ಮಂಗಳವಾರ, ಜುಲೈ 5, 2022
25 °C

ಮತ್ತೆ ಮಳೆ ಹೊಯ್ಯುತಿದೆ, ಹಾಡು ನೆನಪಾಗುತಿದೆ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಮತ್ತೆ ಮಳೆ ಹೊಯ್ಯುತಿದೆ, ಹಾಡು ನೆನಪಾಗುತಿದೆ

‘ಶ್ರೀ 420’ ಹಿಂದಿ ಸಿನಿಮಾದ ‘ಪ್ಯಾರ್ ಹುಆ ಇಕ್ ರಾರ್ ಹುಆ ಹೈ’ ಹಾಡನ್ನು ಮ್ಯೂಟ್ ಮಾಡಿ ನೋಡಿ.

‘ನೀ ಕೊಡೆ ನಾ ಬಿಡೆ’ ಎಂಬ ನುಡಿಗಟ್ಟು ನೆನಪಾಗುತ್ತದೆ. ಅಲ್ಲಿ ಮಳೆ ಇದೆ. ಕೊಡೆ ಇದೆ. ಚಾರ್ಲಿ ಚಾಪ್ಲಿನ್ ತರಹ ಆಡಹೊರಟ ರಾಜ್ ಕಪೂರ್. ತೀಡಿದ ಹುಬ್ಬಿನ, ಢಾಳು ಹಣೆಬೊಟ್ಟಿನ (ಮಳೆಯಲ್ಲೂ ಹಣೆಬೊಟ್ಟು ಹಾಗೇ ಇತ್ತಾ ಎಂಬ ತರ್ಕದ ಪ್ರಶ್ನೆ ಬದಿಗಿಡೋಣ) ನರ್ಗಿಸ್. ಒಂದೇ ಕೊಡೆಯೊಳಗೆ ಆಗೀಗ ಇಬ್ಬರು. ಅದನ್ನು ಹಿಡಿಯುವಾಗ ನವಿರಾಗಿ ತಾಕುವ ಕೈಗಳು.

ಈಗ ಮ್ಯೂಟ್ ತೆಗೆಯಿರಿ. ನಿಜಕ್ಕೂ ಮಳೆಯ ನಡುವೆ ನಿಂತಾಗ ಭಾವಪವನ ಹದವಾಗಿ ನೇವರಿಸಿ ಸಾಗಿದಂತೆ ಭಾಸವಾಗದಿದ್ದರೆ ಹೇಳಿ. ಕೊಡೆಯೊಳಗಿನ ಪ್ರೇಮಿಗಳ ಕನಲಿಕೆಯ ಪಲುಕು ನೋಡುಗರ ಎದೆಯಲ್ಲಿ. ಅದು ಮನ್ನಾಡೆ–ಲತಾ ಗಾನಮುನ್ನಡೆ. ಮತ್ತೆ ಮಳೆ ಹೊಯ್ಯುತಿದೆ. ಹಾಡು ನೆನಪಾಗುತಿದೆ.

ಶಂಕರ್–ಜೈಕಿಶನ್ ಹೀಗೆ ಪ್ರೇಮಾಮೋದವನ್ನು ಮಳೆರಾಗದ ಮೂಲಕ ಕಟ್ಟಿಕೊಟ್ಟ ಈ ಹಾಡು ಮಳೆಗಾಲಕ್ಕೆ ಸದಾ ಮುನ್ನುಡಿ. ತಲೆಮಾರುಗಳನ್ನು ಹಿಡಿದಿಟ್ಟುಕೊಂಡ ಸಶಕ್ತ ಸಾಲುಗಳನ್ನು ಬರೆದವರು ಶೈಲೇಂದ್ರ.‌

‘ಮಿಸ್ಟರ್ ಇಂಡಿಯಾ’ ಸಿನಿಮಾದ ‘ಕಾಂಟೆ ನಹೀಂ’ ಮಳೆಹಾಡಿನಲ್ಲಿ ಹಸಿರು ಸೀರೆಯುಟ್ಟ ಶ್ರೀದೇವಿ. ಹನಿಗಳನ್ನೂ ಬಿಸಿ ಮಾಡುವ ಮಾದಕತೆ. ಟೋಪಿ ತೊಟ್ಟ ಡಿಗ್ಲಾಮರೈಸ್ಡ್ ಅನಿಲ್ ಕಪೂರ್ ಒಂದು ಕಡೆ. ತಾನು ನೆನೆಯುತ್ತಾ ಉಳಿದವರ ಎದೆಯಲ್ಲಿ ಮಳೆಹನಿ ಸುರಿಸುವ ಗ್ಲಾಮರಸ್ ಶ್ರೀದೇವಿ ಇನ್ನೊಂದು ಕಡೆ. ವರುಣ–ಲಲನೆಯ ಲಾಲಿತ್ಯದ ಜುಗಲ್ ಬಂದಿ.

‘ಟಿಪ್ ಟಿಪ್ ಬರ್ಸಾ ಪಾನಿ’ ಹಾಡಿನ ಮೂಲಕ ಕಾಡುತ್ತಿದೆ ಅಲ್ಕಾ ಯಾಜ್ಞಿಕ್ ಮೋಹಕ ಸ್ಥಾಯಿ, ಉದಿತ್ ನಾರಾಯಣ್ ಶಾಸ್ತ್ರೀಯ ಪಲುಕು. ‘ಮೊಹ್ರಾ’ ಸಿನಿಮಾದ ಈ ಗೀತಮೊಹರಿನಲ್ಲಿ ಅಲ್ಕಾ ಮಳೆದನಿಯ ಕಾಣ್ಕೆಯು ನೆನೆಯುವ ರವೀನಾ ಟೆಂಡನ್ ಸೌಂದರ್ಯಕ್ಕಿಂತ ದೊಡ್ಡದು.

ಮತ್ತೆ ಮಳೆ ಹೊಯ್ಯುತಿದೆ. ಹಾಡು ನೆನಪಾಗುತಿದೆ.

‘ಭೀಗೀ ಭೀಗೀ ರಾತೋಂ ಮೇ ಐಸೆ ಬರ್ಸಾತೋಂ ಮೇ’ ಚಾವಣಿ ಮೇಲಿನ ಪ್ರೇಮಗೀತೆ. ಪಿಂಕುಡುಗೆಯ ಜೀನತ್ ಅಮಾನ್ ಕೆನ್ನೆ ಮೇಲಿನ ಕೆಂಪು, ರಾಜೇಶ್ ಖನ್ನಾ ತುಂಟತನದ ಪೆಂಪು ಎರಡಕ್ಕೂ ‘ಅಜ್ನಬಿ’ ಸಿನಿಮಾದ ಈ ಹಾಡೇ ಸಾಕ್ಷಿ. ಆರ್.ಡಿ. ಬರ್ಮನ್ ಸ್ವರ ಸಂಯೋಜನೆಗೂ ಆನಂದ್ ಬಕ್ಷಿ ಬರೆದ ಸಾಲುಗಳಿಗೂ ಸಲಾಂ.‌

ಕಪ್ಪು-ಬಿಳುಪು ಜಮಾನದ ಆ ಸೊಗಡು. ಕಣ್ಣು–ಕಂಠ ಎರಡರಲ್ಲೂ ಚೇಷ್ಟೆಯ ಕಿಡಿ ಅಡಗಿಸಿಕೊಂಡ ಕಿಶೋರ್ ಕುಮಾರ್ ‘ಚಲ್ತಿ ಕಾ ನಾಮ್ ಗಾಡಿ’ ಸಿನಿಮಾದಲ್ಲಿ ಹೇಗೆ ಕಂಡಿದ್ದರಲ್ಲವೇ? ‘ಏಕ್ ಲಡ್ಕಿ ಭೀಗೀ ಭಾಗೀ ಸೀ’ ಹಾಡಿನ ಪರಮ ತುಂಟತನದಲ್ಲಿ ಇರುವುದು ಮಳೆಯ ಲಯ. ನೆಂದ ಸೀರೆಯ ಹಿಂಡುವ ಮಧುಬಾಲಾ ಕಣ್ಣಲ್ಲಿನ ನಾಚಿಕೆ, ಕಳ್ಳಕೃಷ್ಣನಂಥ ಕಿಶೋರ್ ಕುಡಿನೋಟ–ಮಳೆ ಜೊತೆಗೆ ನೆಂಚಿಕೊಳ್ಳಲು ಇನ್ನೇನು ಬೇಕು?‌

ಸ್ಮಿತಾ ಪಾಟೀಲ್ ಸ್ನಿಗ್ಧ ಸೌಂದರ್ಯದ ಎದುರು ತುಸು ಅಳುಕು ತುಳುಕಿಸುವವರಂತೆ ಕಾಣುವ ಅಮಿತಾಭ್ ‘ಆಜ್ ರಪಟ್ ಜಾಯೇ ತೋ ಹಮೆ ನಾ ಉಠಯ್ಯೋ’ ಹಾಡನ್ನು ಹಿಟ್ ಮಾಡಿದ ಕತೆಯೂ ಇದೆ. ಕೆನ್ನೆ ಮೇಲೆ ಸಣ್ಣ ಸಂಕೋಚ ಕೂರಿಸಿಕೊಂಡೇ ನೆನೆಯುವ, ಲಕ್ಷಣ ಮುಖದ ಸ್ಮಿತಾ ಆ ಹಾಡಿನ ಮೂಲಕ ರಸಿಕರ ಹೃದಯದಲ್ಲಿ ಕುರ್ಚಿ ಹಾಕಿಕೊಂಡು ಕೂತುಬಿಟ್ಟರು.

ಈ ಅಮಿತಾಭ್ ಅದೃಷ್ಟವಂತ. ‘ಮನ್ಜಿಲ್’ ಸಿನಿಮಾದ ‘ರಿಮ್ ಜಿಮ್ ಗಿರೆ ಸಾವನ್’ ಹಾಡಿನಲ್ಲೂ ಅವರೇ ನಾಯಕ. ಅದರಲ್ಲಿ ಅವರಿಗೆ ಸೂಟು-ಬೂಟು! ಪಕ್ಕದಲ್ಲಿ ನಿಂತ ಮೌಸಮಿ ಚಟರ್ಜಿ ಮುಖ ಮುದ್ದಿಸುವ ಹದವಾದ ಹನಿಗಳಿಗೆ ಧನ್ಯವಾದ ಹೇಳುವ ಭಾವ ಚೆಲ್ಲುತ್ತಾರೆ.

ಸಣ್ಣಮಳೆಯಲ್ಲಿ ಕಡಲತಟದಲ್ಲಿ ಇಬ್ಬರ ನಡಿಗೆಯನ್ನೂ ಮರೆಸುವಷ್ಟು ತೀವ್ರವಾಗಿ ಲತಾ ದೀದಿ ಕಂಠ ಕಾಡುತ್ತದೆ. ಮಳೆಯೇನೊ ಸಣ್ಣದೇ; ಅವರ ಹಾಗೂ ಕಿಶೋರ್ ಹಾಡಿನ ಮಳೆ ಮಾತ್ರ ಕುಂಭದ್ರೋಣ. ಆ ಹಾಡಿನ ಏರಿಳಿತದಲ್ಲಿರುವುದು ಸೈಕ್ಲೋನ್ ಎಫೆಕ್ಟಿನ ಚಳಿ ಚಳಿ.

‘ರಿಮ್ ಜಿಮ್ ರಿಮ್ ಜಿಮ್ ರುಮ್ ಜುಮ್ ರುಮ್ ಜುಮ್’ ಎಂಬ ‘1942 ಎ ಲವ್ ಸ್ಟೋರಿ’ ಹಾಡಿನಲ್ಲಿರುವುದು ಅದೇ ಆರ್.ಡಿ. ಬರ್ಮನ್ ಮೋಡಿ. ‘ಮುತ್ತಿನ ಹನಿಗಳು ಸುತ್ತಲೂ ಮುತ್ತಲು’ ಎಂಬ ಕನ್ನಡದ ಹಾಡನ್ನೇ ಎಲ್ಲೋ ಕೇಳಿ ಬರೆದಂಥ ಸಾಲುಗಳ ಆ ಹಾಡಿನಲ್ಲಿ ಮೊನಿಷಾ ಕೊಯಿರಾಲ ಉಟ್ಟ ಹಳದಿ ಸೀರೆ ಮೇಲೆ ಅದೆಷ್ಟು ಜನರ ಕಣ್ಣು ಬಿದ್ದಿತ್ತೋ? ಮಳೆ ಮುದ್ದಿಸಿ ಹೋದ ಎಲೆಯಷ್ಟೇ ತಾಜಾ ಆಗಿ ಹಾಡಿನ ದೃಶ್ಯಗಳು ಕಾಣುತ್ತವೆ; ಕಾಡುತ್ತವೆ. ಕವಿತಾ ಸುಬ್ರಹ್ಮಣ್ಯಂ ಕಂಠಸಿರಿಯ ಮೋಡಿಯೂ ಅದರಲ್ಲಿದೆ.

ಮತ್ತೆ ಶ್ರೀದೇವಿ. ‘ಚಾಂದಿನಿ’ ಸಿನಿಮಾದ ಭಾವಮಳೆ. ‘ಲಗೀ ಆಜ್ ಸಾವನ್ ಕಿ ಫಿರ್ ವೋ ಝಡೀ ಹೈ’. ಶ್ರೀದೇವಿಗೂ ಇಲ್ಲಿ ಹಳದಿ ಸೀರೆ. ಮಳೆಗೆ ಮೈಯೊಡ್ಡಿಕೊಂಡ ಅವರನ್ನು ನೋಡುವ ವಿನೋದ್ ಖನ್ನಾಗೆ ಕಳೆದುಕೊಂಡ ಪತ್ನಿಯ ನೆನಪು. ‘ಮಳೆ ಮಾಧುರ್ಯ’ ಎಂದೇ ಬಣ್ಣಿತವಾಗಿದ್ದ ಈ ಹಾಡಿಗೆ ಸ್ವರ ಸಂಯೋಜಿಸಿದವರು ಶಿವಹರಿ. ಸಾಲುಗಳಿಟ್ಟಿದ್ದು ಮತ್ತದೇ ಆನಂದ್ ಬಕ್ಷಿ. ಸುರೇಶ್ ವಾಡ್ಕರ್ ದೀರ್ಘ ಕಾಲದ ರಿಯಾಜ್ ಹಾಡನ್ನು ಇನ್ನಷ್ಟು ಮೇಲಕ್ಕೆತ್ತಿಕೊಂಡು ಹೋಯಿತು.

ಈಗ ಮಳೆಹಾಡುಗಳನ್ನು ‘ರೇನ್ ಸಾಂಗ್’ ಎಂದು ಕರೆಯುತ್ತಾರೆ. ನಾಯಕಿ ಸುಮ್ಮನೆ ನೆನಯಬೇಕು; ಆಕೆಯ ಅಂಗೋಪಾಂಗಗಳು ಕಾಣಬೇಕು ಎನ್ನುವುದಷ್ಟೆ ಉಮೇದು. ಅಂಥಾದರಲ್ಲೂ ಆಗೀಗ ಮೂಡುವ ಮಳೆಯ ಹಸಿರು ಮುಖಗಳು ಎದೆಯಲಿ ಕಾಮನಬಿಲ್ಲು ಮೂಡಿಸಿ ತಣ್ಣಗೆ ಮಾಡುತ್ತವೆ.‌

ಇಷ್ಟಕ್ಕೂ ಮಳೆ ಎಂದರೆ ಯಾಕೆ ಮಿಂದ, ನೆಂದ ನಾಯಕಿಯರೇ ನೆನಪಾಗುವುದು? ಮತ್ತೆ ಮಳೆ ಹೊಯ್ಯುತಿದೆ. ಹಾಡು ನೆನಪಾಗುತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.