ಇಬ್ಬರು ಪೊಲೀಸರು ಹುತಾತ್ಮ

7
ಜಮ್ಮು ಮತ್ತು ಕಾಶ್ಮೀರದಲ್ಲಿ ಕೋರ್ಟ್‌ ಸಂಕೀರ್ಣದ ಮೇಲೆ ಉಗ್ರರ ದಾಳಿ

ಇಬ್ಬರು ಪೊಲೀಸರು ಹುತಾತ್ಮ

Published:
Updated:
ಇಬ್ಬರು ಪೊಲೀಸರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕೋರ್ಟ್‌ ಸಂಕೀರ್ಣದ ಮೇಲೆ ಮಂಗಳವಾರ ಗುಂಡಿನ ದಾಳಿ ನಡೆಸಿದ ಉಗ್ರರು ಇಬ್ಬರು ಪೊಲೀಸ್‌ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾರೆ.

ನ್ಯಾಯಾಲಯ ಸಂಕೀರ್ಣದ ಆವರಣದೊಳಗೆ ನುಗ್ಗಿದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ಭದ್ರತಾ ಚೌಕಿಯಲ್ಲಿ ಕಾವಲು ಕಾಯುತ್ತಿದ್ದ ಇಬ್ಬರು ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋರ್ಟ್‌ ಆವರಣದ ಸುತ್ತಮುತ್ತ ಕಟ್ಟೆಚ್ಚರ ವಹಿಸಿದ್ದು, ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಅನಂತ್‌ನಾಗ್ ಜಿಲ್ಲೆಯ ಜಂಗ್ಲಾಟ್ ಮಂಡಿಯಲ್ಲಿರುವ ಕೇಂದ್ರೀಯ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಶಿಬಿರದ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಐದು ಮಂದಿ ಸಿಆರ್‌ಪಿಎಫ್‌ ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟಕ ನಿಷ್ಕ್ರಿಯಗೊಳಿಸಿದ ಭದ್ರತಾ ಪಡೆ: ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ಉಗ್ರರು ಇಟ್ಟಿದ್ದ ಕಚ್ಚಾ ಬಾಂಬ್‌ಗಳನ್ನು (ಐಇಡಿ) ಭದ್ರತಾ ಪಡೆ ಮಂಗಳವಾರ ಪತ್ತೆಹಚ್ಚಿ, ನಿಷ್ಕ್ರಿಯಗೊಳಿಸಿದೆ. ಆ ಮೂಲಕ ಸಂಭವಿಸಬಹುದಾಗಿದ್ದ ದುರಂತವನ್ನು ತಪ್ಪಿಸಿದಂತಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದಾಳಿಗೆ ಕಾಂಗ್ರೆಸ್‌ ಖಂಡನೆ: ಪವಿತ್ರ ರಮ್ಜಾನ್‌ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಲು ಕೇಂದ್ರ ಸರ್ಕಾರ ಕದನ ವಿರಾಮ ಘೋಷಣೆ ಮಾಡಿದೆ. ಆದರೆ, ಇದರ ನಡುವೆಯೂ ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಕಡೆದಾಳಿ ನಡೆಸಿರುವುದು ಅತ್ಯಂತ ಖಂಡನೀಯ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

**

ಭಯೋತ್ಪಾದಕರಿಗೆ ಯಾವುದೇ ಧರ್ಮದ ಮೇಲೆ ಗೌರವ ಇಲ್ಲ. ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಇದು ಅತ್ಯಂತ ಕಳವಳಕಾರಿ

–ರವೀಂದ್ರ ಶರ್ಮ, ಜಮ್ಮು ಮತ್ತು ಕಾಶ್ಮೀರದ ಪ್ರದೇಶ ಕಾಂಗ್ರೆಸ್‌ ಸಮಿತಿ ವಕ್ತಾರ

**

ಭದ್ರತಾ ಪಡೆ ಇನ್ನಷ್ಟು ಕಠಿಣವಾಗಿ ಉತ್ತರಿಸಿದರೆ ಇದಕ್ಕೆ ಉಗ್ರರು ತಮ್ಮನ್ನು ತಾವೇ ದೂಷಿಸಿಕೊಳ್ಳಬೇಕಾಗುತ್ತದೆ

–ಒಮರ್‌ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry