘ಪ್ಲಾಸ್ಟಿಕ್ ಬಳಕೆ ಬಿಡೋಣ ನೆಮ್ಮದಿಯಿಂದ ಬದುಕೋಣ’ ಎನ್ನುವ ವಿಷಯಗಳ ಮೇಲೆ ಸರ್ಕಾರಿ ಐಟಿಐ ಸಂಸ್ಥೆಯ ಆವರಣದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಿತು.

ಜಿಲ್ಲಾಧಿಕಾರಿ ಸ್ಪರ್ಧೆಗೆ ಚಾಲನೆ ನೀಡಿದರು. 18 ಕಲಾವಿದರು, ಚಿತ್ರ ಕಲಾವಿದ ಯೋಗೇಶ ಮಠದ ಸಮ್ಮುಖದಲ್ಲಿ ಕಲಾಕೃತಿ ರಚಿಸಿ ಗಮನ ಸೆಳೆದರು.

ಸಾರ್ವಜನಿಕ ಪ್ರಕಟಣೆ ವಿತರಣೆ:

ಈ ಅಂಗಡಿ ಪಾಲಿಥಿನ್ ಚೀಲಗಳನ್ನು ಬಳಸುವುದಿಲ್ಲ. ನಾಗರಿಕರು ಬಟ್ಟೆ ಚೀಲಗಳನ್ನು ತರಬೇಕು. ಪ್ಲಾಸ್ಟಿಕ್ ಬಳಕೆ ಅಪರಾಧ ಎನ್ನುವ ಮಾಹಿತಿಯನ್ನೊಳಗೊಂಡ ಕನ್ನಡ, ಆಂಗ್ಲ ಮತ್ತು ಉರ್ದು ಭಾಷೆಯಲ್ಲಿ ಪ್ರಕಟಿಸಿದ ಪ್ಲಾಸ್ಟಿಕ್ ಮುಕ್ತ ಬೀದರ್‌ ಎನ್ನುವ ಸಾರ್ವಜನಿಕ ಪ್ರಕಟಣೆಯನ್ನು ಅಂಬೇಡ್ಕರ್ ವೃತ್ತದ ಹತ್ತಿರದ ವಿವಿಧ ಅಂಗಡಿಗಳಿಗೆ ಜಿಲ್ಲಾಧಿಕಾರಿ ಹಾಗೂ ನಗರಸಭೆ ಅಧ್ಯಕ್ಷೆ ಶಾಲಿನಿರಾಜು ಚಿಂತಾಮಣಿ ಅಂಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry