ಗೃಹ ಸಾಲದ ಮಿತಿ ಹೆಚ್ಚಳ

7

ಗೃಹ ಸಾಲದ ಮಿತಿ ಹೆಚ್ಚಳ

Published:
Updated:
ಗೃಹ ಸಾಲದ ಮಿತಿ ಹೆಚ್ಚಳ

ಮುಂಬೈ: ಆದ್ಯತಾ ವಲಯದ ವ್ಯಾಪ್ತಿಗೆ ಬರುವ ಗೃಹ ಸಾಲದ ಮಿತಿಯನ್ನು ಆರ್‌ಬಿಐ ಹೆಚ್ಚಿಸಿರುವುದರಿಂದ ಕೈಗೆಟುಕುವ ಗೃಹ ನಿರ್ಮಾಣ ಸಾಲಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ.

ನಷ್ಟಪೀಡಿತ ಕೇಂದ್ರೋದ್ಯಮಗಳಿಗೆ ಸೇರಿದ ಹೆಚ್ಚುವರಿ ಭೂಮಿಯನ್ನು ಕೈಗೆಟುಕುವ ಗೃಹ ನಿರ್ಮಾಣ ಯೋಜನೆಗಳಿಗೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಕೂಡ ಇಂತಹ ಗೃಹ ನಿರ್ಮಾಣ ಯೋಜನೆಗಳಿಗೆ ಉತ್ತೇಜನ ನೀಡಲಿದೆ.

ಆದ್ಯತಾ ವಲಯದ ವ್ಯಾಪ್ತಿಗೆ ಬರುವ ಗೃಹ ಸಾಲ ಮಿತಿಯನ್ನು ಮಹಾನಗರಗಳಲ್ಲಿ ಸದ್ಯದ ₹ 28 ಲಕ್ಷದಿಂದ ₹35 ಲಕ್ಷಕ್ಕೆ ಮತ್ತು ಇತರ ನಗರಗಳಲ್ಲಿನ ಮಿತಿಯನ್ನು ₹ 20 ಲಕ್ಷದಿಂದ ₹ 25 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ತಿಂಗಳಾಂತ್ಯಕ್ಕೆ ಸುತ್ತೋಲೆ ಹೊರಡಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.

ಕೈಗೆಟುಕುವ ವಸತಿ ಯೋಜನೆಗಳ ಅಪಾರ್ಟ್‌ಮೆಂಟ್‌ಗಳ ಒಟ್ಟಾರೆ ವೆಚ್ಚವು, 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ನಗರಗಳಲ್ಲಿ ₹ 45 ಲಕ್ಷ ಮತ್ತು ಇತರ ನಗರಗಳಲ್ಲಿ ₹ 30 ಲಕ್ಷ ಮೀರಬಾರದು ಎಂದು ನಿಗದಿಪಡಿಸಲಾಗಿದೆ.

‘ಈ ನಿರ್ಧಾರದಿಂದ ಎಲ್ಲರಿಗೂ ಸೂರು ಒದಗಿಸುವ ಕಾರ್ಯಕ್ರಮಕ್ಕೆ ಭಾರಿ ಉತ್ತೇಜನ ಸಿಗಲಿದೆ. ಗೃಹ ಸಾಲಕ್ಕೆ ಸಂಬಂಧಿಸಿದಂತೆ ಆದ್ಯತಾ ವಲಯದ ಸಾಲದ ಮಿತಿಯನ್ನು ಹೆಚ್ಚಿಸಿರುವುದರಿಂದ ಬ್ಯಾಂಕ್‌ ಸಾಲಕ್ಕೆ ಬೇಡಿಕೆ ಹೆಚ್ಚಲಿದೆ’ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಯುಸಿಬಿಗೆ ಬ್ಯಾಂಕ್‌ ಸ್ಥಾನಮಾನ:  ಪಟ್ಟಣ ಸಹಕಾರಿ ಬ್ಯಾಂಕ್‌ಗಳನ್ನು (ಯುಸಿಬಿ) ಕಿರು ಹಣಕಾಸು ಬ್ಯಾಂಕ್‌ಗಳನ್ನಾಗಿ ಪರಿವರ್ತಿಸುವ ಯೋಜನೆಯನ್ನು ಆರ್‌ಬಿಐ ಶೀಘ್ರದಲ್ಲಿಯೇ ಪ್ರಕಟಿಸಲಿದೆ. ಕೆಲ ‘ಯುಸಿಬಿ’ಗಳಿಂದ ಇಂತಹ ಬೇಡಿಕೆ ಕಂಡು ಬಂದಿದೆ ಎಂದು ಡೆಪ್ಯುಟಿ ಗವರ್ನರ್‌ ಎನ್‌. ಎಸ್‌. ವಿಶ್ವನಾಥನ್‌ ಹೇಳಿದ್ದಾರೆ.

ಸುಗ್ರೀವಾಜ್ಞೆಗೆ ಅಂಕಿತ

ದಿವಾಳಿ ಸಂಹಿತೆಯ (ತಿದ್ದುಪಡಿ)  ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮ ನಾಥ ಕೋವಿಂದ ಅವರು ಅಂಕಿತ ಹಾಕಿದ್ದಾರೆ.  ದಿವಾಳಿ ಅಂಚಿನಲ್ಲಿರುವ ರಿಯಲ್‌ ಎಸ್ಟೇಟ್‌ ಕಂಪನಿಗಳಿಂದ ಮನೆಗಳನ್ನು ಖರೀದಿಸಿದವರಿಗೆ ಇದರಿಂದ ಪ್ರಯೋಜನ ಆಗಲಿದೆ.

ಮನೆ ಖರೀದಿಯ ಉದ್ದೇಶದಿಂದ ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ಹಣ ನೀಡಿದವರನ್ನು ಆ ಕಂಪನಿಗೆ ಸಾಲ ನೀಡಿದ ಹಣಕಾಸು ಸಂಸ್ಥೆಗಳಿಗೆ ಸಮಾನವಾಗಿ ಪರಿಗಣಿಸಲಾಗುವುದು. ದಿವಾಳಿಯಾದ ಕಂಪನಿಯಿಂದ ಮನೆ ಖರೀದಿದಾರರು ತ್ವರಿತವಾಗಿ ಹಣ ಪಡೆಯಲು ಇದರಿಂದ ಸಾಧ್ಯವಾಗಲಿದೆ. ಅಪೂರ್ಣ ಮತ್ತು ವಿಳಂಬ ಯೋಜನೆ ಸಮಸ್ಯೆ ಎದುರಿಸುತ್ತಿರುವ ಗೃಹ ಖರೀದಿದಾರರಿಗೆ ಇದು ನೆಮ್ಮದಿಯನ್ನೂ ನೀಡಲಿದೆ.

**

ಆದ್ಯತಾ ವಲಯದ ಸಾಲದ ಮಿತಿ ಹೆಚ್ಚಿಸಿರುವುದರಿಂದ ಕೈಗೆಟುಕುವ ಗೃಹ ನಿರ್ಮಾಣ ಯೋಜನೆಗಳಿಗೆ ಉತ್ತೇಜನ ಸಿಗಲಿದೆ.

- ಮೆಲ್ವಿನ್‌ ರೇಗೊ, ಸಿಂಡಿಕೇಟ್ ಬ್ಯಾಂಕ್‌ ಸಿಇಒ

**

ಸಕಾಲದಲ್ಲಿನ ಇಂತಹ ಕ್ರಮಗಳಿಂದ ಹಣದುಬ್ಬರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿ ಹಣಕಾಸು ಸ್ಥಿರತೆಗೆ ನೆರವಾಗಲಿದೆ

- ಚಂದಾ ಕೊಚ್ಚರ್‌, ಐಸಿಐಸಿಐ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ

**

ಆರ್‌ಬಿಐನ ಈ ನಡೆ ಆರ್ಥಿಕತೆ ಪಾಲಿಗೆ ಸಕಾರಾತ್ಮಕವಾಗಿರಲಿದ್ದು, ಅಭಿವೃದ್ಧಿಗೆ ಒತ್ತು ನೀಡಬೇಕೆಂಬ ಸ್ಪಷ್ಟ ಇಂಗಿತ ಒಳಗೊಂಡಿದೆ.

- ಅಲೆಕ್ಸಾಂಡರ್‌ , ಮುತ್ತೂಟ್‌ ಫೈನಾನ್ಸ್‌ನ ಎಂಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry