ದುಬಾರಿ ಸುಂಕ: ಭಾರತದ ನಿಲುವಿಗೆ ಟ್ರಂಪ್‌ ಕಟು ಟೀಕೆ

7

ದುಬಾರಿ ಸುಂಕ: ಭಾರತದ ನಿಲುವಿಗೆ ಟ್ರಂಪ್‌ ಕಟು ಟೀಕೆ

Published:
Updated:
ದುಬಾರಿ ಸುಂಕ: ಭಾರತದ ನಿಲುವಿಗೆ ಟ್ರಂಪ್‌ ಕಟು ಟೀಕೆ

ವಾಷಿಂಗ್ಟನ್‌: ಅಮೆರಿಕದ ಕೆಲ ಸರಕುಗಳಿಗೆ ಭಾರತವು ಶೇ 100ರಷ್ಟು ಸುಂಕ ವಿಧಿಸುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ.

ದುಬಾರಿ ಆಮದು ಸುಂಕಗಳ ವಿರುದ್ಧದ ತಮ್ಮ ಆಕ್ರೋಶವು ಕೇವಲ ಅಭಿವೃದ್ಧಿ ಹೊಂದಿದ ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳೂ ಅಮೆರಿಕದ ಉತ್ಪನ್ನ ಮತ್ತು ಮಾರುಕಟ್ಟೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಟೀಕಿಸಿದ್ದಾರೆ.

‘ಭಾರತವು ತನ್ನ ಉತ್ಪನ್ನಗಳಿಗೆ ಶೇ 100ರಷ್ಟು ಸುಂಕ ವಿಧಿಸುತ್ತಿದ್ದರೂ ಅಮೆರಿಕವು ಭಾರತದ ಸರಕುಗಳಿಗೆ ದುಬಾರಿ ಸುಂಕ ವಿಧಿಸುತ್ತಿಲ್ಲ. ಇಂತಹ ಧೋರಣೆ ಮುಂದುವರೆದರೆ ಭಾರತದಿಂದ ಆಮದಾಗುತ್ತಿರುವ ದ್ವಿಚಕ್ರ ವಾಹನಗಳ ಮೇಲಿನ ಆಮದು ಸುಂಕ ಹೆಚ್ಚಿಸಬೇಕಾದೀತು’ ಎಂದೂ ಟ್ರಂಪ್‌ ಬೆದರಿಕೆ ಒಡ್ಡಿದ್ದಾರೆ.

ಅಮೆರಿಕದ ಜತೆಗಿನ ಭಾರತ ವಾಣಿಜ್ಯ ಬಾಂಧವ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಟ್ರಂಪ್‌ ಈ ನಿಲುವು ತಳೆದಿದ್ದಾರೆ. ಹಿಂದಿನ ವರ್ಷ ₹ 73,700 ಕೋಟಿ ವಹಿವಾಟು ಹೆಚ್ಚಳಗೊಂಡು ₹ 8.37 ಲಕ್ಷ ಕೋಟಿ ದಾಟಿತ್ತು.

‘ಪ್ರತಿಯೊಂದು ದೇಶವೂ ಅಮೆರಿಕವನ್ನು ದುಡ್ಡಿನ ಡಬ್ಬಿ ಎಂದು ಭಾವಿಸಿಲೂಟಿ ಮಾಡಲು ಉದ್ದೇಶಿಸಿದೆ. ನಾನು ಅದಕ್ಕೆ ಅವಕಾಶ ಮಾಡಿಕೊಡಲಾರೆ’ ಎಂದು ಹೇಳಿರುವ ಟ್ರಂಪ್‌, ಇಂತಹ ದೇಶಗಳ ಜತೆಗಿನ ವಾಣಿಜ್ಯ ಬಾಂಧವ್ಯ ಕಡಿದುಕೊಳ್ಳುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ.

‘ನಾವು ಎಲ್ಲ ದೇಶಗಳ ವಿರುದ್ಧವೂ ಮಾತನಾಡುತ್ತಿದ್ದೇವೆ. ನಮ್ಮ ಉತ್ಪನ್ನಗಳ ಮೇಲೆ  ಗರಿಷ್ಠ ಆಮದು ಸುಂಕ ವಿಧಿಸುವುದನ್ನು ಕೈಬಿಡಬೇಕು. ಇಲ್ಲದಿದ್ದರೆ ಅಂತಹ ದೇಶಗಳ ಜತೆಗಿನ ವಾಣಿಜ್ಯ ಬಾಂಧವ್ಯ ನಿಲ್ಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. ಅಮೆರಿಕದ ಹಿತಾಸಕ್ತಿ ರಕ್ಷಣೆಯೇ ತಮ್ಮ ಮೊದಲ ಆದ್ಯತೆ ಎಂದು ಪ್ರತಿಪಾದಿಸುತ್ತಿರುವ ಟ್ರಂಪ್‌, ಎಲ್ಲ ಬಗೆಯ ವಾಣಿಜ್ಯ ಸುಂಕಗಳನ್ನು ದೂರ ಮಾಡುವುದೇ ತಮ್ಮ ಅಂತಿಮ ಗುರಿ ಎಂದೂ ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry