ಪಾಕ್ ದಾಳಿಗೆ ನಾಲ್ವರು ಯೋಧರ ದುರ್ಮರಣ

7

ಪಾಕ್ ದಾಳಿಗೆ ನಾಲ್ವರು ಯೋಧರ ದುರ್ಮರಣ

Published:
Updated:
ಪಾಕ್ ದಾಳಿಗೆ ನಾಲ್ವರು ಯೋಧರ ದುರ್ಮರಣ

ಜಮ್ಮು: ಪಾಕಿಸ್ತಾನ ಮತ್ತು ಭಾರತದ ನಡುವಣ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಯೋಧರು (ರೇಂಜರ್ಸ್) ಮತ್ತೆ ಕದನವಿರಾಮ ಉಲ್ಲಂಘಿಸಿದ್ದಾರೆ. ಮಂಗಳವಾರ ರಾತ್ರಿ ಅವರು ನಡೆಸಿದ ದಾಳಿಯಲ್ಲಿ ಭಾರತದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ನಾಲ್ವರು ಯೋಧರು ಬಲಿಯಾಗಿದ್ದಾರೆ. ಐವರು ಯೋಧರಿಗೆ ಗಾಯಗಳಾಗಿವೆ.

ಮೃತರಲ್ಲಿ ಮೂವರು ಯೋಧರು ಮತ್ತು ಒಬ್ಬ ಅಸಿಸ್ಟೆಂಟ್ ಕಮಾಂಡೆಂಟ್ ಸೇರಿದ್ದಾರೆ. ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ಬಿಎಸ್‌ಎಫ್ ಹೇಳಿದೆ.

‘ಜಮ್ಮು ಪ್ರಾಂತದ ಸಾಂಬಾ ಜಿಲ್ಲೆಯ ಚಾಂಬಿಲಿಯಾಲ್ ಗಡಿ ಠಾಣೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಪಾಕ್‌ ಯೋಧರು ರಾತ್ರಿ 9.40ರ ಸುಮಾರಿನಲ್ಲಿ ದಾಳಿ ಆರಂಭಿಸಿ, ಬೆಳಿಗ್ಗೆ 4.30ರವರೆಗೂ ದಾಳಿ ಮುಂದುವರಿಸಿದರು. ಭಾರಿ ಶಸ್ತ್ರಾಸ್ತ್ರ ಬಳಸಿದ್ದರಿಂದ ನಮ್ಮ ಯೋಧರು ಮೃತಪಟ್ಟಿದ್ದಾರೆ’ ಎಂದು ಬಿಎಸ್‌ಎಫ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಎನ್. ಚೌಬೆ ಮಾಹಿತಿ ನೀಡಿದ್ದಾರೆ.

‘ಅವರು ಅಪ್ರಚೋದಿತವಾಗಿ ದಾಳಿ ನಡೆಸಿದ್ದಾರೆ. ಹೀಗಾಗಿ ಗಡಿಯಲ್ಲಿ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಮೇ 29ರಂದು ಪಾಕಿಸ್ತಾನದ ರೇಂಜರ್ಸ್‌ ಜತೆಗೆ 15 ನಿಮಿಷ ಸಭೆ ನಡೆಸಲಾಗಿತ್ತು. ಕದನವಿರಾಮ ಪಾಲನೆಗೆ ಅವರೂ ಒಪ್ಪಿಕೊಂಡಿದ್ದರು, ನಾವೂ ಒಪ್ಪಿಕೊಂಡಿದ್ದೆವು. ಅಪ್ರಚೋದಿತ ದಾಳಿ ನಡೆಸುವುದಿಲ್ಲ ಎಂದು ಭರವಸೆ ಎರಡೂ ಕಡೆಯಿಂದ ವ್ಯಕ್ತವಾಗಿತ್ತು. ಆದರೆ ಕದನವಿರಾಮವನ್ನು ಅವರು ಗೌರವಿಸಲಿಲ್ಲ, ನಾವು ಗೌರವಿಸಿದ್ದೇವೆ. ಪಾಕಿಸ್ತಾನದವರು ಎಂದಿನಂತೆ ಅದನ್ನು ಉಲ್ಲಂಘಿಸಿದ್ದಾರೆ, ನಾವು ಪ್ರತಿದಾಳಿ ನಡೆಸುವ ಮೂಲಕ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ.’ ಎಂದು ಅವರು ಹೇಳಿದ್ದಾರೆ. ‘ಪಾಕಿಸ್ತಾನದ ‘ಬಾರ್ಡರ್ ಆ್ಯಕ್ಷನ್‌ ಟೀಂ’ ಈ ದಾಳಿಯನ್ನು ನಡೆಸಿದೆಯೇ ಎಂಬುದು ತಿಳಿದುಬಂದಿಲ್ಲ’ ಎಂದು ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಈ ದಾಳಿಯನ್ನು ಖಂಡಿಸಿ ಜಮ್ಮುವಿನಲ್ಲಿ ಹಲವು ಸಂಘಟನೆಗಳು ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ನಡೆಸಿವೆ.

ಹಿಂತಿರುಗುತ್ತಿರುವ ಹಳ್ಳಿಗರು

ಮೇ ತಿಂಗಳಲ್ಲಿ ಜಮ್ಮು ಮತ್ತು ಸಾಂಬಾ ಜಿಲ್ಲೆಗಳಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿತ್ತು. ದಾಳಿಗೆ ಹೆದರಿ 80 ಸಾವಿರಕ್ಕೂ ಹೆಚ್ಚು ಜನ ತಮ್ಮ ಹಳ್ಳಿ ತೊರೆದಿದ್ದರು. ಅವರೆಲ್ಲಾ ಈಗ ವಾಪಸ್ ಆಗುತ್ತಿದ್ದಾರೆ.

ಮತ್ತೆ ಮನೆ ಮಾಡಿದ ಆತಂಕ

ಸಾವಿರಾರು ಮಂದಿ ಈಗಾಗಲೇ ತಮ್ಮ ಹಳ್ಳಿಗಳಿಗೆ ವಾಪಸ್ ಆಗಿದ್ದಾರೆ. ಆದರೆ ಪಾಕಿಸ್ತಾನ ಮತ್ತೆ ದಾಳಿ ಆರಂಭಿಸಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಇನ್ನೂ ತಮ್ಮ ಹಳ್ಳಿ ತಲುಪಿಲ್ಲದವರು ಮತ್ತೆ ಸರ್ಕಾರಿ ಶಿಬಿರಗಳತ್ತ ಬರುತ್ತಿದ್ದಾರೆ.

ಪ್ರತಿಭಟನೆ ದಾಖಲು

‘ಕದನವಿರಾಮ ಉಲ್ಲಂಘಿಸಿರುವ ಪಾಕಿಸ್ತಾನದ ಅಧಿಕಾರಿಗಳನ್ನು ಕರೆಸಿ, ಅವರ ಈ ಕೃತ್ಯವನ್ನು ಖಂಡಿಸುತ್ತೇವೆ. ನಮ್ಮ ಪ್ರತಿಭಟನೆ ದಾಖಲಿಸುತ್ತೇವೆ’ ಎಂದು ಕಮಲ್ ಎನ್. ಚೌಬೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry