ಪರಂಪರೆ ತಾಣಗಳ ಪಟ್ಟಿಗೆ ಸ್ಮಾರಕ

7
ಸಭೆಯಲ್ಲಿ ಐಎಚ್‌ಸಿಎನ್‌ಎಫ್‌ ಸಿಇಒ ಕೆ.ಎಸ್.ರಾಯ್ಕರ್ ಹೇಳಿಕೆ

ಪರಂಪರೆ ತಾಣಗಳ ಪಟ್ಟಿಗೆ ಸ್ಮಾರಕ

Published:
Updated:
ಪರಂಪರೆ ತಾಣಗಳ ಪಟ್ಟಿಗೆ ಸ್ಮಾರಕ

ಬೀದರ್‌: ‘ದಖ್ಖನ್‌ ಪ್ರಸ್ಥ ಭೂಮಿಯ ಲ್ಲಿರುವ ಬೀದರ್‌ ಕೋಟೆ, ಅಷ್ಟೂರಿನ ಲ್ಲಿರುವ ಬಹಮನಿ ಸುಲ್ತಾನರ ಸ್ಮಾರಕಗಳು ಹಾಗೂ ಅಪರೂಪದ ಭೂಕಾಲವೆಯನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವಂತೆ ಪ್ರಸ್ತಾವ ಕಳಿಸಲು ಪೂರ್ಣ ಅಧ್ಯಯನ ಮಾಡಿ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಇಂಡಿಯನ್ ಹೆರಿಟೇಜ್ ಸಿಟೀಸ್ ನೆಟ್‌ವರ್ಕ್ ಫೌಂಡೇಷನ್ (ಐಎಚ್‌ಸಿಎನ್‌ಎಫ್) ಸಿಇಒ ಕೆ.ಎಸ್.ರಾಯ್ಕರ್ ತಿಳಿಸಿದರು.

ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಮುಖ ಸ್ಮಾರಕಗಳು ಯುನೆಸ್ಕೊ ಪಟ್ಟಿಗೆ ಸೇರ್ಪಡೆ ಯಾದರೆ ಸಂರಕ್ಷಣೆ ಕಾರ್ಯವನ್ನು ಇನ್ನಷ್ಟು ವ್ಯವಸ್ಥಿತವಾಗಿ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿದೆ’ ಎಂದು ಹೇಳಿದರು.

‘ಆರಂಭದಲ್ಲಿ ಒಂದು ವರ್ಷದ ಮಟ್ಟಿಗೆ ಮಾತ್ರ ತಾತ್ಕಾಲಿಕ ಮಾನ್ಯತೆ ಕೊಡಲಾಗುತ್ತದೆ. ತಾಣಗಳ ನಿರ್ವಹಣೆ, ಸಂರಕ್ಷಣೆ ಹಾಗೂ ಕೈಗೊಳ್ಳಬಹುದಾದ ಕ್ರಮ ಹಾಗೂ ಭವಿಷ್ಯದ ಕ್ರಮಗಳನ್ನು ಆಧರಿಸಿ ಕಾಯಂ ಪಟ್ಟಿಗೆ ಸೇರಿಸುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಕಿರುಹೊತ್ತಿಗೆ ಸಿದ್ಧಪಡಿಸಲಾಗಿದೆ’ ಎಂದರು.

‘ಪ್ರವಾಸಿ ತಾಣಗಳ ಅಭಿವೃದ್ಧಿಗೆ ಬೀದರ್‌ ಜಿಲ್ಲೆ ಆಯ್ಕೆಯಾಗಿದೆ. ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ತಾಣಗಳ ಅಭಿವೃದ್ಧಿಗೆ ₹ 2 ಕೋಟಿ ಬಿಡುಗಡೆ ಮಾಡಿದೆ. ಶೀಘ್ರದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಕೋಟೆಯಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

ಪ್ರಾಚ್ಯವಸ್ತು ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಆಯುಕ್ತ ಟಿ. ವೆಂಕಟೇಶ ಮಾತ ನಾಡಿ, ‘ಬಸವಕಲ್ಯಾಣದ ನಾರಾ ಯಣಪುರ, ಉಮಾಪುರ ಮೋರ್ಖಂಡಿಯಲ್ಲಿರುವ ದೇವಸ್ಥಾನಗಳು, ಭಾಲ್ಕಿ ಹಾಗೂ ಭಾತಂಬ್ರಾ ಕೋಟೆಯನ್ನು ರಾಜ್ಯ ಪ್ರಾಚ್ಯವಸ್ತು ಇಲಾಖೆಯ ವ್ಯಾಪ್ತಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗಿದೆ. ಶೀಘ್ರ ದಲ್ಲೇ ಸರ್ಕಾರ ಗೆಜೆಟ್‌ ಅಧಿಸೂಚನೆ ಹೊರಡಿಸಲಿದೆ’ ಎಂದು ವಿವರಿಸಿದರು.

‘ಬಸವಕಲ್ಯಾಣ, ಭಾಲ್ಕಿ ಹಾಗೂ ಭಾತಂಬ್ರಾ ಕೋಟೆಯ ಅಭಿವೃದ್ಧಿಗೆ ಪ್ರಸ್ತಾವ ಕಳಿಸಲಾಗಿದೆ. ಬೀದರ್‌ನ ಕಾಲಿ ಮಜೀದ್‌, ಗುರುನಾನಕ ಸಮೀಪದ ಸ್ಮಾರಕಗಳು, ಗೋರನಳ್ಳಿಯಲ್ಲಿರುವ ಮಹಮೂದ್ ಗವಾನ್‌ ಗೋರಿ ಹಾಗೂ ಹುಮನಾಬಾದ್ ತಾಲ್ಲೂಕಿನ ಜಲಸಂಘ್ವಿ ಸ್ಮಾರಕ ಪ್ರದೇಶವನ್ನು ಅಭಿವೃದ್ಧಿಪಡಿಸಲಿದೆ’ ಎಂದರು.

ಐಎಚ್‌ಸಿಎನ್‌ನ ಪರೋಮಿತಾ ದೇಸಾಯಿ, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಆಯುಕ್ತ ಮನೋಹರ, ಲೋಕೋಪಯೋಗಿ ಇಲಾಖೆ, ಭೂಮಾಪನ ಇಲಾಖೆಯ ಅಧಿಕಾರಿಗಳು, ಟೀಂ ಯುವಾದ ವಿನಯ ಮಾಳಗೆ, ‘ಸಾಹಸ್‌’ ಸರ್ಕಾರೇತರ ಸಂಘಟನೆಯ ಸಂಯೋಜಕ ದೇವಪ್ಪ ನಾಯಕ ಇದ್ದರು.

ಸಮನ್ವಯ ಸಮಿತಿ ರಚಿಸಿ: ಸಿಂಗ್

ಬೀದರ್‌: ‘ಉತ್ತರ ಕರ್ನಾಟದಲ್ಲಿರುವ ಸ್ಮಾರಕಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ರಾಜ್ಯಮಟ್ಟದ ಸಮನ್ವಯ ಸಮಿತಿಯೊಂದನ್ನು ರಚಿಸಬೇಕು. ಜಿಲ್ಲಾಧಿಕಾರಿಗಳೇ ಈ ಸಮಿತಿಗೆ ಪ್ರತಿನಿಧಿಯೊಬ್ಬರನ್ನು ನೇಮಕ ಮಾಡಬೇಕು’ ಎಂದು ಎಎಸ್‌ಐ ಧಾರವಾಡ ವೃತ್ತದ ಅಧೀಕ್ಷಕ ದಲ್ಜಿತ್‌ಸಿಂಗ್‌ ಸಲಹೆ ನೀಡಿದರು.

‘ಸಮನ್ವಯ ಸಮಿತಿ ರಚಿಸುವುದರಿಂದ ಒಂದೇ ಬಗೆಯ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥ ಗೊಳಿಸಲು ಸಾಧ್ಯವಾಗುತ್ತದೆ. ಪ್ರವಾಸಿ ತಾಣಗಳ ಅಭಿವೃದ್ಧಿಗೂ ಅನುಕೂಲವಾಗುತ್ತದೆ’ ಎಂದರು.

‘ಸಮನ್ವಯ ಸಮಿತಿಗೆ ವಿಳಂಬ ಮಾಡುವುದು ಬೇಡ. ಮೊದಲ ಹಂತದಲ್ಲಿಯೇ ಬೀದರ್‌ ನಗರಸಭೆ ಆಯುಕ್ತ ಮನೋಹರ ಅವರನ್ನು ನೇಮಕ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಹೇಳಿದರು.

‘ಪ್ರವಾಸಿ ತಾಣಗಳ 500 ಮೀಟರ್ ಅಂತರದಲ್ಲಿ ಸಣ್ಣಪುಟ್ಟ ಕಾಮಗಾರಿ ಕೈಗೆತ್ತಿಕೊಳ್ಳಲು ಒಟ್ಟು 515 ಅರ್ಜಿ ಬಂದಿದ್ದವು. ಅದರಲ್ಲಿ 6 ಅರ್ಜಿಗಳನ್ನು ಹೊರತುಪಡಿಸಿ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಅಧಿಕಾರಿಗಳು ಆನ್‌ಲೈನ್‌ ಮೂಲಕ ಸಹ ದೂರು ಅಥವಾ ಅರ್ಜಿಗಳನ್ನು ಕಳಿಸಬಹುದಾಗಿದೆ. ‘ಸ್ಮಾರಕ್‌’ ಸಾಫ್ಟ್‌ವೇರ್‌ನಲ್ಲಿ ಎಲ್ಲ ಬಗೆಯ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಗಮನಿಸಬಹುದು’ ಎಂದು ತಿಳಿಸಿದರು.

‘ನಗರ ಪ್ರದೇಶದಲ್ಲಿರುವ ಎಎಸ್‌ಐ ಸ್ಮಾರಕಗಳ ಬಳಿ ಗಟಾರ ನೀರು ಹರಿದು ಹೋದಲು ಸಟ್ಟಪುಟ್ಟ ಪೈಪ್‌ಗಳನ್ನು ಹಾಕಲು ಅಧಿಕಾರಿಗಳು ಅನುಮತಿ ಕೊಡಬೇಕು. ಪ್ರತಿಯೊಂದಕ್ಕೆ ತಡೆಯೊಡ್ಡಿದರೆ ಸಮಸ್ಯೆ ಅಧಿಕ ಆಗುತ್ತವೆ. ಸ್ಮಾರಕಗಳಿಗೆ ಧಕ್ಕೆ ಉಂಟಾಗುತ್ತದೆ. ಸಮಸ್ಯೆಯ ಗಂಭೀರತೆ  ಅರಿತು ಕೆಲವೊಮ್ಮೆ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು’ ಎಂದರು.

ಬೀದರ್‌ ಕೋಟೆ ಮುಂದಿನ ಕಂದಕದಲ್ಲಿ ನಿಂತ ಕೊಳಚೆ ನೀರು ಹರಿದು ಹೋಗುವಂತೆ ಮಾಡಲು ಎಎಸ್‌ಐ ಅನುಮತಿ ಕೊಡಬೇಕು          - ಅನಿರುದ್ಧ ಶ್ರವಣ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry