ರಮ್ಜಾನ್‌ ಉಪವಾಸಕ್ಕೆ ತೆರೆ ಇಂದು

7
ಈದ್–ಉಲ್–ಫಿತ್ರ್‌ ಆಚರಣೆಗೆ ಸಿದ್ಧತೆ; ನಗರದ ಮಾರುಕಟ್ಟೆಯಲ್ಲಿ ಖರೀದಿ ಸಂಭ್ರಮ

ರಮ್ಜಾನ್‌ ಉಪವಾಸಕ್ಕೆ ತೆರೆ ಇಂದು

Published:
Updated:
ರಮ್ಜಾನ್‌ ಉಪವಾಸಕ್ಕೆ ತೆರೆ ಇಂದು

ಗದಗ: ನಗರದ ಗಂಗಿಮಡಿ ಪ್ರದೇಶದ ನಿವಾಸಿ ಮಹಮ್ಮದ್ ರಫೀಕ್‌ ಬೀಳಗಿ ಅವರು ನೀಡಿದ ಆಹ್ವಾನ ಮನ್ನಿಸಿ ಅವರ ಮನೆಯನ್ನು ತಲುಪಿದಾಗ ಸಂಜೆ 7 ಗಂಟೆಯಾಗಿತ್ತು. ಆಗಷ್ಟೇ, ಮಗ್ರೀಬ್‌ ಪ್ರಾರ್ಥನೆ ಮುಗಿದಿತ್ತು.

‘ಅಲ್ಲಾಹ್‌, ನಿನಗಾಗಿ ರೋಜಾ ಮಾಡಿದೆ. ನಿನ್ನ ಮೇಲೆ ಭಾರ ಹಾಕಿ ರೋಜಾ ಮುಗಿಸುತ್ತಿದ್ದೇನೆ. ನನ್ನ ತಪ್ಪನ್ನು ಕ್ಷಮಿಸು..’ ಎಂಬ ದೋಹಾವನ್ನು ಪಠಿಸುವ ಮೂಲಕ ಅವರ ಕುಟುಂಬ ಸದಸ್ಯರು ಅಂದಿನ ಉಪವಾಸ ವ್ರತ ಮುಗಿಸಿ, ‘ಇಫ್ತಾರ್‌’ಗೆ ಅಣಿಯಾಗುತ್ತಿದ್ದರು.

‘ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುವ ರಮ್ಜಾನ್‌ ಮಾಸದ ಉಪವಾಸ ವ್ರತ ಆಚರಣೆಗೆ ಶುಕ್ರವಾರ ತೆರೆ ಬೀಳಲಿದೆ’ ಎನ್ನುತ್ತಾ ಮಹಮ್ಮದ್ ತಮ್ಮ ಕುಟುಂಬ ಸದಸ್ಯರನ್ನು ಪರಿಚಯಿಸಿದರು.

ಮಹಮ್ಮದ್ ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಶಿಕ್ಷಕ. ಪತ್ನಿ ನಫೀಸಾ ಗೃಹಣಿ. ಮಗ ಸೈಫುದ್ದೀನ್‌ ಬೆಂಗಳೂರಿನಲ್ಲಿ ಐಟಿ ಕಂಪನಿ ಉದ್ಯೋಗಿ. ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಮನೆಗೆ ಬರುತ್ತಾರೆ ಎಂದರು. ಮಗಳು ಆಯಿಷಾ ಅಡುಗೆ ಮನೆಯಲ್ಲಿ ತಾಯಿಗೆ ನೆರವಾಗುತ್ತಿದ್ದರು.

ವಿಧಿವತ್ತಾಗಿ ಕೈಕಾಲು ಮುಖ ತೊಳೆದುಕೊಳ್ಳುವ ಕ್ರಿಯೆ ಮುಗಿಸಿ, ‘ದಸ್ತರ್‌ಖಾನ್‌’ (ಊಟ ಮಾಡುವಾಗ ಹಾಸಿಕೊಳ್ಳುವ ಬಟ್ಟೆ) ಹಾಸಿ, ಅದರ ಮೇಲೆ ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತರು. ‘ಸಂಜೆಯ ಇಫ್ತಾರ್‌ಗೆ ಸಂಜೆ 4 ಗಂಟೆ ಒಳಗೆ ಮತ್ತು ಬೆಳಗಿನ ಸಹರಿಗೆ ರಾತ್ರಿ 3 ಗಂಟೆಗೇ ಎದ್ದು ಅಡುಗೆ ಮಾಡಲು ತೊಡಗುತ್ತೇವೆ’ ಎಂದು ನಫೀಸಾ ಹೇಳಿದರು.

‘ರೋಜಾ ಬಿಟ್ಟ ತಕ್ಷಣ ಊಟ ಮಾಡುವುದಿಲ್ಲ. ಖರ್ಜೂರ, ಸೇಬು ಹಣ್ಣು, ಅಥವಾ ಸ್ವಲ್ಪ ಹಣ್ಣಿನ ರಸ ತೆಗೆದುಕೊಳ್ಳುತ್ತೇವೆ. ಆ ನಂತರ ಪ್ರಾರ್ಥನೆ ಸಲ್ಲಿಸಿ, ಊಟ ಮಾಡುತ್ತೇವೆ’ ಎಂದರು.

‘ರೋಜಾ ಅತ್ಯಂತ ಶಿಸ್ತುಬದ್ಧವಾಗಿ ಆಚರಿಸಬೇಕಾದ ಒಂದು ವ್ರತ. ಕೇವಲ ಆಹಾರ, ಪಾನೀಯಗಳಿಂದ ದೂರವಿರುವುದಷ್ಟೇ ಅಲ್ಲ. ಕಣ್ಣು, ಕಿವಿ, ಬಾಯಿ, ನಾಲಗೆ ಹಾಗೂ ಮನಸ್ಸಿನ ಶುದ್ಧಿಗೆ ಸಂಬಂಧಿಸಿದ್ದು. ಹೀಗಾಗಿ ‘ಬಿಸ್ಮಿಲಾ..’ (ನಾನು ದೇವರ ಹೆಸರಲ್ಲಿ ರೋಜಾ ಆರಂಭಿಸುತ್ತಿದ್ದೇನೆ) ಎಂಬ ನೀಯತ್‌ ಪಠಿಸುವ ಮೂಲಕ ಉಪವಾಸ ವ್ರತ ಆರಂಭಿಸುತ್ತೇವೆ’ ಎಂದು ಮಹಮ್ಮದ್‌ ವಿವರಣೆ ನೀಡಿದರು.

ಇಫ್ತಾರ್‌ ಹೊತ್ತು ಮುಗಿದ ಬಳಿಕ ಅವರು ಮಾರುಕಟ್ಟೆಗೆ ಹೊರಡಲು ಅನುವಾದರು. ಪತ್ನಿ, ಮಗಳು ಮನೆಯಲ್ಲೇ ಕುರಾನ್‌ ಪಠಿಸತೊಡಗಿದರು.

‘ಚಂದ್ರದರ್ಶನದ ಮರುದಿನದಿಂದ ಆರಂಭವಾದ ರೋಜಾ 30 ದಿನಗಳ ನಂತರ ಮತ್ತೆ ಚಂದ್ರದರ್ಶನದ ನಂತರ ಮುಕ್ತಾಯಗೊಳ್ಳುತ್ತದೆ. ಉಪವಾಸ ಮುಗಿದ ಮರುದಿನವೇ ಈದ್–ಉಲ್–ಫಿತ್ರ್‌ ಆಚರಿಸಲಾಗುತ್ತದೆ. ಶೀರ್‌ ಕುರ್ಮಾ ಎಂಬ ಪಾಯಸ ಈ ಭಾಗದ ರಮ್ಜಾನ್‌ ವಿಶೇಷ ’ಎಂದರು.

ಉಪವಾಸ; ಪ್ರಾರ್ಥನೆ

‘ಮುಸ್ಲಿಮರು ಅನುಸರಿಸುವುದು ಚಾಂದ್ರಮಾನ ಪಂಚಾಂಗ. ಉರ್ದು ಕ್ಯಾಲೆಂಡರಿನ 9ನೇ ತಿಂಗಳಾದ ರಮ್ಜಾನ್‌ನಲ್ಲಿಯೇ ಅಲ್ಲಾಹುವಿನ ಸಂದೇಶ ಹೊತ್ತ ಕುರಾನ್‌ನ ಮೊದಲ ಸೂಕ್ತಿಗಳು ಧರೆಗಿಳಿದು ಬಂದವು. ಈ ಕಾರಣದಿಂದಾಗಿಯೇ ಈ ತಿಂಗಳಿಗೊಂದು ಆಧ್ಯಾತ್ಮಿಕ ಮಹತ್ವವಿದೆ.

ಇಸ್ಲಾಂ ಧರ್ಮದ ಪ್ರಮುಖ ಐದು ಆಧಾರ ಸ್ತಂಭಗಳಲ್ಲಿ ಮೂರನೇಯದು ರೋಜಾ. ಉಪವಾಸದ ಆರಂಭಕ್ಕೆ ಇರುವ ನಿಖರ ನಿಯಮಗಳೇ ಅದನ್ನು ಕೊನೆಗೊಳಿಸುವುದಕ್ಕೂ ಅನ್ವಯಿಸುತ್ತವೆ. ಒಟ್ಟು ಐದು ಬಾರಿ ಪ್ರಾರ್ಥನೆಗಳು ನಡೆಯುತ್ತವೆ. ಬೆಳಿಗ್ಗೆ 5 ಗಂಟೆಗೆ ಫಜ್ಹರ್‌, ಮಧ್ಯಾಹ್ನ 1.30ಕ್ಕೆ ಜೋಹರ್‌, ಸಂಜೆ 5 ಗಂಟೆಗೆ ಅಸರ್‌, 7 ಗಂಟೆಗೆ ಮಗ್ರೀಬ್‌, ರಾತ್ರಿ 8.30ಕ್ಕೆ ಇಶಾ ಅಜಾನ್‌ ಪ್ರಾರ್ಥನೆಗಳು ನಡೆಯುತ್ತವೆ.

ಖರೀದಿ ಸಂಭ್ರಮ

ಕತ್ತಲಾಗುವುದೇ ತಡ, ಗದುಗಿನ ಜನತಾ ಬಜಾರ್‌ ಬೀದಿಯಲ್ಲಿ ಜನದಟ್ಟಣೆ. ಹಗಲು ಹೊತ್ತಿನಲ್ಲಿ ಗಡಿಬಿಡಿ ಕಾಣದ ಈ ಬೀದಿಯಲ್ಲಿ ಸೂರ್ಯಾಸ್ತದ ನಂತರ ಖರೀದಿ ಸಂಭ್ರಮ ಮನೆ ಮಾಡುತ್ತದೆ. ವಿದ್ಯುತ್‌ ದೀಪಗಳ ಬೆಳಕಿನ ವರ್ಣವೈಭದಲ್ಲಿ ಮಿಂದೇಳುವ ಗ್ರಾಹಕರು ರಮ್ಜಾನ್‌ ಖರೀದಿ ಮಾಡುತ್ತಾರೆ.

ರಮ್ಜಾನ್‌ ಮಾಸದ ಆರಂಭದಿಂದಲೂ ಕಟ್ಟುನಿಟ್ಟಾಗಿ ರೋಜಾ ಆಚರಿಸುತ್ತಿರುವ ಮುಸ್ಲಿಮರು ಸಂಜೆ, ಖರ್ಜೂರ, ಉತ್ತುತ್ತಿ, ಒಣ ದ್ರಾಕ್ಷಿ, ಬಾದಾಮಿ, ಪಿಸ್ತಾ ಖರೀದಿಗಾಗಿ ನಗರದ ಪ್ರಮುಖ ಮಾರುಕಟ್ಟೆಗಳಿಗೆ ದಾಂಗುಡಿಯಿಡುವುದು ಸಾಮಾನ್ಯ ದೃಶ್ಯವಾಗಿದೆ. ಗುರುವಾರ ಖರೀದಿ ಭರಾಟೆ ಜೋರಾಗಿತ್ತು. ಸ್ಥಳೀಯ ಗುಜರಾತ್‌, ಸುಲ್ತಾನ್‌, ಕೋಬ್ರಾ ಖರ್ಜೂರ 1 ಕೆ.ಜಿ.ಗೆ ₹100ರಿಂದ ₹300ರವರೆಗೆ ಮಾರಾಟವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry