ಹಳ್ಳಿಗಳಿಗೂ ಸಾಹಿತ್ಯ ಕಂಪು ಪಸರಿಸಲಿ

7
ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಂ.ಎಂ. ಕನಕೇರಿ ಅಭಿಪ್ರಾಯ

ಹಳ್ಳಿಗಳಿಗೂ ಸಾಹಿತ್ಯ ಕಂಪು ಪಸರಿಸಲಿ

Published:
Updated:

ಹುಬ್ಬಳ್ಳಿ: ’ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯ ಚಟುವಟಿಕೆಗಳು ಕೇವಲ ನಗರ ಮತ್ತು ಪಟ್ಟಣಗಳಿಗಷ್ಟೇ ಸೀಮಿತವಾಗದೇ, ಗ್ರಾಮಗಳನ್ನೂ ‌ತಲುಪಬೇಕು. ಹಳ್ಳಿಗಳಿಗೂ ಸಾಹಿತ್ಯದ ಕಂಪು ಪಸರಿಸಬೇಕು’ ಎಂದು ಹುಬ್ಬಳ್ಳಿ ತಾಲ್ಲೂಕಿನ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಂ.ಎಂ. ಕನಕೇರಿ ಅಭಿಪ್ರಾಯಪಟ್ಟರು.

ಇಲ್ಲಿನ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸಮ್ಮೇಳನದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, ‘ಒಂದು ಕಾಲದಲ್ಲಿ ಹುಬ್ಬಳ್ಳಿಯಲ್ಲಿ ಸಾಹಿತ್ಯ ಗಂಧವೇ ಇಲ್ಲ ಎನ್ನುವ ಮಾತು ಸಾಮಾನ್ಯವಾಗಿತ್ತು. ಅದರಂತೆಯೇ, ಧಾರವಾಡದಲ್ಲಿ ಒಂದು ಕಲ್ಲು ಎಸೆದರೆ ಅದು ಸಾಹಿತಿಯ ತಲೆ ಮೇಲೆ ಬೀಳುತ್ತದೆ ಎಂಬ ಮಾತು ಸತ್ಯವಾಗಿತ್ತು. ಆಗ ಹುಬ್ಬಳ್ಳಿ ಕೇವಲ ಆರ್ಥಿಕ ಕೇಂದ್ರವಷ್ಟೇ ಆಗಿತ್ತು’ ಎಂದರು.

‘ಈಗ ವಾಣಿಜ್ಯ ನಗರಿಯೂ ಸಾಹಿತ್ಯದ ಕೇಂದ್ರವಾಗಿದೆ. ಅನೇಕ ಮಂದಿ ಬರವಣಿಗೆಯಲ್ಲಿ ತೊಡಗಿಸಿ

ಕೊಂಡಿದ್ದಾರೆ. ಸಾಲದ್ದಕ್ಕೆ ಹುಬ್ಬಳ್ಳಿಯವರಾದ ಲಿಂಗರಾಜ ಅಂಗಡಿ ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿದ್ದಾರೆ. ಧಾರವಾಡಕ್ಕಷ್ಟೇ ಸೀಮಿತರಾಗದೇ ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಚುರುಕುಗೊಳಿಸಲು ಶ್ರಮಿಸುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಸರಿಗಷ್ಟೇ ನಿರ್ಣಯಗಳು: ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ‘ಅಖಿಲ ಭಾರತ ಮಟ್ಟದಿಂದ ಮೊದಲ್ಗೊಂಡು ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳ ತನಕ ನಿರ್ಣಯಗಳನ್ನು ಮಂಡಿಸಲಾಗುತ್ತದೆ. ಆದರೆ, ಇದುವರೆಗೆ ಯಾವ ಸರ್ಕಾರವೂ ಒಂದೇ ಒಂದು ನಿರ್ಣಯವನ್ನು ಜಾರಿಗೊಳಿಸಿಲ್ಲ. ಹೆಸರಿಗಷ್ಟೇ ಸಮ್ಮೇಳನಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ. ರಾಜಕಾರಣಿಗಳಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗಿರುವುದೇ ಇದಕ್ಕೆ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು.

ಹೆಸರಿಗೊಂದು ಸಚಿವ ಸ್ಥಾನ: ‘ಇತ್ತೀಚೆಗೆ ಶಾಸಕರಿಗೆ ಹೆಸರಿಗಾಗಿ ಸಚಿವ ಸ್ಥಾನ ಕೊಡಲಾಗುತ್ತಿದೆ. ಹಿಂದಿನ ಸರ್ಕಾರದಲ್ಲಿ ಉಮಾಶ್ರೀ ಅವರು ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವರಾಗಿದ್ದರು. ಈ ಬಾರಿ ಜಯಮಾಲಾ ಆಗಿದ್ದಾರೆ. ಇಂತಹವರು ಕನ್ನಡದ ವಿಷಯಗಳಿಗೆ ಅದ್ಯಾವ ರೀತಿ ಸ್ಪಂದಿಸಿ, ಅನುದಾನ ತರುತ್ತಾರೋ ಗೊತ್ತಿಲ್ಲ’ ಎಂದು ಹೊರಟ್ಟಿ ವ್ಯಂಗ್ಯವಾಡಿದರು.

ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ‘ಕನ್ನಡವನ್ನು ಕಟ್ಟಿ ಬೆಳೆಸುವಂತಹ ಕೆಲಸಗಳನ್ನು ಮಾಡುತ್ತಿರುವ ಸಾಹಿತ್ಯ ಪರಿಷತ್‌ಗೆ ಸರ್ಕಾರಗಳು ಅಗತ್ಯ ಬೆಂಬಲ ಹಾಗೂ ಸವಲತ್ತು ನೀಡಬೇಕು’ ಎಂದು ಒತ್ತಾಯಿಸಿದರು.

ಮೈಸೂರಿನ ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ಕೆ.ಆರ್. ದುರ್ಗಾದಾಸ್ ಮಾತನಾಡಿ, ‘ರಾಜ್ಯದ ರಾಜಕಾರಣಿಗಳು ಯಾವುದೇ ಪಕ್ಷವನ್ನು ಪ್ರತಿನಿಧಿಸಿದರೂ, ಕನ್ನಡದ ಅಸ್ಮಿತೆಯ ವಿಷಯ ಬಂದಾಗ ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ‘84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ಧಾರವಾಡ ಜಿಲ್ಲೆಗೆ ಸಿಕ್ಕಿದ್ದು, ನವೆಂಬರ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು’ ಎಂದರು.

ಸಾಹಿತಿ ಪ್ರೊ.ಜಿ.ಎಚ್. ಹನ್ನೆರಡುಮಠ, ನಿಕಟಪೂರ್ವ ಅಧ್ಯಕ್ಷ ಪ್ರೊ.ಕೆ.ಎಸ್. ಕೌಜಲಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಪ್ರೊ.ಕೆ.ಎ. ದೊಡ್ಡಮನಿ ಸ್ವಾಗತಿಸಿದರು.

ಪುಸ್ತಕ ಬಿಡುಗಡೆ: ಸಮ್ಮೇಳನದ ಅಧ್ಯಕ್ಷ ಎಂ.ಎಂ. ಕನಕೇರಿ ಅವರು ಬರೆದಿರುವ ಮಾತಾ ಮಾಣಿಕೇಶ್ವರಿ ಯಾನಾಗುಂದಿ, ಸುಶೀಲ 48ನೇ ವರ್ಧಂತಿ ಸಂಚಿಕೆ, ಶ್ರೀಗುರು ಶಿವಾಚಾರ್ಯರು, ಹೂಲಿ ಹಾಗೂ ಪ್ರೊ. ಶಂಕರಗೌಡ ಸಾತ್ಮಾರ ಅವರ ‘ಹನಿ ಮನಿ’ ಕವನ ಸಂಕಲನಗಳನ್ನು ಬಿಡುಗಡೆ ಮಾಡಲಾಯಿತು.

ಬೆಳಿಗ್ಗೆ ಮೇಯರ್ ಸುಧೀರ ಸರಾಫ್ ರಾಷ್ಟ್ರಧ್ವಜಾರೋಹಣ, ಕನ್ನಡ ಹೋರಾಟಗಾರ ವೆಂಕಟೇಶ ಮರೇಗುದ್ದಿ ಕನ್ನಡ ಧ್ವಜಾರೋಹಣ ಹಾಗೂ ಸಾಹಿತ್ಯ ಪರಿಷತ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಪ್ರೊ.ಕೆ.ಎ. ದೊಡ್ಡಮನಿ ಪರಿಷತ್ ಧ್ವಜರೋಹಣ ನೆರವೇರಿಸಿದರು. ಬಳಿಕ, ಮೆರವಣಿಗೆ ನಡೆಯಿತು.

ಡಾ.ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎನ್‌.ಬಿ. ರಾಮಾಪೂರ, ಜಿ.ಆರ್. ಸಾಲಿಮಠ, ಜಿ.ಆರ್‌. ಗಜೇಂದ್ರಗಡ ಹಾಗೂ ಲೋಕಮಾನ್ಯ ರಾಮದತ್ತ ಇದ್ದರು. ಬಿ.ಎಸ್. ಮಾಳವಾಡ ನಿರೂಪಿಸಿದರು. ಉದಯಚಂದ್ರ ದಿಂಡವಾರ ವಂದಿಸಿದರು. ಎಸ್‌ಜೆಎಂವಿಎಸ್ ಮಹಿಳಾ ವಿದ್ಯಾಲಯದ ಡಾ. ಜ್ಯೋತಿ ಡಿ.ಪಿ ತಂಡದವರು ನಾಡಗೀತೆ ಹಾಡಿದರು.

ಗೋಷ್ಠಿ, ಕವಿಗೋಷ್ಠಿ ಗಮ್ಮತ್ತು

ಸಮ್ಮೇಳನದಲ್ಲಿ ‘ಆಧುನಿಕ ಸಾಹಿತ್ಯ ಒಲವು–ಸವಾಲುಗಳು’ ವಿಷಯ ಕುರಿತು ವಿಚಾರ ಗೋಷ್ಠಿ ನಡೆಯಿತು. ನಿವೃತ್ತ ಪ್ರಾಧ್ಯಾಪಕ ಡಾ.ಬಿ.ವಿ. ಶಿರೂರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ‘ವಾಸ್ತವಿಕತೆ– ಸ್ತ್ರೀ ಸಬಲೀಕರಣ’ ವಿಷಯ ಕುರಿತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹಾಗೂ ‘ಹೊಸ ಪೀಳಿಗೆ–ಸಾಹಿತ್ಯಾಸಕ್ತಿ’ ಕುರಿತು ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿದರು.

ಗೋಷ್ಠಿಯನ್ನು ಮಹೇಶ ಪತ್ತಾರ ನಿರೂಪಿಸಿದರು. ಎಸ್‌.ಐ. ನೇಕಾರ ಸ್ವಾಗತಿಸಿದರು. ಗಂಗಾಧರ ಕಮಲದಿನ್ನಿ ವಂದಿಸಿದರು.

ಕವಿಗೋಷ್ಠಿ: ಕವಿಗೋಷ್ಠಿಯಲ್ಲಿ ಡಾ.ಆರ್.ಎ. ಅಳಗುಂಡಗಿ, ವೀರಣ್ಣ ಹೂಲಿ, ಗದಿಗಯ್ಯ ಹಿರೇಮಠ, ಪ್ರೊ. ಬಸವರಾಜ ಕೆಂಧೂಳಿ, ಸೋಮೇಶ್ವರ ಗುರುಮಠ, ಆರ್. ಗಾಯತ್ರಿ, ಪ್ರೊ. ಕೃಷ್ಣಾ ಜಿ. ಭಟ್, ಡಾ. ಲಿಂಗರಾಜ ರಾಮಾಪೂರ, ಸುಧಾ ಮರಿಗೌಡರ, ಸುಶಿಲೇಂದ್ರ ಕುಂದರಗಿ, ವಿರೂಪಾಕ್ಷ ಕಟ್ಟಿಮನಿ, ಪದ್ಮಜಾ ಉಮರ್ಜಿ, ಆರ್.ಎಂ. ಗೋಗೇರಿ, ಪಾರ್ವತಿ ಕಂಬಳಿ, ಮಂಗಳಾ ನರವಣಿ, ಮಂಜುಳಾ ಮೃತ್ಯುಂಜಯ, ರಾಧಿಕಾ ಕುಲಕರ್ಣಿ, ಪ್ರೊ. ನೇತ್ರಾವತಿ ಗಬ್ಬೂರ, ಸೋಮು ರಡ್ಡಿ, ಚಂದ್ರಶೇಖರ ಮಾಡಲಗೇರಿ ಹಾಗೂ ವಿನೋದಾ ಬಂಡಿ ಕವಿತೆ ವಾಚಿಸಿದರು.

ಪತ್ರಕರ್ತ ಡಾ. ಗೋವಿಂದ ಮಣ್ಣೂರ ಅಧ್ಯಕ್ಷತೆ ವಹಿಸಿದ್ದರು. ಕವಿ ಸಿ.ಎಂ. ಮುನಿಸ್ವಾಮಿ ಆಶಯ ನುಡಿಗಳನ್ನಾಡಿದರು. ದಾಕ್ಷಾಯಣಿ ನಿರೂಪಿಸಿದರು. ಪ್ರೊ. ಶಂಕರಗೌಡ ಸಾತ್ಮಾರ ಸ್ವಾಗತಿಸಿದರು. ನಿಂಬಣ್ಣ ನಿಂಬಣ್ಣವರ ವಂದಿಸಿದರು. ನಂತರ ಸಮ್ಮೇಳನದ ಅಧ್ಯಕ್ಷರೊಂದಿಗೆ ಸಂವಾದ ನಡೆಯಿತು.

‘ಸುಶೀಲ’ ಸಾಂಗತ್ಯ

ಸಮ್ಮೇಳನದ ಅಧ್ಯಕ್ಷ ವಹಿಸಿದ್ದ ಎಂ.ಎಂ. ಕನಕೇರಿ ಅವರು ಸಾಹಿತ್ಯಕ್ಕೆ ಮೀಸಲಾದ ‘ಸುಶೀಲ’ ಎಂಬ ಮಾಸಪತ್ರಿಕೆಯನ್ನು 48 ವರ್ಷಗಳಿಂದ ಸಂಪಾದಿಸುತ್ತಿದ್ದಾರೆ.

‘ಪತ್ರಿಕೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಯಾವುದೇ ವ್ಯಕ್ತಿಗಳ ಟೀಕೆ ಅಥವಾ ಚಾರಿತ್ರ್ಯವಧೆಗೆ ಸಂಬಂಧಿಸಿದ ಲೇಖನವನ್ನು ಪ್ರಕಟಿಸಿಲ್ಲ. ಪತ್ರಿಕೆಯ ಘೋಷವಾಕ್ಯ ‘ಧರ್ಮ ಹೇಳಲಿಕ್ಕಲ್ಲ, ಆಚರಿಸಲಿಕ್ಕೆ’ ಎಂಬಂತೆ ಜಾತ್ಯತೀತ ಬರಹಗಳಿಗಷ್ಟೇ ಪ್ರೋತ್ಸಾಹ ನೀಡಿದ್ದೇನೆ. ಆರ್ಥಿಕ ಮುಗ್ಗಟ್ಟು ಎದುರಾದರೂ ಜಾಹೀರಾತು ಪಡೆದಿಲ್ಲ. ಯುವ ಬರಹಗಾರರಿಗೆ ಮುಕ್ತವಾಗಿ ಬರೆಯಲು ಅವಕಾಶ ಕಲ್ಪಿಸಿದ್ದೇನೆ’ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕನಕೇರಿ ಹೇಳಿದರು.

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಕೈಂಕರ್ಯಕ್ಕೆ ಪೂರಕವಾಗಿ, ಮಹಾನಗರ ಪಾಲಿಕೆಯು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಗಾಗಿ ಸ್ಥಳವನ್ನು ನೀಡಬೇಕು

– ಎಂ.ಎಂ. ಕನಕೇರಿ, ಸಮ್ಮೇಳನದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry