7
ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದಲ್ಲಿ ಜಿಲ್ಲಾ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ

ಮಕ್ಕಳನ್ನು ದುಡಿಸಿಕೊಂಡರೆ ಎರಡು ವರ್ಷ ಶಿಕ್ಷೆ

Published:
Updated:

ಚಿತ್ರದುರ್ಗ: ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಈ ತಪ್ಪು ಮಾಡಿದವರಿಗೆ ಎರಡು ವರ್ಷ ಜೈಲು ಶಿಕ್ಷೆಯ ಜತೆ ₹ 20ರಿಂದ 50 ಸಾವಿರದವರೆಗೂ ದಂಡ ವಿಧಿಸಲು ಅವಕಾಶವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ ತಿಳಿಸಿದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬೇರೆ ಎಲ್ಲ ಅನಿಷ್ಟ ಪದ್ಧತಿಗಿಂತಲೂ ಬಾಲ ಕಾರ್ಮಿಕ ಪದ್ಧತಿ ಇಂದಿಗೂ ಹಲವೆಡೆ ಚಾಲ್ತಿಯಲ್ಲಿದೆ. ಬಡತನ, ಆಹಾರದ ಅಭದ್ರತೆ, ಅವಿದ್ಯಾವಂತ ಕುಟುಂಬ ಹೀಗೆ ಹಲವು ಕಾರಣದಿಂದಾಗಿ ಕೆಲವೆಡೆ ಮಕ್ಕಳನ್ನು ದುಡಿಮೆಗೆ ಕಳಿಸುವ ಪರಿಪಾಠವಿದೆ. ಆದ್ದರಿಂದ ಪ್ರತಿಯೊಬ್ಬರು ಈ ವಿಚಾರದಲ್ಲಿ ಕೈಜೋಡಿಸುವ ಮೂಲಕ ಅದಕ್ಕೆ ಕಡಿವಾಣ ಹಾಕಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಮಕ್ಕಳ ಅಪಹರಣ, ಬಾಲಕ, ಬಾಲಕಿಯರಿಗೆ ಲೈಂಗಿಕ ಕಿರುಕುಳ, ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವುದು, ಬಾಲ್ಯಾವಸ್ಥೆಯಲ್ಲಿ ವಿವಾಹ ಮಾಡಲು ಮುಂದಾಗುವುದು ಹೀಗೆ ಅನೇಕ ರೀತಿಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ತಕ್ಷಣ ಪೊಲೀಸ್ ಸಹಾಯವಾಣಿ ಸಂಖ್ಯೆ 100, ಮಕ್ಕಳ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 1098 ಗೆ ಮಾಹಿತಿ ನೀಡಿದರೆ, ಮಕ್ಕಳನ್ನು ರಕ್ಷಿಸುವುದರ ಜತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ’ ಎಂದರು.

ಯಾರೇ ಆಗಲಿ, 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳುವಂತಿಲ್ಲ. ದೇಶದಲ್ಲಿ 15 ವರ್ಷದೊಳಗಿನ ಪ್ರತಿ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂಬ ನಿಯಮವಿದೆ. ಸರ್ಕಾರ ಅದಕ್ಕೆ ಬೇಕಾದ ಯೋಜನೆಗಳನ್ನು ಜಾರಿಗೊಳಿಸಿದೆ. ಅದನ್ನು ಎಲ್ಲರೂ ಬಳಸಿಕೊಳ್ಳಬೇಕಿದೆ ಎಂದರು.

‘ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರಿಂದ ಸಮಾಜದಲ್ಲಿ ನಿಮಗೆ ಗೌರವ ಹೆಚ್ಚಲಿದೆ. ದೇಶದಲ್ಲಿ ಸಾಕ್ಷರತೆ ಪ್ರಮಾಣ ಅಧಿಕವಾಗಲಿದೆ. ಆದ್ದರಿಂದ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಿದೆ’ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್. ದಿಂಡಲಕೊಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಎನ್. ರವೀಂದ್ರ, ವಕೀಲರ ಸಂಘದ ಕಾರ್ಯದರ್ಶಿ ಸಿ. ಶಿವುಯಾದವ್, ಡೇಟ್ ಸಂಸ್ಥೆಯ ಶಿವಣ್ಣ, ಡಿಡಿಪಿಐ ಅಂಥೋಣಿ, ಬಿಇಒ ನಾಗಭೂಷಣ್, ಕಾರ್ಮಿಕ ಅಧಿಕಾರಿ ಇಬ್ರಾಹಿಂ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಆರ್. ಪ್ರಭಾಕರ್ ಇದ್ದರು.

ಕಾರ್ಯಕ್ರಮಕ್ಕೂ ಮೊದಲು ಇಲ್ಲಿನ ಹೊಳಲ್ಕೆರೆ ರಸ್ತೆಯ ಸಂಪಿಗೆ ಸಿದ್ಧೇಶ್ವರ ಪ್ರೌಢಶಾಲಾ ಆವರಣದಿಂದ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಎಸ್.ಬಿ. ವಸ್ತ್ರಮಠ ಚಾಲನೆ ನೀಡಿದರು.

ಬಾಲ ಕಾರ್ಮಿಕ ವಿರೋಧಿ ದಿನದ ಕುರಿತು ಜನರಿಗೆ ತಿಳಿವಳಿಕೆ ಮೂಡಿಸುವ ಘೋಷಣೆ ಕೂಗಲಾಯಿತು. ಶಾಲಾ ಮಕ್ಕಳು ಬಾಲಕಾರ್ಮಿಕ ಪದ್ಧತಿಯಿಂದ ಆಗುವ ಅನಾಹುತಗಳನ್ನು ಪರಿಚಯಿಸುವ ಬಿತ್ತಿ ಪತ್ರಗಳನ್ನು ಹಿಡಿದು, ವಿವಿಧ ಘೋಷಣೆಗಳನ್ನು ಕೂಗುತ್ತಾ ಜಾಥಾದಲ್ಲಿ ಪಾಲ್ಗೊಂಡರು.

ನಗರದ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿಧನಿಗಳು, ಕೆಲ ಮೆಕ್ಯಾನಿಕ್ ಗಳ ಸಂಘದವರು ಹಾಗೂ ಕಟ್ಟಡದ ಕಾರ್ಮಿಕ ಸಂಘದ ಪದಾಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ವಕೀಲರ ಸಂಘ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸೊಸೈಟಿ, ಸ್ವಯಂ ಸೇವಾ ಸಂಸ್ಥೆಗಳಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

‘ಶ್ರಮದ ಕೆಲಸ ಮಾಡಿಸಿದರೆ ಶಿಕ್ಷೆ’

‘ವೆಲ್ಡಿಂಗ್ ಶಾಪ್, ಕಟ್ಟಡ ನಿರ್ಮಾಣ, ಟವರ್‌, ಮೂಟೆ ಹೊರುವುದು, ಮೆಕ್ಯಾನಿಕ್ ಇನ್ನೂ ಹಲವು ರೀತಿಯ ದುಡಿಮೆಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಂಡು ಅಧಿಕ ಶ್ರಮದ ಕೆಲಸ ಮಾಡಿಸಿಕೊಂಡರೆ ಸಂಬಂಧಪಟ್ಟ ಮಾಲೀಕರು ಶಿಕ್ಷೆಗೆ ಗುರಿಯಾಗುತ್ತಾರೆ’ ಎಂದು ವಸ್ತ್ರಮಠ ಹೇಳಿದರು.

‘ಬೆಳೆಯುವ ವಯಸ್ಸಿನಲ್ಲಿ ಮಕ್ಕಳು ಸದೃಢ ಮತ್ತು ಆರೋಗ್ಯವಾಗಿರಬೇಕು. ಇಂತಹ ಅವಧಿಯಲ್ಲಿ ಶ್ರಮದ ಕೆಲಸ ಮಾಡಿದರೆ, ದೈಹಿಕ ಮತ್ತು ಮಾನಸಿಕ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಮಕ್ಕಳು ಮತ್ತು ಯುವಸಮೂಹ ದೇಶದ ಆಸ್ತಿಯಾಗಿದ್ದು, ಅವರ ಆರೋಗ್ಯದ ದೃಷ್ಟಿಯಿಂದ ದುಡಿಸಿಕೊಳ್ಳುವುದು ಉತ್ತಮ ಬೆಳವಣಿಗೆಯಲ್ಲ’ ಎಂದು ಅವರು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry