ಶುಕ್ರವಾರ, ಏಪ್ರಿಲ್ 3, 2020
19 °C

ಮರಾಠಾ ಶೈಲಿಯ ಬಿರಿಯಾನಿ

ಶಶಿಕುಮಾರ್‌ ಸಿ. Updated:

ಅಕ್ಷರ ಗಾತ್ರ : | |

ಮರಾಠಾ ಶೈಲಿಯ ಬಿರಿಯಾನಿ

ಒಳಗೆ ಹೆಜ್ಜೆ ಇಟ್ಟೊಡನೆ ಮೂಗಿಗೆ ಬಡಿಯುವ ಮಾಂಸಾಹಾರ ಖಾದ್ಯಗಳ ಸುವಾಸನೆ. ಗ್ರಾಹಕರಿಂದ ಗಿಜಿಗುಡುವ ವಾತಾವರಣ. ಹೋಟೆಲ್‌ನಿಂದ ಹೊರಗೆ ಬರುವ ಮಾಂಸಪ್ರಿಯರ ಮೊಗದಲ್ಲಿ ನಾಲಿಗೆಯ ಹಸಿವು ನೀಗಿಸಿದ ಸಂತೃಪ್ತಿ...

ಈ ಸನ್ನಿವೇಶ ಕಂಡು ಬಂದಿದ್ದು, ಬನಶಂಕರಿ ಬಸ್ ನಿಲ್ದಾಣದ ಬಳಿಯ ಶಿವಾಜಿ ಮಿಲಿಟರಿ ಹೋಟೆಲ್‌ನಲ್ಲಿ. ಈ ಹೋಟೆಲ್‌ನಲ್ಲಿ ಚಿಕನ್ ಹಾಗೂ ಮಟನ್ ಬಿರಿಯಾನಿಗೆ ಹೆಚ್ಚು ಬೇಡಿಕೆ. ಈ ಬಿರಿಯಾನಿ ಸವಿಯಲೂ ದೂರದೂರಿನಿಂದ ಜನರು ಬರುತ್ತಾರೆ. ಒಳ್ಳೆ ರುಚಿ ಸಿಗಬಹುದೆಂಬ ನಿರೀಕ್ಷೆಯಲ್ಲಿಯೇ ಹೋಟೆಲ್‌ಗೆ ಹೋದೆ. ಆಗಷ್ಟೇ ಸಿದ್ಧಗೊಂಡಿದ್ದ ಘಮಘಮಿಸುವ ದಮ್ ಬಿರಿಯಾನಿಯ ಸುವಾಸನೆ ನನ್ನನ್ನ ಸ್ವಾಗತಿಸಿತು. ದೊನ್ನೆಯಲ್ಲಿ ಹಾಕಿಕೊಂಡು ಬಂದಿದ್ದ ಹೋಟೆಲ್‌ನ ಸಿಬ್ಬಂದಿ ಅದನ್ನು ಟೇಬಲ್ ಮೇಲೆ ಇಟ್ಟು ಟೇಸ್ಟ್ ಮಾಡಿ ಸರ್ ಎಂದರು.

ಅದನ್ನು ನೋಡುತ್ತಿದ್ದಂತೆ ಬಾಯಲ್ಲಿ ನೀರೂರಿ ಬಂತು. ತಡಮಾಡದೇ ಒಂದು ತುತ್ತು ಬಿರಿಯಾನಿ ಅನ್ನವನ್ನು ಸವಿದೆ. ಬಿರಿಯಾನಿ ಮಸಾಲೆಯ ಮಿಶ್ರಣ, ಉಪ್ಪು, ಖಾರದೊಂದಿಗೆ ಬೆರೆತು ಹದವಾಗಿ ಬೆಂದಿದ್ದ ಅನ್ನ ರುಚಿಕರವಾಗಿತ್ತು. ಈ ಹಿಂದೆ ನಾನು ಸವಿದಿದ್ದ ಎಲ್ಲ ಬಿರಿಯಾನಿಗಿಂತ ಇದು ವಿಭಿನ್ನವಾಗಿತ್ತು. ಬಿರಿಯಾನಿ ಅನ್ನದೊಳಗೆ ಹುದುಗಿದ್ದ ಕುರಿ ಮಾಂಸದ ತುಂಡನ್ನು ಕೆದಕಿ ಬಾಯಿಗಿರಿಸಿದೆ. ಮರಾಠಿಗರ ಮನೆಯಲ್ಲಿ ಈ ಹಿಂದೆ ತಿಂದ ಬಿರಿಯಾನಿಯ ರುಚಿಯನ್ನು ನೆನಪಿಸಿತು. ರುಚಿಗೆ ಅಗತ್ಯವಿದ್ದ ಉಪ್ಪು ಹಾಗೂ ಖಾರದೊಂದಿಗೆ ಬೆಂದಿದ್ದ ತುಂಡುಗಳು ಬಿರಿಯಾನಿಯನ್ನು ಕ್ಷಣಾರ್ಧದಲ್ಲಿ ಖಾಲಿ ಮಾಡಿಸಿದವು. ಸ್ಪಲ್ಪ ಖಾರವಿದ್ದರೂ ಹೊಟ್ಟೆಬಿರಿಯುವಷ್ಟು ತಿಂದೆ. ಆದರೂ, ಮನಸು ಇನ್ನಷ್ಟು ತಿನ್ನಬೇಕು ಎಂದು ತುಡಿಯುತ್ತಿತ್ತು. ಎಷ್ಟೇ ತಿಂದರೂ ಈ ಬಿರಿಯಾನಿಯ ಸೀಕ್ರೇಟ್ ರೆಸಿಪಿ ಮಾತ್ರ ನಿಗೂಢವಾಗಿಯೇ ಉಳಿಯುತ್ತದೆ.

ಅಗತ್ಯವಿದ್ದಷ್ಟೇ ಸಾಂಬಾರ ಪದಾರ್ಥಗಳು, ಉಪ್ಪು ಹಾಗೂ ಖಾರ ಮಿಶ್ರಣ ಮಾಡಿ ಬಾಣಲೆಯಲ್ಲಿ ಹುರಿದಿದ್ದ ಕುರಿ ಮಾಂಸದ ಮಟನ್ ಡ್ರೈ ಅದ್ಭುತವಾದ ರುಚಿಯನ್ನು ನೀಡಿತು. ಅದರ ಮಸಾಲೆಯನ್ನಂತೂ ಚಪ್ಪರಿಸಿಕೊಂಡು ಸವಿದರೆ ಮತ್ತಷ್ಟು ರುಚಿ ನೀಡುವುದು ಖಾತರಿ. ಅದನ್ನು ಖಾಲಿ ಮಾಡಿದೆ. ಅಷ್ಟರಲ್ಲಿ ಹೋಟೆಲ್‌ನ ಸಿಬ್ಬಂದಿ ಚಿಕನ್ ಬಿರಿಯಾನಿ, ಚಿಕನ್ ಡ್ರೈ, ಚಿಕನ್ ಲೆಗ್‌ ಖಾದ್ಯಗಳನ್ನು ತಂದು ಬಡಿಸಿದರು. ಅವು ಸಹ ರುಚಿಕರವಾಗಿದ್ದವು. ಸ್ವಾದಿಷ್ಟಕರವಾದ ಸ್ವಾದ ಆಸ್ವಾದಿಸಿದ ಸಂತೃಪ್ತಿ ಭಾವ ಹೋಟೆಲ್‌ನಿಂದ ಹೊರಬಂದ ನನ್ನನ್ನು ಸೇರಿದಂತೆ ಗ್ರಾಹಕರ ಮೊಗದಲ್ಲಿ ಕಾಣುತ್ತಿತ್ತು.

ಪಕ್ಕಾ ಮರಾಠಿ ಶೈಲಿಯ ಮಾಂಸಹಾರದ ಹೋಟೆಲ್ ಇದಾಗಿದ್ದು, ಎಲ್.ರಾಜೀವ್ ಹಾಗೂ ಎಲ್.ಲೋಕೇಶ್ ಎಂಬ ಅಣ್ಣತಮ್ಮಂದಿರು ಇದರ ನೊಗ ಹೊತ್ತಿದ್ದಾರೆ. ಈ ಹೋಟೆಲ್‌ಗೆ ಇವರಿಬ್ಬರೇ ಮಾಲೀಕರು, ಬಾಣಸಿಗರು, ಸಿಬ್ಬಂದಿ. ಸಹಾಯಕ್ಕೆ ಕೆಲವರಿದ್ದರೂ ಅವರು ನೇಪಥ್ಯಕ್ಕೆ ಮಾತ್ರ ಸಿಮೀತ.  ಅದಾಗಲೇ ಸಾಕಷ್ಟು ಮಂದಿ ಹೋಟೆಲ್‌ನಲ್ಲಿ ಕಿಕ್ಕಿರಿದು ತುಂಬಿದ್ದರು. ತಮಗಿಷ್ಟವಾದ ಖಾದ್ಯಗಳನ್ನು ಆರ್ಡರ್ ಮಾಡಲು ನಿಂತ ಗ್ರಾಹಕರು ಸಾಲು ಹನುಮನ ಬಾಲದಂತೆ ಕ್ಷಣಕ್ಷಣಕ್ಕೂ ಬೆಳೆಯುತ್ತಲೇ ಇತ್ತು. ಹೋಟೆಲ್‌ನಿಂದ ಹೊರ ಬಂದಾಗ ಆ ಸಾಲು ಮತ್ತಷ್ಟು ಹಿಗ್ಗಿತ್ತು. ಹೋಟೆಲ್‌ನ ಹಿನ್ನೆಲೆ ತಿಳಿಯಲು ಅಡುಗೆ ಮನೆಗೆ ಕಾಲಿಟ್ಟೆ. ಘಮಘಮಿಸುವ ಸುವಾಸನೆಯು ನನ್ನನ್ನು ಸ್ವಾಗತಿಸಿತು. ಅಡುಗೆ ಮಾಡುವುದರಲ್ಲಿ ಮಗ್ನರಾಗಿದ್ದ ಮಾಲೀಕ ರಾಜೀವ್ ಅವರನ್ನು ಭೇಟಿಯಾದೆ.

ಮಟನ್ ಬಿರಿಯಾನಿ, ಫ್ರೈಗೆ ಬೇಡಿಕೆ

‘ಮರಾಠಿ ಶೈಲಿಯ ಮಾಂಸದ ವಿವಿಧ ಖಾದ್ಯಗಳನ್ನು ಮಾತ್ರ ತಯಾರಿಸುತ್ತೇವೆ. ನಮ್ಮಲ್ಲಿ ಸಿಗುವುದು ಹೋಮ್ಲಿ ಫುಡ್. ಮನೆಗಳಲ್ಲಿ ಸಿಗುವಷ್ಟೇ ರುಚಿ ಇಲ್ಲಿ ಸಿಗುತ್ತದೆ. ಎಲ್ಲ ಖಾದ್ಯಗಳು ನಾಟಿ ಶೈಲಿಯಲ್ಲಿರುತ್ತವೆ. ಆಯ್ದ ಖಾದ್ಯಗಳನ್ನು ಮಾತ್ರ ತಯಾರಿಸುತ್ತೇವೆ. ಮಟನ್ ಬಿರಿಯಾನಿ ಹಾಗೂ ಮಟನ್ ಫ್ರೈ ಗ್ರಾಹಕರು ಹೆಚ್ಚು ಇಷ್ಟ ಪಡುತ್ತಾರೆ’ ಎನ್ನುತ್ತಾರೆ ರಾಜೀವ್.

‘ನಾಲಿಗೆಗೆ ಸ್ವಾದಿಷ್ಟಕರವಾದ ರುಚಿ ನೀಡಬೇಕು ಎಂಬ ಉದ್ದೇಶದಿಂದ ಎಲ್ಲೆಲ್ಲಿಂದಲೋ ಬರುವ ಗ್ರಾಹಕರ ಆಪೇಕ್ಷೆ ಈಡೇರಿಸುವುದಷ್ಟೇ ನಮ್ಮ ಕರ್ತವ್ಯ. ಅವರು ಸಂತೃಪ್ತಗೊಂಡರೆ ನಾವು ಸಂತೃಪ್ತರಾದಂತೆ. ಇದು ಫ್ಯಾಮಿಲಿ ಬಿಸಿನೆಸ್. ಅಣ್ಣ ಲೋಕೇಶ್ ಹಾಗೂ ನಾನೇ ಆಹಾರ ತಯಾರಿಸುತ್ತೇವೆ’ ಎಂದರು ರಾಜೀವ್.

‘ದೋಸೆ, ಇಡ್ಲಿ+ಮಾಂಸಾಹಾರ’

ಹೋಟೆಲ್ ಬೆಳಿಗ್ಗೆ 8.30ಕ್ಕೆ ಶುರುವಾಗುತ್ತದೆ. ಅಷ್ಟೊತ್ತಿಗಾಗಲೇ ದೋಸೆ, ಇಡ್ಲಿ ಸಿದ್ಧವಿರುತ್ತದೆ. ಅವುಗಳಿಗೆ ಕಾಂಬಿನೇಷನ್‌ ಆಗಿ ಶೇರ್ವಾ ನೀಡಲಾಗುತ್ತದೆ. ಮಟನ್ ಬಿರಿಯಾನಿ, ಕಾಲ್ ಸೂಪು ಹಾಗೂ ಕೈಮಾವೂ ಲಭ್ಯ. ಬೆಳಗಿನ ಉಪಹಾರಕ್ಕೆ ಸೂಕ್ತವಾದ ಹೋಟೆಲ್ ಇದು.

ಹೋಟೆಲ್‌ನ ಇತಿಹಾಸ

‘ನಮ್ಮ ತಾತ ಎಸ್.ಮನ್ನಾಜಿ ರಾವ್. ಅವರ ಕಾಲದಲ್ಲಿ ಮಿಲಿಟರಿಯವರು ಹೆಚ್ಚಾಗಿ ಒಂದೆಡೆ ಸೇರಿ ಪಾರ್ಟಿ ಮಾಡುತ್ತಿದ್ದರು. ಪಾರ್ಟಿಗಳಲ್ಲಿ ಮಾಂಸಾಹಾರ ನೆಚ್ಚಿನ ಖಾದ್ಯವಾಗಿತ್ತು. ಇದೇ ಕಾರಣಕ್ಕೆ ನಮ್ಮ ತಾತ ಎಸ್. ಮನ್ನಾಜಿ ರಾವ್ ಅವರು 108 ವರ್ಷಗಳ ಹಿಂದೆ ನಗರ್ತಪೇಟೆಯಲ್ಲಿ ಮಾಂಸಾಹಾರದ ಹೋಟೆಲ್ ಶುರುಮಾಡಿದರಂತೆ. ಅವರ ಬಳಿಕ ಈ ಹೋಟೆಲ್ ಅನ್ನು ತಂದೆ ಎಂ.ಲಕ್ಷ್ಮಣರಾವ್ ಮುಂದುವರೆಸಿಕೊಂಡು ಬಂದರು. ನಂತರ ನಾವು ಇದರ ಹೊಣೆ ಹೊತ್ತುಕೊಂಡಿದ್ದೇವೆ. ಕಾರಣಾಂತರಗಳಿಂದ ಹೋಟೆಲ್ ಅನ್ನು ನಗರ್ತಪೇಟೆಯಿಂದ ಇಲ್ಲಿಗೆ ಸ್ಥಳಾಂತರಿಸಬೇಕಾಯಿತು’ ಎನ್ನುತ್ತಾರೆ ರಾಜೀವ್.

ಶಿವಾಜಿ ಮಿಲಟರಿ ಹೋಟೆಲ್

ಸಮಯ: ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 3.30. (ಸೋಮವಾರ ರಜೆ)

ಸ್ಥಳ: ಬನಶಂಕರಿ ಬಸ್‌ ನಿಲ್ದಾಣ ಸಮೀಪ

ಸಂಪರ್ಕ: 9845149217/ 9980739217 (ಆರ್ಡರ್‌ ಹಾಗೂ ಕ್ಯಾಟರಿಂಗ್ ವ್ಯವಸ್ಥೆಗೆ)

ಯಾವುದೇ ಶಾಖೆ ಇಲ್ಲ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)