ಪಾಳುಬಿದ್ದ 16 ಸಾವಿರ ಹೆಕ್ಟೇರ್ ಕೃಷಿ ಭೂಮಿ

7
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ವ್ಯವಸಾಯ ಪ್ರಮಾಣದಲ್ಲಿ ಕುಸಿತ; ಸರ್ಕಾರದ ನೀತಿಗೆ ಬೇಸರ

ಪಾಳುಬಿದ್ದ 16 ಸಾವಿರ ಹೆಕ್ಟೇರ್ ಕೃಷಿ ಭೂಮಿ

Published:
Updated:
ಪಾಳುಬಿದ್ದ 16 ಸಾವಿರ ಹೆಕ್ಟೇರ್ ಕೃಷಿ ಭೂಮಿ

ಕಾರವಾರ: ಜಿಲ್ಲೆಯಲ್ಲಿ 18 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 16,643 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ವ್ಯವಸಾಯ ನಿಂತಿದೆ. ಒಂದು ಕಾಲದಲ್ಲಿ ನಳನಳಿಸುತ್ತಿದ್ದ ಗದ್ದೆಗಳು ಪಾಳು ಬಿದ್ದಿದ್ದು, ಉಳುಮೆಗೆ ಕಾಯುತ್ತಿವೆ. ಕಾರವಾರ ತಾಲ್ಲೂಕಿನಲ್ಲಿ ಒಟ್ಟು 3,828 ಹೆಕ್ಟೇರ್‌  ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ನಿಂತಿದ್ದು, ಜಿಲ್ಲೆಯಲ್ಲೇ ಅಧಿಕವಾಗಿದೆ.

ಕಾರಣಗಳೇನು?: ಕೂಲಿ ಕಾರ್ಮಿಕರ ಸಮಸ್ಯೆ, ಯುವಕರಿಗೆ ಪಟ್ಟಣಗಳತ್ತ ಆಕರ್ಷಣೆ, ಹಳ್ಳಿಗಳಲ್ಲಿ ಮೂಲ ಸೌಕರ್ಯ ಕೊರತೆ, ವಿವಿಧ ಯೋಜನೆಗಳಿಗೆ ಕೃಷಿ ಭೂಮಿ ಸ್ವಾಧೀನದಂತಹ ಸಮಸ್ಯೆಗಳಿಂದಾಗಿ ಕೃಷಿ ಕಡಿಮೆಯಾಗಿದೆ ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮ ಗಾಂವ್ಕರ್.

ರೈತರು ಬೆಳೆದ ಬೆಳೆಗೆ ವೈಜ್ಞಾನಿಕವಾಗಿ ದರ ದೊರೆಯುತ್ತಿಲ್ಲ. ಸಾಲಮನ್ನಾಕ್ಕೆ ಅಗತ್ಯವಿರುವ ಹಣವನ್ನೇ ಬೆಳೆಯ ದರ ಸ್ಥಿರೀಕರಣಕ್ಕೆ ಬಳಸಿದರೆ ಸಾಕು. ರೈತರು ಅವರ ಪಾಡಿಗೆ ಕೃಷಿ ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನುವುದು ಅವರ ಅನಿಸಿಕೆ.

ಶರಾವತಿ ನದಿಯ ಹಿನ್ನೀರು ಪ್ರದೇಶದಲ್ಲಿ ಪದೇಪದೇ ಪ್ರವಾಹ ಉಂಟಾದ ಕಾರಣ ರೈತರು ತೋಟಗಾರಿಕಾ ಬೆಳೆಗಳತ್ತ ಹೆಚ್ಚು ಗಮನ ಹರಿಸಿದರು. ಅಂಕೋಲಾ ತಾಲ್ಲೂಕಿನಲ್ಲಿ ಕಲ್ಲಂಗಡಿ, ಮಾವು ಬೆಳೆಗಾರರ ಸಂಖ್ಯೆ ಹೆಚ್ಚಿದೆ. ಉಪ್ಪುನೀರಿನ ಸಮಸ್ಯೆ

ಯಿಂದಾಗಿ ಕಾರವಾರ ತಾಲ್ಲೂಕಿನ ಸಿದ್ದರ, ಕಿನ್ನರ, ಕೆರವಡಿ, ಹಳಗಾ ಭಾಗದಲ್ಲಿ ಕೃಷಿಭೂಮಿಯಲ್ಲಿ ಫಲವತ್ತತೆ ಕಡಿಮೆಯಾಗಿದ್ದೂ ಪ್ರಮುಖ ಕಾರಣಗಳಾಗಿವೆ.

ಕುಮಟಾ ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹಲವಾರು ರೈತರು ಅತ್ಯಂತ ಫಲವತ್ತಾದ ಕೃಷಿಭೂಮಿ

ಗಳನ್ನು ನಿವೇಶನಗಳನ್ನಾಗಿ ಮಾರಾಟ ಮಾಡಿದರು. ಇದರಿಂದ ಈ ಭಾಗದ ಈರುಳ್ಳಿ ಬೆಳೆಗೆ, ಭತ್ತದ ಕೃಷಿಗೆ ತೀವ್ರ ಹಿನ್ನಡೆಯಾಗಿದೆ ಎನ್ನುವ ಅಭಿಪ್ರಾಯವೂ ಇದೆ.

ಸಣ್ಣ ಹಿಡುವಳಿ; ಖರ್ಚು ಅಧಿಕ: ‘ಸಣ್ಣ ಹಿಡುವಳಿದಾರರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿದೆ. ತುಂಡುಭೂಮಿಯಲ್ಲಿ ಕೃಷಿ ಮಾಡಲು ಖರ್ಚು ಜಾಸ್ತಿ, ಆದಾಯ ಕಡಿಮೆಯಾಗುತ್ತದೆ. ಆದ್ದರಿಂದ ಹಲವಾರು ಕಡೆ ರೈತರು ಕೃಷಿ ಮಾಡಲು ಮುಂದಾಗುತ್ತಿಲ್ಲ’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಡಾ.ಎಸ್.ಜಿ.ರಾಧಾಕೃಷ್ಣ.

ಕೃಷಿಗೆ ಇಲಾಖೆಯಿಂದ ಪ್ರೋತ್ಸಾಹ: ಕೂಲಿ ಕಾರ್ಮಿಕರ ಸಮಸ್ಯೆ ನೀಗಿಸಲು ಕೃಷಿಯಲ್ಲಿ ಯಂತ್ರಗಳ ಬಳಕೆಯನ್ನು ಇಲಾಖೆ ಪ್ರೋತ್ಸಾಹಿಸು

ತ್ತಿದೆ. ಹೊಸ ಯಂತ್ರಗಳನ್ನು ಖರೀದಿಸಲು ಸಾಧ್ಯವಾಗದವರ ಅನುಕೂಲಕ್ಕಾಗಿ ಬಾಡಿಗೆ ಆಧಾರದಲ್ಲೂ ನೀಡಲಾಗುತ್ತಿದೆ. ಸರ್ಕಾರದಿಂದ ವಿವಿಧ ಯೋಜನೆಗಳಿದ್ದು, ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸಲಾಗುತ್ತಿದೆ. ಕೃಷಿ ಭೂಮಿಯನ್ನು ಕಡೆಗಣಿಸದಂತೆ ಮನವೊಲಿಕೆ ಮಾಡಲು ನಿರಂತರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳುತ್ತಾರೆ.

ಮುಂಡಗೋಡದಲ್ಲಿ ಏರಿಕೆ

ಇಡೀ ಜಿಲ್ಲೆಯಲ್ಲಿ ಕೃಷಿಭೂಮಿಯ ವ್ಯಾಪ್ತಿ ಕಡಿಮೆಯಾಗುತ್ತಿದೆ. ಆದರೆ, ಮುಂಡಗೋಡ ತಾಲ್ಲೂಕಿನಲ್ಲಿ ಮಾತ್ರ 18 ವರ್ಷಗಳ ಅವಧಿಯಲ್ಲಿ 629 ಹೆಕ್ಟೇರ್‌ಗಳಷ್ಟು ಏರಿಕೆ ಕಂಡಿದೆ. 2000–01ನೇ ಸಾಲಿನಲ್ಲಿ  12,971 ಹೆಕ್ಟೇರ್‌ ಇದ್ದರೆ 2017–18ನೇ ಸಾಲಿನಲ್ಲಿ 13,600 ಹೆಕ್ಟೇರ್‌ಗೆ ಹೆಚ್ಚಳವಾಗಿದೆ. ಮೆಕ್ಕೆಜೋಳ ಕೃಷಿಗೆ ರೈತರು ಹೆಚ್ಚು ಒಲವು ತೋರಿಸುತ್ತಿರುವುದು ಇದಕ್ಕೆ ಕಾರಣ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಮುಂಗಾರು ಮಳೆ ಚೆನ್ನಾಗಿ ಆಗುತ್ತಿದ್ದು, ರೈತರು ಆಸಕ್ತಿಯಿಂದ ಬಿತ್ತನೆ ಬೀಜಗಳನ್ನು ಖರೀದಿಸುತ್ತಿದ್ದಾರೆ. ಈ ಬಾರಿ ಕೃಷಿಭೂಮಿಯಲ್ಲಿ ಹೆಚ್ಚಳದ ನಿರೀಕ್ಷೆಯಿದೆ 

ಡಾ.ಎಸ್.ಜಿ.ರಾಧಾಕೃಷ್ಣ, ಸಹಾಯಕ ಕೃಷಿ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry