ಕಿತ್ತುಹೋದ ರಸ್ತೆ ಪರಿಶೀಲಿಸಿದ ಆಯುಕ್ತ

7

ಕಿತ್ತುಹೋದ ರಸ್ತೆ ಪರಿಶೀಲಿಸಿದ ಆಯುಕ್ತ

Published:
Updated:

ಧಾರವಾಡ: ನಗರದಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆಗೆ ಕಿತ್ತುಹೋದ ಇಲ್ಲಿನ ಕೇಶವನಗರ ರಸ್ತೆಯನ್ನು ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್ ಸೋಮವಾರ ಪರಿಶೀಲಿಸಿದರು.

ರಸ್ತೆ ಈ ರೀತಿ ಕಿತ್ತುಹೋಗಲು ಕಾರಣವೇನು ಎಂದು ಪರಿಶೀಲಿಸಿ, ವರದಿ ಸಲ್ಲಿಸುವಂತೆ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ನೀರು ಸರಬರಾಜು ಮಂಡಳಿ ಎಂಜಿನಿಯರ್‌ಗೆ ಸೂಚಿಸಿದರು. ಜತೆಗೆ ಮಳೆನೀರು ಬಡಾವಣೆಯ ಮನೆಗಳಿಗೆ ನೀರು ನುಗ್ಗುತ್ತಿರುವ ಕುರಿತು ಸ್ಥಳೀಯರ ದೂರನ್ನು ಪರಿಗಣಿಸಿ ಆಯುಕ್ತರು ಅದನ್ನೂ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಕೀಲ್ ಅಹ್ಮದ್‌, ‘ಕೆಲ ದಿನಗಳ ಹಿಂದೆಯಷ್ಟೇ ಒಳಚರಂಡಿ ಕಾಮಗಾರಿ ನಡೆಸಿದ ನಂತರ ಗುಂಡಿಗಳನ್ನು ಸರಿಯಾಗಿ ಮುಚ್ಚದೇ ರಸ್ತೆಗೆ ಟಾರು ಹಾಕಲಾಗಿದೆ. ಇದರಿಂದಾಗಿ ರಸ್ತೆ ಈ ರೀತಿ ಕುಸಿದಿದೆ. ದುರಸ್ತಿ ಕಾಮಗಾರಿ ಪ್ರಾರಂಭಿಸಲಾಗಿದೆ. ಜತೆಗೆ ತಜ್ಞರ ವರದಿ ಬಂದ ನಂತರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದರು

‘ಚರಂಡಿ ನೀರು ಸರಾಗವಾಗಿ ಹರಿದುಹೋಗದ ಕಾರಣ ಮನೆಗಳಿಗೆ ನೀರು ನುಗ್ಗುವ ಸ್ಥಿತಿ ಉಂಟಾಗಿದೆ. ಹೀಗಾಗಿ, ನಾಲಾದ ನೀರನ್ನು ಮೂರು ಕಡೆಗಳಲ್ಲಿ ಹರಿದು ಹೋಗಲು ವ್ಯವಸ್ಥೆ ಮಾಡುವ ಯೋಜನೆಗೆ ರೈಲ್ವೆ ಇಲಾಖೆಯಿಂದ ಕೆಲ ತೊಂದರೆ ಎದುರಾಗಿದೆ. ಅವರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಸಂಜಯ ಕಪಟಕರ ಮಾತನಾಡಿ, ‘ಮಾಳಮಡ್ಡಿ, ಯುಬಿ ಹಿಲ್ ಸೇರಿದಂತೆ ಕಲ್ಯಾಣನಗರ ಕಡೆಗಳಲ್ಲಿನ ನೀರು ಕೇಶವನಗರ ನಾಲಾ ಮೂಲಕ ಹರಿಯುತ್ತದೆ. ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗಿ ಅವಾಂತರ ಸೃಷ್ಟಿಯಾಗುತ್ತಿದೆ. ಇದನ್ನು ಸರಿಪಡಿಸುವಂತೆ ಹಲವು ಬಾರಿ ಹೇಳಿದರೂ ಸಹ ಅಧಿಕಾರಿಗಳು ಮಾತ್ರ ಲಕ್ಷ್ಯ ವಹಿಸುತ್ತಿಲ್ಲ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry