ಕಷ್ಟವೇನೇ ಬರಲಿ ಧೈರ್ಯವೊಂದಿರಲಿ

7

ಕಷ್ಟವೇನೇ ಬರಲಿ ಧೈರ್ಯವೊಂದಿರಲಿ

Published:
Updated:
ಕಷ್ಟವೇನೇ ಬರಲಿ ಧೈರ್ಯವೊಂದಿರಲಿ

ಚಿಕ್ಕವಯಸ್ಸಿನಿಂದ ಈ ಇಳಿವಯಸ್ಸಿನವರೆಗೂ ಸೊಂಟ ಮುರಿಯುವ ಹಾಗೆ ದುಡಿಯೋದೇ ಆಯ್ತು. ನನ್ನ ಹೆಸರು ಪುಟ್ಟಲಕ್ಷ್ಮೀ ಅಂತ. ಆದರೆ ನನ್ನ ಎಲ್ಲರೂ ಪ್ರೀತಿಯಿಂದ ಕರೆಯೋದು ಪುಟ್ಟಕ್ಕ ಅಂತ. ನನಗೆ ಈಗ ಅಂದಾಜು 60 ವರ್ಷವಿರಬಹುದು.

16 ವರ್ಷಕ್ಕೆ ಮದುವೆಯಾಯಿತು. ತವರು ಮನೆಯಲಿ ನಾನು ನಡೆದರೆ ಎಲ್ಲಿ ಕಾಲು ಸವೆಯುತ್ತೋ ಅಂತ ಮುದ್ದಿನಿಂದ ನನ್ನ ಅಪ್ಪ ಅಮ್ಮ ಸಾಕಿದ್ದರು. ಮದುವೆಯಲ್ಲಿ ಗಿಣಿ ತರ ಸಾಕಿದ್ದ ನನ್ನನ್ನು ಗಿಡುಗನ ಕೈಗೆ ಕೊಟ್ಟ ಹಾಗೆ ಆಯಿತು. ಗಂಡನ ಮನೆಯಲ್ಲಿ ಮನೆತುಂಬ ಜನ. ಅವರು ಕೊಡೊ ಕಾಟ ಒಂದಾ ಎರಡಾ? ನನ್ನ ಕಷ್ಟ ಕೇಳಬೇಡ ತಾಯಿ.

22 ವರ್ಷವಾಗುವಷ್ಟರಲ್ಲಿ ನನಗೆ 3 ಜನ ಹೆಣ್ಣು ಮಕ್ಕಳು ಹುಟ್ಟಿದ್ದರು. ಕಷ್ಟದಲ್ಲೂ ಗಂಡನ ಪಿರುತಿಯಿದೆ ಹೇಗೋ ಬದುಕೋಣ ಅಂದರೆ ಆ ದೇವರಿಗೆ ಅದನ್ನ ಸಹಿಸೊಕ್ಕೆ ಆಗಲಿಲ್ಲ ಅಂತ ಕಾಣುತ್ತೆ. ಮೂರನೇ ಮಗಳು 1 ವರ್ಷವಿರುವಾಗ ನನ್ನ ಗಂಡ ತೀರಿಕೊಂಡ. ಅಪ್ಪ ಅಮ್ಮ ತೀರಿಕೊಂಡಿದ್ದರು. ನನ್ನ ಮಕ್ಕಳು ಸ್ವಲ್ಪ ದೊಡ್ಡೊರು ಆಗೋವರೆಗೂ ಅಣ್ಣನ ಮನೇಲಿ ಇದ್ದೆ. ಆದರೆ ಅಣ್ಣ ನಮ್ಮವನು ಆದರೂ ಅತ್ತಿಗೆಮ್ಮ ನಮ್ಮವಳಾ ಎಂಬ ಗಾದೆಮಾತು ಇದಿಯಲ್ಲ ತಾಯಿ. ಅದಕ್ಕೆ ಒಬ್ಬಳೆ ಬದುಕು ಎಂಬ ಜಟಕಾಬಂಡಿ ಎಳೆಯಲು ಸಿದ್ಧವಾದೆ.

ನಮ್ಮೂರು ಕಡೂರು. ಅಲ್ಲಿ ನಾನು ನನ್ನ ಮೂರು ಹೆಣ್ಣುಮಕ್ಕಳನ್ನು ಸಾಕಕ್ಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕಷ್ಟದಲ್ಲಿರುವಾಗ ಗೊತ್ತು ಗುರಿಯಲ್ಲದವರು ಸಹಾಯ ಮಾಡಿ ಬಿಡುತ್ತಾರೆ. ಆದರೆ ಸಂಬಂಧಿಕರು ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಮೂರು ಮಕ್ಕಳಿಗೂ ಹೇಗೋ ಮದುವೆ ಮಾಡಿಸಿದೆ. ಆ ಊರಲ್ಲಿ ನನ್ನವರು ಅಂತ ಯಾರೂ ಇರಲಿಲ್ಲ. ಹಾಗಾಗಿ ಇಬ್ಬರು ಮೊಮ್ಮಕ್ಕಳ ಜೊತೆಗೆ ಬೆಂಗಳೂರಿಗೆ ಬಂದೆ. ಈ ದೊಡ್ಡ ಸಿಟಿಗೆ ಬಂದು 5 ವರ್ಷಗಳು ಆದವು. ಇಲ್ಲಿ ಪೀಣ್ಯಾ ಇಂಡಸ್ಟ್ರೀಯ ಒಂದು ಸಣ್ಣ ಚಪ್ಪಲಿ ಕಾರ್ಖಾನೆಯಲ್ಲಿ ಚಪ್ಪಲಿಗೆ ಹೊಲಿಯುವ ಕೆಲಸ ಮಾಡುತ್ತಿದ್ದೇನೆ. ತಿಂಗಳಿಗೆ  ₹5,500 ಸಂಬಳ.

ಕಷ್ಟ ಬಂದವರಿಗೇ ಬರೋದು ಅಂತಾರಲ್ಲ, ಹಾಗೇ ನನ್ನ ದೊಡ್ಡ ಮಗಳ ಗಂಡನು ತೀರಿಕೊಂಡ. ಅವಳು ನನ್ನ ಹಾಗೆಯೇ ಚಿಕ್ಕವಯಸ್ಸಿನಲ್ಲಿಯೇ ವಿಧವೆಯಾದಳು. ಅವಳಿಗೆ ಹೇಗೋ ಅವರಿವರ ಕೈಕಾಲು ಹಿಡಿದು ಅಂಗನವಾಡಿಯಲ್ಲಿ ಹೆಲ್ಪರ್ ಕೆಲಸ ಕೊಡಿಸಿದೆ. ಅವಳ ಇಬ್ಬರೂ ಮಕ್ಕಳು ನನ್ನ ಜೊತೆನೆ ಇದ್ದಾರೆ. ಅವರು ಈಗ ಡಿಗ್ರಿ ಓದ್ತಿದ್ದಾರೆ. ಅವರು ಓದಿ ಒಂದು ಒಳ್ಳೆಯ ಹುದ್ದೆ ಪಡೆದುಕೊಂಡು ನನ್ನ ಮತ್ತು ನನ್ನ ಮಗಳನ್ನು ಕೊನೆಗಾಲದಲ್ಲಿ ಒಂದು ತುತ್ತು ಅನ್ನ ಹಾಕಿದರೆ ಸಾಕು.

ನನ್ನ ದೇಹದಲ್ಲಿ  ಶಕ್ತಿ ಇರುವವರೆಗೂ ಏನೇ ಕಷ್ಟ ಬಂದರೂ ಧೈರ್ಯವಾಗಿ ಎದುರಿಸುತ್ತೇನೆ. ದೇವರು ಇದ್ದಾನೆ ತಾಯಿ.

*

–ಶಾರದಾ ವಗರನಾಳ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry