ಮೈತ್ರಿ ಉಳಿಸಿ: ಸಂಸದರಿಗೆ ಮನವಿ

7
ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ: ಡಿಸಿಎಂ

ಮೈತ್ರಿ ಉಳಿಸಿ: ಸಂಸದರಿಗೆ ಮನವಿ

Published:
Updated:

ಬೆಂಗಳೂರು: ‘ಜೆಡಿಎಸ್–ಕಾಂಗ್ರೆಸ್ ಮೈತ್ರಿ ಯಶಸ್ವಿಯಾಗಬೇಕು. ಹೀಗಾಗಿ, ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ನೀವೂ ಪ್ರಾಮಾಣಿಕ ಪ್ರಯತ್ನ ಮಾಡಿ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಪಕ್ಷದ ಸಂಸದರಲ್ಲಿ ಮನವಿ ಮಾಡಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ಭಾನುವಾರ ಹನ್ನೊಂದು ಸಂಸದರ ಜತೆ ಸಭೆ ನಡೆಸಿದ ಅವರು,  ‘ಸಚಿವ ಸ್ಥಾನ ಅಲ್ಲದಿದ್ದರೆ, ತೃಪ್ತಿ ಆಗುವಂಥ ಪರ್ಯಾಯ ಸ್ಥಾನಗಳನ್ನೇ ನೀಡಲು ಪಕ್ಷ ಸಿದ್ಧವಿದೆ. ಆದರೆ, ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಶಾಸಕರು ಅರ್ಥ ಮಾಡಿಕೊಳ್ಳುತ್ತಿಲ್ಲ. ಪರಿಸ್ಥಿತಿಯ ಲಾಭ ಪಡೆಯಲು ಬಿಜೆಪಿಯವರು ಕಾದು ಕುಳಿತಿದ್ದಾರೆ. ಸಮ್ಮಿಶ್ರ ಸರ್ಕಾರ ಹೆಚ್ಚು ಕಾಲ ಉಳಿಯಬೇಕಿದೆ. ಹೀಗಾಗಿ, ತಮ್ಮ ಕ್ಷೇತ್ರದ ಅತೃಪ್ತ ಶಾಸಕರ ಜತೆ ನೀವೂ ಒಮ್ಮೆ ಮಾತನಾಡಿ ವಾತಾವರಣ ತಿಳಿಗೊಳಿಸಿ’ ಎಂದು ಹೇಳಿದ್ದಾರೆ.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪರಮೇಶ್ವರ, ‌‘ಪ್ರಸ್ತುತ ರಾಜಕೀಯ ವಿದ್ಯಮಾನಗಳು, ಶಾಸಕರ‌ ಅತೃಪ್ತಿ, 2019ರ ಲೋಕಸಭೆ ಚುನಾವಣೆಯ ಸಿದ್ಧತೆ,  ಸ‌ಮ್ಮಿಶ್ರ ಸರ್ಕಾರದಲ್ಲಿ ಅವರವರ ಕ್ಷೇತ್ರದಲ್ಲಿ ಆಗುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ’ ಎಂದರು.

‘ಉಳಿದಿರುವ ಆರು ಸಚಿವ ಸ್ಥಾನಗಳನ್ನು ಶೀಘ್ರವೇ ಭರ್ತಿ ಮಾಡಬೇಕು. ನಿಗಮ ಮಂಡಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ 10–15 ದಿನಗಳ ಒಳಗಾಗಿ ನೇಮಕಾತಿ ನಡೆಯಬೇಕು. ಆ ಸ್ಥಾನಗಳಿಗೆ ಶಾಸಕರಿಗೇ ಆದ್ಯತೆ ಕೊಡಬೇಕು ಎಂಬ ಅಭಿಪ್ರಾಯಗಳೂ ಸಭೆಯಲ್ಲಿ ವ್ಯಕ್ತವಾದವು’.

‘ಲೋಕಸಭೆ ಚುನಾವಣೆಗೆ ಕ್ಷೇತ್ರಗಳ ಹಂಚಿಕೆ ಕುರಿತು ಈವರೆಗೂ ಚರ್ಚೆ ನಡೆದಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ರಾಷ್ಟ್ರೀಯ ನಾಯಕರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದೂ ಹೇಳಿದರು.

‘ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇದೇ 14ರಂದು ಮೊದಲನೇ ಸಮನ್ವಯ ಸಮಿತಿ ಸಭೆ ಕರೆದಿದ್ದಾರೆ. ‌ಸಮ್ಮಿಶ್ರ ಸರ್ಕಾರದಲ್ಲಿ ಆಡಳಿತ ಹೇಗೆ ನಡೆಯಬೇಕು, ಸಮನ್ವಯ ಸಮಿತಿ ಯಾವ ರೀತಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಹಾಗೂ ನಮ್ಮ ಪ್ರಣಾಳಿಕೆಯಲ್ಲಿ ತಿಳಿಸಿರುವ ಯಾವ ಅಂಶಗಳಿಗೆ ಆದ್ಯತೆ ನೀಡಬೇಕು ಎಂಬ ಬಗ್ಗೆ ಆ ಸಭೆಯಲ್ಲಿ ಚರ್ಚೆಯಾಗಬೇಕು ಎಂಬ ಸಲಹೆಗಳನ್ನು ಸಂಸದರು ಕೊಟ್ಟಿದ್ದಾರೆ’ ಎಂದು ಪರಮೇಶ್ವರ ತಿಳಿಸಿದರು.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಕಾಂಗ್ರೆಸ್‌ನಿಂದ ಕೈಬಿಡಬೇಕು ಎಂದು ಲಿಂಗಾಯತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಜಾಮದಾರ್ ಹೇಳಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ, ‘ಜಾಮದಾರ್‌ಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ಲ’ ಎಂದರು.

ನಾಲ್ವರು ಗೈರು

ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಮುದ್ದಹನುಮೇಗೌಡ, ಚಂದ್ರಪ್ಪ ಹಾಗೂ ಧ್ರುವನಾರಾಯಣ್ ಸಭೆಗೆ ಗೈರಾಗಿದ್ದರು. ‘ಆ ನಾಲ್ವರೂ ಲೋಕಸಭಾ ಸಮಿತಿಗಳ ಪ್ರವಾಸದಲ್ಲಿದ್ದಾರೆ. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಗೆ ತಾವು ಬದ್ಧವಾಗಿರುವುದಾಗಿ ತಿಳಿಸಿದ್ದಾರೆ’ ಎಂದು ಪರಮೇಶ್ವರ ಹೇಳಿದರು.

* ಕೆಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡುವಾಗ ತಮ್ಮ ಅಭಿಪ್ರಾಯವನ್ನೂ ಕೇಳಬೇಕು ಎಂಬ ಸಂಸದರು ಮನವಿಯನ್ನು ಹೈಕಮಾಂಡ್‌ ಗಮನಕ್ಕೆ ತರುತ್ತೇನೆ

– ಜಿ.ಪರಮೇಶ್ವರ, ಉಪ ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry