ಎಲ್‌ಜಿ ಕಚೇರಿಯಲ್ಲಿ ಕೇಜ್ರಿವಾಲ್‌ ಧರಣಿ

7
ಮೈಕೊರೆಯುವ ಚಳಿಯಲ್ಲಿ ಸೋಫಾಗಳಲ್ಲೇ ರಾತ್ರಿ ಕಳೆದ ಮಂತ್ರಿಗಳು

ಎಲ್‌ಜಿ ಕಚೇರಿಯಲ್ಲಿ ಕೇಜ್ರಿವಾಲ್‌ ಧರಣಿ

Published:
Updated:
ಎಲ್‌ಜಿ ಕಚೇರಿಯಲ್ಲಿ ಕೇಜ್ರಿವಾಲ್‌ ಧರಣಿ

ನವದೆಹಲಿ: ಪ್ರತಿಭಟನಾನಿರತ ಐಎಎಸ್‌ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮೂವರು ಸಂಪುಟ ಸಹೋದ್ಯೋಗಿಗಳ ಜತೆಗೂಡಿ ಸೋಮವಾರ ಲೆಫ್ಟಿನೆಂಟ್‌ ಗವರ್ನರ್‌ (ಎಲ್‌ಜಿ) ಕಚೇರಿಯಲ್ಲಿ ಆರಂಭಿಸಿದ್ದ ಧರಣಿ ಮಂಗಳವಾರವೂ ಮುಂದುವರಿದಿದೆ.

ಐಎಎಸ್‌ ಅಧಿಕಾರಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ನಿರ್ದೇಶನ ನೀಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ.

ಪ್ರಧಾನಿ ಕಚೇರಿ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಒಂದಾಗಿ ಐಎಎಸ್‌ ಅಧಿಕಾರಿಗಳನ್ನು ದೆಹಲಿ ಸರ್ಕಾರದ ವಿರುದ್ಧ ಎತ್ತಿ ಕಟ್ಟಿದ್ದಾರೆ ಎಂದು ಕೇಜ್ರಿವಾಲ್‌ ಮಂಗಳವಾರ ವಿಡಿಯೊ ಸಂದೇಶದಲ್ಲಿ ಆರೋಪಿಸಿದ್ದಾರೆ.

ಅಧಿಕಾರಿಗಳು ನಡೆಸುತ್ತಿರುವ ಪ್ರತಿಭಟನೆಗೆ ಇವರೇ ಕುಮ್ಮಕ್ಕು ನೀಡುತ್ತಿದ್ದಾರೆ. ಜನರಿಂದ ಆಯ್ಕೆಯಾದ ಸರ್ಕಾರವನ್ನು ನಿರ್ಲಕ್ಷಿಸಿ ಲೆಫ್ಟಿನೆಂಟ್‌ ಗವರ್ನರ್‌ ಅಧಿಕಾರಿಗಳ ಬೆನ್ನಿಗೆ ನಿಂತಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.

ನಾಗರಿಕರ ಮನೆಗೆ ಪಡಿತರ ತಲುಪಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಲು ಲೆಫ್ಟಿನೆಂಟ್‌ ಗವರ್ನರ್‌ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ. ಧರಣಿ ನಡೆಸದೆ ಬೇರೆ ಮಾರ್ಗವಿಲ್ಲ ಎಂದು ಅವರು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಕೇಜ್ರಿವಾಲ್‌ ನಿವಾಸದಲ್ಲಿ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಮೇಲೆ ಎಎಪಿ ಶಾಸಕರು ಮತ್ತು ನಾಯಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಐಎಎಸ್‌ ಅಧಿಕಾರಿಗಳು ಫೆಬ್ರುವರಿ19ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೇಜ್ರಿವಾಲ್‌ ವಿರುದ್ಧ ಬೆದರಿಕೆ ಆರೋಪ: ಧರಣಿ ನಿರತ ಐಎಎಸ್‌ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಲೆಫ್ಟಿನೆಂಟ್‌ ಗವರ್ನರ್‌ ಅವರಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಲೆಫ್ಟಿನೆಂಟ್‌ ಗವರ್ನರ್‌ ಕಚೇರಿ ಆರೋಪಿಸಿದೆ.

ಅಧಿಕಾರಿಗಳು ಧರಣಿ ನಡೆಸುತ್ತಿಲ್ಲ. ಯಾವುದೇ ಕಾರಣ ಇಲ್ಲದೆ ಮುಖ್ಯಮಂತ್ರಿ ಇತರ ಸಚಿವರೊಂದಿಗೆ ಧರಣಿ ನಡೆಸುತ್ತಿದ್ದಾರೆ ಎಂದು ಲೆಫ್ಟಿನೆಂಟ್‌ ಗವರ್ನರ್‌ ಕಚೇರಿ ಪ್ರಕಟಣೆ ತಿಳಿಸಿದೆ. ಎಎಪಿ ಸರ್ಕಾರದ ಆರೋಪಗಳನ್ನು ತಳ್ಳಿ ಹಾಕಿರುವ ಐಎಎಸ್ ಅಧಿಕಾರಿಗಳ ಸಂಘ, ಅಧಿಕಾರಿಗಳು ಬಜೆಟ್‌ ಸಿದ್ಧತೆ ಕೆಲಸದಲ್ಲಿ ತೊಡಗಿದ್ದಾರೆ. ಸಂಬಂಧಿಸಿದ ಸಚಿವರಿಗೆ ವರದಿ ಸಲ್ಲಿಸುತ್ತಿದ್ದಾರೆ ಎಂದು ಟ್ವೀಟ್‌ ಮಾಡಿದೆ.

ಕೇಜ್ರಿವಾಲ್‌ ಅವರ ಧರಣಿಯನ್ನು ‘ಪ್ರಜಾಪ್ರಭುತ್ವದ ಅಣಕ’ ಎಂದು ಬಿಜೆಪಿ ಟೀಕಿಸಿದೆ.

**

ಸೋಫಾದಲ್ಲಿ ಮಲಗಿದ ಮುಖ್ಯಮಂತ್ರಿ!

ಅರವಿಂದ್ ಕೇಜ್ರಿವಾಲ್‌ ಸೋಮವಾರ ಸಂಜೆ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಗೆ ತೆರಳಿ ಅನಿಲ್ ಬೈಜಾಲ್‌ ಜತೆ ಚರ್ಚಿಸಿದರು.

ಪ್ರತಿಭಟನೆ ಕೈಬಿಡುವಂತೆ ಐಎಎಸ್‌ ಅಧಿಕಾರಿಗಳಿಗೆ ಸೂಚಿಸಲು ಮತ್ತು ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಬೈಜಾಲ್‌ ನಿರಾಕರಿಸಿದ್ದರಿಂದ ಕೇಜ್ರಿವಾಲ್‌ ಅವರು ಮೂವರು ಸಚಿವರೊಂದಿಗೆ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯಲ್ಲಿಯೇ ಧರಣಿ ಆರಂಭಿಸಿದರು.

ಕೇಜ್ರಿವಾಲ್‌, ಡಿಸಿಎಂ ಮನೀಶ್‌ ಸಿಸೊಡಿಯಾ, ಸಚಿವರಾದ ಸತ್ಯೇಂದ್ರ ಜೈನ್‌, ಗೋಪಾಲ್‌ ರಾಯ್‌ ಅವರು ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯ ಸೋಫಾ

ಗಳಲ್ಲಿಯೇ ರಾತ್ರಿ ಕಳೆದರು. ಸತ್ಯೇಂದ್ರ ಜೈನ್‌ ಅವರು ಮಂಗಳವಾರದಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

**

ಅಧಿಕಾರಿಗಳ ಅಸಹಕಾರದಿಂದ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಲೆಫ್ಟಿನೆಂಟ್‌ ಗವರ್ನರ್‌ ಅಧಿಕಾರಿಗಳ ಕಿವಿ ಹಿಂಡುವ ಬದಲು ಅವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ.

–ಅರವಿಂದ್‌ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry