ಶುಕ್ರವಾರ, ಏಪ್ರಿಲ್ 3, 2020
19 °C

ಬಿಜೆಪಿಗೆ ಸರಣಿ ಸೋಲುಗಳ ಪಾಠ

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಬಿಜೆಪಿಗೆ ಸರಣಿ ಸೋಲುಗಳ ಪಾಠ

ಈ ಮೊದಲೇ ಮಾಡಿದ ವೆಚ್ಚಕ್ಕೆ ಪೂರಕವಾಗಿ ಇನ್ನಷ್ಟು ಹಣವನ್ನು ವೆಚ್ಚ ಮಾಡುವುದು ವ್ಯರ್ಥ ಎನ್ನುವುದು ಬಹಳ ಹಿಂದೆಯೇ ಸಾಬೀತಾಗಿದೆ. ಕೆಟ್ಟ ರಾಜಕೀಯದ ನಂತರ ಸದುದ್ದೇಶದಿಂದ ಹಣ ವೆಚ್ಚ ಮಾಡುವುದು ಸರಿಯೇ ಎನ್ನುವ ಪ್ರಶ್ನೆ ಈಗ ಉದ್ಭವಿಸಿದೆ. ಪ್ರತಿಯೊಂದು ಸರ್ಕಾರವೂ ತನ್ನ ಅಧಿಕಾರಾವಧಿಯ ಕೊನೆಯ ವರ್ಷದಲ್ಲಿ ಇಂತಹ ತಪ್ಪುಗಳನ್ನು ಮಾಡುತ್ತಲೇ ಇರುತ್ತದೆ. ನರೇಂದ್ರ ಮೋದಿ ಅವರೂ ಇಂಥ ಪ್ರಮಾದ ಎಸಗುತ್ತಿದ್ದಾರೆಯೇ? ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ಣ ಬಹುಮತ ಗಳಿಸುವ ಬಗ್ಗೆ ಅವರಲ್ಲಿ ತಳಮಳ ಆರಂಭವಾಗಿದೆಯೇ ಎನ್ನುವ ಅನುಮಾನವನ್ನಂತೂ ಮೂಡಿಸಿದೆ.

ಹಾಗಂತ, ಅವಸರದ ತೀರ್ಮಾನಕ್ಕೂ ಬರುವುದು ಸರಿಯಲ್ಲ. ನಾವಿಲ್ಲಿ ವಾಸ್ತವ ಸಂಗತಿಗಳನ್ನಷ್ಟೇ ಪರಿಶೀಲಿಸೋಣ. ಸಕ್ಕರೆ ಉದ್ದಿಮೆಯ ಪಾಲಿಗೆ ಕೇಂದ್ರ ಸರ್ಕಾರವು ಮೊನ್ನೆ ₹ 7,000 ಕೋಟಿಗಳಷ್ಟು ಮೊತ್ತದ ಪರಿಹಾರ ಕೊಡುಗೆ ಘೋಷಿಸಿದೆ. ಈ ಕೊಡುಗೆಯು ಕಬ್ಬು ಬೆಳೆಗಾರರ, ಸಕ್ಕರೆ ಕಾರ್ಖಾನೆಗಳ ಸಂಕಷ್ಟಗಳನ್ನು ದೂರ ಮಾಡುವುದೇ ಅಥವಾ ಮುಂದೂಡುವುದೇ ಎನ್ನುವ ಸಂದೇಹಗಳಿಗೆ ಖಂಡಿತವಾಗಿಯೂ ಇಲ್ಲ ಎಂದೇ ಉತ್ತರಿಸಬೇಕಾಗುತ್ತದೆ.

ದೇಶದಲ್ಲಿ ಸಕ್ಕರೆ ಉತ್ಪಾದನಾ ಪ್ರಮಾಣ ಅತಿ ಎನಿಸುವಷ್ಟರ ಮಟ್ಟಿಗೆ ಹೆಚ್ಚಿಗೆ ಇದೆ. ‘ರೈತರ ಪರ’ ಇರುವ ಸರ್ಕಾರ ಕಡ್ಡಾಯ ಮಾಡಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪಾವತಿಸಿದರೆ ಸಕ್ಕರೆ ಕಾರ್ಖಾನೆಗಳು ತಮ್ಮ ಉತ್ಪಾದನಾ ವೆಚ್ಚವನ್ನೂ ಸರಿದೂಗಿಸಲು ಸಾಧ್ಯವಾಗುವುದಿಲ್ಲ. ಕಬ್ಬು ಬೆಳೆಗಾರರಿಗೆ ಹೆಚ್ಚು ಲಾಭದಾಯಕವಾದ ಬೆಲೆ ಪಾವತಿಸಬೇಕು ಎನ್ನುವುದು ಸರ್ಕಾರದ ಧೋರಣೆಯಾಗಿದ್ದರೆ, ಸಕ್ಕರೆ ಆಮದು ನಿಷೇಧಿಸಬೇಕಾಗುತ್ತದೆ. ಸರ್ಕಾರ ಆ ನಿರ್ಧಾರವನ್ನೂ ಕೈಗೊಂಡಿದೆ. ಆದಾಗ್ಯೂ, ರೈತರಿಗೆ ಕೊಡಮಾಡುವ ಬೆಲೆಯು ಕಾರ್ಖಾನೆಗಳ ಪಾಲಿಗೆ ನ್ಯಾಯಸಮ್ಮತವಾಗಿರದಿದ್ದರೆ ಸರ್ಕಾರವೇ ಹೊಸ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ನಿಗದಿಪಡಿಸಬೇಕಾಗುತ್ತದೆ. ಸಕ್ಕರೆಯನ್ನು ಈ ಬೆಲೆಗಿಂತ ಕಡಿಮೆಗೆ ಮಾರಾಟ ಮಾಡಬಾರದು ಎಂದರೆ, ಅಂತಹ ನಿರ್ಧಾರವು ಲೈಸನ್ಸ್ ರಾಜ್‌ ನಿಯಂತ್ರಣ ವ್ಯವಸ್ಥೆಯ ಅಸಂಬದ್ಧತೆಯ ಪ್ರತೀಕವಾಗಿರುತ್ತದೆ. ಸದ್ಯಕ್ಕೆ ಸಕ್ಕರೆಯ ಬೆಲೆಯನ್ನು ನಿಯಂತ್ರಿಸಲಾಗುತ್ತಿದೆ. 2019ರ ಚುನಾವಣೆಯಲ್ಲಿ ಭಾಗವಹಿಸುವ ಶೇ 80ರಷ್ಟು ಮತದಾರರಿಗೆ ಈ 60ರ ದಶಕದ ಆರ್ಥ ವ್ಯವಸ್ಥೆಯ ಅಸಹನೀಯ ಧೋರಣೆ ಬಗ್ಗೆ ಮಾಹಿತಿ ಇರುವುದಿಲ್ಲ. ಇದೊಂದು ಅಸಹ್ಯಕರ ರಾಜಕೀಯವೂ ಹೌದು. ಏಕೆ ಎನ್ನುವುದಕ್ಕೆ ಇಲ್ಲಿದೆ ವಿವರಗಳು...

ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ರೈತರು ಅತಿಯಾದ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಾರೆ. ಇದರಿಂದ ಗರಿಷ್ಠ ಪ್ರಮಾಣದಲ್ಲಿ ಸಕ್ಕರೆ ಉತ್ಪಾದನೆ ಆಗುತ್ತಿದೆ. ಭಾರತೀಯರು ಪ್ರತಿ ಬಾರಿ ಊಟ ಮಾಡುವಾಗ ಜಿಲೇಬಿ ಮತ್ತು ಗುಲಾಬ್ ಜಾಮೂನ್ ಕಡ್ಡಾಯವಾಗಿ ಸೇವಿಸಬೇಕು ಎಂದು ಕಾಯ್ದೆ ಮಾಡಿದರೆ ಮಾತ್ರ ಉತ್ಪಾದನೆಯಾದ ಸಕ್ಕರೆಯ ಗಮನಾರ್ಹ ಪ್ರಮಾಣ ಖರ್ಚಾದೀತು. ಜಾಗತಿಕ ಮಾರುಕಟ್ಟೆಯಲ್ಲಿ ಇರುವ ಸದ್ಯದ ಬೆಲೆಯ ಪ್ರಕಾರ ಸಕ್ಕರೆ ರಫ್ತು ಮಾಡಲೂ ಸಾಧ್ಯವಿಲ್ಲ. ಉದ್ದಿಮೆಗೆ ನೀಡುವ ಕೋಟ್ಯಂತರ ರೂಪಾಯಿಗಳು ಕಾಕಂಬಿ ಜತೆ ಚರಂಡಿಯಲ್ಲಿ ಹರಿದು ಹೋಗುತ್ತವೆ. ಇಂತಹ ನೆರವಿನ ಬದಲಿಗೆ ನೀರಾವರಿ ಸೌಲಭ್ಯ ಇರುವ ಕಡೆಗಳಲ್ಲಿ ರೈತರು ಕಬ್ಬಿಗೆ ಬದಲಾಗಿ ಪರ್ಯಾಯ ಬೆಳೆ ಬೆಳೆಯುವಂತೆ ಉತ್ತೇಜನ ನೀಡಲು ಬಳಸಿಕೊಳ್ಳಬೇಕು. ನೀರಿನ ಕೊರತೆ ಅತಿಯಾಗಿರುವ ಮಹಾರಾಷ್ಟ್ರದಲ್ಲಿ ಕಬ್ಬು ಬೆಳೆಯುವ ವ್ಯಾಮೋಹವು ಪರಿಸರ ಸಮತೋಲನವನ್ನೇ ಏರುಪೇರು ಮಾಡಿ ಅನಾಹುತವನ್ನು ಸೃಷ್ಟಿಸಿದೆ. ಸಾವಿರಾರು ರೈತರು ಕಬ್ಬು ಬೆಳೆಯಿಂದ ವಿಮುಖರಾಗುವಂತೆ ಮಾಡಬೇಕಾಗಿದೆ.

ಕಬ್ಬು ಬೆಳೆಗಾರರು ಹಣ್ಣುಗಳನ್ಮು ಬೆಳೆದು ಕೈತುಂಬ ಹಣ ಸಂಪಾದಿಸಬಹುದು. ಇದಕ್ಕಾಗಿ ₹ 20 ಸಾವಿರ ಕೋಟಿ ಖರ್ಚು ಮಾಡಿದರೆ ಆರ್ಥಿಕವಾಗಿ ತುಂಬ ಲಾಭದಾಯಕ ಆಗಿರುತ್ತದೆ. ಬೆಳೆಗಾರರಿಗೂ ಆರ್ಥಿಕತೆಗೂ ಇದರಿಂದ ಹೆಚ್ಚಿನ ಪ್ರಯೋಜನ ಲಭಿಸಲಿದೆ. ರಾಜಕೀಯವಾಗಿಯೂ ಇದೊಂದು ಜಾಣತನದ ನಿರ್ಧಾರ ಆಗಿರಲಿದೆ. ಆದರೆ 2019ರ ಮೇ ತಿಂಗಳ ಮುಂಚೆ ಇದು ಕಾರ್ಯಗತಗೊಳ್ಳುವುದಿಲ್ಲ. ಹೀಗಾಗಿ ಸರ್ಕಾರವು ಪ್ರತಿಯೊಬ್ಬರೂ ಅಸಂತುಷ್ಟರಾಗುವಂತೆ ಮಾಡಿದೆ. ಎಲ್ಲರೂ ‘ಇನ್ನಷ್ಟು ನೆರವು ಬೇಕು’ ಎಂದು ಹಕ್ಕೊತ್ತಾಯ ಮಂಡಿಸುತ್ತಾರೆ. ಅತಿಯಾದ ಸಕ್ಕರೆ ಉತ್ಪಾದನೆಯು ಉದ್ಯಮದ ಪಾಲಿಗೆ ಕಹಿಯಾಗುವಂತೆ ಮಾಡಿದೆ. ಅತಿಯಾಗಿ ಲಭ್ಯ ಇರುವ ಸಕ್ಕರೆಯನ್ನೇ ಎಲ್ಲರ ಬಾಯಿಗೆ ಸುರಿಯಬೇಕಾಗಿದೆ.

ದೋಷಪೂರಿತ ಕೃಷಿ ಆರ್ಥಿಕತೆಯ ಯೋಜನೆಗಳಿಂದ ಗಮನವನ್ನು ಬೇರೆಡೆ ತಿರುಗಿಸದೆ ಸಕ್ಕರೆ ರಾಜಕೀಯವನ್ನು ಗಮನಿಸಬಹುದು. ಉತ್ತರ ಪ್ರದೇಶದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಕಬ್ಬು ಬೆಳೆಯುವ ಕೈರಾನಾ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಸರ್ಕಾರ ಈ ಕೊಡುಗೆ ಪ್ರಕಟಿಸಿದೆ. 2014ರಲ್ಲಿ ಬಿಜೆಪಿ

ಯನ್ನು ಬೆಂಬಲಿಸಿದ್ದ ಕಬ್ಬು ಬೆಳೆಗಾರರು ಈಗ ಅದೇ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರ ಜತೆ ಈ ಹಿಂದೆ ನಡೆಸಿದ್ದ ಕೋಮು ಗಲಭೆಯನ್ನೂ ಮರೆತು ತಾವೆಲ್ಲರೂ ಎದುರಿಸುವ ಸಮಾನ ಸಮಸ್ಯೆಗೆ ಕೈಜೋಡಿಸಿದ್ದಾರೆ. ಜಾತಿಗಳ ಧ್ರುವೀಕರಣ ಮರೆತುಬಿಡುವಷ್ಟು ರೈತರು ಸರ್ಕಾರದ ವಿರುದ್ಧ ಕ್ರೋಧತಪ್ತರಾಗಿದ್ದಾರೆ. ಜಾತಿಗಳ ಧ್ರುವೀಕರಣವನ್ನೂ ಅವರು ನಿರ್ಲಕ್ಷಿಸಿ ಮತ ಚಲಾಯಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅವಿವೇಕದ ಹೇಳಿಕೆಯೂ ಬಿಜೆಪಿಗೆ ತಿರುಗು ಬಾಣವಾಯಿತು. ಮರೆತೇ ಹೋಗಿದ್ದ ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಹೆಸರು ಪ್ರಸ್ತಾಪಿಸಿ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡರು‌. ಜನರನ್ನು ಧ್ರುವೀಕರಣಗೊಳಿಸಲು ತಮಗೆ ಗೊತ್ತಿರುವ ಏಕೈಕ ಉಪಾಯವನ್ನು ಬಳಸಲು ಹೋಗಿ ಮುಖ ಭಂಗಕ್ಕೆ ಗುರಿಯಾದರು.

ಹಿಂದಿ ಭಾಷೆಯಲ್ಲಿ ‘ಗನ್ನಾ’ ಎಂದರೆ ಕಬ್ಬು ಎಂದರ್ಥ. ಯೋಗಿ‌, ತಮ್ಮ ವಿರೋಧಿಗಳ ಕೈಗೆ ‘ಗನ್ನಾ ವಿರುದ್ಧ ಜಿನ್ನಾ’ ಎನ್ನುವ ಪ್ರಾಸಬದ್ಧ ಘೋಷಣೆಯ ಆಯುಧವನ್ನು ಸ್ವತಃ ನೀಡಿ ಕೈಸುಟ್ಟುಕೊಂಡರು. ರಾಜಕೀಯಕ್ಕೆ ಸಂಬಂಧಿಸಿದಂತೆ ಇದೇ ಸಂದರ್ಭದಲ್ಲಿ ನಡೆದ ಇನ್ನೂ ಕೆಲ ಘಟನೆಗಳಿಗೆ ಅವುಗಳದ್ದೇ ಆದ ಮಹತ್ವ ಇದೆ. ಉಪ ಚುನಾವಣಾ ಫಲಿತಾಂಶದಿಂದ ಬಿಜೆಪಿ ಅದೆಷ್ಟರ ಮಟ್ಟಿಗೆ ಆತಂಕಗೊಂಡಿತ್ತು ಎಂದರೆ, ತನ್ನ ಮಿತ್ರ ಪಕ್ಷಗಳ ಜತೆಗಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಕಾರ್ಯಪ್ರವೃತ್ತವಾಗಿತ್ತು.

ಕೈರಾನಾ ಉಪ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳದ ಬಹುದಿನಗಳ ಬೇಡಿಕೆ ಈಡೇರಿಸಲು ಸಮ್ಮತಿ ನೀಡಿತ್ತು. ಗುರುದ್ವಾರಗಳಲ್ಲಿ ಭಕ್ತರಿಗೆ ಉಚಿತವಾಗಿ ಊಟ ಬಡಿಸುವ ಸಮುದಾಯ ಅಡುಗೆ ಮನೆಗೆ (ಲಂಗರ್‌) ಖರೀದಿಸುವ ಸರಕುಗಳ ಮೇಲಿನ ಜಿಎಸ್‌ಟಿ ರದ್ದುಪಡಿಸಬೇಕೆಂಬ ಬೇಡಿಕೆಗೆ ಅಸ್ತು ಎಂದಿತ್ತು.

ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕರೆ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಬ್ಬರ ನಡುವಣ ಸಂಬಂಧ ಹಳಸಿರುವುದು ಎಲ್ಲರಿಗೂ ಗೊತ್ತಿರುವಂತಹ ಸಂಗತಿಯೇ ಆಗಿದೆ. ಸಕ್ಕರೆ ಉದ್ದಿಮೆಗೆ ಪರಿಹಾರ ಕೊಡುಗೆ ಪ್ರಕಟಿಸಿದ, ಶಿರೋಮಣಿ ಅಕಾಲಿ ದಳದ ಜಿಎಸ್‌ಟಿ ವಿನಾಯ್ತಿ ಬೇಡಿಕೆ ಈಡೇರಿಸಿದ ಒಂದೆರಡು ದಿನಗಳಲ್ಲಿಯೇ ಅಮಿತ್‌ ಶಾ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರನ್ನು ಎಳೆದುಕೊಂಡು ಉದ್ಧವ್‌ ಮನೆಗೆ ಭೇಟಿ ನೀಡಿದ್ದರು. ಅಪ್ಪ ಬಾಳ್‌ ಠಾಕರೆ ಅವರ ಗರಡಿಯಲ್ಲಿ ಪಳಗಿರುವ ಉದ್ಧವ್‌, ಈ ಭೇಟಿ ಸಂದರ್ಭದಲ್ಲಿಯೂ ರಾಜಕೀಯವಾಗಿ ತಮ್ಮ ಚಾಣಾಕ್ಷತೆ ಮೆರೆದರು. ಶಿವಸೇನಾ ಜತೆಗಿನ ಮೈತ್ರಿ ಸರ್ಕಾರ ಮುನ್ನಡೆಸುತ್ತಿರುವ ಮುಖ್ಯಮಂತ್ರಿಯೇ ಹೊರಗೆ ಕಾಯುವಂತೆ ಮಾಡಿದರು. ಇಂತಹ ಅವಮಾನ ನುಂಗಿಕೊಂಡು ಶಿವಸೇನಾದ ಮನೆ ಬಾಗಿಲಿಗೆ ಹೋಗುವ ಅಗತ್ಯ ಬಿಜೆಪಿಗೆ ಅನಿವಾರ್ಯವಾಗಿತ್ತೇ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ.

ನಾಲ್ಕು ವರ್ಷಗಳ ಹಿಂದೆ ಬಿಜೆಪಿಯು ಸಂಪೂರ್ಣ ಬಹುಮತದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಅದಕ್ಕೆ ಇತರ ಮಿತ್ರ ಪಕ್ಷಗಳ ಹಂಗಿನಲ್ಲಿ ಇರಬೇಕಾದ ಅಗತ್ಯ ಏನೂ ಇದ್ದಿರಲಿಲ್ಲ. ಆದರೂ, ಬಿಜೆಪಿ ಸಮ್ಮಿಶ್ರ ಸರ್ಕಾರದ ಧರ್ಮ ಪರಿಪಾಲಿಸುವ ನಾಟಕ ಮಾಡುತ್ತಿದೆ. ಆದರೆ, ವಾಸ್ತವ ಸಂಗತಿ ಬೇರೆಯೇ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮತ್ತು ಪ್ರಭಾವದ ಎದುರು ಮಿತ್ರ ಪಕ್ಷಗಳೆಲ್ಲ ಅನಿವಾರ್ಯವಾಗಿ ಬಗ್ಗಿ ನಡೆಯಬೇಕಾಗಿದೆ.

ಬಿಹಾರದ ನಿತೀಶ್‌ ಕುಮಾರ್‌ ಅವರು ಜಾತ್ಯತೀತ ವೇದಿಕೆ ತೊರೆದು ಭ್ರಷ್ಟಾಚಾರ ವಿರೋಧಿ ಬಣ ಆಯ್ಕೆ ಮಾಡಿಕೊಂಡು ಬಿಜೆಪಿ ಸ್ನೇಹ ಒಪ್ಪಿಕೊಂಡಿದ್ದಾರೆ. ಅವರೂ ಬಿಹಾರದಲ್ಲಿ ಎನ್‌ಡಿಎ ವಿರುದ್ಧವೇ ಒಡಕಿನ ಮಾತುಗಳನ್ನಾಡುತ್ತಿದ್ದಾರೆ. ಬಿಹಾರದಲ್ಲಿ ಮೂವರು ಸಂಸತ್ ಸದಸ್ಯರನ್ನು ಹೊಂದಿರುವ ಸಣ್ಣ ಪಕ್ಷ, ‘ಆರ್‌ಎಲ್‌ಎಸ್‌ಪಿ’ಯ ಉಪೇಂದ್ರ ಕುಶ್ವಾಹ ಅವರು ಕೂಡ ಪಟ್ನಾದಲ್ಲಿ ಏರ್ಪಡಿಸಲಾಗಿದ್ದ ಎನ್‌ಡಿಎ ಔತಣಕೂಟಕ್ಕೆ ಗೈರು ಹಾಜರಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಸಣ್ಣಪುಟ್ಟ ಮಿತ್ರ ಪಕ್ಷಗಳ ಬೇಡಿಕೆಗಳಿಗೆ ಬಿಜೆಪಿ ಮಣಿಯಬೇಕಾಗಿದೆ ಎನ್ನುವುದನ್ನು ಈ ಬೆಳವಣಿಗೆಗಳು ದೃಢಪಡಿಸುತ್ತಿವೆ.

ಕೈರಾನಾ ವಿದ್ಯಮಾನವು ಇತ್ತೀಚಿನ ಪ್ರಚೋದಕ ಸಂಗತಿಯಾಗಿದೆ. ಆದರೆ, ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಜನಪ್ರಿಯತೆಗೆ ಈ ಮೊದಲೇ ಅನೇಕ ಅಡಚಣೆಗಳು ಎದುರಾಗಿದ್ದವು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ತೆರವುಗೊಳಿಸಿದ್ದ ಗೋರಖಪುರ ಮತ್ತು ಫೂಲ್ಪುರ ಲೋಕಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶವು ಪಕ್ಷದ ಜನಪ್ರಿಯತೆ ಮಸುಕುಗೊಂಡಿರುವುದನ್ನು ಸೂಚಿಸಿದ್ದವು.

ಅಲ್ಲಿಂದಾಚೆಗೆ ಪಕ್ಷವು ಗಾಬರಿಯಲ್ಲಿ ಇನ್ನಷ್ಟು ತಪ್ಪುಗಳನ್ನು ಮೇಲಿಂದ ಮೇಲೆ ಎಸಗುತ್ತಿದೆ. 2014ರಲ್ಲಿ ಪಕ್ಷವು ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ತನ್ನ ಚುನಾವಣೆಯ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಅದರೆ, ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಸೋದರರನ್ನು ಹತಾಶೆಯಿಂದಲೇ ಅಪ್ಪಿ

ಕೊಂಡಿತ್ತು. ಈ ಸೋದರರ ಬೆನ್ನಿಗೆ ನಿಂತಿರುವ ಜನಸಮುದಾಯವು ಪಕ್ಷಕ್ಕೆ ನೆರವಾಗಲಿದೆ ಎಂದೇ ಎಣಿಕೆ ಹಾಕಿತ್ತು.

ಕರ್ನಾಟಕದಲ್ಲಿ ನರೇಂದ್ರ ಮೋದಿ ಅವರು ಈಗಲೂ ಜನಪ್ರಿಯರಾಗಿದ್ದರೆ. ಜನಾಭಿಪ್ರಾಯವು ತಮ್ಮ ಪರವಾಗಿ ಬೀಸುವಂತೆ ಪ್ರಭಾವ ಬೀರಬಲ್ಲರು. ಆದರೆ, ಬಳ್ಳಾರಿ ಸೋದರರ ಹೆಚ್ಚಿದ ಪ್ರಭಾವವು ಮತದಾರರ ಮನದಲ್ಲಿ ಅನುಮಾನದ ಬೀಜ ಬಿತ್ತಿದೆ. 15 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಗೆಲುವು ತಂದು ಕೊಡಲಿದ್ದಾರೆ ಎನ್ನುವ

ನಿರೀಕ್ಷೆಯನ್ನು ಈ ಸೋದರರು ಹುಸಿ ಮಾಡಿದ್ದಾರೆ.

ಬಳ್ಳಾರಿಯ ಗಣಿಗಾರಿಕೆ ಮತ್ತು ಕಬ್ಬಿಣ ಅದಿರು ಅಕ್ರಮ ರಫ್ತು ವಹಿವಾಟಿನಲ್ಲಿ ರೆಡ್ಡಿ ಸೋದರರ ವಿರುದ್ಧ ಸಾಕ್ಷ್ಯಾಧಾರಗಳು ಇಲ್ಲ ಎಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಸಿಬಿಐ ಹಠಾತ್ತಾಗ ನಿರ್ಧಾರಕ್ಕೆ ಬರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೋದ ಬಿಜೆಪಿಯು ತಾನಾಗಿಯೇ ತೊಂದರೆಗಳನ್ನು ಆಹ್ವಾನಿಸಿಕೊಂಡಿದೆ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಕೃಷಿ ಸಚಿವರನ್ನು ನೇಮಿಸಿದಾಗ ಅದಕ್ಕೆ ಅವರ ಬುದ್ಧಿವಂತಿಕೆಯನ್ನಾಗಲಿ ಅಥವಾ ಅವರ ಆಸಕ್ತಿಯನ್ನು ಪರಿಗಣಿಸಿರಲಿಲ್ಲ. ನಾಲ್ಕು ವರ್ಷಗಳ ಅವಧಿಯಲ್ಲಿ ಕೃಷಿ ವಲಯವು, ‘ಯುಪಿಎ’ದ 10 ವರ್ಷಗಳ ಅಧಿಕಾರಾವಧಿಯಕ್ಕಿಂತ ಅರ್ಧ ದರದಲ್ಲಿ ಬೆಳವ

ಣಿಗೆ ಕಂಡಿದೆ. ವಾರ್ಷಿಕ ಸರಾಸರಿ ಶೇ 3.7ರಷ್ಟು ಬೆಳವಣಿಗೆ ಸಾಧಿಸಿದ್ದರೂ ರೈತರ ಸಂಕಷ್ಟಗಳು ದೂರವಾಗಿಲ್ಲ.

ದೇಶಿ ಆಕಳ ಸೆಗಣಿಯಲ್ಲಿ ಮಾತ್ರ ಕಂಡು ಬರುವ ಬ್ಯಾಕ್ಟೀರಿಯಾಗಳಿಂದ ಸಾವಯವ ಗೊಬ್ಬರ ತಯಾರಿಸಿರುವುದು ವಿಶೇಷ ಸಂಗತಿಯಾಗಿದೆ. ಇದು ಖಂಡಿತವಾಗಿಯೂ ತಮಾಷೆಯ ಸಂಗತಿಯಲ್ಲ. ಕೃಷಿ ಸಚಿವಾಲಯವು ಇದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಈ ಗೊಬ್ಬರದ ಸಣ್ಣ ಬಾಟಲಿ ಖರೀದಿಸಿ ಅದನ್ನು ಸಾವಯವ ಕಸದಲ್ಲಿ ಮಿಶ್ರಣ ಮಾಡಬೇಕು. ಇದೊಂದು ಅದ್ಭುತ ಗೊಬ್ಬರ ಆಗಿರುವುದರಲ್ಲಿ ಯಾವುದೇ ಸಂದೇಹ ಇಲ್ಲ. ಆದರೆ, ಇದು 2022ರ ವೇಳೆಗೆ ರೈತರ ಆದಾಯವನ್ನು ಎರಡು ಪಟ್ಟುಗಳಷ್ಟು ಹೆಚ್ಚಿಸುವ ಬಗ್ಗೆ ನನಗೆ ಅನುಮಾನಗಳಿವೆ.

ಸಕ್ಕರೆ ಉದ್ದಿಮೆಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಹೊಸದೇನೂ ಅಲ್ಲ. ನಾಲ್ಕು ವರ್ಷಗಳಿಂದ ಇದು ದಿನೇ ದಿನೇ ದೊಡ್ಡದಾಗುತ್ತ ಬಂದಿದೆಯಷ್ಟೆ. ಆದರೆ, ಅದನ್ನು ಪರಿಹರಿಸಲು ಯಾರೊಬ್ಬರಿಗೂ ಸಮಯವೇ ಇಲ್ಲ. ಅದೇ ಮೂಲ ಸಮಸ್ಯೆ.

ಅಷ್ಟೇನೂ ಜನಪ್ರಿಯರಲ್ಲದ ಹೊಸ ಮುಖ್ಯಮಂತ್ರಿಗಳ ಆಯ್ಕೆಯಲ್ಲಿ ಪಕ್ಷ ತೋರಿಸಿರುವ ಅಹಂಕಾರವು ಈಗ ಅದಕ್ಕೇ ಮುಳುವಾಗುತ್ತಿದೆ. ಈ ಹೊಸ ಮುಖ್ಯಮಂತ್ರಿಗಳು ಪಕ್ಷಕ್ಕೆ ಹೊರೆಯಾಗಿ ಪರಿಣಮಿಸಿದ್ದಾರೆ. ಮೂರು ರಾಜ್ಯಗಳಲ್ಲಿ ಪಕ್ಷವು ಗೆಲುವಿನ ಹತ್ತಿರಕ್ಕೆ ಬರಲು ಕಾರಣರಾದ ಇವರನ್ನು ಈ ಹಿಂದೆ ನಿರ್ಲಕ್ಷಿಸಲಾಗಿತ್ತು. ಅವರ ಬಗ್ಗೆ ಅಸಹ್ಯಪಡಲಾಗಿತ್ತು. ಮಿತ್ರ ಪಕ್ಷಗಳ ಜತೆ ಸೊಕ್ಕಿನಿಂದ ನಡೆದುಕೊಂಡಿದ್ದ ಪಕ್ಷವು ಈಗ ಅದಕ್ಕೆ ಬೆಲೆ ತೆರುತ್ತಿದೆ.

ಈ ತಲೆಮಾರಿನ ರಾಜಕಾರಣಿಗಳು ಪೂರ್ಣ ಬಹುಮತದಿಂದ ಆಡಳಿತ ನಡೆಸುವ ಅನುಭವದಿಂದ ವಂಚಿತರಾಗಿದ್ದಾರೆ ಎನ್ನುವುದು ನಮಗೆಲ್ಲ ಗೊತ್ತಿದೆ. ಅಧಿಕಾರ ಅನುಭವಿಸಬೇಕು ಎನ್ನುವ ಕಾರಣಕ್ಕೆ ಜನರು ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸತ್ಯವನ್ನು ಬಿಜೆಪಿ ಒಪ್ಪಿಕೊಳ್ಳಬೇಕಾಗುತ್ತದೆ. ಮಿತ್ರ ಪಕ್ಷಗಳಿಗೆ ಮಹತ್ವದ್ದಲ್ಲದ ಖಾತೆ ನೀಡಿ ತೆಪ್ಪಗಿರಿಸಲಾಗಿದೆ. ಅಕಾಲಿಗಳು ಬಿಜೆಪಿಯ ಅತ್ಯಂತ ನಂಬಿಕಸ್ಥ ಮಿತ್ರರಾಗಿದ್ದಾರೆ. ಆದರೆ, ಅಕಾಲಿ ಮುಖಂಡರ ಸೊಸೆಗೆ ಮಾತ್ರ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. ಅವರಿಗೆ ಆಹಾರ ಸಂಸ್ಕರಣೆ ಖಾತೆ ನೀಡಲಾಗಿದೆ.

ಪಂಜಾಬ್‌ನಲ್ಲಿ ಅವರನ್ನು ‘ಚಟ್ನಿ, ಉಪ್ಪಿನಕಾಯಿ, ಮುರಬ್ಬಾ ಸಚಿವೆ’ ಎಂದೇ ಕರೆಯಲಾಗುತ್ತಿದೆ. ಶೀವಸೇನಾದ ಅನಂತ್‌ ಗೀತೆ ಅವರ ಖಾತೆ ಯಾವುದು ಎನ್ನುವುದು ನಿಮಗೆ ನೆನಪು ಇದೆಯೇ? ಮಿತ್ರ ಪಕ್ಷಗಳು ತಮ್ಮ ನಂಬಿಕಸ್ಥರಲ್ಲಿ ಯಾರೊಬ್ಬರಿಗೂ ರಾಜ್ಯಪಾಲರ ಹುದ್ದೆ ಕೊಡುಗೆ ನೀಡಲು ಸಾಧ್ಯವಾಗಿಲ್ಲ.

ಬಿಜೆಪಿಯು ಮೈತ್ರಿಕೂಟ ಸರ್ಕಾರ ಮುನ್ನಡೆಸುತ್ತಿದ್ದರೂ, ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ದೊಡ್ಡಣ್ಣನಂತೆ ವರ್ತಿಸುತ್ತಿದೆ. ಹಲವಾರು ಘಟನಾವಳಿಗಳೇ ಅದರ ನಡವಳಿಕೆ ನಿರ್ಧರಿಸುತ್ತಿರುವುದರಲ್ಲಿ ಚಕಿತಗೊಳ್ಳುವಂತಹದ್ದು ಏನೂ ಇಲ್ಲ.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)