‘ಮಿನಿಟ್‌’ ವ್ಯವಸ್ಥೆ ರದ್ದಾಗಲಿ

7

‘ಮಿನಿಟ್‌’ ವ್ಯವಸ್ಥೆ ರದ್ದಾಗಲಿ

Published:
Updated:

ವರ್ಗಾವಣೆಯ ವಿಚಾರದಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕುಮಾರಸ್ವಾಮಿ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ವಿಧಾನಸೌಧದಲ್ಲಿ ನಡೆಯುವ ಭ್ರಷ್ಟಾಚಾರದಲ್ಲಿ ಅಧಿಕಾರಿಗಳಿಗಿಂತ ಹೆಚ್ಚಿನ ಪಾತ್ರ ಜನಪ್ರತಿನಿಧಿಗಳದ್ದಿದೆ.

ಇಡೀ ಸರ್ಕಾರಿ ಆಡಳಿತ ಯಂತ್ರವನ್ನೇ ಶಾಸಕರಿಗೆ ಒತ್ತೆ ಇಡುವಂತೆ ಮಾಡಿದ್ದು ಯಾರು? ವರ್ಗಾವಣೆಗೆ ‘ಮಿನಿಟ್ ಪದ್ಧತಿ’ಯನ್ನು ಜಾರಿಗೆ ತಂದವರು ಯಾರು? ಈ ಪದ್ಧತಿಯೇ ಭ್ರಷ್ಟಾಚಾರದ ಮೂಲ ಅಲ್ಲವೇ?

ಎಫ್‌ಡಿಸಿಯಿಂದ ಹಿಡಿದು ಜಿಲ್ಲಾಧಿಕಾರಿ, ಎಸ್.ಪಿ ವರೆಗಿನ ಎಲ್ಲ ವರ್ಗಾವಣೆಗಳಿಗೆ ಪ್ರತಿವರ್ಷ ಮಂತ್ರಿ, ಶಾಸಕರಿಂದ ಕಡ್ಡಾಯವಾಗಿ ‘ಮಿನಿಟ್’ ಪಡೆಯುವ ಪದ್ಧತಿಯೇ ವರ್ಗಾವಣೆಯೆಂಬ ಬ್ರಹ್ಮಾಂಡ ರಾಕ್ಷಸ ತಾಂಡವವಾಡಲು ಕಾರಣವಾಗಿದೆ. ಇದು ಕುಮಾರಸ್ವಾಮಿ ಅವರಿಗೆ ಗೊತ್ತಿಲ್ಲವೆಂದಿಲ್ಲ. ಆದರೆ ಈ ಮಿನಿಟ್ ಪದ್ಧತಿಯ ಬಗ್ಗೆ ಮಾತನಾಡಿದರೆ ಎಲ್ಲರೂ ಅವರ ವಿರುದ್ಧ ತಿರುಗಿ ಬೀಳುತ್ತಾರೆ.

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಶಾಸಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಈ ಮಿನಿಟ್ ಪದ್ಧತಿಯನ್ನು ಅವರು ಜಾರಿಗೆ ತಂದರು. ಅಂದಿನಿಂದ ಸರ್ಕಾರಿ ನೌಕರರು ಪ್ರತಿವರ್ಷ ಮಂತ್ರಿಗಳಿಂದ, ಶಾಸಕರಿಂದ ಮಿನಿಟ್ ಪಡೆಯಲು ಸಾಲುಗಟ್ಟಿ ನಿಲ್ಲುತ್ತಾರೆ. ಇದರಿಂದ ಒಟ್ಟಾರೆ ಆಡಳಿತದ ಮೇಲೆ ಗಂಭೀರ ಪರಿಣಾಮ ಆಗಿಯೇ ಆಗುತ್ತದೆ.

ಆಯಕಟ್ಟಿನ ಸ್ಥಳಗಳ ಪಟ್ಟಿಗಳು ಪ್ರತಿಯೊಂದು ಇಲಾಖೆಯಲ್ಲೂ ಇವೆ. ಅವುಗಳ ‘ಹರಾಜು’ ನಡೆದೇ ನಡೆಯುತ್ತದೆ. ಮಿನಿಟ್ ಪದ್ಧತಿಯಿಂದ ಸರ್ಕಾರಿ ಸಿಬ್ಬಂದಿಯನ್ನು ನಿಯಂತ್ರಿಸಬಹುದೆಂದು ಜನಪ್ರತಿನಿಧಿಗಳು ತಿಳಿದಿರಬಹುದು. ಆದರೆ ಕುಮಾರಸ್ವಾಮಿ ಮನಸ್ಸು ಮಾಡಿದರೆ ಮಿನಿಟ್ ಪದ್ಧತಿಯನ್ನು ರದ್ದುಗೊಳಿಸಿ ಬೇರೊಂದು ಮಾರ್ಗದ ಮೂಲಕ ಸಿಬ್ಬಂದಿಯನ್ನು ನಿಯಂತ್ರಿಸಬಹುದು.

ಸದ್ಯದ ವರ್ಗಾವಣೆಯ ವ್ಯವಸ್ಥೆಯನ್ನು ಬದಲಿಸುವ ಮತ್ತು ಆ ಮೂಲಕ ರಾಜ್ಯದ ಜನರ ಮನಸ್ಸನ್ನು ಗೆಲ್ಲುವ ಬಯಕೆ ಕುಮಾರಸ್ವಾಮಿ ಅವರಿಗೆ ಇರುವುದೇ ಆದರೆ ನೆರೆಯ ಕೆಲವು ರಾಜ್ಯಗಳಲ್ಲಿರುವ ವರ್ಗಾವಣೆ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಲು ನಿವೃತ್ತ ಅಧಿಕಾರಿಗಳ (ಯಾರದೇ ಮುಲಾಜಿಗೆ ಒಳಗಾಗದ) ಸಮಿತಿಯನ್ನು ರಚಿಸಿ ಒಂದು ವಾರ ಅಥವಾ ತಿಂಗಳಲ್ಲಿ ವರದಿ ಪಡೆಯಬೇಕು.

ಈ ವಿಚಾರದಲ್ಲಿ ಮುಖ್ಯಮಂತ್ರಿ ಅಸಹಾಯಕತೆಯನ್ನು ವ್ಯಕ್ತಪಡಿಸಬಾರದು. ಅಸಹಾಯಕತೆ ಪ್ರದರ್ಶಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry