ಮಾವು, ನಾವು–ನೀವು ತಾವು

7

ಮಾವು, ನಾವು–ನೀವು ತಾವು

Published:
Updated:
ಮಾವು, ನಾವು–ನೀವು ತಾವು

ಮೋಡಗಳ ಜಡೆ ಬಿಚ್ಚಿ ಮೈತೊಳೆದುಕೊಳುತಿಹಳು ಬಯಲ ಭಾಮಿನಿ ಜಗದ ಮನೆಯ ಮೇಲೆ. ಕೇಶರಾಶಿಯ ನೀರು ತೊಟ್ಟಿಕ್ಕಿ ಸುರಿಯುತಿದೆ ಇದಕೆ ಜನರೆನ್ನುವರು ಮಳೆಯ ಲೀಲೆ... ಸದಾ ರಂಗಗೀತೆಗಳು ಮೊಳಗುವ ರಂಗಶಂಕರದಲ್ಲಿ ಗಾಯಕಿ ಬಿಂದು ಮಾಲಿನಿ ಸುಮಧುರ ಸ್ವರದಲ್ಲಿ ಹೊಮ್ಮುತ್ತಿದ್ದ ಈ ಗೀತೆಗೆ ಹೊರಗೆ ಜಿಟಿ ಜಿಟಿ ಮಳೆ ತೊಟ್ಟಿಕ್ಕುತಿತ್ತು. ಒಳಗೆ ಮಾತ್ರ ಮಳೆಯ ಪರಿವಿಲ್ಲದೆ ಮಾವಿನ ಲೋಕ ಮೈತೆಳೆದಿತ್ತು. 

ಸದಾ ರಂಗಚಟುವಟಿಕೆಗಳಿಗೆ ಸಾಕ್ಷಿಯಾಗುವ ರಂಗಶಂಕರದಲ್ಲಿ ಭಾನುವಾರ ಹಣ್ಣಿನ ರಾಜನದ್ದೇ ಕಾರುಬಾರು. ‘ಮ್ಯಾಂಗೊ ಪಾರ್ಟಿ’ ಹೆಸರಿನಲ್ಲಿ ಆಯೋಜಿಸಿದ್ದ ಮಾವಿನ ಉತ್ಸವ ಮಾವು ಪ್ರಿಯರ ಸ್ವರ್ಗವಾಗಿತ್ತು.

ಮಾವಿನ ತೋರಣ ಸ್ವಾಗತ ಬಯಸಿದರೆ, ತಾಮ್ರದ ಕಡಾಯಿಗಳಲ್ಲಿ ಮುಳುಗುತ್ತಾ, ತೇಲುತ್ತಾ ಆಟವಾಡುತ್ತಿದ್ದ ತರಹೇವಾರಿ ತಳಿಯ ಮಾವುಗಳು ಅನಾಯಾಸವಾಗಿ ಬಾಯಲ್ಲಿ ನೀರೂರಿಸುತಿತ್ತು. ತಮಗಿಷ್ಟವಾದ ಹಣ್ಣನ್ನು ಆಯ್ದುಕೊಂಡು ಪಕ್ಕದಲ್ಲಿಯೇ ಇದ್ದ ಅಡಿಕೆ ಹಾಳೆಯ ತಟ್ಟೆಯಲ್ಲಿ ಹಣ್ಣನ್ನು ಜೋಡಿಸಿಕೊಂಡು ಟೇಬಲ್‌ ಮೇಲೆ ಕುಳಿತುಕೊಂಡು ಮಾವಿನ ಸ್ವಾದದಲ್ಲಿ ಮೈಮರೆಯುವವರ ಪರಿ ನೋಡುವುದೇ ಮನಸ್ಸಿಗೆ ಮುದ ನೀಡುತ್ತಿತ್ತು.

ಬಹುವಿಧವಾಗಿ ಕತ್ತರಿಸಿ ಪ್ರೀತಿಪಾತ್ರರಿಗೆ ತಿನಿಸುತ್ತಾ ಹರಟುವವರ ವೈಖರಿಯೇ ಉತ್ಸವದ ಸಾರ್ಥಕತೆ ಸಾರುತ್ತಿತ್ತು. ಸಂಬಂಧಗಳ ಸ್ವಾದವನ್ನು ಮಾವನ್ನು ಹೆಚ್ಚಿಸಿದಂತೆ ಕಾಣುತ್ತಿತ್ತು.

ಹಣ್ಣು ಸವಿಯುತ್ತಾ ಸಂಬಂಧಗಳ ಬಿಗಿ ಹೆಚ್ಚಿಸಿಕೊಳ್ಳಲು ವಯಸ್ಸಿನ ಹಂಗೇಕೆ? ತಿನ್ನಲು ಕಲಿಯದ ಕಂದಮ್ಮನಿಂದ ಹಿಡಿದು ಮಾವು ಸವಿಯಲು ಆರೋಗ್ಯ ಸಹಕರಿಸದ ವೃದ್ಧರವರೆಗೆ ಎಲ್ಲ ಮನಸ್ಸುಗಳು ಮಾವಿನ ನೆಪದಲ್ಲಿ ಒಂದಾಗಿದ್ದವು. ಕೆಲವರಿಗಿದು ಸಮಾನ ಮನಸ್ಕ ಸ್ನೇಹಿತರನ್ನು ಆಯ್ದುಕೊಳ್ಳುವ ವೇದಿಕೆಯಾದರೆ ಮತ್ತೆ ಕೆಲವರಿಗೆ ಮರೆತುಹೋದ ಸಂಬಂಧಗಳನ್ನು ಬಿಗಿಗೊಳಿಸಿಕೊಳ್ಳುವ ಸಂಭ್ರಮವೂ ಹೌದು. ರಂಗಮಂದಿರದಲ್ಲಿ ‘ಸಂಬಂಧಗಳ ಸುತ್ತಾ’ ಎಂಬ ನಾಟಕ ಪ್ರದರ್ಶನವಾಗುತ್ತಿದ್ದರೆ, ಇತ್ತ ನೆಲಮಹಡಿಯಲ್ಲಿ ಸಂಬಂಧ, ಬಾಂಧವ್ಯದ ನೈಜ ಹೆಣಿಕೆಯೇ ಕಾಣುತಿತ್ತು.

ಮಕ್ಕಳಿಗಂತೂ ಪರಿಚಿತ ಅಪರಿಚಿತತೆಯೇ ಗಡಿ ಇರಲಿಲ್ಲ. ಅಕ್ಷರಶಃ ಆಟದ ಮೈದಾನವಾಗಿ, ತಿನ್ನುವ ಕುಣಿಯುವ ಉದ್ಯಾನವನ್ನಾಗಿ ಪರಿಭಾವಿಸಿಕೊಂಡ ಚಿಣ್ಣರು ಆಡಿ, ಕುಣಿದು ನಲಿಯುತ್ತಿದ್ದರು.

ಮ್ಯಾಂಗೊ ಪಾರ್ಟಿಯಲ್ಲಿ ಭಾಗವಹಿಸಲು ಯಾವುದೇ ಹಣ ತೆರಬೇಕಿರಲಿಲ್ಲ. ಬಹುತೇಕರು ಹಳದಿ, ಕೇಸರಿ, ಹಸಿರು ಸೇರಿದಂತೆ ಮಾವಿನ ಬಣ್ಣಗಳ ಉಡುಪು ಧರಿಸಿ ಭಾಗವಹಿಸಿದ್ದರಾದರೂ ಅದು ಕಡ್ಡಾಯವಿರಲಿಲ್ಲ. ಪಾಲ್ಗೊಂಡಿದ್ದವರಲ್ಲಿ ಅನೇಕರು ಮಾವನ್ನು ತಂದು ಕಡಾಯಿಗಳಿಗೆ ಸುರಿಯುತ್ತಿದ್ದರು.

ಕುಟುಂಬದೊಂದಿಗೆ ಮಾವಿನ ಉತ್ಸವವನ್ನು ಸವಿಯುತ್ತಿದ್ದ ಎಚ್.ಎಸ್‌.ಆರ್.ಲೇಔಟ್‌ನ ಪೂರ್ಣಿಮಾ, ‘ಪ್ರತಿವರ್ಷ ಉತ್ಸವದಲ್ಲಿ ಪಾಲ್ಗೊಳುತ್ತೇನೆ. ಇತರ ಪಾರ್ಟಿಗಳಿಗಿಂತ ಇಲ್ಲಿ ಆಪ್ತತೆ ಹೆಚ್ಚಿರುತ್ತದೆ. 5 ರಿಂದ 6 ತಳಿಯ ಮಾವಿನ ಹಣ್ಣುಗಳ ಸ್ವಾದ ಸವಿದಿದ್ದೇನೆ. ಹೊಸ ಹಣ್ಣುಗಳ ಪರಿಚಯವೂ ಆಯಿತು. ಮನೆಯಲ್ಲಿ ತಿನ್ನುವುದು ಇದ್ದೇ ಇದೆ. ಈ ರೀತಿ ಒಟ್ಟು ಸೇರಿ ತಿನ್ನುವ ಖುಷಿಯೇ ಬೇರೆ’ ಎಂದು ಸಂಭ್ರಮ ಹಂಚಿಕೊಂಡರು.

ರಂಗಶಂಕರದ ಮಾವು ಪಾರ್ಟಿಗೆ ಮಂಡಿಗಳು, ಹಾಪ್‌ಕಾಮ್ಸ್‌ಗಳಿಂದ ಉತ್ತಮ ಗುಣಮಟ್ಟದ ಮಲ್ಲಿಕಾ, ಆಮ್ರಪಾಲಿ, ತೋತಾಪುರಿ, ಬೈಗನ್‌ಪಲ್ಲಿ, ಕೇಸರ್‌, ನಾಟಿ,  ಬಾದಾಮಿ, ಅಲ್ಫಾನ್ಸೊ, ರಸಪುರಿ ಸೇರಿ 17 ಬಗೆಯ ವಿವಿಧ ಮಾವಿನ ಹಣ್ಣುಗಳನ್ನು ತರಿಸಲಾಗಿತ್ತು.

ರಂಗಶಂಕರ 2014 ರಿಂದ ನಿರಂತರವಾಗಿ ಮಾವಿನ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ವಾಸು ದೀಕ್ಷಿತ್‌, ಬಿಂದು ಮಾಲಿನಿ ಅವರು ಸಂಗೀತ ಸಂಜೆ ಮಾವು ಸವಿದವರು ಮನಸ್ಸಿಗೂ ಮುದ ನೀಡಿತು. ಪುರಂದರದಾಸರ ಕೀರ್ತನೆಗಳು, ಬಸವಣ್ಣನ ವಚನಗಳಿಗೆ ಗಾಯಕರು ದನಿಯಾದರು.

ಕ್ಯಾಂಟೀನ್‌ನಲ್ಲೂ ಮಾವು ಮೆನು

ಮ್ಯಾಂಗೊ ಪಾರ್ಟಿಗೆಂದೇ ರಂಗಶಂಕರದ ಕ್ಯಾಂಟೀನ್‌ನಲ್ಲಿ ವಿಶೇಷ ಮೆನು ಇತ್ತು. ಮಾವಿನ ಕಾಯಿ ಚಿತ್ರಾನ್ನ, ಮಾವಿನ ಕಾಯಿ ರಸಾಯನ, ಇಡಿಅಪ್ಪಂ, ಮಾವಿನ ಹಣ್ಣು ಸಲಾಡ್‌, ಮಾವಿನ ಮಿಲ್ಲೆಟ್‌, ಕೇಸರಿಬಾತ್ ಸೇರಿದಂತೆ ವಿಶೇಷ ಖಾದ್ಯಗಳಿದ್ದವು.

ಸಂಭ್ರಮದ ಸುಗ್ಗಿ

‘ವರ್ಷದಿಂದ ವರ್ಷಕ್ಕೆ ಮ್ಯಾಂಗೊ ಪಾರ್ಟಿಯಲ್ಲಿ ಭಿನ್ನತೆಯನ್ನು ಬಯಸುವುದಿಲ್ಲ. ಹೊಸತನವನ್ನು ತರುವುದಿಲ್ಲ. ಯಥಾಸ್ಥಿತಿಯನ್ನು ಮುಂದುವರೆಸುತ್ತೇವೆ. ತಂದೆ ಮಗುವಿಗೆ, ಮಕ್ಕಳು ತಂದೆ ತಾಯಿಗೆ ತಿನ್ನಿಸುತ್ತಾ, ತಿನ್ನುವುದನ್ನು ನೋಡುವಾಗಲೇ ಖುಷಿಯಾಗುತ್ತದೆ. ಹೊಸತನವನ್ನು ತರುವುದು, ಪ್ರಚಾರ ಮಾಡುವುದು ಅಥವಾ ಮಾವಿನ ಹಣ್ಣಿನ ಮಾರುಕಟ್ಟೆಗೆ ಪ್ರೇರೆಪಿಸುವುದು ನಮ್ಮ ಉದ್ದೇಶವಿಲ್ಲ. ಎಷ್ಟು ಜನ ಬಂದರೂ ಎಂಬುದು ಅನಗತ್ಯ. ಬಂದವರು ಹೇಗೆ ಸಂಭ್ರಮಿಸಿದರು ಎನ್ನುವುದೇ ಮುಖ್ಯ. ಪುಟಾಣಿಗಳಿಗೆ ವಿವಿಧ ತಳಿಗಳನ್ನು ಪರಿಚಯಿಸುವಲ್ಲಿಯೂ ಇದು ವೇದಿಕೆಯಾಗುತ್ತಿದೆ ಎನ್ನುವ ಖುಷಿ ಇದೆ’ ಎಂದು ಅರುಂಧತಿ ನಾಗ್‌ ಸಂತೋಷ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry