ರಾಜ್ಯದ ಪ್ರಗತಿ ಫಿಟ್ನೆಸ್‌ಗೆ ಹೆಚ್ಚು ಕಾಳಜಿ

7

ರಾಜ್ಯದ ಪ್ರಗತಿ ಫಿಟ್ನೆಸ್‌ಗೆ ಹೆಚ್ಚು ಕಾಳಜಿ

Published:
Updated:
ರಾಜ್ಯದ ಪ್ರಗತಿ ಫಿಟ್ನೆಸ್‌ಗೆ ಹೆಚ್ಚು ಕಾಳಜಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ‘ಫಿಟ್ನೆಸ್‌ ಸವಾಲು’ ಒಡ್ಡಿದ್ದಾರೆ. ಅದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ‘ರಾಜ್ಯದ ಅಭಿವೃದ್ಧಿಯ ಫಿಟ್ನೆಸ್‌ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದೇನೆ’ ಎಂದಿದ್ದಾರೆ. 

‘ನನ್ನ ಬೆಳಿಗ್ಗಿನ ವ್ಯಾಯಾಮ ಹೀಗಿದೆ. ಯೋಗದ ಜತೆಗೆ, ನಿಸರ್ಗದ ಪಂಚತತ್ವಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶದಿಂದ ಸ್ಫೂರ್ತಿ ಪಡೆದ ನಡಿಗೆ ಅಭ್ಯಾಸವನ್ನೂ ಮಾಡುತ್ತೇನೆ. ಇದು ಉಲ್ಲಾಸದ ಜತೆಗೆ ಪುನಶ್ಚೇತನಕ್ಕೂ ಕಾರಣವಾಗುತ್ತದೆ. ನಾನು ಪ್ರಾಣಾಯಾಮವನ್ನೂ ಅಭ್ಯಾಸ ಮಾಡುತ್ತೇನೆ’ ಎಂದು ಹಮ್‌ ಫಿಟ್‌ ತೊ ಇಂಡಿಯಾ ಫಿಟ್‌ ಹ್ಯಾಷ್‌ಟ್ಯಾಗ್‌ನಲ್ಲಿ ಮೋದಿ ಟ್ವೀಟ್‌ ಮಾಡಿದ್ದಾರೆ. 

‘ಕುಮಾರಸ್ವಾಮಿ, ಕಾಮನ್ವೆಲ್ತ್‌ ಗೇಮ್ಸ್‌ ಟೇಬಲ್‌ ಟೆನಿಸ್‌ ಪದಕ ವಿಜೇತೆ ಮಣಿಕಾ ಬಾತ್ರಾ ಮತ್ತು ದಿಟ್ಟ ಐಪಿಎಸ್‌ ಅಧಿಕಾರಿ ಸಮುದಾಯದ (ವಿಶೇಷವಾಗಿ 40 ವರ್ಷ ಮೀರಿದವರು) ಮುಂದೆ ಈ ಸವಾಲು ಇರಿಸಲು ಹರ್ಷವಾಗುತ್ತದೆ’ ಎಂದು ಮುಂದಿನ ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಪ್ರಿಯ ನರೇಂದ್ರ ಮೋದಿಯವರೇ, ನನಗೆ ಕೊಟ್ಟ ಗೌರವ ಮತ್ತು ನನ್ನ ಆರೋಗ್ಯದ ಬಗೆಗಿನ ಕಾಳಜಿಗೆ ಕೃತಜ್ಞ. ದೈಹಿಕ ಫಿಟ್ನೆಸ್‌ ಎಲ್ಲರಿಗೂ ಬಹಳ ಮುಖ್ಯ ಎಂದು ನಾನು ನಂಬಿದ್ದೇನೆ. ಅದನ್ನು ಬೆಂಬಲಿಸುತ್ತೇನೆ. ಯೋಗ–ಟ್ರೆಡ್‌ಮಿಲ್‌ ನನ್ನ ನಿತ್ಯ ವ್ಯಾಯಾಮದ ಭಾಗವಾಗಿವೆ. ಹಾಗಿದ್ದರೂ, ನನ್ನ ರಾಜ್ಯದ ಅಭಿವೃದ್ಧಿ ಫಿಟ್ನೆಸ್‌ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದೇನೆ. ಅದಕ್ಕಾಗಿ ನಿಮ್ಮ ಬೆಂಬಲ ಕೋರುತ್ತೇನೆ’ ಎಂದು ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವುದಕ್ಕಾಗಿ ಕಾಂಗ್ರೆಸ್‌ ಜತೆಗೆ ಜೆಡಿಎಸ್‌ ಕೈಜೋಡಿಸಿದ ಬೆನ್ನಿಗೇ ಮೋದಿ ಅವರು ಕುಮಾರಸ್ವಾಮಿಗೆ ಸವಾಲು ಒಡ್ಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry