ನಿರಂತರ ಕಾಡಾನೆಗಳ ಹಾವಳಿ ಅರಣ್ಯ ಇಲಾಖೆ ಗಮನ ಹರಿಸಲು ಮನವಿ

7

ನಿರಂತರ ಕಾಡಾನೆಗಳ ಹಾವಳಿ ಅರಣ್ಯ ಇಲಾಖೆ ಗಮನ ಹರಿಸಲು ಮನವಿ

Published:
Updated:
ನಿರಂತರ ಕಾಡಾನೆಗಳ ಹಾವಳಿ ಅರಣ್ಯ ಇಲಾಖೆ ಗಮನ ಹರಿಸಲು ಮನವಿ

ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಇತ್ತೀಚಿನ ಕೆಲ ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಗ್ರಾಮಸ್ಥರು ಆತಂಕದಿಂದ ಜೀವನ ನಡೆಸುವಂತಾಗಿದೆ.

ಪ್ರತಿನಿತ್ಯ ಈ ಭಾಗಗಳಲ್ಲಿ ರಾತ್ರಿ ಹಗಲೆನ್ನದೇ ಎಲ್ಲೆಂದರಲ್ಲಿ ಕಾಡಾನೆಗಳು ಕಂಡು ಬರುತ್ತಿದ್ದು, ಈ ಭಾಗದ ಜನರನ್ನು ಚಿಂತೆಗೀಡು ಮಾಡಿದೆ.

ನಾಕೂರು ಕಾನ್‌ಬೈಲ್ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಕಾಡಾನೆಗಳ ಉಪಟಳದಿಂದ ಬೇಸತ್ತಿರುವ ಬಗ್ಗೆ ಗ್ರಾಮಸ್ಥರಾದ ಚಂದ್ರ, ತಿಮ್ಮಪ್ಪ, ರಮೇಶ, ಸಂಜೀವ, ರಾಮಣ್ಣ, ಕುಮಾರ, ಜೈ ಸುಂದರ, ರಾಮೇಗೌಡ ಇವರುಗಳು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪರಿಹಾರ ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಈ ಭಾಗದಲ್ಲಿ ಕಾಡಿನಿಂದ ಕಾಡಾನೆಗಳು ಆಹಾರವನ್ನು ಹುಡುಕುತ್ತಾ ಬಂದು ಕಾಫಿತೋಟ, ಗದ್ದೆಗಳಿಗೆ ಲಗ್ಗೆಯಿಡುತ್ತಿವೆ. ತೋಟದ ಬೇಲಿಯನ್ನು ಧ್ವಂಸಗೊಳಿಸಿ ಬಾಳೆ ಗಿಡ, ಹಣ್ಣಿನ ಫಸಲು, ತೋಟದಲ್ಲಿದ್ದ ಹಲಸಿನ ಹಣ್ಣು ತಿಂದು ಮನೆ ಸಮೀಪವೇ ಓಡಾಡುತ್ತಿರುವುದರಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ಇದೀಗ ಮೂರು ವಾರದಿಂದ ಶಾಂತ ಗೇರಿ, ಎಮ್ಮೆಗುಂಡಿ, ಮಂಜಿಕರೆ, ನೆಟ್ಲಿ ಬಿ, ಕಾನ್‌ಬೈಲ್, ಕೊಡಗರ ಹಳ್ಳಿ, ಬೈಚನ ಹಳ್ಳಿ, ಕೆದಕಲ್, ಹೊರೂರು ಈ ಭಾಗದ ತೋಟಗಳಲ್ಲಿ ಕಾಡಾನೆಗಳು ತಿರುಗಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

‘ಕೆದಕಲ್ ಗ್ರಾ.ಪಂ. ವ್ಯಾಪ್ತಿಯ ಹೊರೂರು ಭಾಗದಲ್ಲಿ ಕಾಡಾನೆಗಳು ದಿನನಿತ್ಯ ತಿರುಗಾಡುತ್ತಿದ್ದು, ಸಂಜೆ 6 ಗಂಟೆಯ ನಂತರ ಜನರು ಮನೆಯಿಂದ ಹೊರಬರದ ಸ್ಥಿತಿ ಎದುರಾಗಿದೆ. ಎಲ್ಲಿ ನೋಡಿದರಲ್ಲಿ ಆನೆಗಳ ಕಾಲು ಗುರುತುಗಳೇ ಗೋಚರಿಸುತ್ತವೆ. ಯಾವುದೇ ಸಭೆ–ಸಮಾರಂಭಗಳಿಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಕಾಫಿ ಬೆಳೆಗಾರ ಸಿ.ಎ.ಕರುಂಬಯ್ಯ. ಕಾಫಿ ತೋಟದಲ್ಲಿಯೇ ಕಾಡಾನೆಗಳು ಹೆಚ್ಚಾಗಿ ತಿರುಗುವುದರಿಂದ ತೋಟದ ಮಾಲೀಕರು, ಕಾರ್ಮಿಕರು, ಶಾಲಾ ಮಕ್ಕಳು, ಸಾರ್ವಜನಿಕರು ರಾತ್ರಿ ಹಗಲು ತಿರುಗಾಡಲು ಹೆದರುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಒಂದೆಡೆ ಕಾರ್ಮಿಕರ ಕೊರತೆಯಿಂದ ನಲುಗಿರುವ ತೋಟದ ಮಾಲೀಕರು, ಮತ್ತೊಂದೆಡೆ, ಇರುವ ಕಾರ್ಮಿಕರು ಕಾಡಾನೆಗಳ ಓಡಾಟದಿಂದ ಕೆಲಸಕ್ಕೆ ಬರಲು ಹಿಂಜರಿಯುತ್ತಿರುವುದರಿಂದ ಸಮಯಕ್ಕೆ ಸರಿಯಾಗಿ ಕೆಲಸ ಕಾರ್ಯಗಳು ನಡೆಯದೆ ನಷ್ಟ ಅನುಭವಿಸುವಂತಾಗಿದೆ.

ಅಷ್ಟು ಮಾತ್ರವಲ್ಲ, ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಈ ಭಾಗಕ್ಕೆ ಬಾಡಿಗೆ ವಾಹನಗಳು ಬರಲು ಹಿಂದೇಟು ಹಾಕುತ್ತಿರುವುದರಿಂದ ಇನ್ನಷ್ಟು ಸಮಸ್ಯೆಗಳು ಉಲ್ಬಣವಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.ಈ ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಲಿ. ಲಿಖಿತ ಮನವಿಗೆ ಮಾತ್ರ ಸ್ಪಂದಿಸದೇ ದೂರವಾಣಿ ಕರೆಗೂ ಸ್ಪಂದನೆ ನೀಡಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry