ಹ್ಯಾಷ್‌ಟ್ಯಾಗ್ ಕ್ರಾಂತಿಯ ಮಜಲುಗಳು

7

ಹ್ಯಾಷ್‌ಟ್ಯಾಗ್ ಕ್ರಾಂತಿಯ ಮಜಲುಗಳು

Published:
Updated:
ಹ್ಯಾಷ್‌ಟ್ಯಾಗ್ ಕ್ರಾಂತಿಯ ಮಜಲುಗಳು

ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಮತ್ತು ಇತ್ತೀಚಿನ ಐ.ಟಿ ಕ್ರಾಂತಿ ಕಂಡಿರುವ ಪೀಳಿಗೆಯಾಗಲಿ, ಚರಕ- ಉಪವಾಸ ಸತ್ಯಾಗ್ರಹದ ಮೂಲಕ ಕ್ರಾಂತಿ ಮಾಡಿದ ಸ್ವಾತಂತ್ರ್ಯಪೂರ್ವದ ಜನತೆಯಾಗಲಿ, ತ್ರಿವರ್ಣ ಧ್ವಜ ಹಿಡಿದವರಾಗಲಿ, ಸುತ್ತಿಗೆ- ಕುಡುಗೋಲು ಉಳ್ಳ ಕೆಂಪು ಬಾವುಟ ಹಿಡಿದವರಾಗಲಿ, ಇಂದು @handle ಮತ್ತು #ಹ್ಯಾಷ್‌ಟ್ಯಾಗ್ ಕ್ರಾಂತಿಯನ್ನು ಒಪ್ಪಿಕೊಂಡು ಬದುಕುತ್ತಿರುವುದು ದಿಟ.

ಈ @ಹ್ಯಾಂಡಲ್-#ಹ್ಯಾಷ್‌ಟ್ಯಾಗ್ ಜೋಡಿಯ ಕರಾಮತ್ತು ಸಾಮಾಜಿಕ ಜಾಲತಾಣ ಎಂಬ ಅಂಗಳದಲ್ಲಿ ದಿನೇ ದಿನೇ ವೃದ್ಧಿಸುತ್ತಲೇ ಇದೆ ಅನ್ನೋದು ತಂತ್ರಜ್ಞಾನವನ್ನು ಅವಿಷ್ಕಾರ ಮಾಡುವವರು ಮತ್ತು ಬಳಸುವವರು ಇಬ್ಬರೂ ಒಪ್ಪಿಕೊಂಡಿರುವ ಸಂಗತಿ.

ಇಂತಹ ಜೋಡಿಯ ಗುಣಲಕ್ಷಣಗಳೇನು? ಅವು ನಿಜವಾಗಿಯೂ ವಾಸ್ತವ ಜಗತ್ತಿನಲ್ಲಿ ಬದಲಾವಣೆ ತರಬಲ್ಲವೆ? ಸಾಮಾನ್ಯ ಜನತೆ ಮತ್ತು ಪ್ರತಿಷ್ಠಿತರ ಮೇಲೆ ಅದರ ಪರಿಣಾಮ ಏನು? ಸಾಮಾಜಿಕ ಜಾಲತಾಣದ ಜನಕರಿಗೆ ಇವುಗಳಿಂದ ಏನು ಲಾಭ?

@ಹ್ಯಾಂಡಲ್ ಒಂದು ಲೇಖನಿಯ ಪ್ರತಿರೂಪವಾದರೆ, #ಹ್ಯಾಷ್‌ಟ್ಯಾಗ್ ಆ ಲೇಖನಿ ಬಳಸಿ ಬರೆಯಬಹುದಾದ ಚಿಕ್ಕದಾದ ಆದರೆ ಶಕ್ತಿಶಾಲಿಯಾದ ಪಂಚಿಂಗ್- ಡೈಲಾಗ್ ಅನ್ನಬಹುದು. #ಹ್ಯಾಷ್‌ಟ್ಯಾಗ್‌ನ ಬಲ ಒಂದು ವಿಚಾರ ಕುರಿತ ಮಂಥನವನ್ನು ತನ್ನ ಸುತ್ತಲೂ ಗಿರಕಿ ಹೊಡೆಯುವಂತೆ ಹಿಡಿದು ಇಟ್ಟುಕೊಳ್ಳುವುದರಲ್ಲಿದೆ. ಇಂತಹ #ಹ್ಯಾಷ್‌ಟ್ಯಾಗ್‌ನ ಉಗಮ ಮತ್ತು ಜನಕನ ಬಗ್ಗೆ ತಿಳಿದುಕೊಂಡು ನಮ್ಮ ಪಯಣ ಮುಂದುವರಿಸೋಣ.

#ಹ್ಯಾಷ್‌ಟ್ಯಾಗ್ ಅನ್ನು ಸಾಮಾಜಿಕ ಜಾಲತಾಣಕ್ಕೆ ಪರಿಚಯಿಸಿದವರು ಕ್ರೀಸ್‌ ಮೆಸಿನಾ ಎಂಬ ತಂತ್ರಜ್ಞ. ಈತ ಕೆಲವು ವರ್ಷಗಳು ಅಂತರ್ಜಾಲದ ದೈತ್ಯ ಸಂಸ್ಥೆ ಗೂಗಲ್‌ನಲ್ಲಿ ಸಹ ದುಡಿದಿದ್ದಾರೆ. 2007ರ ಆಗಸ್ಟ್‌ 23ರಲ್ಲಿ ಕ್ರಿಸ್ ತಮ್ಮ ಒಂದು ಅನೌಪಚಾರಿಕ ಸಂವಾದಕ್ಕೆ (# ಪೌಂಡ್) ಸಂಕೇತವನ್ನು #ಬಾರ್‌ಕ್ಯಾಂಪ್ ಎಂಬ ಪದ ಬಳಕೆ ಮಾಡುವ ಮೂಲಕ ಹ್ಯಾಷ್‌ಟ್ಯಾಗ್‌ಗೆ ಜನ್ಮ ನೀಡಿದ. ನಂತರ ಆಗಿದ್ದು ಇತಿಹಾಸ.

#ಮನ್ಕಿಬಾತ್, #ಆಧಾರ್, #ಜಿಎಸ್‌ಟಿ, #ಜಲ್ಲಿಕಟ್ಟು, #ಡಿಮಾನಿಟೈಜೇಷನ್ #ಈಸಲಕಪ್‌ನಮ್ಮದೆ ಮುಂತಾದ ಹ್ಯಾಷ್‌ಟ್ಯಾಗ್‌ಗಳು ನಮ್ಮ ನಡುವೆ ಗಾಳಿ, ನೀರಿನ ರೀತಿ ವಿಜೃಂಭಿಸಿದ್ದು ವಾಸ್ತವ ತಾನೆ?

#ಹ್ಯಾಷ್‌ಟ್ಯಾಗ್‌ನ ಶಕ್ತಿ, ಸಂವಾದ ಮತ್ತು ಅಭಿಯಾನಗಳಿಗೆ ದಿಕ್ಸೂಚಿ ಆಗುವುದರಲ್ಲಿ ಇದೆ ಎಂದು ಈಗಾಗಲೇ ತಿಳಿದಿದ್ದೇವೆ. ಆದರೆ, ಅದರ ದೌರ್ಬಲ್ಯ ಇರುವುದು ಅವು ಹೆಚ್ಚು ಆಯಸ್ಸನ್ನು ಹೊಂದಿರುವುದಿಲ್ಲ ಎಂಬುದರಲ್ಲಿ. ಅಲ್ಲದೆ, ಮೊಬೈಲ್ ಫೋನ್‌ನಲ್ಲಿ ದೊರೆಯುವ ಮಿಥ್ಯ- ವಾಸ್ತವದ ಅಭೂತಪೂರ್ವ ಯಶಸ್ಸು ಬೀದಿಗಿಳಿದು ಮಾಡುವ ಹೋರಾಟವಾಗಿ ಮಾರ್ಪಾಡಾಗುವುದು ಬಹಳ ವಿರಳ.

ಸಾಮಾನ್ಯವಾಗಿ ಹ್ಯಾಷ್‌ಟ್ಯಾಗ್‌ಗಳನ್ನು ಸಾಮಾಜಿಕ ಜಾಲತಾಣದ ವಿಶ್ಲೇಷಕರು ನಾಲ್ಕು ವಿಧವಾಗಿ ವಿಂಗಡಿಸುತ್ತಾರೆ: ಮೊದಲನೆಯದು ಸಮಾಜದಲ್ಲಿ ಬದಲಾವಣೆ ಮಾಡಬಲ್ಲ ತಾಕತ್ತು ಉಳ್ಳ ಹ್ಯಾಷ್‌ಟ್ಯಾಗ್‌ಗಳು(ಉದಾಹರಣೆಗೆ #PeoplesClimate, #Nirbhaya). ಇದರಲ್ಲಿ ಮೊದಲನೆಯದು ಪ್ರಪಂಚದಾದ್ಯಂತ ಪರಿಸರದ ಸಂರಕ್ಷಣೆಗೆ ನಡೆದ ಬೃಹತ್ ಹೋರಾಟಕ್ಕೆ ದಾರಿ ತೋರಿದ ಹ್ಯಾಷ್‌ಟ್ಯಾಗ್. ಎರಡನೆಯದು ಭಾರತದಲ್ಲಿ ಒಂದು ಹೆಣ್ಣುಮಗಳ ಮೇಲೆ ನಡೆದ ಅತ್ಯಾಚಾರದ ವಿರುದ್ಧ ಜನತೆಯನ್ನು ಬೀದಿಗೆ ಇಳಿಸಿದ ಹ್ಯಾಷ್‌ಟ್ಯಾಗ್.

ಎರಡನೆವಿಧ ಮನದಲ್ಲಿ ನಿರಾಳತೆ ತರಬಲ್ಲ ಹ್ಯಾಷ್‌ಟ್ಯಾಗ್‌ಗಳು: (#MeToo, #HowIwillChange). ಇದರಲ್ಲಿ ಮೊದಲನೆಯದು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದ ಕುರಿತು ಮಹಿಳೆ ಒಬ್ಬರು ರೂಪಿಸಿದ ಹ್ಯಾಷ್‌ಟ್ಯಾಗ್. ಆದರೆ, ಎರಡನೆಯದು ಮಹಿಳೆಯರ ಬೆಂಬಲಕ್ಕೆ ತಾವು ನಿಲ್ಲುತ್ತೇವೆ ಎಂಬ ಪುರುಷ ಸಮಾಜದಿಂದ ರೂಪಿಸಲ್ಪಟ್ಟ ಟ್ಯಾಗ್‌.

ಮೂರನೆಯದು ನಮ್ಮನ್ನು ಯೋಚನಾ ಲಹರಿಗೆ ದೂಡಬಲ್ಲ ಹ್ಯಾಷ್‌ಟ್ಯಾಗ್‌ಗಳು. ಉದಾಹರಣೆಗೆ #Corporatehashtagthatnoonewilluseever ಎಂಬ ಬಹುರಾಷ್ಟ್ರೀಯ ಕಂಪನಿಯ ಹ್ಯಾಷ್‌ಟ್ಯಾಗ್. ನಾವು ಯಾವ ರೀತಿಯ ಹ್ಯಾಷ್‌ಟ್ಯಾಗ್‌ಗಳನ್ನು ರೂಪಿಸಬಾರದು ಎಂಬುದರ ಕುರಿತು ಮಾಹಿತಿ ನೀಡುತ್ತದೆ. ಅದೇ ರೀತಿ ವಿಡಂಬನೆ, ಹಾಸ್ಯದ ಹೊನಲು ಹರಿಸುವ ಹ್ಯಾಷ್‌ಟ್ಯಾಗ್‌ಗಳಿಗೆ ಅಂತರ್ಜಾಲದಲ್ಲಿ ಬರವಿಲ್ಲ.

ನಾಲ್ಕನೆಯದು ಲೇಝಿ- ಕ್ರಿಯಾಶೀಲತೆ ಉತ್ತೇಜಿಸುವ (ಲೇಝಿ-ಆ್ಯಕ್ಟಿವಿಸಂ) ಹ್ಯಾಷ್‌ಟ್ಯಾಗ್‌ಗಳು. ಈ ವಿಭಾಗದ ಅಡಿ ಬೀಳುವ ಹ್ಯಾಷ್‌ಟ್ಯಾಗ್‌ಗಳು ಯಾವುದೇ ಹೋರಾಟವನ್ನು ಕಟ್ಟಿಕೊಡಲಾರದ ಮೊಬೈಲ್ ಫೋನ್ ಅಥವಾ ಗಣಕದ ಪರದೆ ಮೇಲೆ ಮಾತ್ರ ರಾರಾಜಿಸುವಂತಹವು. ಇವು ಕ್ರಿಯಾಶೀಲ- ಸೋಮಾರಿಗಳ ಅನ್ವೇಷಣೆ.

ಸಾಮಾನ್ಯವಾಗಿ ಈ ಲೇಝಿ-  ಆ್ಯಕ್ಟಿವಿಸ್ಟ್‌ಗಳು ಪಕ್ಕದ ಮನೆಯಲ್ಲಿ ವಾಸಿಸುವ ಗೆಳೆಯರಿಗೆ ಸಾಮಾಜಿಕ ಜಾಲತಾಣದಲ್ಲಿ ಜನ್ಮದಿನದ ಶುಭಾಶಯವನ್ನೋ ಅಥವಾ ತಮ್ಮ ರಸ್ತೆಯಲ್ಲೇ ವಾಸಿಸುವ ಪರಿಚಯದವರ ಸಾವಿಗೆ RIP (Rest In Peace) ಎಂದು ಜಾಲತಾಣದಲ್ಲೋ ವಾಟ್ಸ್ಆ್ಯಪ್‌ನಲ್ಲೋ ಸಂದೇಶ ಕಳುಹಿಸಿಕೊಡುವಂತಹ ಧೀಮಂತ ವ್ಯಕ್ತಿತ್ವ ಹೊಂದಿರುತ್ತಾರೆ.

ಈ ಪ್ರಬಂಧ ಬರವಣಿಗೆ ರೂಪಕ್ಕೆ ಬರುತ್ತಿರುವ ಸಂದರ್ಭದಲ್ಲಿ, #ಫಿಟ್‌ನೆಸ್‌ಚಾಲೆಂಜ್, (#Fitnesschallenge) #ಹಮ್ಫಿಟ್‌ತೊಇಂಡಿಯಾಫಿಟ್ (#HumFitThoIndiaFit) #ಫ್ಯೂಲ್‌ಚಾಲೆಂಜ್ (#Fuelchallenge) ಎಂಬ ಹ್ಯಾಷ್‌ಟ್ಯಾಗ್‌ಗಳು ಭಾರತದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ನಮ್ಮ ವಿವಿಧ ಸ್ತರದ ಜನತೆ ಮೇಲೆ #ಫಿಟ್‌ನೆಸ್‌ಚಾಲೆಂಜ್ ಟ್ಯಾಗ್ ಯಾವ ಪರಿಣಾಮ ಬೀರಬಲ್ಲದು ಎಂಬ ಕಾಲ್ಪನಿಕ ಮಿಶ್ರಿತ ವಾಸ್ತವ ಸಂಗತಿಗಳನ್ನು ಒಳಗೊಂಡ ವಿಚಾರ ನಿಮ್ಮ ಮುಂದಿದೆ.

#ಫಿಟ್‌ನೆಸ್‌ಚಾಲೆಂಜ್ ಟ್ಯಾಗ್‌ನ ಜನಕ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ರಾಥೋಡ್. ಅವರು ಭಾರತೀಯರು ತಮ್ಮ ಆರೋಗ್ಯ ಕಾಪಾಡಿಕೊಂಡರೆ ದೇಶ ಬಲಿಷ್ಠವಾಗುತ್ತದೆ ಎಂಬ ಉದ್ದೇಶದಿಂದ ಮತ್ತು ಅದು ತಮ್ಮಿಂದಲೇ ಪ್ರಾರಂಭವಾಗಲಿ ಎಂದು ತಾವು ವ್ಯಾಯಾಮದಲ್ಲಿ ತೊಡಗಿರುವ ಭಂಗಿಗಳ ವಿಡಿಯೊ ಚಿತ್ರಿಸಿ ಅಪ್‌ಲೋಡ್ ಮಾಡಿದ್ದಾರೆ.

ಅಲ್ಲದೇ ಜನತೆಗೂ ತಮ್ಮ ಆರೋಗ್ಯಪೂರ್ಣ ಜೀವನಶೈಲಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಿಗೆ #ಫಿಟ್‌ನೆಸ್‌ಚಾಲೆಂಜ್ ಟ್ಯಾಗ್ ಬಳಸಿ ಬಿತ್ತರಿಸುವಂತೆ ಕೇಳಿಕೊಂಡಿದ್ದಾರೆ. ಇದನ್ನು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸ್ವೀಕರಿಸಿ ತಮ್ಮ ವಿಡಿಯೊ ಬಿತ್ತರಿಸಿರುವುದಲ್ಲದೆ ಪ್ರಧಾನ ಮಂತ್ರಿ ಅವರನ್ನು ಈ ಅಭಿಯಾನಕ್ಕೆ ಆಮಂತ್ರಣ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಸ್ವೀಕರಿಸಿದ್ದೂ ಆಗಿದೆ.

ಇದು #ಫಿಟ್‌ನೆಸ್‌ಚಾಲೆಂಜ್ ಅಭಿಯಾನದ ಪರ ನಡೆದಿರುವ ವಿದ್ಯಮಾನಗಳಾದರೆ, ಅದರ ವಿರುದ್ಧ ಹುಟ್ಟಿರುವ ಅಭಿಯಾನಕ್ಕೆ #ಫ್ಯೂಲ್‌ಚಾಲೆಂಜ್ ಟ್ಯಾಗ್‌ನ ಅಡಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೊದಲು ಗಗನಮುಖಿಯಾಗಿರುವ ತೈಲಬೆಲೆಗಳನ್ನು ಕಮ್ಮಿ ಮಾಡುವ ಚಾಲೆಂಜ್ ಸ್ವೀಕರಿಸಲಿ ಎಂದು ಟಾಂಗ್ ನೀಡಿದ್ದೂ ಆಗಿದೆ.

ಈ ಪರ- ವಿರೋಧದ ಕೆಸರೆರಚಾಟದಲ್ಲಿ ಸಾಮಾಜಿಕ ಜಾಲತಾಣಗಳು ಮಾತ್ರ ತಮಗೆ ಬಿಟ್ಟಿ- ಕಂಟೆಂಟ್ (ಸರಕು) ದೊರೆಯುತ್ತಿದೆ ಎಂದು ಖುಷಿಯಾಗಿರುವುದೂ ಅಷ್ಟೇ ಸತ್ಯ. ಇನ್ನು ನಮ್ಮ ಜನತೆ ಇದಕ್ಕೆ ಈ ರೀತಿ ಪ್ರತಿಕ್ರಿಯೆ ನೀಡಬಹುದೇ?

ಗುಂಡು ಪಾರ್ಟಿ ನಿರತರು- ತಾವು ಎಷ್ಟು ಪೆಗ್ ದೇಹಕ್ಕೆ ಸೇರಿಸಿದರೂ ತಮ್ಮ ಮೇಲಿನ ನಿಯಂತ್ರಣ ಕಳೆದುಕೊಳ್ಳದೆ, ಮನೆ- ಮಠ ಸೇರಿಕೊಳ್ಳುವ ದೃಶ್ಯಾವಳಿಗಳನ್ನು ಚಿತ್ರಿಸಿ ಅಪ್ಲೋಡ್ ಮಾಡಬಹುದು. ತಾವು #ಫಿಟ್‌ನೆಸ್‌ಚಾಲೆಂಜ್‌ನ ಭಾಗ ಎಂದು ಕ್ರೀಡಾ ಸಚಿವರಿಗೆ ಮನವರಿಕೆ ಮಾಡಿಕೊಡಬಹುದು!

ನಮ್ಮ ಕೂಲಿ ಕಾರ್ಮಿಕರು, ರಿಕ್ಷಾ ಗಾಡಿ ಎಳೆಯುವ ದೃಶ್ಯಗಳನ್ನೋ ಅಥವಾ ಗೋದಾಮುಗಳಲ್ಲಿ ತಾವು ಎತ್ತುವ ಹೆಣ ಭಾರದ ಮೂಟೆಗಳ ದೃಶ್ಯಗಳನ್ನೊ ಬಿತ್ತರಿಸಿ ತಾವೂ ಫಿಟ್- ತಮ್ಮ ದೇಶವೂ ಫಿಟ್ ಎಂದು ಘೋಷಿಸಬಹುದು.

ದೇಶದ ಮೆಟ್ರೊ ನಗರದಲ್ಲಿನ ಟ್ಯಾಕ್ಸಿ ಚಾಲಕರು, ಆಟೊ ಚಾಲಕರು ಕಲುಷಿತ ಗಾಳಿ ಸೇವಿಸಿದರೂ, ಟ್ರಾಫಿಕ್- ಜಾಮ್ ಎಂಬ ಭೂತನ ಕೈಯಲ್ಲಿ ಸಿಲುಕಿಯೂ ದಿನಕ್ಕೆ 15ರಿಂದ 18 ಟ್ರಿಪ್ ಮಾಡಿ ತಮ್ಮ ಕಂಪನಿ ನೀಡುವ ಇನ್‌ಸೆನ್ಟಿವ್  ಗಿಟ್ಟಿಸಿಕೊಳ್ಳುವುದರಲ್ಲಿ ಫಿಟ್ ಆಗಿದ್ದೇವೆ ಎಂಬ ದೃಶ್ಯಾವಳಿಗಳನ್ನು ಬಿತ್ತರಿಸಬಹುದು!

ಪೌರಕಾರ್ಮಿಕರು ದಿನನಿತ್ಯ ಗಬ್ಬುನಾತ ಸೂಸುವ ಟನ್‌ಗಟ್ಟಲೆ ಇರುವ ಕಸದ ರಾಶಿಯನ್ನು ವಿಲೇವಾರಿ ಮಾಡುವ ದೃಶ್ಯಾವಳಿಗಳನ್ನು ಅಪಲೋಡ್ ಮಾಡಿ #ಹಮ್‌ಫಿಟ್ತೋಇಂಡಿಯಾಫಿಟ್ ಎಂದು ಅಭಿಪ್ರಾಯ ವ್ಯಕ್ತಪಡಿಸಬಹುದು!

ಖಾಸಗಿ ಶಾಲೆಗಳ ಅಧ್ಯಾಪಕರು, ದಿನದಲ್ಲಿ ತಾವು ಮಾಡುವ 6ರಿಂದ 7 ಗಂಟೆಗಳ ಸತತ ಪಾಠ- ಪ್ರವಚನದ ದೃಶ್ಯಾವಳಿಗಳನ್ನು ಬಿತ್ತರಿಸಿ ತಮಗೆ ದೊರೆಯುವ ಕವಡೆ ಕಾಸಿನ ಪಗಾರದಲ್ಲಿ ತಾವು ಹೇಗೆ ಫಿಟ್ ಆಗಿದ್ದೇವೆ ಎಂದು ಸಾಧಿಸಿ ತೋರಬಹುದು.

ತಳ್ಳುವ ಗಾಡಿಯಲ್ಲಿ ತರಕಾರಿ, ಹಣ್ಣು ಮಾರುವ ಪುರುಷರು, ಮಹಿಳೆಯರು ತಾವು ಮಂಡಿಯಿಂದ ತರಕಾರಿ, ಹಣ್ಣುಗಳನ್ನು ತುಂಬಿಕೊಂಡು ಬೀದಿ ಬೀದಿ ಅಲೆಯುತ್ತಾ, ಸಣ್ಣ ವ್ಯಾಪಾರಿಗಳೆಂದು ಅನಿಸಿಕೊಂಡು ಮಾಲ್‌ಗಳ ಜೊತೆ ಹೇಗೆ ಸ್ಪರ್ಧಿಸಿ ಜೀವನ ನಿರ್ವಹಣೆ ಓಟದಲ್ಲಿ ಗೆಲ್ಲುತ್ತೇವೆ ಎಂಬ ವಿಡಿಯೊ ಅಪ್‌ಲೋಡ್ ಮಾಡಿ ತಮ್ಮ ಫಿಟ್‌ನೆಸ್ ಸಾಬೀತುಪಡಿಸಬಹುದು.

ಹೊಟ್ಟೆ ಹಸಿವನ್ನು ತಣಿಸುವುದರಿಂದ ಹಿಡಿದು ಮನೋಲ್ಲಾಸದ ಸರಕಿನವರೆಗೆ ಆನ್‌ಲೈನ್‌ ಮಾರುಕಟ್ಟೆ ಎಂಬ ಮಾಯಾನಗರಿಯಿಂದ ಸಾಂತಾಕ್ಲಾಸ್‌ನಂತೆ ಮನೆಯ ಬಾಗಿಲಿಗೇ ರವಾನಿಸುವ ಡೆಲಿವರಿ ಬಾಯ್ಸ್‌ ಎಂಬ ಯುವಪಡೆ ದ್ವಿಚಕ್ರ ವಾಹನದಲ್ಲಿ ತಮ್ಮಷ್ಟೇ ತೂಕದ ಆಧುನಿಕ ‘ಗೋಣಿಚೀಲ’ದೊಂದಿಗೆ ನಡೆಸುವ ಸಾಹಸಯಾತ್ರೆಯನ್ನು ಈ ಚಾಲೆಂಜ್‌ನಲ್ಲಿ ಭಾಗವಹಿಸುವ ಮೂಲಕ ಸಾಬೀತುಪಡಿಸಬಹುದು.

ಆಟ ಆಡುವುದು ಉಲ್ಲಾಸಕ್ಕಾಗಿ, ಸಂಗೀತ, ನೃತ್ಯ ಕಲಿಯುವುದು ನಿರಾಳವಾಗಲು ಎಂಬುದನ್ನು ಮರೆತ ಮಕ್ಕಳು ಎಲ್ಲವನ್ನೂ ತಾವು ಹೇಗೆ ಸ್ಪರ್ಧೆಯಾಗಿಯೇ ನೋಡುತ್ತೇವೆ ಎಂದು ಸಾಬೀತು ಮಾಡಲು #ಫಿಟ್‌ನೆಸ್‌ಚಾಲೆಂಜ್ ಅನ್ನು ಒಂದು ಸ್ಪರ್ಧೆ ಎಂದು ಪರಿಭಾವಿಸಿ, ಜಿಮ್‌ನಲ್ಲಿ ಒಂದೆರಡು ದಿನ ತಾಲೀಮು ಮಾಡಿ, ಸೆಲ್ಫಿ (ಸ್ವಂತಿ) ದೃಶ್ಯಾವಳಿಗಳನ್ನು ಕ್ರೀಡಾ ಸಚಿವರಿಗೆ ರವಾನಿಸಲೂಬಹುದು.

ಇನ್ನು ಗೃಹಿಣಿಯರು ಮನೆಯ ಪ್ರತಿಯೊಂದು ವಿಷಯವನ್ನು ನಿರ್ವಹಣೆ ಮಾಡಿ, ಕಚೇರಿಗೆ ದ್ವಿಚಕ್ರವಾಹನದಲ್ಲೋ, ಬಸ್‌ನಲ್ಲೋ ಹೊರಡುವ ದಿನನಿತ್ಯದ ರನ್ನಿಂಗ್ ರೇಸ್ ಬಗ್ಗೆ ಚಿತ್ರಿಸಿ ತಾವು ಎಷ್ಟು ಫಿಟ್ ಎಂದು ಸಾಬೀತುಪಡಿಸಬಹುದು. ನಮ್ಮ ಮನೆಯ ಒಡೆಯ ಅನ್ನಿಸಿಕೊಂಡ ಗೃಹಸ್ಥ, ಬಾಸ್ @ ಆಫೀಸ್ ಮತ್ತು ಬಾಸ್ @ ಹೋಮ್ ಎಂಬ ಎರಡು ದಡಗಳ ಮಧ್ಯೆ ಈಜುವ ದೃಶ್ಯಾವಳಿಗಳನ್ನು ಸೆರೆಹಿಡಿದು ತಾವೊಬ್ಬ ಒಲಿಂಪಿಕ್ ಈಜುಪಟುವಿಗಿಂತ ಕಮ್ಮಿಯೇನಿಲ್ಲ ಎಂದು ಸಾಬೀತುಪಡಿಸಬಹುದು.

#ಹಮ್‌ಫಿಟ್‌ತೋಇಂಡಿಯಾಫಿಟ್ (#HumFitThoIndiaFit) ಎಂಬುದು ಮೇಲೆ ನಮೂದಿಸಿದ ನಾಲ್ಕು ರೀತಿಯ ಹ್ಯಾಷ್‌ಟ್ಯಾಗ್‌ಗಳಲ್ಲಿ ಯಾವ ವಿಭಾಗಕ್ಕೆ ಸೇರತಕ್ಕದ್ದು ಎಂದು ಈ ಲೇಖನದ ಓದುಗರೇ ನಿರ್ಧರಿಸಬೇಕು!

ಇನ್ನು ನಮ್ಮ ಜನತೆಯಿಂದ ಇಷ್ಟೆಲ್ಲಾ ದೃಶ್ಯಾವಳಿಗಳ ಮತ್ತು ಪರ, ವಿರೋಧದ ಕೆಸರೆರಚಾಟದ ಸರಕು, ಕಂಟೆಂಟ್ ದೊರೆತರೆ ನಮ್ಮಿಂದಲೇ ಉಸಿರಾಡುವ ಸಾಮಾಜಿಕ ಜಾಲತಾಣದ ಒಡೆಯರಿಗೆ ಆಗುವ ಲಾಭ ನಮ್ಮ ಊಹೆಗೆ ನಿಲುಕದ್ದು ಎಂಬುದಂತೂ ಸತ್ಯ.

ಎಲ್ಲಾ ಪರಿಣತರು ತೈಲದ ನಂತರ ಪ್ರಪಂಚವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಶಕ್ತಿ ಇರುವುದು ದತ್ತಾಂಶಕ್ಕೆ (ಡೇಟಾ) ಮಾತ್ರ ಎಂದು ಸ್ಪಷ್ಟಪಡಿಸಿರುವಾಗ ಮತ್ತು ನಮ್ಮ, ನಿಮ್ಮ ಡೇಟಾ ಸಾಮಾಜಿಕ ಜಾಲತಾಣಗಳಿಂದ ಮಾರಾಟವೋ, ಕಳವೋ ಆಗುತ್ತಿರುವ ಸುದ್ದಿ ದಿನನಿತ್ಯ ಕೇಳಿಬರುತ್ತಿರುವಾಗ, ನಮ್ಮ ವೈಯಕ್ತಿಕ ಮತ್ತು ವ್ಯಾವಹಾರಿಕ ವಿಚಾರಗಳನ್ನು ಪಡೆವ ಸಾಮಾಜಿಕ ಜಾಲತಾಣಗಳು, ಇಂತಹ ಅಭಿಯಾನಗಳ, ಪ್ರತಿಭಟನೆಗಳ ನೇರ ಲಾಭಕೋರರು ಎಂಬುದರಲ್ಲಿ ಯಾವ ಸಂಶಯವೂ ಬೇಡ. ಅದಕ್ಕೇ ಅಲ್ಲವೆ ನಮ್ಮ ಹುಚ್ಚಾಟ, ಜಾಲತಾಣಗಳಿಗೆ ಭೂರಿ ಊಟ?!

ಹ್ಯಾಷ್‌ಟ್ಯಾಗ್‌ಗಳ ನೋಟ

ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಕಾಲಿಕ ಮೂಂಚೂಣಿ ಸ್ಥಾನ ಕಾಯ್ದಕೊಂಡ ಅನೇಕ ಹ್ಯಾಷ್‌ಟ್ಯಾಗ್‌ಗಳಲ್ಲಿ # MeToo ಮತ್ತು # Peoplesclimate ಇಲ್ಲಿ ಉಲ್ಲೇಖಾರ್ಹ.

#MeToo

1997ರಲ್ಲಿ ಟಾರನಾ ಬುರ್ಕ್ ಎಂಬ ಹೆಣ್ಣು ಮಗಳಿಗೆ, ಖುದ್ದಾಗಿ ಒಬ್ಬ 13 ವರ್ಷದ ಹುಡುಗಿಯ ಜೀವನದಲ್ಲಿ ನಡೆದ ಲೈಂಗಿಕ ಕಿರುಕುಳದ ಕಹಿ ಘಟನೆಯ ವಿವರವನ್ನು ಆ ಮಗುವಿನ ಬಾಯಿಂದಲೇ ಕೇಳುವ ಪರಿಸ್ಥಿತಿ ಒದಗಿಬಂದಿತ್ತು.

ಆ ಘಟನೆಯ ಭಯಾನಕ ಚಿತ್ರಣದಿಂದ ಬುರ್ಕ್ ವಿಚಲಿತಗೊಂಡರು. ಆಕೆಯ ಮನದಲ್ಲಿ ಈ ಘಟನೆ ಬೀರಿದ ಗಾಢ ಪರಿಣಾಮದ ಫಲವೇ ಜಸ್ಟ್-ಬಿ ಇನಕ್ ಎಂಬ ಸಂಸ್ಥೆಯ ಜನ್ಮಕ್ಕೆ ಕಾರಣವಾಯಿತಲ್ಲದೇ, ಟಾರನಾ ಬುರ್ಕ್ ತನ್ನ ಜೀವನದಲ್ಲೂ ಘಟಿಸಿದ್ದ ಲೈಂಗಿಕ-ದೌರ್ಜನ್ಯವನ್ನು ಪ್ರಪಂಚದ ಗಮನಕ್ಕೆ # MeToo ಎಂಬ ಹ್ಯಾಷ್‌ಟ್ಯಾಗ್ ಮೂಲಕ ತಂದರು. ಆದರೆ, ಈ ಹ್ಯಾಷ್‌ಟ್ಯಾಗ್ ಜಗತ್ತಿನಾದ್ಯಂತ ಅಂದು ವೈರಲ್ ಆಗಲಿಲ್ಲ.

ಅದೇ, ಅಕ್ಟೋಬರ್ 5, 2017ರಲ್ಲಿ ಹಾಲಿವುಡ್ ನಟಿ ಮೆಲಿಸ್ಸಾ- ಮಿಲಾನೊ ಎಂಬಾಕೆ ಖ್ಯಾತ ಹಾಲಿವುಡ್ ನಿರ್ಮಾಪಕ ಹಾರ್ವಿ ವೇನ್ಸ್ಟೀನ್ ಎಂಬಾತನ ಕರ್ಮಕಾಂಡವನ್ನು ಬಿಚ್ಚಿಡುತ್ತಾ, ಪ್ರಪಂಚದಾದ್ಯಂತ ಲೈಂಗಿಕ ಕಿರುಕುಳಕ್ಕೆ ಒಳಗಾದ ಹೆಣ್ಣುಮಕ್ಕಳು, # MeToo ಬಳಸಿದರೆ ಬದಲಾವಣೆ ಖಂಡಿತ ಸಾಧ್ಯ ಎಂಬ ನುಡಿಗಳೊಂದಿಗೆ ಟಾರನಾ ಬುರ್ಕ್‌ರ ಟ್ಯಾಗ್‌ಗೆ ಜೀವ ತುಂಬಿದ್ದು ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಮಾರು 12 ದಶಲಕ್ಷ ಜನರಿಂದ ಅದು ಮನ್ನಣೆ ಪಡೆದು ಸಂಚಲನ ಮೂಡಿಸಿದ್ದು ಈಗ ಇತಿಹಾಸ.

# PeoplesClimate ಅಭಿಯಾನ

ಏಪ್ರಿಲ್ 29, 2017ರಂದು , ಪ್ರಪಂಚದಾದ್ಯಂತ, ಸುಮಾರು 370 ನಗರಗಳಲ್ಲಿ ನಡೆದ ಪರಿಸರ ಉಳಿಸಿ, ಜೀವ-ಜಲ ಉಳಿಸಿ ಎಂಬ ಘೋಷವಾಕ್ಯದ ನಡಿಗೆಗೆ ಚಾಲನೆ ದೊರತಿದ್ದು, # PeoplesClimate ಎಂಬ ಹ್ಯಾಷ್‌ಟ್ಯಾಗ್, ಸಾಮಾಜಿಕ ಜಾಲತಾಣಗಳಲ್ಲಿ ಪುಟ್ಟದಾಗಿ ಕಾಣಿಸಿಕೊಂಡು ಗಣಕದಿಂದ- ಗಣಕಕ್ಕೆ, ಮೊಬೈಲ್‌ ಫೋನ್‌ನಿಂದ ಮೊಬೈಲ್‌ ಫೋನ್‌ಗೆ ಹರಡಿದ ಫಲವಾಗಿ!

ಈ ಎರಡೂ ಹ್ಯಾಷ್‌ಟ್ಯಾಗ್‌ಗಳು, ಪುಟ್ಟ # ಚಿಹ್ನೆಗಿರುವ ದೈತ್ಯ ಶಕ್ತಿಯ ಕುರುಹು ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ, ಹ್ಯಾಷ್‌ಟ್ಯಾಗ್‌ಗಳ ಪ್ರಪಂಚದಲ್ಲಿ ಜೊಳ್ಳುಗಳಿಗೆ ಏನೂ ಕೊರತೆಯಿಲ್ಲ. ಅಂತಹ ಜೊಳ್ಳುಗಳ ಸಂಗ್ರಹವೇ # LazyActivism.

ಹಿಂದೆ ಪೇಪರ್- ಹುಲಿ ಎಂಬ ಬಿರುದಾಂಕಿತರು ಇಂದು ಮೊಬೈಲ್- ಹುಲಿ ಎಂದು ಮರುನಾಮಕರಣಗೊಂಡಿದ್ದಾರಷ್ಟೆ!

ಹ್ಯಾಷ್‌ಟ್ಯಾಗ್- ಆ್ಯಕ್ಟಿವಿಸಂ ಎಂಬ ಪದದ ಬಳಕೆ ಮೊಟ್ಟಮೊದಲ ಬಾರಿಗೆ ಗಾರ್ಡಿಯನ್ ಪತ್ರಿಕೆ 2011ರಲ್ಲಿ ಉಪಯೋಗಿಸಿತು. 2011 ರಿಂದ 2018ರವರೆಗೆ ಅನೇಕ ಹ್ಯಾಷ್‌ಟ್ಯಾಗ್‌ಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿವೆ.

ಅವುಗಳು ಸಾಗಿಬಂದ ಹಾದಿಯ ಪಕ್ಷಿನೋಟ ಇಲ್ಲಿದೆ.

2011- September #OccupyWallStreet

ವಿಶ್ವಾದ್ಯಂತ ತಾಂಡವವಾಡುತ್ತಿರುವ ಆರ್ಥಿಕ-ಅಸಮಾನತೆ ಕುರಿತು ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಮಿಕರ ಬೃಹತ್ ಪ್ರತಿಭಟನೆ ರ‍್ಯಾಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮನ್ನಣೆ ನೀಡಿದ ಹ್ಯಾಷ್‌ಟ್ಯಾಗ್ #OccupyWallStreet

2012- March  #KONY2012

ಜೋಸಫ್-ಕೋನಿ ಎಂಬ ಉಗಾಂಡ ದೇಶದ ಸರ್ವಾಧಿಕಾರಿ ಪುಟ್ಟ-ಪುಟ್ಟ ಮಕ್ಕಳನ್ನು ಮಿಲಟರಿ ಪಡೆಗೆ ಬಲವಂತವಾಗಿ ಸೇರ್ಪಡೆ ಮಾಡುತಿದ್ದ ಹೀನಕೃತ್ಯದ ವಿರುದ್ಧ ರೂಪಗೊಂಡ ಅಭಿಯಾನವೇ #KONY2012. ಈ ಪ್ರತಿಭಟನೆಯ ಮುಂದಾಳತ್ವವನ್ನು ಇನಿವಿಸಿಬಲ್ ಚಿಲ್ಡರ್ನ್ ಎಂಬ ಸಂಸ್ಥೆವಹಿಸಿಕೊಂಡು ಅಭೂತಪೂರ್ವ ಯಶಸ್ಸು ಸಹ ಗಳಸಿತು.

2013-July #BlackLivesMatter

ಅಮೆರಿಕದಲ್ಲಿ ಟ್ರಾವೋನ್ ಮಾರ್ಟಿನ್ ಎಂಬ ಆಫ್ರಿಕಾ ಜನಾಂಗದ ಹದಿಹರೆಯದ ಹುಡಗನ ಕಗ್ಗೊಲೆ ಮಾಡಿದ ಶ್ವೇತ ಜನಾಂಗದ ಜಾರ್ಜ್ ಜೀಮರ‍್ಮನ್ ಎಂಬ ವ್ಯಕ್ತಿಯನ್ನು ನ್ಯಾಯಾಲಯ ಖುಲಾಸೆ ಮಾಡಿದರ ವಿರುದ್ಧ ಸಾಮಜಿಕ ಕಾರ‍್ಯಕರ್ತರಾದ ಆಲಿಕಾ ಗಾರ್ರಜಾ, ಪಾಟ್ರಿಸಾ ಕುಲ್ಲರ‍್ಸ್, ಮತ್ತು ಒಪಾಲ್ ಟೋಮೆಟಿ ಪ್ರಾರಂಭ ಮಾಡಿದ ಅಭಿಯಾನವೇ #BlackLivesMatter.

ಇಂದು ಪಾಶ್ಚಿಮತ್ಯ ದೇಶಗಳಲ್ಲಿ ಕಪ್ಪು-ವರ್ಣದವರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಪ್ರಮುಖ ಅಸ್ತ್ರವಾಗಿ #BlackLivesMatter ರೂಪಗೊಂಡಿದೆ.

2014- April #BringBackOurGirls

ನೈಜಿರಿಯಾದಲ್ಲಿ ನಡೆದ ಭಯಾನಕ ಮಕ್ಕಳ ಅಪಹರಣದಲ್ಲಿ ಸುಮಾರು 276 ಶಾಲಾ ಮಕ್ಕಳು ಕಣ್ಮರೆಯಾದ ಸಂಧರ್ಭದಲ್ಲಿ ಪ್ಲೋಟಸ್ ಮಿಚೆಲ್ ಒಬಾಮಾ ಎಂಬ ಸಾಮಾಜಿಕ ಕಾರ‍್ಯಕರ್ತರು ರೂಪಿಸಿದ ಅಭಿಯಾನವೇ #BringBackOurGirls.

ಈ ಹೀನಕೃತ್ಯದ ಹಿಂದೆ ಇದ್ದ ಸಂಘಟನೆ ಇಸ್ಲಾಮಿಕ್ ಭಯೋತ್ಪಾದಕರ ಗುಂಪು ಎಂಬುದು ಬೆಳಕಿಗೆ ಬಂತಲ್ಲದೇ, ಆ ಮಕ್ಕಳಲ್ಲಿ ಅರ್ಧದಷ್ಟು ಮಂದಿಯನ್ನು ಬಿಡಸುವುದರಲ್ಲಿ ಈ ಹ್ಯಾಷ್‌ಟ್ಯಾಗ್‌ನ ಪಾತ್ರವೂ ಪ್ರಮುಖವಾದುದೇ ಎಂದರೆ ತಪ್ಪಾಗಲಾರದು.

2014- May #YesAllWomen

2014 ರಲ್ಲಿ 22 ವರ್ಷದ ಮಾನಸಿಕ ಸ್ಥಿಮಿತವಿಲ್ಲದ ಸ್ತ್ರೀ-ದ್ವೇಷಿ ವ್ಯಕ್ತಿ ಒಬ್ಬ ಕ್ಯಾಲಿಪೋರ್ನಿಯಾ ಯುನಿವರ್ಸಿಟಿಯ ಸಾಂಟಾ ಬಾರಬರಾ ಕ್ಯಾಂಪಸ್‌ನಲ್ಲಿ 6 ಜನರ ಬರ್ಬರ ಹತ್ಯೆಮಾಡಿದ್ದ. ಆತನ ಸಾಮಾಜಿಕ ಜಾಲತಾಣದ ಪೋಸ್ಟಿಂಗ್‌ಗಳು ಸಹ ಆತ ಸ್ತ್ರೀ-ದ್ವೇಷಿ ಎಂಬುದನ್ನು ರುಜುವಾತು ಮಾಡಿದ್ದವು.

ಅಂತಹ ಹೀನಕೃತ್ಯದ ವಿರುದ್ಧ ಮಹಿಳಾವಾದಿಗಳು ರೂಪಿಸಿದ ಅಭಿಯಾನವೇ #YesAllWomen. ವಿಶೇಷವೆಂದರೆ, ಎಲ್ಲಾ ಗಂಡಸರು ಸ್ತ್ರೀ-ದ್ವೇಷಿಗಳಲ್ಲ ಎಂಬುದನ್ನು ಸಾರುವ ಅಭಿಯಾನಕ್ಕೆ ಇದು ದಾರಿ ಮಾಡಿಕೊಟ್ಟಿತು ಆ ಹ್ಯಾಷ್‌ಟ್ಯಾಗ್ #YesAllWomen.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry