ಹಳಿಯಾಳದಲ್ಲಿ ಬಿಡುವಿಲ್ಲದ ಕೃಷಿ ಕಾಯಕ

7
ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರ ಆರಂಭ

ಹಳಿಯಾಳದಲ್ಲಿ ಬಿಡುವಿಲ್ಲದ ಕೃಷಿ ಕಾಯಕ

Published:
Updated:
ಹಳಿಯಾಳದಲ್ಲಿ ಬಿಡುವಿಲ್ಲದ ಕೃಷಿ ಕಾಯಕ

ಹಳಿಯಾಳ: ಸಕಾಲಕ್ಕೆ ಮುಂಗಾರು ಆರಂಭವಾದ ಕಾರಣ ತಾಲ್ಲೂಕಿನಾದ್ಯಂತ ಭತ್ತ, ಹತ್ತಿ, ಗೋವಿನಜೋಳದ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ಕಳೆದ 8-10 ದಿನಗಳ ಹಿಂದೆ ಬಿತ್ತಿದ ಹತ್ತಿ, ಗೋವಿನಜೋಳ, ಭತ್ತ ಮೊಳಕೆಯೊಡೆದು ಚಿಗುರುತ್ತಿದೆ. ಕಬ್ಬಿನ ಬೆಳೆಯು ಉತ್ತಮವಾಗಿದೆ.

1977ರ ಪೂರ್ವದಲ್ಲಿ ಹಳಿಯಾಳ ತಾಲ್ಲೂಕು ಭತ್ತದ ಕಣಜ ಎಂದೇ ಪ್ರಖ್ಯಾತಿ ಹೊಂದಿತ್ತು. ನಂತರದ ದಿನಗಳಲ್ಲಿ ಹವಾಮಾನ ವೈಫರಿತ್ಯದಿಂದ ರೈತರು ಹತ್ತಿ ಬೆಳೆ ಮೊರೆ ಹೋದರು. ಕಳೆದ ಕೆಲ ವರ್ಷಗಳಿಂದ ಗೋವಿನ ಜೋಳ, ಕಬ್ಬು ಹಾಗೂ ಹತ್ತಿ ಬೆಳೆಗಳನ್ನು ಬೆಳೆಯಲು ಆರಂಭಿಸಿದ್ದಾರೆ.

ತಾಲ್ಲೂಕಿನಲ್ಲಿ ಭತ್ತದ ಬೆಳೆಯ ಬಿತ್ತನೆಯ ಗುರಿ 11500 ಹೆಕ್ಟೇರ್‌ ಇತ್ತು. ಈವರೆಗೆ 6927 ಹೆಕ್ಟೇರ್‌ ಭೂಮಿಯಲ್ಲಿ ಭತ್ತ ಬೆಳೆಯಲಾಗಿದೆ. ಗೋವಿನಜೋಳ 4180 ಹೆಕ್ಟೇರ್‌ ಬಿತ್ತಲಾಗಿದೆ. ಹತ್ತಿ ಬೆಳೆಯ ಗುರಿ 500 ಹೆಕ್ಟೇರ್‌ ಇತ್ತು. ಈಗ 100 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಕಬ್ಬು ನಾಟಿ ಮತ್ತು ಕುಳೆ 6920 ಹೆಕ್ಟೇರ್‌ ಭೂಮಿಯಲ್ಲಿ ಬೆಳೆಯಲಾಗಿದೆ. ಭತ್ತ ಹಾಗೂ ಗೋವಿನ ಜೋಳದ ಬೆಳೆಯನ್ನು ಕೆಲ ರೈತರು ಮೇ ಕೊನೆಯ ವಾರದಲ್ಲಿಯೇ ಜಮೀನು ಹದ ಮಾಡಿ ಬಿತ್ತಿದ್ದರು. ಈಗ ಅದು ಉತ್ತಮವಾಗಿ ಬೆಳೆದಿದೆ.

‘ಕಳೆದ ಮೂರು ವರ್ಷದಿಂದ ಗೋವಿನ ಜೋಳವನ್ನು ಬಿತ್ತನೆ ಮಾಡಲಾಗಿದ್ದು, ಮೂರು ಎಕರೆ ಭೂಮಿಯಲ್ಲಿ  ಜೋಳದ ಸಸಿಗಳು ಉತ್ತಮ ರೀತಿಯಲ್ಲಿ ಬೆಳೆದಿವೆ. ಅಲ್ಲಲ್ಲಿ ಕಳೆ ಬಂದಿದೆ. ಕಳೆ ತೆಗೆದು ಸಕಾಲಕ್ಕೆ ರಸಗೊಬ್ಬರವನ್ನು ಬೆಳೆಗಳಿಗೆ ಹಾಕಿದರೆ ಮುಂಬರುವ ದಿನಗಳಲ್ಲಿ 50-60 ಕ್ವಿಂಟಲ್ ಗೋವಿನ ಜೋಳ ಬೆಳೆಯಬಹುದು' ಎಂದು ಜನಗಾ ಗ್ರಾಮದಲ್ಲಿ ಗೋವಿನ ಜೋಳ ಬೆಳೆಗೆ ಕುಂಟೆ ಹಾಕುವ ಕಾರ್ಯದಲ್ಲಿ ತೊಡಗಿದ್ದ ರೈತ ಮಾರುತಿ ಭರಮಾಗೌಡಾ ಹೇಳಿದರು.

ಹತ್ತಿ ಪ್ರಮಾಣ ಕ್ಷೀಣ: ಪ್ರಸಕ್ತ ಸಾಲಿನಲ್ಲಿ ಹತ್ತಿ ಬೆಳೆಯ ಪ್ರಮಾಣ ತಾಲ್ಲೂಕಿನಲ್ಲಿ ಕಡಿಮೆಯಾಗಿದೆ. ರೈತರು ಹತ್ತಿ ಬೀಜದ ಪ್ಯಾಕೆಟ್‌ ಖರೀದಿ ಮಾಡಿದಾಗ ಪ್ರತಿ ಪ್ಯಾಕೆಟ್‌ ಜತೆ ಸ್ಯಾಂಪಲ್ ನೀಡಲಾಗುವುದು. ಆ ಬೀಜವನ್ನು ಪ್ರತಿ ಏಳು ಸಾಲುಗಳ ನಡುವೆ ಎರಡು ಸಾಲು ಬಿತ್ತನೆ ಮಾಡಿದರೆ ಆ ತಳಿಯೂ ಉತ್ತಮ ರೀತಿಯಲ್ಲಿ ಬೆಳೆಯುತ್ತದೆ. ಹತ್ತಿ ಬೆಳೆಯ ಸುತ್ತ ಚೆಂಡು ಹೂವಿನ ಗಿಡ ಬೆಳೆದರೂ ರಸಹೀರುವ ಕ್ರೀಮಿಕೀಟಗಳು ಹೂವಿಗೆ ಆಕರ್ಷಿತವಾಗಿ ಹತ್ತಿ ಬೆಳೆಯನ್ನು ಸಂರಕ್ಷಿಸುತ್ತವೆ ಎಂದು ಮುರ್ಕವಾಡ ಭಾಗದ ಸಹಾಯಕ ಕೃಷಿ ಅಧಿಕಾರಿ ಅಕ್ಷತಾ ಹೊಸಮನಿ ತಿಳಿಸಿದರು.

ಹಳಿಯಾಳ, ಮುರ್ಕವಾಡ, ಸಾಂಬ್ರಾಣಿ, ದಾಂಡೇಲಿ ಹೊಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರವನ್ನು ತೆರೆಯಲಾಗಿದ್ದು, ರೈತರು ತಮ್ಮ ಬೆಳೆಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಕೃಷಿಗೆ ಸಂಬಂಧಿಸಿದ ಸಲಹೆ ಸೂಚನೆಗಾಗಿ ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ಸಲಹೆ ನೀಡಿದರು.

ಸಂತೋಷ ಜಿ.ಹಬ್ಬು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry