ಸೋನೆ ಮಳೆಗೆ ಮಿಂದ ಕೋಟೆ ನಗರಿ

7
ಕುರುಬರಹಳ್ಳಿ ರೈಲ್ವೆ ಸೇತುವೆ ರಸ್ತೆಯಲ್ಲಿ ನಿಂತ ನೀರು, ಕಾಡುವ ಸಂಚಾರ ಸಮಸ್ಯೆ

ಸೋನೆ ಮಳೆಗೆ ಮಿಂದ ಕೋಟೆ ನಗರಿ

Published:
Updated:

ಚಿತ್ರದುರ್ಗ: ನಗರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ಸಾಧಾರಣ ಮಳೆಯಾಗಿದೆ. ಮುಂಜಾನೆ ಆರಂಭವಾದ ವರುಣ ಮಧ್ಯಾಹ್ನದವರೆಗೂ ಬಿಟ್ಟು ಬಿಟ್ಟು ಸುರಿಯಿತು.

ಆಗಸದಿಂದ ಕೆಳಗಿಳಿದ ಮೋಡದ ಹನಿಗಳು ತಂಗಾಳಿಯನ್ನು ಸೀಳಿಕೊಂಡು ಬರುತ್ತಿರುವಂತೆ ಭಾಸವಾಗುತ್ತಿತ್ತು. ಸೋನೆಯಂತೆ ಸುರಿದ ಮಳೆಯಲ್ಲಿ ಕೋಟೆ ನಗರಿ ಸಂಪೂರ್ಣ ಮಿಂದಿತು. ನಗರದ ರಸ್ತೆಗಳು ಕೆಸರುಮಯವಾಗಿದ್ದವು. ಛತ್ರಿಯ ಆಸರೆಯಲ್ಲಿ ಮಕ್ಕಳು ಬೆಳಿಗ್ಗೆ ಶಾಲೆಗೆ ತೆರಳಿದರು.

ಐತಿಹಾಸಿಕ ಕಲ್ಲಿನ ಕೋಟೆ ಆಗಾಗ ಮೋಡಗಳಲ್ಲಿ ಮುಚ್ಚಿದಂತೆ ಕಾಣುತ್ತಿತ್ತು. ಜೋರಾಗಿ ಬೀಸುವ ಗಾಳಿಯಿಂದ ವಾತಾವರಣ ಶೀತಮಯವಾಗಿತ್ತು. ವಾಹನ ಸವಾರರು, ಪಾದಚಾರಿಗಳು ಸುರಿಯುತ್ತಿದ್ದ ಮಳೆಯಲ್ಲಿಯೇ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಪರಶುರಾಂಪುರ ಮತ್ತು ಚಿಕ್ಕಜಾಜೂರಿನಲ್ಲಿ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ತುಸು ಹೆಚ್ಚಾಗಿ ಮಳೆ ಆಗಿರುವುದರಿಂದ ಬಿತ್ತನೆ ಕಾರ್ಯವನ್ನು ಮುಂದೂಡಲಾಗಿದೆ. ಬಿತ್ತನೆಗೆ ಹೊಲಗಳಿಗೆ ತೆರಳಿದ್ದ ರೈತರು ಮಧ್ಯಾಹ್ನದ ಬಳಿಕ ಮನೆಗೆ ಮರಳಿದರು.

ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರ ಸಮೀಪದ ಹೀರೇಗುಂಟನೂರು–ಕುರುಬರಹಳ್ಳಿ ರೈಲ್ವೆ ಸೇತುವೆ ರಸ್ತೆಯಲ್ಲಿ ನಾಲ್ಕು ಅಡಿಯಷ್ಟು ನೀರು ನಿಂತಿದ್ದು, ಸಂಚಾರಕ್ಕೆ ತೊಂದರೆಯಾಗಿದೆ.

ದೆಪುರದಹಟ್ಟಿ, ಬೆನಕನಹಳ್ಳಿ, ಹುಲ್ಲೂರು, ಸಿಂಗಾಪುರ, ಜಾನಕೊಂಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೀರು ನಿಂತಿರುವುದು ಸಮಸ್ಯೆ ಸೃಷ್ಟಿಸಿದೆ. ಶಾಲಾ ವಾಹನ ಹಾಗೂ ಗ್ರಾಮಸ್ಥರು ಪರ ಊರುಗಳಿಗೆ ತೆರಳಲು ಇರುವ ಈ ಮಾರ್ಗದಲ್ಲಿ ಉಂಟಾದ ಸಮಸ್ಯೆ ನಿವಾರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ಪ್ರತಿ ಮಳೆಗಾಲದಲ್ಲಿಯೂ ಈ ಸಮಸ್ಯೆ ಎದುರಾಗುತ್ತಿದೆ. ರೈತರೇ ಪಂಪ್‌ಸೆಟ್‌ ಇಟ್ಟು ನೀರು ಹೊರಹಾಕಿದ್ದಾರೆ. ಮಳೆನೀರು ಹರಿಯಲು ಕಾಲುವೆ ನಿರ್ಮಿಸಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಡಿ.ಎಂ.ಲಿಂಗರಾಜು ಬೇಸರ ವ್ಯಕ್ತಪಡಿಸಿದ್ದಾರೆ.

ಸಿರಿಗೆರೆ ವರದಿ: ಗ್ರಾಮದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸುರಿದ ಮೃಗಶಿರ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಟಿಜಿಟಿ ಮಳೆಯಲ್ಲಿಯೂ ರೈತರು ಗೊಬ್ಬರ, ಬಿತ್ತನೆ ಬೀಜ ಕೊಂಡುಕೊಳ್ಳಲು ಸಾಲು–ಸಾಲಾಗಿ ಹೋಗುತ್ತಿರುವುದು ಕಂಡು ಬಂದಿತು. ವಿದ್ಯಾರ್ಥಿಗಳು ಶಾಲೆಗೆ ಹೋಗಲು ಪರಿತಪಿಸುತ್ತಿದ್ದ ದೃಶ್ಯ ಕಂಡು ಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry