6

‘ಆಹಾರ ಅಂದ್ರೆ ಖುಷಿ’

Published:
Updated:

* ಆಹಾರ ಅಂದ್ರೆ...

ಆಹಾರವೇ ನನ್ನ ಜೀವನ. ನನಗೆ ಆಹಾರ ಬರೀ ಸೇವನೆ ಅಷ್ಟೇ ಅಲ್ಲ, ದಿನದ 24 ಗಂಟೆಯೂ ನಾನು ಅದರ ಜೊತೆನೇ ಬದುಕುತ್ತೇನೆ, ಹಾಗೇ ಮಲಗುವುದೂ ನಾನು ಆಹಾರದ ಯೋಚನೆಯೊಂದಿಗೇ. ಪ್ರತಿಕ್ಷಣ ನಾನು ಆಹಾರವನ್ನು ಎಂಜಾಯ್‌ ಮಾಡುತ್ತೇನೆ. ಒಂದು ವೇಳೆ ಆಹಾರ ಎಂಬುದನ್ನು ನನ್ನ ಜೀವನದಿಂದ ಕಿತ್ತು ಹಾಕಿಬಿಟ್ಟರೆ ನಾನು ಏನಾಗುತ್ತೇನೋ ಗೊತ್ತಿಲ್ಲ.

* ಅಡುಗೆ ಕಾರ್ಯಕ್ರಮಗಳ ಮೂಲಕ ಪರಿಚಯವಾದವರು ನೀವು. ಅದರ  ಅನುಭವಗಳನ್ನು ಹಂಚಿಕೊಳ್ಳಿ.

‘ಮಾಸ್ಟರ್‌ ಶೆಫ್‌’ ಸೀಸನ್‌ 1 ಆರಂಭವಾದಾಗ ಆಹಾರವನ್ನು ನೋಡುವ ಕ್ರಮವೇ ಭಾರತದಲ್ಲಿ ಬದಲಾಯಿತು. ಇಲ್ಲಿ ಆಹಾರದ ಜೊತೆ ಪ್ರೀತಿ ಹಾಗೂ ಕಾಳಜಿ ಬೆರೆಸಿರುತ್ತಾರೆ. ಇದನ್ನೇ ನಾನು ಅಡುಗೆ ಕಾರ್ಯಕ್ರಮದಲ್ಲಿ ತೋರಿಸಿರೋದು. ಮಾಧ್ಯಮಗಳು ನನ್ನ ಈ ಆಲೋಚನೆಯನ್ನು ಜನರಿಗೆ ಸರಿಯಾಗಿ ತಲುಪಿಸಲು ನೆರವು ಮಾಡಿತು. ನನ್ನೆಲ್ಲಾ ಕಾರ್ಯಕ್ರಮದಲ್ಲೂ ಆಹಾರ ತಯಾರಿಸುವ ಖುಷಿ, ಕುಟುಂಬ ಸದಸ್ಯರ ಜೊತೆ ಒಟ್ಟಿಗೆ ಕುಳಿತು ಊಟ ಮಾಡುವುದನ್ನೇ ಒತ್ತಿ ಹೇಳಿದ್ದೇನೆ. ನನ್ನ ಅಭಿಪ್ರಾಯದಲ್ಲಿ ಆಹಾರ ಅಂದ್ರೆ ಖುಷಿ.

* ಹೊಸರುಚಿ ಪ್ರಯೋಗ ಆಲೋಚನೆ ಬಂದಿದ್ದು ಹೇಗೆ?

ನಾನು ಇಂಡಿಯನ್‌, ವೆಸ್ಟರ್ನ್‌, ಥಾಯ್‌, ಚೈನೀಸ್‌ ಆಹಾರ ಮಾಡುವ ಬಗ್ಗೆ ಕಲಿತಿದ್ದೇನೆ. 20 ವರ್ಷಗಳ ಹಿಂದೆ ನಾನು  ಒಬೆರಾಯ್‌ ಸೆಂಟರ್‌ ಲರ್ನಿಂಗ್‌ ಡೆವಲಪ್‌ಮೆಂಟ್‌ನಲ್ಲಿ  ಎರಡು ವರ್ಷಗಳ ರೆಗ್ಯುಲರ್‌ ಕೋರ್ಸ್‌ ಮಾಡಿದ್ದೆ. ಅಲ್ಲಿ  ನಾವು ಎಲ್ಲಾ ರೀತಿಯ ಅಡುಗೆಗಳನ್ನೂ ಮಾಡಬೇಕಿತ್ತು. ಭಾರತೀಯ ಆಹಾರ ನನಗೆ ಹೆಚ್ಚು ಪ್ರಿಯವಾದವು. ಆದರೆ ನಾನು ಲಂಡನ್‌ಗೆ ಹೋದಾಗ ನನ್ನ ಅನಿಸಿಕೆಗಳು ಬದಲಾದವು. ಆಗ ನಾನು ಭಾರತೀಯ ಅಡುಗೆಗಳಲ್ಲಿ ಹೇಗೆ ಹೊಸ ಪ್ರಯೋಗ ಮಾಡಬಹುದು ಎಂಬುದನ್ನು ಯೋಚಿಸಲಾರಂಭಿಸಿದೆ. ಭಾರತೀಯ ಆಹಾರದಲ್ಲಿ ಬಹುತೇಕ ಎಲ್ಲಾ ಮೆನುಗಳಲ್ಲಿ ಸಾಮಾನ್ಯವಾಗಿ ಒಂದೇ ಬಗೆಯ ಮಸಾಲ ಬಳಸುತ್ತೇವೆ. ಆದರೆ ವಿದೇಶದಲ್ಲಿ ರುಚಿ, ತಂತ್ರಗಾರಿಕೆ ಬೇರೆಯದೇ. ಪಾಶ್ಚಾತ್ಯ ಆಹಾರ ಕ್ರಮವನ್ನು ಭಾರತೀಯ ಅಡುಗೆಗಳಿಗೆ ಒಗ್ಗಿಸಲು ಪ್ರಯತ್ನಿಸಿದೆ. ಇದು ಯಶಸ್ವಿಯೂ ಆಯಿತು.

* ನಿಮ್ಮ ಪ್ರಿಯ ಆಹಾರ?

ಈ ಪ್ರಶ್ನೆಗೆ ನಾನು ಎರಡು ರೀತಿ ಉತ್ತರ ನಿಡುತ್ತೇನೆ. ನನಗೆ ತಿನ್ನಲು ಇಷ್ಟವಾಗುವ ಆಹಾರ ಚೈನೀಸ್‌ ಆಹಾರ. ಇದರಲ್ಲಿ ಡಿಮ್‌ಸುಮ್‌ಗಳನ್ನು ಮೂರೂ ಹೊತ್ತೂ ತಿನ್ನಬಲ್ಲೆ. ಸಾಂಪ್ರದಾಯಿಕ ಭಾರತೀಯ ಅಡುಗೆಗಳಲ್ಲಿ ಹೊಸ ಹೊಸ ಪ್ರಯೋಗಗಳಿಷ್ಟ.

* ಸ್ಟ್ರೀಟ್‌ ಫುಡ್‌ ಮತ್ತು ಮನೆಯಡುಗೆ ನಡುವೆ ವ್ಯತ್ಯಾಸ?

ಎರಡೂ ಪರಸ್ಪರ ವಿಭಿನ್ನ. ಭಾರತದಲ್ಲಿ ಎರಡೂ ಬಗೆಯ ಆಹಾರಗಳನ್ನೂ ಜನರು ಎಂಜಾಯ್‌ ಮಾಡುತ್ತಾರೆ. ಸ್ಟ್ರೀಟ್‌ ಫುಡ್‌, ರೆಸ್ಟೊರೆಂಟ್ ಫುಡ್‌ ನಡುವೆ ದೊಡ್ಡ ವ್ಯತ್ಯಾಸವಿಲ್ಲ. ಆಯಾ ಪ್ರದೇಶಗಳ ಆಹಾರದ ವೈವಿಧ್ಯವನ್ನು ಇಲ್ಲಿ ಎಂಜಾಯ್‌ ಮಾಡಬಹುದು. ಹೈದರಾಬಾದ್‌ನಲ್ಲಿ ಬಂಡಿ ದೋಸೆ, ಆಂಧ್ರ ಟಿಕ್ಕ..ಹೀಗೆ ಬೇರೆ ಬೇರೆ ಭಾಗಗಳಲ್ಲಿ ಅಲ್ಲಿನ ವಿಶಿಷ್ಟ ಸ್ಟ್ರೀಟ್‌ಫುಡ್‌ಗಳನ್ನು ರುಚಿ ನೋಡಬಹುದು. ಮನೆಯಡುಗೆ ರುಚಿ ಯಾವತ್ತೂ ಶ್ರೇಷ್ಠ. ಆರೋಗ್ಯಕ್ಕೂ ಉತ್ತಮ.

* ಅಡುಗೆ ಮಾಡುವಾಗ ನಿಮ್ಮನ್ನು ಪ್ರೇರೆಪಿಸುವ ಅಂಶ?

ಆಹಾರವನ್ನು ತಿನ್ನುವ ಜನರು, ಅವರ ರುಚಿ, ಕುತೂಹಲವನ್ನು ಅರಿತುಕೊಂಡು ನಾನು ಹೊಸ ಪ್ರಯೋಗ ಮಾಡುತ್ತೇನೆ. ನಾನು ಗಂಟೆಗಟ್ಟಲೇ ಹೊಸ ರುಚಿಗಾಗಿ ಕಷ್ಟಪಟ್ಟರೂ, ಅದರ ಫಲಿತಾಂಶ ಅದ್ಭುತವಾಗಿ ಬಂದಾಗ ಖುಷಿಯಾಗುತ್ತದೆ. ಭಾರತದ ಪ್ರತಿ ರಾಜ್ಯದಲ್ಲೂ ವಿಶಿಷ್ಟ, ವಿಭಿನ್ನ ಅಡುಗೆ ಕ್ರಮಗಳಿವೆ. ಇಷ್ಟೊಂದು ಆಹಾರ ವೈವಿಧ್ಯ ಇರುವ ದೇಶ ಬೇರೋಂದಿಲ್ಲ. ನಿಜ ಹೇಳಬೇಕೆಂದರೆ ಭಾರತೀಯ ಅಡುಗೆ ಎಂಬುದೇ ಇಲ್ಲ. ಕಾಶ್ಮೀರಿ, ಹೈದರಾಬಾದಿ, ಆಂಧ್ರ, ಕರ್ನಾಟಕ, ದಿಲ್ಲಿ ಆಹಾರ...ಹೀಗೆ ನಾವು ಕರೆಯಬೇಕು. ಇದೂ ನನ್ನನ್ನು ಹೊಸ ಅಡುಗೆಗೆ ಪ್ರೇರಣೆ ಮಾಡುತ್ತವೆ.

* ಬೆಂಗಳೂರಿನಲ್ಲಿ ಯಾವ ಆಹಾರ ಇಷ್ಟ?

ನಾನು ವರ್ಷಕ್ಕೆ ಒಂದೆರಡು ಬಾರಿ ಬೆಂಗಳೂರಿಗೆ ಬರುತ್ತಿರುತ್ತೇನೆ. ಆಂಧ್ರ ಆಹಾರಕ್ಕೆ ಹೆಸರಾದ ನಾಗಾರ್ಜುನ ಹೋಟೆಲ್‌ನಲ್ಲಿ ಬಿರಿಯಾನಿ ನನಗಿಷ್ಟ. ಇಲ್ಲಿ ತುಂಬಾ ಫುಡ್‌ ಅಡ್ಡಾಗಳಿವೆ ಎಂದು ಕೇಳಿದ್ದೇನೆ. ಮುಂದಿನ ಬಾರಿ ಬಂದಾಗ ಹೋಗಿ ರುಚಿ ನೋಡಬೇಕು ಎಂದುಕೊಂಡಿದ್ದೇನೆ.* ನಿಮ್ಮ ಪ್ರಕಾರ ಆರೋಗ್ಯಯುತ ಆಹಾರ ಸೇವನೆ ಅಂದ್ರೆ?

ಈಗ ಆಹಾರ ಸೇವನೆ ಕ್ರಮ ಬದಲಾಗಿದೆ. ಜನರು ಆಹಾರವನ್ನು ಎಂಜಾಯ್‌ ಮಾಡುತ್ತಾ ಸೇವಿಸುತ್ತಾರೆಯೋ ಹಾಗೇ ಸತ್ವಯುತ ಆಹಾರಕ್ಕೂ ಆದ್ಯತೆ ನೀಡುತ್ತಾರೆ. ಈಗ ಆರೋಗ್ಯಯುತ ಆಹಾರ ಸೇವನೆ ಪರಿಕಲ್ಪನೆ ಹೆಚ್ಚಾಗಿದೆ. ಈ ಆಹಾರ ಕ್ರಮ ನಮ್ಮನ್ನು ಹೆಚ್ಚು ಕಾಲ ಆರೋಗ್ಯವಂತರಾಗಿ ಇರಿಸುತ್ತದೆ.  ನನಗೆ  ಡಯೆಟ್‌ನಲ್ಲಿ ನಂಬಿಕೆಯಿಲ್ಲ. ದೇಹಪ್ರಕೃತಿಗೆ ಅನುಗುಣವಾಗಿ, ಆರೋಗ್ಯ ಕಾಪಾಡುವಂತಹ ಆಹಾರಗಳನ್ನು ಸೇವಿಸಬೇಕು. ಕಾಲಕಾಲಕ್ಕೆ ಸರಿಯಾಗಿ, ದೇಹಕ್ಕೆ ಎಷ್ಟು ಬೇಕೋ ಅಷ್ಟೇ ತಿನ್ನಬೇಕು. ಇದೂ ತೂಕ ಕಳೆದುಕೊಳ್ಳಲೂ ಸಹಾಯ ಮಾಡುತ್ತದೆ. ಬಹುಮುಖ್ಯವಾಗಿ ತಾಜಾ ಆಹಾರವನ್ನೇ ಸೇವಿಸಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry