‘ಬಿಜೆಪಿ ಸೇರಲು ತುದಿಗಾಲಿನಲ್ಲಿ ಅತೃಪ್ತರು’

7

‘ಬಿಜೆಪಿ ಸೇರಲು ತುದಿಗಾಲಿನಲ್ಲಿ ಅತೃಪ್ತರು’

Published:
Updated:

ಬೆಂಗಳೂರು: ‘ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿರುವ ಅತೃಪ್ತರು ನಮ್ಮ ಪಕ್ಷ ಸೇರಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಶನಿವಾರ ಇಲ್ಲಿ ನಡೆದ ಯುವ ಮೋರ್ಚಾ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ಎರಡೂ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿರುವುದನ್ನು ಆ ಪಕ್ಷಗಳ ಪ್ರಮುಖರು ಒಪ್ಪಿಲ್ಲ. ಇದು ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯ ಮಟ್ಟದ ನಾಯಕರು ಮಾತ್ರವಲ್ಲದೇ, ವಿಧಾನಸಭಾ ಕ್ಷೇತ್ರದ ಹಂತದಲ್ಲೂ ಪಕ್ಷ ಸೇರಲು ಮುಂದೆ ಬರುವ ಎಲ್ಲರನ್ನೂ ಸೇರಿಸಿಕೊಂಡು ಬಿಜೆಪಿಯನ್ನು ಬಲಿಷ್ಠಗೊಳಿಸಬೇಕಾಗಿದೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಶಾಸಕರು ನಡೆಸುತ್ತಿರುವ ಲಾಬಿ, ಕಚ್ಚಾಟದಿಂದ ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಕಾಂಗ್ರೆಸ್‌ ಹೈಕಮಾಂಡ್ ಜೆಡಿಎಸ್‌ ಮುಂದೆ ತಲೆಬಾಗಿ ಕುಳಿತಿದೆ. ಪ್ರಬಲ ಖಾತೆಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಮೂಲಕ ತಮ್ಮ ಶರಣಾಗತಿಯನ್ನು ಕಾಂಗ್ರೆಸ್ ನಾಯಕರು ತೋರಿಸಿದ್ದಾರೆ. ‘ಕಾಂಗ್ರೆಸ್ ಮುಕ್ತ ಕರ್ನಾಟಕ’ದ ನಮ್ಮ ಕನಸು ನನಸು ಮಾಡಲು ಆ ಪಕ್ಷದ ನಾಯಕರೇ ಮುಂದಾಗಿದ್ದಾರೆ ಎಂದು ಹೇಳಿದರು.

ಬಿಜೆಪಿಗೆ ಕುರ್ಚಿಯ ಮೇಲೆ ಆಸೆ ಇಲ್ಲ. ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುವ ನಿರ್ಣಯ ಮಾಡಿದ್ದೇವೆ. ವಿಧಾನಸಭೆಯಲ್ಲಿ 104 ಸದಸ್ಯ ಬಲ ಹೊಂದಿರುವ ನಾವು ಎದ್ದು ನಿಂತರೆ ಜೆಡಿಎಸ್–ಕಾಂಗ್ರೆಸ್ ಸರ್ಕಾರ ದಿಕ್ಕೆಟ್ಟು ಹೋಗಬೇಕಾಗುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಮೈತ್ರಿ ಸರ್ಕಾರದ ವೈಫಲ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಸದನದಲ್ಲಿ, ಬೀದಿಯಲ್ಲಿ ಮಾಡಬೇಕಾಗಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry