ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ 1500 ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಚಾಲನೆ: ಕುಮಾರಸ್ವಾಮಿ

‘ಐದು ವರ್ಷಗಳ ಸುಭದ್ರ ಸರ್ಕಾರ’
Last Updated 6 ಜೂನ್ 2018, 12:38 IST
ಅಕ್ಷರ ಗಾತ್ರ

ಬೆಂಗಳೂರು: 'ಪೂರ್ಣ ಪ್ರಮಾಣದಲ್ಲಿ ಸರ್ಕಾರ ರಚನೆ ಆಗುವ ಮೊದಲೇ ನಾನು– ಡಿಸಿಎಂ ಹಲವು ಸಭೆ ಮಾಡಿದ್ದೇವೆ. ಮೂರು ದಿನಗಳ ಹಿಂದೆ ಬಿಬಿಎಂಪಿ ಅಧಿಕಾರಿಗಳ ಸಭೆ ಮಾಡಿದ್ದೇನೆ. 1500ಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಲು ನಗರಪಾಲಿಕೆಯಿಂದ ಕೆಲಸ ಆಗುತ್ತಿವೆ. 3800ಕ್ಕೂ ಹೆಚ್ಚು ಗುಂಡಿಗಳ ಮಾಹಿತಿಯನ್ನು ನಾನು ಪಡೆದುಕೊಂಡಿದ್ದೇನೆ' ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಬುಧವಾರ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕೆಲವು ಬಾರಿ ಒಂದೇ ಪಕ್ಷದ ಸರ್ಕಾರ ರಚನೆ ಮಾಡುವಾಗ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಮ್ಮಿಶ್ರ ಸರ್ಕಾರದ ರಚನೆಯಾದ ತಕ್ಷಣ ಅಭಿವೃದ್ಧಿ ಆಗಲ್ಲ ಎಂದು ಮಾಧ್ಯಮಗಳು ಯೋಚನೆ ಮಾಡುತ್ತವೆ. ಮಾಧ್ಯಮಗಳಲ್ಲಿ ಬೆಂಗಳೂರು ನಗರದ ರಸ್ತೆ ಗುಂಡಿಗಳ ಬಗ್ಗೆ ಪ್ರಸ್ತಾಪಿಸುತ್ತಿರುವುದನ್ನು ಅಧಿಕಾರಿಗಳು ಗಮನಕ್ಕೆ ತಂದರು. ಆದರೆ, ಪೂರ್ಣ ಪ್ರಮಾಣದಲ್ಲಿ ಸರ್ಕಾರ ರಚನೆ ಆಗುವ ಮೊದಲೇ ನಾನು– ಡಿಸಿಎಂ ಈ ಕುರಿತು ಹಲವು ಸಭೆ ಮಾಡಿದ್ದೇವೆ’ ಎಂದರು. 

‘ಈ ಗುಂಡಿಗಳನ್ನು ಸುಮ್ಮನೆ ಕಾಟಾಚಾರಕ್ಕೆ ಮುಚ್ಚಲು ಆಗುವುದಿಲ್ಲ. ಶಾಶ್ವತ ಕೆಲಸ ಮಾಡಿಸುತ್ತೇನೆ. ಇವತ್ತು ರಾಜ್ಯದಲ್ಲಿ ಸಚಿವ ಸಂಪುಟ ರಚನೆ ಆಗಿದೆ. ನಾನು ಮತ್ತು ಉಪಮುಖ್ಯಮಂತ್ರಿಗಳನ್ನು ಒಳಗೊಂಡಂತೆ 27 ಸಚಿವರು, ಕೆಲವು ಹಿರಿಯ ಅನುಭವಸ್ಥ ಸದಸ್ಯರು ಇದ್ದಾರೆ. ಕೆಲವರು ಹೊಸದಾಗಿ ಆಯ್ಕೆಯಾದ ಮೊದಲ ಬಾರಿಗೆ ಮಂತ್ರಿಯಾದವರೂ ಇದ್ದಾರೆ. ಈ ರಾಜ್ಯದಲ್ಲಿ ಮುಂದಿನ ದಿನಗಳು ಪ್ರಾಮಾಣಿಕವಾಗಿ ಉತ್ತಮ ಆಡಳಿತ ನೀಡಲು ಸರ್ಕಾರ ಜನತೆಯ ವಿಶ್ವಾಸ ಪಡೆಯುವ ನಿಟ್ಟಿನಲ್ಲಿ ನಾವು ಔಪಚಾರಿಕ ಸಭೆ ಮಾಡಿದ್ದೇವೆ. ನಮ್ಮ ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳ ಪ್ರಣಾಳಿಕೆಗಳು ಅನುಷ್ಠಾನಕ್ಕೆ ತರಬೇಕು. ನಾವು ಪರಸ್ಪರ ಸಮ್ಮಿಶ್ರ ಸರ್ಕಾರದಲ್ಲಿ ಜನತೆಯ ವಿಶ್ವಾಸವನ್ನು ಗಳಿಸಲು ಸರ್ಕಾರದ ನಡವಳಿಕೆ ಹೇಗೆ ಇರಬೇಕು ಎಂಬುದನ್ನು ಚರ್ಚೆ ಮಾಡಿದ್ದೇವೆ’ ಎಂದು ತಿಳಿಸಿದರು. 

‘2008ರಲ್ಲಿ ಬಿಜೆಪಿಯ ಸ್ವತಂತ್ರ ಸರ್ಕಾರ ಕೆಲವು ಭಾಗದಲ್ಲಿ ಮಂತ್ರಿಗಳನ್ನು ಮಾಡಲಿಲ್ಲ ಅಂತ ಸರ್ಕಾರಿ ವಾಹನ, ಬಸ್‌ಗಳನ್ನು ಸುಟ್ಟರು. ಸಂಪುಟ ರಚನೆಯಾಗಬೇಕಾದರೆ ಇತ್ತೀಚೆಗೆ ಕೆಲವರು ಭಾವೋದ್ವೇಗದಲ್ಲಿ ಪ್ರತಿಭಟನೆ ನಡೆಸುವುದು ಸಹಜ. ಈ ಸರ್ಕಾರದಲ್ಲಿಯೇ ಪ್ರಕರಣ ಆರಂಭವಾಯಿತು ಅಂತ ಏನೂ ಇಲ್ಲ. 2008ರಲ್ಲಿ ಬಿಜೆಪಿ ಸರ್ಕಾರ ಆದಾಗ ಆನೇಕಲ್, ಹುಬ್ಬಳ್ಳಿ, ಹಾವೇರಿಯಲ್ಲಿ ಏನಾಯಿತು ಅಂತ ನನಗೆ ಗೊತ್ತಿದೆ’ ಎಂದರು. 

ಈ ಸರ್ಕಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮೂಲಕ, ಐದು ವರ್ಷಗಳ ಸುಭದ್ರ ಸರ್ಕಾರ ಕೊಡುತ್ತೇವೆ. ಸರ್ಕಾರ ಪಾಸಿಟಿವ್ ಡೈರೆಕ್ಷನ್‌ನಲ್ಲಿ ಕೊಂಡೊಯ್ಯುವತ್ತ ಪ್ರಯತ್ನಿಸ್ತೀನಿ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT