ಸರ್ಕಾರದ ನಿಲುವು ಕೇಳಿದ ಹೈಕೋರ್ಟ್‌

7
ರಸ್ತೆ, ಸಂಚಾರ ನಿರ್ವಹಣೆಗೆ ಮೇಲ್ವಿಚಾರಣೆ ಸಮಿತಿ

ಸರ್ಕಾರದ ನಿಲುವು ಕೇಳಿದ ಹೈಕೋರ್ಟ್‌

Published:
Updated:

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆಗಳ ನಿರ್ವಹಣೆ ಹಾಗೂ ಸಂಚಾರ ಸುಧಾರಣೆಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ವಹಿಸಲು ಸರ್ಕಾರದ ನೇತೃತ್ವದಲ್ಲಿ ಸಮಯನ್ವಯ ಸಮಿತಿಯೊಂದನ್ನು ರಚಿಸುವ ಬಗ್ಗೆ ನಿಮ್ಮ ನಿಲುವು ಏನೆಂಬುದನ್ನು ತಿಳಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ಸೂಚನೆ ನೀಡಿದೆ.

ಈ ಸಂಬಂಧ ಬೆಂಗಳೂರು ನಿವಾಸಿ ವಿಜಯನ್ ಮೆನನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಹಾಗೂ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಿದೆ. ಇದನ್ನು ಬಗೆಹರಿಸಲು ಒಂದು ಸಮನ್ವಯ ಸಮಿತಿ ರಚನೆ ಮಾಡುವ ಅಗತ್ಯವಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ಈ ಸಮಿತಿಯಲ್ಲಿ ರಾಜ್ಯ ಸರ್ಕಾರ, ಬಿಬಿಎಂಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೆಂಗಳೂರು ಜಲಮಂಡಳಿ ಪ್ರತಿನಿಧಿಗಳು ಇರಬೇಕು’ ಎಂದು ನ್ಯಾಯಪೀಠ ಹೇಳಿದೆ.

‘ಇತ್ತೀಚಿನ ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಸಾವಿರ ಗುಂಡಿಗಳನ್ನು ಮುಚ್ಚಲಾಗಿದೆ’ ಎಂದು ಬಿಬಿಎಂಪಿ ಪರ ವಕೀಲ ಕೆ.ಎನ್‌.ಪುಟ್ಟೇಗೌಡ ತಿಳಿಸಿದರು.

ಮತ್ತೊಂದು ಸಂಸ್ಥೆ ಬೇಕಾ?: ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆ ಸೂಚನೆ ನೀಡಲು ‘ಬೆಂಗಳೂರು ನೀಲನಕ್ಷಾ ಕ್ರಿಯಾ ತಂಡ’ ರಚಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ.

‘ಈಗಾಗಲೇ ಬೆಂಗಳೂರು ಮಹಾನಗರ ಯೋಜನಾ ಸಮಿತಿ ಅಸ್ತಿತ್ವದಲ್ಲಿರುವಾಗ ಮತ್ತೊಂದು ಪರ್ಯಾಯ ಸಂಸ್ಥೆ ರಚಿಸುವ ಅಗತ್ಯ ಏನಿತ್ತು’ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry