ಬ್ರಹ್ಮಾವರ: ಭಾರಿ ಗಾಳಿ, ಮಳೆಗೆ ಅಪಾರ ಹಾನಿ

7
ಹಾನಿಯುಂಟಾದ ಸ್ಥಳಗಳಿಗೆ ಅಧಿಕಾರಿಗಳ ಭೇಟಿ: ಪರಿಹಾರ

ಬ್ರಹ್ಮಾವರ: ಭಾರಿ ಗಾಳಿ, ಮಳೆಗೆ ಅಪಾರ ಹಾನಿ

Published:
Updated:

ಬ್ರಹ್ಮಾವರ: ಗ್ರಾಮಾಂತರ ಪ್ರದೇಶ ಬೈಕಾಡಿ, ಹಾರಾಡಿ, ಆರೂರು, ಬೆಳ್ಮಾರು ಮತ್ತು ಕೋಟ ಪರಿಸರದಲ್ಲಿ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ವ್ಯಾಪಕ ಮತ್ತು ಬಿರುಸಿನ ಗಾಳಿಗೆ ಅನೇಕ ಮನೆಗಳ ಮೇಲೆ ಮರಗಳು ಬಿದ್ದು ಹಾನಿ ಆಗಿದೆ. ಬ್ರಹ್ಮಾವರದ ಸುತ್ತಮುತ್ತ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಎರಡು ದಿನಗಳಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಆರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಮಾರಿನ ಕೂಸು ಪೂಜಾರಿ ಅವರ ಮನೆ ಮೇಲೆ ಶನಿವಾರ ಬೆಳಿಗ್ಗೆ ಬಾರಿ ಗಾತ್ರದ ಮರವೊಂದು ಬಿದ್ದ ಪರಿಣಾಮ ₹1 ಲಕ್ಷಕ್ಕೂ ಅಧಿಕ ಹಾನಿ ಉಂಟಾಗಿದೆ. ಪಂಚಾಯಿತಿ ಅಧ್ಯಕ್ಷ ರಾಜೀವ್‌ ಕುಲಾಲ ಸ್ಥಳಕ್ಕೆ ಬಂದು ಪಂಚಾಯಿತಿ ವತಿಯಿಂದ ₹ 5 ಸಾವಿರ ಪರಿಹಾರ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಪ್ರಾಕೃತಿಕ ವಿಕೋಪದ ಅಡಿಯಲ್ಲಿ ಪರಿಹಾರ ನೀಡುವ ಭರವಸೆ ನೀಡಿದರು. ಉಳಿದಂತೆ ಅಲ್ಲಲ್ಲಿ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಆಗಿದ್ದು, ಸ್ಥಳೀಯರ ಸಹಾಯದಿಂದ ಸಂಚಾರ ಸುಗಮಗೊಳಿಸಲಾಯಿತು.

ವಿದ್ಯುತ್ ವ್ಯತ್ಯಯ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಕಣ್ಣು ಮುಚ್ಚಾಲೆ ನಡೆಯುತ್ತಿದೆ. ಶುಕ್ರವಾರ ಮೆಸ್ಕಾಂ ಹೇರೂರು ಘಟಕದಲ್ಲಿ ಕಾಣಿಸಿಕೊಂಡ ತಾಂತ್ರಿಕ ತೊಂದರೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಕಡಿತಗೊಳಿಸಲಾಗಿತ್ತು. ರಾತ್ರಿ ಬೀಸಿದ ಗಾಳಿಗೆ ಮತ್ತೆ ವಿದ್ಯುತ್ ಕೈ ಕೊಟ್ಟಿದ್ದು ಶನಿವಾರ ಮಧ್ಯಾಹ್ನದ ತನಕವೂ ಕಡಿತಗೊಳಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಹಾದು ಹೋಗುವ ಚೇರ್ಕಾಡಿ ಫೀಡರ್‌ನ ಕುಂಜಾಲು, ಚೇರ್ಕಾಡಿ, ಪೇತ್ರಿ ಆರೂರು ಪರಿಸರದಲ್ಲಿ 15 ದಿನಗಳಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ. ಬ್ರಹ್ಮಾವರ ಮೆಸ್ಕಾಂ ಉಪವಿಭಾಗದಲ್ಲಿ ಲೈನ್‌ಮೆನ್‌ಗಳ ಕೊರತೆ ಮತ್ತು ಮಳೆಗಾಲದ ಪೂರ್ವ ತಯಾರಿ ಮಾಡದೇ ಇರುವುದು ಈ ಸಮಸ್ಯೆಗೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry