ಫೇಸ್‌ಬುಕ್ ಜಗಳ; ದಂಪತಿ ಆತ್ಮಹತ್ಯೆ

7
8ನೇ ಮೈಲಿಯಲ್ಲಿರುವ ಬಾಡಿಗೆ ಮನೆಯಲ್ಲಿ ದಂಪತಿ ವಾಸ * ಮಧ್ಯಾಹ್ನ ಪ್ರಕರಣ ಬೆಳಕಿಗೆ

ಫೇಸ್‌ಬುಕ್ ಜಗಳ; ದಂಪತಿ ಆತ್ಮಹತ್ಯೆ

Published:
Updated:
ಫೇಸ್‌ಬುಕ್ ಜಗಳ; ದಂಪತಿ ಆತ್ಮಹತ್ಯೆ

ಬೆಂಗಳೂರು: ಫೇಸ್‌ಬುಕ್ ವಿಚಾರವಾಗಿ ದಂಪತಿ ನಡುವೆ ಶುರುವಾದ ಜಗಳ, ಅವರಿಬ್ಬರ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ಸೋಮವಾರ ನಡೆದಿದೆ.

ಸೋಮವಾರಪೇಟೆಯ ಅನೂಪ್ (32) ಹಾಗೂ ಸೌಮ್ಯಾ (23) ಆತ್ಮಹತ್ಯೆ ಮಾಡಿಕೊಂಡವರು. ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅನೂಪ್‌, ಮೂರು ವರ್ಷಗಳ ಹಿಂದೆ ಸೌಮ್ಯಾ ಅವರನ್ನು ಮದುವೆ ಆಗಿದ್ದರು. 8ನೇ ಮೈಲು ಬಳಿಯ ಬಾಡಿಗೆ ಮನೆಯಲ್ಲಿ ದಂಪತಿ ವಾಸವಿದ್ದರು. ಅವರಿಗೆ ಎರಡು ವರ್ಷದ ಗಂಡು ಮಗುವಿದ್ದು, ಅದು ಸೌಮ್ಯಾರ ತವರು ಮನೆಯಲ್ಲಿ ಬೆಳೆಯುತ್ತಿದೆ ಎಂದು ಬಾಗಲಗುಂಟೆ ಪೊಲೀಸರು ತಿಳಿಸಿದರು.

ಮನೆಯಲ್ಲಿದ್ದ ವೇಳೆ ಅನೂಪ್, ಮೊಬೈಲ್‌ನಲ್ಲೇ ಹೆಚ್ಚು ಹೊತ್ತು ಕಳೆಯುತ್ತಿದ್ದರು. ವಾಟ್ಸ್‌ಆ್ಯಪ್‌ ಹಾಗೂ ಫೇಸ್‌ಬುಕ್‌ನಲ್ಲಿ ಸ್ನೇಹಿತರ ಜತೆಯಲ್ಲಿ ನಿರಂತರವಾಗಿ ಚಾಟ್‌ ಮಾಡುತ್ತಿದ್ದರು. ಸೋಮವಾರ ಬೆಳಿಗ್ಗೆಯೂ ಯುವತಿಯೊಬ್ಬರ ಜತೆಯಲ್ಲಿ ಅನೂಪ್, ಚಾಟ್‌ ಮಾಡುತ್ತಿದ್ದರು. ಅದನ್ನು ನೋಡಿದ್ದ ಪತ್ನಿ, ಪ್ರಶ್ನಿಸಿದ್ದರು. ಆಗ ಮಾತಿಗೆ ಮಾತು ಬೆಳೆದು ದಂಪತಿ ನಡುವೆ ಜಗಳ ಶುರುವಾಗಿತ್ತು ಎಂದು ಪೊಲೀಸರು ಹೇಳಿದರು.

ಅಳುತ್ತಲೇ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ ಸೌಮ್ಯಾ, ಅಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ ಅದನ್ನು ನೋಡಿದ್ದ ಅನೂಪ್‌, ಮತ್ತೊಂದು ಕೊಠಡಿಗೆ ಹೋಗಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಿವರಿಸಿದರು.

ಸಹೋದರನಿಗೆ ಕರೆ: ಜಗಳ ನಡೆಯುತ್ತಿದ್ದಾಗಲೇ  ಬೆಳಿಗ್ಗೆ 10 ಗಂಟೆಗೆ ಸೋಮವಾರಪೇಟೆಯಲ್ಲಿರುವ ಸಹೋದರನಿಗೆ ಕರೆ ಮಾಡಿದ್ದ ಸೌಮ್ಯಾ, ‘ಬೆಂಗಳೂರಿಗೆ ಬಂದು ನನ್ನನ್ನು ಕರೆದುಕೊಂಡು ಹೋಗು. ಇಲ್ಲದಿದ್ದರೆ ನಾನು ಸಾಯುತ್ತೇನೆ’ ಎಂದಿದ್ದರು ಎಂದು ಪೊಲೀಸರು ಹೇಳಿದರು.

ಗಾಬರಿಗೊಂಡ ಸಹೋದರ, ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಮನೆಯ ಬಳಿ ಹೋಗುವಂತೆ ಹೇಳಿದ್ದರು. ಸಂಬಂಧಿಕರು ಬೆಳಿಗ್ಗೆ 12 ಗಂಟೆಗೆ ಹೋದಾಗ, ಮನೆಯ ಬಾಗಿಲು ಒಳಗಿನಿಂದ ಲಾಕ್‌ ಮಾಡಿದ್ದು ಗೊತ್ತಾಯಿತು. ಮಧ್ಯಾಹ್ನ 2 ಗಂಟೆಗೆ ಮನೆ ಬಳಿ ಬಂದ ಸಹೋದರ, ಮನೆಯ ಹಿಂದಿನ ಕಿಟಕಿ ಬಳಿ ಹೋಗಿ ನೋಡಿದಾಗಲೇ ಆತ್ಮಹತ್ಯೆ ವಿಷಯ ಗೊತ್ತಾಗಿತ್ತು. ನಂತರವೇ ಅವರು ಠಾಣೆಗೆ ಮಾಹಿತಿ ನೀಡಿದ್ದರು ಎಂದು ತಿಳಿಸಿದರು.

‘ಅನೂಪ್ ಅವರು ಕೆಲಸ ಹುಡುಕಿಕೊಂಡು ಐದು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದರು. ಆರಂಭದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಅವರು, ಮೂರು ವರ್ಷಗಳ ಹಿಂದಷ್ಟೇ ಆಹಾರ ತಯಾರಿಕಾ ಕಾರ್ಖಾನೆಗೆ ಸೇರಿದ್ದರು. ಮದುವೆ ಆದಾಗಿನಿಂದಲೇ ದಂಪತಿ ನಡುವೆ ಜಗಳ ಆಗುತ್ತಿತ್ತು. ಅವರ ಆತ್ಮಹತ್ಯೆಗೆ ಫೇಸ್‌ಬುಕ್ ವಿಚಾರವಷ್ಟೇ ಕಾರಣವಲ್ಲ, ಹಲವು ಕಾರಣಗಳಿವೆ. ಅವುಗಳು ಯಾವುವು ಎಂಬುದು ತನಿಖೆಯಿಂದಲೇ ಗೊತ್ತಾಗಬೇಕು’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry